Bhagavad Gita: ಭಗವಂತನನ್ನು ಬಲ್ಲವನಿಗೆ ಸಮಸ್ಯೆಗಳಿಂದ ಮುಕ್ತಿ, ಮಾಡುವ ಕೆಲಸದಲ್ಲಿ ಯಶಸ್ಸು ; ಗೀತೆಯ ಅರ್ಥ ತಿಳಿಯಿರಿ
Mar 17, 2024 05:15 AM IST
ಶ್ರೀಕೃಷ್ಣನು ಅರ್ಜುನನಿಗೆ ನೀಡಿದ ಧರ್ಮೋಪದೇಶದ ಸಾರವೇ ಭಗವದ್ಗೀತೆಯಾಗಿದೆ. ಎದುರಾಳಿ ಬಣದಿಂದ ತನ್ನ ಬಂಧುಗಳೊಂದಿಗೆ ಹೋರಾಡಲು ಅರ್ಜುನ ನಿರಾಕರಿಸಿದಾಗ ಶ್ರೀಕೃಷ್ಣ ಪಾಂಡವರಲ್ಲಿ ಒಬ್ಬನಾದ ಅರ್ಜುನನಿಗೆ ಈ ರೀತಿಯ ಉಪದೇಶ ನೀಡುತ್ತಾನೆ.
- Bhagavad Gita Updesh: ಭಗವಂತನನ್ನು ಬಲ್ಲವನಿಗೆ ಸಮಸ್ಯೆಗಳಿಂದ ಮುಕ್ತಿ, ಮಾಡುವ ಕೆಲಸದಲ್ಲಿ ಯಶಸ್ಸು ಎಂಬುದರ ಅರ್ಥವನ್ನು ಭಗವದ್ಗೀತೆಯ 7ನೇ ಅಧ್ಯಾಯದ ಶ್ಲೋಕ 8 ರಲ್ಲಿ ಓದಿ.
7ನೇ ಅಧ್ಯಾಯದ ಪರತ್ಪರ ಜ್ಞಾನ - ಶ್ಲೋಕ - 8
ರಸೋಹಮಪ್ಸು ಕೌನ್ತೇಯ ಪ್ರಭಾಸ್ಮಿ ಶಶಿಸೂರ್ಯಯೋಃ |
ಪ್ರಣವಃ ಸರ್ವವೇದಷು ಶಬ್ದಃ ಖೇ ಪೌರುಷಂ ನೃಷು ||8||
ಅನುವಾದ: ಹೇ ಅರ್ಜುನ, ನಾನು ನೀರಿನಲ್ಲಿ ರುಚಿಯೂ ಸೂರ್ಯಚಂದ್ರರಲ್ಲಿ ಬೆಳಕೂ ವೇದದ ಮಂತ್ರಗಳಲ್ಲಿ ಓಂಕಾರವೂ ಆಗಿದ್ದೇನೆ. ನಾನು ಆಕಾಶದಲ್ಲಿ ಶಬ್ದವೂ ಪುರುಷರಲ್ಲಿ ಪೌರುಷವೂ ಆಗಿದ್ದೇನೆ.
ತಾಜಾ ಫೋಟೊಗಳು
ಭಾವಾರ್ಥ: ತನ್ನ ವಿವಿಧ ಐಹಿಕ ಮತ್ತು ಅಧ್ಯಾತ್ಮಿಕ ಶಕ್ತಿಗಳಿಂದ ಭಗವಂತನು ಹೇಗೆ ಸರ್ವವ್ಯಾಪಿ ಎಂದು ಈ ಶ್ಲೋಕವು ವಿವರಿಸುತ್ತದೆ. ಪರಮ ಪ್ರಭುವನ್ನು ಮೊದಲು ಅವನ ವಿವಿಧ ಶಕ್ತಿಗಳಿಂದ ಗ್ರಹಿಸಬಹುದು. ಇದು ನಿರಾಕಾರವಾಗಿ ಅವನನ್ನು ಗ್ರಹಿಸುವ ರೀತಿ. ಸೂರ್ಯನಲ್ಲಿರುವ ದೇವತೆಯು ವ್ಯಕ್ತಿಯಾಗಿದ್ದು ಸರ್ವವ್ಯಾಪಿಯಾದ ಅವನ ಶಕ್ತಿ ಸೂರ್ಯಪ್ರಭೆಯಿಂದ ಅವನನ್ನು ಗ್ರಹಿಸುವ ಹಾಗೆ ಭಗವಂತನು ತನ್ನ ನಿತ್ಯನಿವಾಸದಲ್ಲಿದ್ದರೂ ಅವನ ಸರ್ವವ್ಯಾಪಿಯಾಗಿ ಹರಡಿಕೊಂಡ ಶಕ್ತಿಗಳಿಂದ ಗ್ರಹಿಸಲ್ಪಡುತ್ತಾನೆ. ನೀರಿನ ರುಚಿಯು ನೀರಿನ ಕ್ರಿಯಾಶಾಲಿ ತತ್ವ. ಯಾರೂ ಸಮುದ್ರದ ನೀರನ್ನು ಕುಡಿಯಲು ಇಷ್ಟಪಡುವುದಿಲ್ಲ. ಏಕೆಂದರೆ ನೀರಿನ ಶುದ್ಧ ರುಚಿಯೊಡನೆ ಉಪ್ಪು ಸೇರಿರುತ್ತದೆ.
