ಭಗವದ್ಗೀತೆ: ಮನುಷ್ಯ ದುಃಖ ಸಾಗರದಿಂದ ಹೊರ ಬರಲು ಏನು ಮಾಡಬೇಕು; ಗೀತೆಯಲ್ಲಿನ ಅರ್ಥ ತಿಳಿಯಿರಿ
Dec 01, 2023 06:03 AM IST
ಶ್ರೀಕೃಷ್ಣನು ಅರ್ಜುನನಿಗೆ ನೀಡಿದ ಧರ್ಮೋಪದೇಶದ ಸಾರವೇ ಭಗವದ್ಗೀತೆಯಾಗಿದೆ. ಎದುರಾಳಿ ಬಣದಿಂದ ತನ್ನ ಬಂಧುಗಳೊಂದಿಗೆ ಹೋರಾಡಲು ಅರ್ಜುನ ನಿರಾಕರಿಸಿದಾಗ ಶ್ರೀಕೃಷ್ಣ ಪಾಂಡವರಲ್ಲಿ ಒಬ್ಬನಾದ ಅರ್ಜುನನಿಗೆ ಈ ರೀತಿಯ ಉಪದೇಶ ನೀಡುತ್ತಾನೆ.
ಕುರುಕ್ಷೇತ್ರದ ಯುದ್ಧದಲ್ಲಿ ಕೃಷ್ಣ ಅರ್ಜುನನಿಗೆ ನೀಡಿದ ಧರ್ಮೋಪದೇಶದ ಸಾರವೇ ಭಗವದ್ಗೀತೆ. ಮನುಷ್ಯ ತನ್ನ ದುಃಖದಿಂದ ಹೊರಬರಲು ಏನು ಮಾಡಬೇಕೆಂಬುದನ್ನು ಗೀತೆಯಲ್ಲಿ ತಿಳಿಯಿರಿ.
ಜ್ಯಾಯಸೀ ಚೇತ್ ಕರ್ಮಣಸ್ತೇ ಮತಾ ಬುದ್ಧಿರ್ಜನಾರ್ದನ |
ತತ್ ಕಿಂ ಕರ್ಮಣಿ ಘೋರೇ ಮಾಂ ನಿಯೋಜಯಸಿ ಕೇಶವ ||1||
ಅರ್ಜುನನು ಹೇಳಿದನು. ಹೇ ಜನಾರ್ದನ, ಹೇ ಕೇಶವ, ಬುದ್ಧಿಯ ಕಾಮ್ಯಕರ್ಮಕ್ಕಿಂತ ಉತ್ತಮ ಎಂದು ನೀನು ಭಾವಿಸುವುದಾದರೆ ನನ್ನನ್ನು ಈ ಘೋರ ಯುದ್ಧದಲ್ಲಿ ತೊಡಗಿಸಲು ಏಕೆ ಬಯಸುವೆ?
ತಾಜಾ ಫೋಟೊಗಳು
ತನ್ನ ಆತ್ಮೀಯ ಗೆಳೆಯನಾದ ಅರ್ಜುನನನ್ನು ಲೌಕಿಕ ದುಃಖ ಸಾಗರದಿಂದ ಉದ್ಧರಿಸಲು ದೇವೋತ್ತಮ ಪರಮ ಪುರುಷನು ಹಿಂದಿನ ಅಧ್ಯಾಯದಲ್ಲಿ ಆತ್ಮದ ಸ್ವರೂಪವನ್ನು ಬಹು ವಿವರವಾಗಿ ವರ್ಣಿಸಿದ್ದಾನೆ. ಸಾಕ್ಷಾತ್ಕಾರಕ್ಕೆ ಸೂಚಿಸಿದ ಮಾರ್ಗ ಬುದ್ಧಿಯೋಗ ಅಥವಾ ಕೃಷ್ಣಪ್ರಜ್ಞೆ, ಹಲವೊಮ್ಮೆ ಕೃಷ್ಣಪ್ರಜ್ಞೆ ಎಂದರೆ ಜಡತ್ವ ಎನ್ನುವ ತಪ್ಪು ಗ್ರಹಿಕೆ ಇರುವುದುಂಟು. ಇಂತಹ ತಪ್ಪು ಗ್ರಹಿಕೆ ಇರುವ ಮನುಷ್ಯನು ಬಹುಬಾರಿ ಶ್ರೀಕೃಷ್ಣನ ಪಾವನ ನಾಮವನ್ನು ಜಪಮಾಡಿ ಸಂಪೂರ್ಣ ಕೃಷ್ಣಪ್ರಜ್ಞೆ ಸಾಧಿಸಲು ಏಕಾಂತವಾದ ಸ್ಥಳಕ್ಕೆ ಹೋಗಿ ಬಿಡುವುದುಂಟು. ಆದರೆ ಕೃಷ್ಣಪ್ರಜ್ಞೆಯ ಸಿದ್ಧಾಂತದಲ್ಲಿ ಶಿಕ್ಷಣವಿಲ್ಲದೆ ಏಕಾಂತ ಸ್ಥಳದಲ್ಲಿ ಕೃಷ್ಣನಾಮ ಜಪಮಾಡುವುದು ಅಪೇಕ್ಷಣೀಯವಲ್ಲ.
