ಇಲ್ಲಿ ಸುಬ್ರಹ್ಮಣ್ಯನನ್ನು ಪೂಜಿಸಿದರೆ ಅವಿವಾಹಿತರಿಗೆ ಕಂಕಣ ಭಾಗ್ಯ ಕೈಗೂಡಲಿದೆ; ತಮಿಳುನಾಡು ತಿರುಮುರುಗನಾಥೇಶ್ವರ ದೇವಾಲಯದ ವೈಶಿಷ್ಟ್ಯ
Nov 25, 2024 06:12 PM IST
ತಮಿಳುನಾಡು ತಿರುಮುರುಗನಾಥೇಶ್ವರ ದೇವಾಲಯ
Tamilnadu Temple: ತಮಿಳುನಾಡಿನ ತಿರುಪ್ಪೂರ್ ಜಿಲ್ಲೆಯಲ್ಲಿರುವ ತಿರುಮುರುಗನಾಥೇಶ್ವರ ದೇವಾಲಯದಲ್ಲಿ ಸುಬ್ರಹ್ಮಣ್ಯಸ್ವಾಮಿಯನ್ನು ಪೂಜಿಸಿದರೆ ಜಾತಕದಲ್ಲಿರುವ ಕುಜದೋಷ ನಿವಾರಣೆಯಾಗುತ್ತದೆ, ಜೊತೆಗೆ ಶೀಘ್ರದಲ್ಲೇ ಕಂಕಣ ಭಾಗ್ಯ ಕೈ ಗೂಡುತ್ತದೆ ಎಂಬ ನಂಬಿಕೆ ಇದೆ.
ತಮಿಳುನಾಡಿನ ತಿರುಪ್ಪೂರ್ ಜಿಲ್ಲೆಯ ತಿರುಮುರುಗನಪೂಂಡಿಯಲ್ಲಿರುವ ತಿರುಮುರುಗನಾಥೇಶ್ವರ ದೇವಾಲಯವಿದೆ. ಇಲ್ಲಿನ ಪ್ರಮುಖವಾದ ದೇವರು ಪರಮೇಶ್ವರ. ಶಿವನನ್ನು ತಿರುಮುರುಗನಾಥೇಶ್ವರ ಎಂಬ ಹೆಸರಿನಿಂದ ಕರೆಯಲಾಗುತ್ತದೆ. ಶಿವನ ಪತ್ನಿಯಾದ ಪಾರ್ವತಿ ದೇವಾಲಯವು ಇಲ್ಲಿದೆ. ಇದು ಶಿವನಿಗೆ ಸಮರ್ಪಿತವಾದ ದೇವಾಲಯವಾದರೂ ಸುಬ್ರಹ್ಮಣ್ಯಸ್ವಾಮಿಗೆ ಪ್ರಾಮುಖ್ಯತೆ ನೀಡಲಾಗುತ್ತದೆ.
ತಾಜಾ ಫೋಟೊಗಳು
ದ್ರಾವಿಡ ಶೈಲಿಯ ದೇವಸ್ಥಾನ
ಈ ದೇವಾಲಯವು ದ್ರಾವಿಡರ ಶೈಲಿಯನ್ನು ಹೊಂದಿದೆ. ಈ ದೇವಾಲಯವನ್ನು 10 ನೇ ಶತಮಾನದಲ್ಲಿ ಚೋಳರಿಂದ ನಿರ್ಮಿಸಲ್ಪಟ್ಟಿದೆ ಎಂಬ ಪುರಾವೆಗಳು ನಮಗೆ ದೊರೆಯುತ್ತವೆ. ತಮಿಳು ಸಂತಕವಿಗಳ ಬರವಣಿಗೆಗಳ ಪ್ರಕಾರ ಆರಂಭದಲ್ಲಿ ಶಿವ ಪಾರ್ವತಿಯರು ಇಲ್ಲಿನ ಮೂಲ ದೇವರಾಗಿದ್ದರು. ಒಮ್ಮೆ ಶೂರಪದ್ಮ ಎಂಬ ರಾಕ್ಷಸನಿರುತ್ತಾನೆ. ಇವನ ಉಪಟಳದಿಂದ ಬೇಸತ್ತ ದೇವಾನುದೇವತೆಗಳು ಇವನನ್ನು ಸಂಹರಿಸಲು ಸುಬ್ರಹ್ಮಣ್ಯಸ್ವಾಮಿಯನ್ನು ಬೇಡಿಕೊಳ್ಳುತ್ತಾರೆ. ಇವರ ಕೋರಿಕೆಗೆ ಓಗೊಟ್ಟ ಸುಬ್ರಹ್ಮಣ್ಯನು ರಾಕ್ಷಸರ ರಾಜನಾದ ಶೂರಪದ್ಮನನ್ನು ಸಂಹರಿಸುತ್ತಾನೆ. ತನ್ನಲ್ಲಿದ್ದ ಆಕ್ರೋಶವನ್ನು ತಡೆಯಲಾರದೆ ರಾಕ್ಷಸನ ದೇಹವನ್ನು ಎರಡು ತುಂಡುಗಳಾಗಿ ಮಾಡುತ್ತಾನೆ. ಆಗ ರಾಕ್ಷಸನ ಅವಸಾನ ಆಗುತ್ತದೆ. ಆದರೆ ಶ್ರೀ ಸುಬ್ರಹ್ಮಣ್ಯಸ್ವಾಮಿಗೆ ಬ್ರಹ್ಮಹತ್ಯೆ ದೋಷ ಬರುತ್ತದೆ.