ನೀರಿನ ಆಕರ್ಷಣೆಯು ಅದರ ರುಚಿಯ ಪರಿಶುದ್ಧತೆಯನ್ನು ಅವಲಂಬಿಸಿರುತ್ತದೆ. ಈ ಶುದ್ಧ ರುಚಿಯು ಭಗವಂತನ ಶಕ್ತಿಗಳಲ್ಲಿ ಒಂದು. ನಿರಾಕಾರವಾದಿಯು ನೀರಿನಲ್ಲಿ ಭಗವಂತನು ಇರುವುದನ್ನು ಅದರ ರುಚಿಯಿಂದ ಕಾರಣುತ್ತಾನೆ. ಸಾಕಾರವಾದಿಯೂ ಸಹ ಭಗವಂತನು ದಯಮಾಡಿ ಮನುಷ್ಯನ ಬಾಯಾರಿಕೆಯನ್ನು ತಣಿಸಲು ರುಚಿಯಾದ ನೀರನ್ನು ಅನುಗ್ರಹಿಸಿದುದಕ್ಕಾಗಿ ಭಗವಂತನನ್ನು ಕೀರ್ತಿಸುತ್ತಾನೆ. ಪರಮೋನ್ನತನನ್ನು ಕಂಡುಕೊಳ್ಳುವ ರೀತಿಯು ಇದು. ವಾಸ್ತವವಾಗಿ ಹೇಳಬೇಕೆಂದರೆ ಸಾಕಾರವಾದಕ್ಕೂ ನಿರಾಕಾರವಾದಕ್ಕೂ ಘರ್ಷಣೆಯಿಲ್ಲ. ಭಗವಂತನನ್ನು ಬಲ್ಲವನಿಗೆ ಪ್ರತಿಯೊಂದರಲ್ಲೂ ಏಕಕಾಲದಲ್ಲಿ ನಿರಾಕಾರ ಕಲ್ಪನೆಯೂ ಸಾಕಾರ ಕಲ್ಪನೆಯೂ ಇವೆ ಮತ್ತು ಪರಸ್ಪರ ವಿರೋಧವೇನೂ ಇಲ್ಲ ಎನ್ನುವುದು ತಿಳಿದಿರುತ್ತದೆ. ಆದುದರಿಂದ ಚೈತನ್ಯ ಮಹಾಪ್ರಭುಗಳು ತಮ್ಮ ಭವ್ಯ ಸಿದ್ಧಾಂತವನ್ನು ಸ್ಥಾಪಿಸಿದರು. ಅದು ಅಚಿನ್ತ್ಯ ಭೇದ ಮತ್ತು ಅಭೇದ ತತ್ತ್ವ. ಏಕಕಾಕದಲ್ಲಿ ಏಕತೆ ಮತ್ತು ಭೇದ.
ಬ್ರಹ್ಮಜ್ಯೋತಿಯು ಭಗವಂತನ ನಿರಾಕಾರ ಪ್ರಭೆ. ಸೂರ್ಯ ಮತ್ತು ಚಂದ್ರರ ಬೆಳಕು ಮೂಲತಃ ಬ್ರಹ್ಮಜ್ಯೋತಿಯಿಂದ ಹೊರಸೂಸುತ್ತವೆ. ವೇದದ ಪ್ರತಿಯೊಂದು ಶ್ಲೋಕವೂ ಪ್ರಣವ ಅಥವಾ ಓಂಕಾರದ ದಿವ್ಯನಾದದಿಂದ ಪ್ರಾರಂಭವಾಗುತ್ತದೆ. ಇದು ಭಗವಂತನನ್ನು ಸಂಬೋಧಿಸುತ್ತದೆ. ಪರಮೋನ್ನತನಾದ ಶ್ರೀಕೃಷ್ಣನನ್ನು ಅವನ ಸಂಖ್ಯಾತ ಹೆಸರುಗಳಿಂದ ಸಂಬೋಧಿಸಲು ನಿರಾಕಾರವಾದಿಗಳು ಬಹಳ ಹೆದರಿಕೊಳ್ಳುತ್ತಾರೆ. ಅವರು ಓಂಕಾರ ದಿವ್ಯಶಬ್ದವನ್ನು ಉಚ್ಚರಿಸಲು ಬಯಸುತ್ತಾರೆ. ಆದರೆ ಓಂಕಾರವು ಕೃಷ್ಣನ ನಾದಸಂಕೇತವೆನ್ನುವುದನ್ನು ಅವರು ಅರ್ಥಮಾಡಿಕೊಳ್ಳುವುದಿಲ್ಲ. ಕೃಷ್ಣಪ್ರಜ್ಞೆಯ ವ್ಯಾಪ್ತಿಯು ಎಲ್ಲೆಡೆಯೂ ಹಬ್ಬಿರುತ್ತದೆ. ಕೃಷ್ಣಪ್ರಜ್ಞೆಯನ್ನು ಅರಿತವನು ಧನ್ಯನು. ಕೃಷ್ಣನನ್ನು ತಿಳಿಯದವರು ಮಾಯೆಯಲ್ಲಿದ್ದಾರೆ. ಆದುದರಿಂದ ಕೃಷ್ಣಜ್ಞಾನವೇ ಮುಕ್ತಿ ಮತ್ತು ಅವನನ್ನು ತಿಳಿಯದಿರುವುದೇ ಬಂಧನ.