ಹೀಗೆ ಮಾಡುವುದರಿಂದ ಮುಗ್ಧ ಜನರ ಅಗ್ಗದ ಮೆಚ್ಚಿಕೆ ಲಭ್ಯವಾಗಬಹುದು. ಅಷ್ಟೇ. ಕೃಷ್ಣಪ್ರಜ್ಞೆ ಅಥವಾ ಬುದ್ಧಿಯೋಗ (ಆಧ್ಯಾತ್ಮಿಕ ಪ್ರಗತಿಯ ವಿಜ್ಞಾನದಲ್ಲಿ ಬುದ್ಧಿಯನ್ನು ತೊಡಗಿಸುವುದು) ಎಂದರೆ, ಕ್ರಿಯಾಶೀಲ ಬದುಕಿನಿಂದ ದೂರವಾಗಿ ಏಕಾಂತ ಸ್ಥಳದಲ್ಲಿ ವ್ರತ-ತಪಸ್ಸುಗಳಲ್ಲಿ ನಿರತನಾಗುವುದು ಎಂದೇ ಅರ್ಜುನನೂ ಭಾವಿಸಿದನು. ಇದನ್ನೇ ಬೇರೆ ಮಾತುಗಳಲ್ಲಿ ಹೇಳುವುದಾದರೆ ಕೃಷ್ಣಪ್ರಜ್ಞೆಯನ್ನು ನೆಪ ಮಾಡಿಕೊಂಡು ಬುದ್ಧಿವಂತಿಕೆಯಿಂದ ಯುದ್ಧ ಮಾಡುವುದನ್ನು ತಪ್ಪಿಸಲು ಅವನು ಬಯಸಿದ.
ಆದರೆ ಶ್ರದ್ಧಾವಂತ ಶಿಷ್ಯನಾದ ಅವನು ಈ ವಿಷಯವನ್ನು ತನ್ನ ಗುರುವಿನ ಮುಂದಿಟ್ಟು ಅತ್ಯಂತ ಯೋಗ್ಯವಾದ ಕಾರ್ಯಮಾರ್ಗ ಯಾವುದು ಎಂದು ಪ್ರಶ್ನಿಸಿದ. ಉತ್ತರವಾಗಿ ಶ್ರೀಕೃಷ್ಣನು ಈ ಮೂರನೆಯ ಅಧ್ಯಾಯದಲ್ಲಿ ಕರ್ಮಯೋಗವನ್ನು ಅಥವಾ ಕೃಷ್ಣಪ್ರಜ್ಞೆಯ ಕಾರ್ಯವನ್ನು ವಿಸ್ತಾರವಾಗಿ ವಿವರಿಸಿದ.
