Valmiki Jayanti 2024: ಋಕ್ಷನು ವಾಲ್ಮೀಕಿ ಆಗಿದ್ದು ಹೇಗೆ? ನಾರದ, ಬ್ರಹ್ಮ ದೇವರು, ವಾಲ್ಮೀಕಿ ನಡುವಿನ ಪ್ರಸಂಗ ತಿಳಿಯಿರಿ
Oct 16, 2024 05:15 PM IST
ಮಹರ್ಷಿ ವಾಲ್ಮೀಕಿ ಜಯಂತಿ ