ರಾಮಾಯಣ: ವಿಶ್ವಾಮಿತ್ರರೊಂದಿಗೆ ಸರಯೂ ನದಿ ದಾಟಿದ ರಾಮ, ಲಕ್ಷ್ಮಣರು; ತಾಟಕಿಯ ಸಂಹಾರಕ್ಕೆ ಕ್ಷಣಗಣನೆ
Sep 26, 2024 04:43 PM IST
ತಾಟಕಿ ಸಂಹಾರಕ್ಕೆ ಸಿದ್ಧರಾದ ರಾಮ, ಲಕ್ಷ್ಮಣ
- ರಾಮಾಯಣ: ಅಯೋಧ್ಯೆಯಿಂದ ರಾಮ, ಲಕ್ಷ್ಮಣರು ವಿಶ್ವಾಮಿತ್ರರೊಡನೆ ಕಾಡಿಗೆ ಹೊರಟಿದ್ದಾರೆ. ದಾರಿಯಲ್ಲಿ ಸರಯೂ ನದಿ ಸಿಕ್ಕಿದೆ. ತಾಟಕಿಯ ಬಗ್ಗೆ ವಿಶ್ವಾಮಿತ್ರರು ತಿಳಿಸಿಕೊಟ್ಟಿದ್ದಾರೆ. (ಬರಹ: ಎಚ್.ಸತೀಶ್, ಜ್ಯೋತಿಷಿ)
ರಾಮ ಲಕ್ಷ್ಮಣರು ಸೂರ್ಯೋದಯಕ್ಕೆ ಮುನ್ನವೇ ಸ್ನಾನಾದಿಗಳನ್ನು ಮಾಡಿ ಸೂರ್ಯ ದೇವನಿಗೆ ಅರ್ಘ್ಯ ಪ್ರಧಾನ ಮಾಡಿ ಗಾಯತ್ರಿ ಮಂತ್ರವನ್ನು ಜಪಿಸುತ್ತಾರೆ. ಪ್ರಯಾಣವನ್ನು ಮುಂದುವರೆಸಿದ ಅವರು ವಿಶ್ವಾಮಿತ್ರರ ಜೊತೆ ಇರುವ ಕಾರಣ ನಿರ್ಭೀತಿಯಿಂದ ಇರುತ್ತಾರೆ. ಗಂಗಾ ನದಿಯ ಸಂಗಮ ಸ್ಥಾನದಲ್ಲಿ ದೊಡ್ಡ ಆಶ್ರಮವನ್ನು ಕಾಣುತ್ತಾರೆ. ಆ ಆಶ್ರಮದಿಂದ ಧನಾತ್ಮಕ ಶಕ್ತಿ ಹೊರಹೊಮ್ಮುತ್ತಿರುತ್ತದೆ. ಇದನ್ನು ಕಂಡ ರಾಮ ಲಕ್ಷ್ಮಣರು ವಿಶ್ವಾಮಿತ್ರರನ್ನು ಕುರಿತು ಈ ಆಶ್ರಮದಲ್ಲಿ ಏನೋ ವಿಶೇಷವಿದೆ ಎಂದು ಭಾಸವಾಗುತ್ತಿದೆ. ಆದ್ದರಿಂದ ನಮ್ಮಲ್ಲೊಂದು ಕುತೂಹಲವಿದೆ. ಗುರುಗಳೇ ದಯಮಾಡಿ ಈ ಆಶ್ರಮವು ಯಾರದ್ದೆಂದು ತಿಳಿಸಿ ಎನ್ನುತ್ತಾರೆ. ರಾಜಕುಮಾರರೇ ಈ ಆಶ್ರಮವು ವಿಶೇಷವಾದ ಶಕ್ತಿಯನ್ನು ಹೊಂದಿದೆ. ಕಾರಣ ಇಲ್ಲಿ ಸಾಕ್ಷಾತ್ ಶಿವನೇ ನಿಯಮಾನುಸಾರವಾಗಿ ತಪಸ್ಸನ್ನು ಮಾಡುತ್ತಿದ್ದನು. ಆ ಕಾಲದಲ್ಲಿ ಮನ್ಮಥನಿಗೆ ಸಹ ನಮ್ಮೆಲ್ಲರಂತೆ ದೇಹವಿತ್ತು. ಆ ಮನ್ಮಥನು ಶಿವನಿಗೆ ತೊಂದರೆ ನೀಡುತ್ತಾನೆ. ಆಗ ಕ್ರೋಧಗೊಂಡ ಪರಮೇಶ್ವರನು ತನ್ನ ಮೂರನೇ ಕಣ್ಣನ್ನು ತೆಗೆದು ಮನ್ಮಥನ ಎಲ್ಲಾ ಅವಯವಗಳನ್ನು ಸುಟ್ಟು ಬಸ್ಮ ಮಾಡಿಬಿಡುತ್ತಾನೆ. ಆದ್ದರಿಂದ ಅಂದಿನಿಂದ ಮನ್ಮಥನಿಗೆ ಅನಂಗ ಎಂಬ ಹೆಸರು ಬರುತ್ತದೆ. ಅಲ್ಲದೆ ಅಂದಿನಿಂದ ಈ ಸ್ಥಳವು ಅಂಗದೇಶ ಎಂಬ ಹೆಸರಿನಿಂದ ಪ್ರಸಿದ್ದಿಗೆ ಬಂದಿದೆ ಎಂದು ತಿಳಿಸುತ್ತಾರೆ.