ವ್ಯಾಮಿಶ್ರೇಣೇವ ವಾಕ್ಯೇವ ಬುದ್ಧಿಂ ಮೋಹಯಸೀವ ಮೇ |
ತದೇಕಂ ವದ ನಿಶ್ಚಿತ್ಯ ಯೇನ ಶ್ರೇಯೋಹಮಾಪ್ನುಯಾಮ್ ||2||
ನಿನ್ನ ಸಂದಿಗ್ಧಾರ್ಥದ ಮಾತುಗಳಿಂದ ನನ್ನ ಬುದ್ಧಿಗೆ ಮೋಹವು ಕವಿಯುತ್ತಿದೆ. ಆದುದರಿಂದ ದಯೆಯಿಟ್ಟು ನನಗೆ ಅತ್ಯಂತ ಶ್ರೇಯಸ್ಕರವಾದ ಮಾರ್ಗವನ್ನು ನಿಶ್ಚಯವಾಗಿ ತಿಳಿಸು.
ಹಿಂದಿನ ಅಧ್ಯಾಯದಲ್ಲಿ ಭಗವದ್ಗೀತೆಗೆ ಪ್ರಸ್ತಾವನೆಯಾಗಿ ಸಾಂಖ್ಯಯೋಗ, ಬುದ್ಧಿಯೋಗ, ಬುದ್ಧಿಯ ಮೂಲ ಇಂದ್ರಿಯ ನಿಗ್ರಹ, ನಿಷ್ಕಾಮಕರ್ಮ ಇಂತಹ ಹಲವು ಮಾರ್ಗಗಳನ್ನೂ, ಆರಂಭಿಕ ಶಿಷ್ಯನ ಸ್ಥಾನವನ್ನೂ ವಿವರಿಸಿದೆ. ಇವನ್ನು ವ್ಯವಸ್ಥಿತವಾಗಿ ನಿರೂಪಿಸಲಿಲ್ಲ. ಕ್ರಿಯೆ ಮತ್ತು ಗ್ರಹಿಕೆ ಸಾಧ್ಯವಾಗಲು ಇನ್ನೂ ವ್ಯವಸ್ಥಿತವಾಗಿ ಮಾರ್ಗದ ರೂಪರೇಷೆಯನ್ನು ಕೊಡಬೇಕು.
ತಪ್ಪುಗ್ರಹಿಕೆ ಇಲ್ಲದೆ, ಸಾಮಾನ್ಯ ಮನುಷ್ಯನೂ ಇವನ್ನು ಸ್ವೀಕರಿಸುವುದು ಸಾಧ್ಯವಾಗುವಂತೆ, ಗೊಂದಲಮಯವೆಂದು ಕಾಣುವ ಈ ವಿಷಯಗಳನ್ನು ಸ್ಪಷ್ಟಪಡಿಸಲು ಅರ್ಜನನು ಬಯಸಿದನು. ಮಾತಿನ ಚಮತ್ಕಾರದಿಂದ ಅರ್ಜನನಿಗೆ ಗೊಂದಲನ್ನುಂಟು ಮಾಡುವುದು ಕೃಷ್ಣನ ಉದ್ದೇಶವಲ್ಲದಿದ್ದರೂ ಅರ್ಜುನನಿಗೆ ಕೃಷ್ಣಪ್ರಜ್ಞೆಯ ಪ್ರಕ್ರಿಯೆಯು ನಿಷ್ಕ್ರಿಯತೆಯೇ ಅಥವಾ ಕ್ರಿಯಾಶೀಲತೆಯೇ ಎಂಬುದು ಅರ್ಥವಾಗಲಿಲ್ಲ. ಎಂದರೆ, ಭಗವದ್ಗೀತೆಯ ರಹಸ್ಯವನ್ನು ಅರ್ಥಮಾಡಿಕೊಳ್ಳಬಯಸುವ ಎಲ್ಲ ಗಂಭೀರ ಅಭ್ಯಾಸಿಗಳಿಗಾಗಿ ಅರ್ಜುನನು ತನ್ನ ಪ್ರಶ್ನೆಗಳ ಮೂಲ ಕೃಷ್ಣಪ್ರಜ್ಞೆಯ ಮಾರ್ಗವನ್ನು ಸ್ಪಷ್ಟಪಡಿಸುತ್ತಿದ್ದಾನೆ.