ಬ್ರಹ್ಮಹತ್ಯಾ ದೋಷ ಕಳೆಯಲು ಸುಬ್ರಹ್ಮಣ್ಯಸ್ವಾಮಿ ಪ್ರಾರ್ಥನೆ
ಇದನ್ನು ಅರಿತ ಶ್ರೀ ಸುಬ್ರಹ್ಮಣ್ಯಸ್ವಾಮಿಯು ಬ್ರಹ್ಮದೇವರನ್ನು ಪರಿಹಾರವನ್ನು ಕೇಳುತ್ತಾನೆ. ಆಗ ಬ್ರಹ್ಮನು ಅದೇ ಸ್ಥಳದಲ್ಲಿ ಶಿವಪಾರ್ವತಿಯರನ್ನು ಪೂಜಿಸಲು ತಿಳಿಸುತ್ತಾನೆ. ಆಗ ಸುಬ್ರಹ್ಮಣ್ಯಸ್ವಾಮಿಯು ತನ್ನ ಆಯುಧ ಶೂಲದಿಂದ ಆ ಸ್ಥಳದಲ್ಲಿ ಚಿಲುಮೆಯೊಂದನ್ನು ಸೃಷ್ಠಿಸುತ್ತಾನೆ. ಅದರಿಂದ ದೊರೆತ ನೀರಿನಿಂದ ಶಿವ ಮತ್ತು ಪಾರ್ವತಿಯರನ್ನು ಪೂಜಿಸಿಸುತ್ತಾನೆ. ಈ ಕಾರಣದಿಂದ ಇಲ್ಲಿರುವ ದೇವರನ್ನು ಮುರುಗನಾಥೇಶ್ವರಸ್ವಾಮಿ ಎಂದು ಕರೆಯಲಾಗುತ್ತದೆ.
ಪ್ರಸಿದ್ಧ ಶೈವ ಸಂತರು ಈ ಸ್ಥಳಕ್ಕೆ ಆಗಮಿಸಿ ವಿನಾಯಕ ದೇವಸ್ಥಾನದಲ್ಲಿ ವಿಶ್ರಾಂತಿ ಪಡೆಯುತ್ತಾರೆ. ಇವರ ಭಕ್ತಿಯನ್ನು ಪರೀಕ್ಷಿಸಲು ಶಿವನು ಅವರ ಬಳಿ ಇದ್ದ ಧನಕನಕಗಳನ್ನು ಅಪಹರಿಸಲು ತನ್ನ ಭೂತಗಣಗಳಿಗೆ ತಿಳಿಸುತ್ತಾನೆ. ತನ್ನ ಸ್ವತ್ತನ್ನು ಕಳೆದುಕೊಂಡ ಸಂತರು ಶಿವನನ್ನು ಬೇಡಿಕೊಳ್ಳುತ್ತಾರೆ. ನಂತರ ಶಿವನು ಅವರ ಭಕ್ತಿಯನ್ನು ಒಪ್ಪಿ ಕಳೆದುಹೋದ ಆಸ್ತಿಯನ್ನು ಪುನ: ದೊರೆಯುವಂತೆ ಮಾಡುತ್ತಾನೆ. ಈ ವಿಶೇಷ ದಿನದಂದು ಕಾರ್ತಿಕ ಮಾಸದಲ್ಲಿ ವಿಶೇಷ ಪೂಜೆ ನಡೆಸಲಾಗುತ್ತದೆ. ಮಹಾಶಿವರಾತ್ರಿಯ ದಿನ ಬ್ರಹ್ಮೋತ್ಸವವನ್ನು ಆಚರಿಸಲಾಗುತ್ತದೆ.