ತಾಜಾ ಫೋಟೊಗಳು
ಸರಯೂ ನದಿ ವಿವರ
ವಿಶ್ವಾಮಿತ್ರರು ರಾಮ ಲಕ್ಷ್ಮಣರ ಜೊತೆಗೂಡಿ ಅದೇ ಆಶ್ರಮದಲ್ಲಿ ಆ ದಿನವನ್ನು ಕಳೆಯಲು ತೀರ್ಮಾನಿಸುತ್ತಾರೆ. ಆಶ್ರಮವಾಸಿಗಳು ವಿಶ್ವಾಮಿತ್ರ ರಾಮ ಲಕ್ಷ್ಮಣರನ್ನು ಫಲಬರಿತ ಆಹಾರವನ್ನು ನೀಡಿ ಗೌರವದಿಂದ ಸತ್ಕರಿಸುತ್ತಾರೆ. ಮಾರನೆಯದಿನ ವಿಶ್ವಾಮಿತ್ರರು ಅಲ್ಲಿಂದ ಪ್ರಯಾಣ ಬೆಳೆಸಲು ತೀರ್ಮಾನಿಸುತ್ತಾರೆ. ಅವರಿಗೆ ಗಂಗಾನದಿಯನ್ನು ದಾಟಲು ಅವಶ್ಯಕವಾದ ಪರಿಕರವನ್ನು ಒದಗಿಸಿಕೊಡುತ್ತಾರೆ. ವಿಶ್ವಾಮಿತ್ರರಿದ್ದ ನಾವೆಯು ಗಂಗಾ ನದಿಯ ಮಧ್ಯದ ಭಾಗಕ್ಕೆ ಬರುತ್ತದೆ.
ಅಲ್ಲಿ ಹೆಚ್ಚಿನ ಧ್ವನಿಯ ಶಬ್ದವು ಉಂಟಾಗುತ್ತದೆ ರಾಮ ಲಕ್ಷ್ಮಣರು ಆ ಶಬ್ದದ ಬಗ್ಗೆ ವಿಚಾರಿಸುತ್ತಾರೆ. ರಾಮ ಲಕ್ಷ್ಮಣರ ಕುತೂಹಲವನ್ನು ತಿಳಿದು ವಿಶ್ವಾಮಿತ್ರ ಅದರ ಬಗ್ಗೆ ವಿವರಿಸಲು ಆರಂಭಿಸುತ್ತಾರೆ. ಬ್ರಹ್ಮನ ಮನೋ ಸಂಕಲ್ಪದಿಂದ ಕೈಲಾಸ ಪರ್ವತದಲ್ಲಿ ಮಾನಸ ಸರೋವರ ಎಂಬ ಸರೋವರವು ಹುಟ್ಟುತ್ತದೆ. ಅಲ್ಲಿಂದ ಉದ್ಭವಿಸುವ ಸರಯೂ ಎಂಬ ಹೆಸರಿನ ಪ್ರವಾಹವು ಆಯೋಧ್ಯೆಯನ್ನು ಸುತ್ತುವರೆದು ಮುಂದುವರೆಯುತ್ತದೆ. ಆನಂತರ ಗಂಗಾ ನದಿಯನ್ನು ಸೇರುತ್ತದೆ. ಸರಯೂ ಮತ್ತು ಗಂಗಾ ನದಿಗಳು ಸೇರುವ ಜಾಗ ಇದಾದ ಕಾರಣ ವಿಶೇಷವಾದಂತಹ ಶಬ್ದವು ಹೊರಹೊಮ್ಮುತ್ತದೆ. ರಾಮ ಲಕ್ಷ್ಮಣರು ಸರಯೂ ಮತ್ತು ಗಂಗಾ ನದಿಗಳಿಗೆ ತಲೆಬಾಗಿ ಗೌರವದಿಂದ ನಮಸ್ಕರಿಸುತ್ತಾರೆ. ವಿಶ್ವಮಿತ್ರರು ರಾಮ ಲಕ್ಷ್ಮಣರೊಂದಿಗೆ ಕಾಡನ್ನು ಪ್ರವೇಶಿಸುತ್ತಾರೆ.
ಇಂದ್ರನಿಗೆ ಬ್ರಹ್ಮಹತ್ಯಾ ದೋಷ
ಆ ಕಾಡು ನೋಡಲು ಭಯಂಕರವಾಗಿ ಕಾಣುತ್ತಿತ್ತು. ಮಾನವರ ಓಡಾಟವೇ ಇಲ್ಲದೆ ದುರ್ಗಮವಾಗಿತ್ತು. ಅರಣ್ಯದಲ್ಲಿ ಮುಖ್ಯವಾಗಿ ಅಸಂಖ್ಯಾತ ಜೀರುಂಡೆಗಳು ಇದ್ದವು. ಎಲ್ಲಿ ನೋಡಿದರೂ ಕಾಡು ಮೃಗಗಳೇ ಕಾಣುತ್ತಿದ್ದವು. ಆದರೆ ಬಿಲ್ವಪತ್ರೆಯಂತಹ ವೃಕ್ಷಗಳು ಕಾಡಿನಲ್ಲಿ ಯಥೇಚ್ಛವಾಗಿ ಇದ್ದವು. ಶ್ರೀ ರಾಮನು ಆ ಕಾಡಿನ ಬಗ್ಗೆ ಇದ್ದ ತನ್ನ ಕುತೂಹಲವನ್ನು ತಣಿಸಬೇಕೆಂದು ವಿನಂತಿಸಿ ಕೊಂಡನು. ಆಗ ವಿಶ್ವಾಮಿತ್ರರು ಮಲದ ಮತ್ತು ಕರೂಷ ಎಂಬ ಎರಡು ದೇಶಗಳು ಬಹಳ ಹೆಸರುವಾಸಿಯಾಗಿದ್ದವು. ಆ ದೇಶಗಳೇ ಈ ಕಾಡಾಗಿದೆ. ಈ ಸ್ಥಳದಲ್ಲಿ ಇಂದ್ರನು ವೃತ್ರಾಸುರ ಎಂಬ ರಾಕ್ಷಸನನ್ನು ಸಂಹರಿಸುತ್ತಾನೆ. ಅವನಿಗೆ ಬ್ರಹ್ಮಹತ್ಯಾ ದೋಷವು ಬರುತ್ತದೆ.
ತಾಟಕಿಯ ಸಂಹಾರ ಮಾಡಬೇಕು
ಇಲ್ಲಿದ್ದ ಋಷಿಮುನಿಗಳು ಗಂಗೆಯ ಸಹಿತ ಅನೇಕ ನದಿಗಳಿಂದ ನೀರನ್ನು ಸಂಗ್ರಹಿಸಿ ಇಂದ್ರನಿಗೆ ಅಭಿಷೇಕವನ್ನು ಮಾಡಿ, ಅವನಿಗಿದ್ದ ಬ್ರಹ್ಮಹತ್ಯಾ ದೋಷದಿಂದ ಪರಿಹಾರ ದೊರೆಯಲು ಕಾರಣರಾಗುತ್ತಾರೆ. ಇಂದ್ರನ ವರದಿಂದ ಈ ಪ್ರದೇಶವು ಪ್ರಸಿದ್ಧಿಯನ್ನು ಪಡೆಯುತ್ತದೆ. ಇಲ್ಲಿ ತಾಟಕಿ ಎಂಬ ಸ್ತ್ರೀಯ ಜನನವಾಗುತ್ತದೆ. ಇವಳಿಗೆ ಸಾವಿರ ಆನೆಗಳ ಬಲವಿರುತ್ತದೆ. ಇವಳು ಸುಂದನೆಂಬ ರಾಕ್ಷಸನ ಹೆಂಡತಿ. ಇವರ ಮಗನೇ ಮಾರೀಚ. ಇವನು ಜನಸಾಮಾನ್ಯರಿಗೆ ಸದಾ ಕಾಲ ತೊಂದರೆ ನೀಡುತ್ತಿದ್ದನು. ತಾಟಕಿಯ ಉಪಟಳವು ಇಂದಿಗೂ ಇದೆ. ನಾವು ನಮ್ಮ ಆಶ್ರಮಕ್ಕೆ ತೆರಳಲು ಅವಳ ಮುಂದೆಯೆ ಹೋಗಬೇಕು. ಆದರೆ ಇದು ಸಾಧ್ಯವಾಗದ ಮಾತು. ಆದ್ದರಿಂದ ಮೊದಲು ನೀನು ಈ ತಾಟಕಿಯ ಸಂಹಾರವನ್ನು ಮಾಡಬೇಕು ಎಂದು ರಾಮನಿಗೆ ವಿಶ್ವಾಮಿತ್ರರು ತಿಳಿಸುತ್ತಾರೆ.
ವಿಭಾಗ