ಜಾತಕದಲ್ಲಿನ ಕುಜ ದೋಷ ನಿವಾರಣೆ
ಈ ದೇವಾಲಯದಲ್ಲಿ ಸಂಪ್ರದಾಯಬದ್ದ ರಾಜಗೋಪುರ ಇಲ್ಲ. ಪರಮೇಶ್ವರನು ಲಿಂಗದ ರೂಪದಲ್ಲಿ ಸ್ಥಿತನಾಗಿದ್ದಾನೆ. ಶಿವನ ಗುಡಿಗೆ ಎದುರಾಗಿ ದಂಡಪಾಣಿ ಸುಬ್ರಹ್ಮಣ್ಯೇಶ್ವರನ ದೇವಾಲಯವಿದೆ. ಶೂಲ ಮತ್ತು ತನ್ನ ವಾಹನವಾದ ನವಿಲಿನ ಸಮೇತ ಇರುವ ಸ್ವಾಮಿಯನ್ನು ಇಲ್ಲಿ ಕಾಣಬಹುದು. ಪಶ್ಚಿಮ ದಿಕ್ಕಿನಲ್ಲಿ ಪಾರ್ವತಿಯ ದೇವಾಲಯವಿದೆ. ಇದಲ್ಲದೆ ಇಲ್ಲಿ ಷಣ್ಮುಗ ತೀರ್ಥ, ಜ್ಞಾನತೀರ್ಥ ಮತ್ತು ಬ್ರಹ್ಮತೀರ್ಥಗಳಿವೆ. ಈ ದೇವಾಲಯದಲ್ಲಿ ಅನ್ನದಾನ ಮಾಡುವುದರಿಂದ ಕುಟುಂಬದ ದಾರಿದ್ರ್ಯ ನಿವಾರಣೆ ಆಗುತ್ತದೆ. ಕುಟುಂಬದ ವಂಶಕ್ಕೆ ಸೇರಿದ ಆಸ್ತಿಯ ವಿಚಾರದ್ದಲ್ಲಿ ಮನಸ್ತಾಪಗಳಿದ್ದು ಇಲ್ಲಿ ಪೂಜಿಸಿದರೆ, ಸುಲಭವಾಗಿ ಬಗೆಹರಿಯುವುದು.
ಶ್ರೀ ಸುಬ್ರಹ್ಮಣ್ಯಸ್ವಾಮಿಗೆ ಪೂಜೆ ಸಲ್ಲಿಸಿ ಅನ್ನದಾನ ಮಾಡಿದಲ್ಲಿ ಜಾತಕದಲ್ಲಿನ ಕುಜದೋಷ ನಿವಾರಣೆ ಆಗುತ್ತದೆ. ಅಲ್ಲದೆ ವಿದ್ಯಾರ್ಥಿಗಳಿಗೆ ಉತ್ತಮ ಜ್ಞಾನ ಪ್ರಾಪ್ತಿಯಾಗುತ್ತದೆ. ಸೋದರರ ನಡುವಿನ ಭಿನ್ನಾಭಿಪ್ರಾಯ ಮರೆಯಾಗುತ್ತದೆ. ಕಾರ್ತಿಕ ಮಾಸದಲ್ಲಿ ಶಿವ, ಪಾರ್ವತಿ ಮತ್ತು ಸುಬ್ರಹ್ಮಣ್ಯಸ್ವಾಮಿಗೆ ಪೂಜೆ ಸಲ್ಲಿಸಿದಲ್ಲಿ ಶ್ರೀಘ್ರ ವಿವಾಹ ಆಗುವುದಲ್ಲದೆ ಉತ್ತಮ ಸಂತಾನ ಲಭಿಸುತ್ತದೆ. ಈ ಸ್ಥಳದಲ್ಲಿ ಶ್ರೀ ರುದ್ರಹೋಮ ಮತ್ತು ಸರ್ಪಸೂಕ್ತ ಅಥವ ಸುಬ್ರಹ್ಮಣ್ಯ ಸೂಕ್ತ ಹೋಮಗಳನ್ನು ಮಾಡಿದಲ್ಲಿ ಸಂತಾನ ದೋಷ ನಿವಾರಣೆಯಾಗಿ ಸಂತಾನ ಪ್ರಾಪ್ತಿಯಾಗುತ್ತದೆ.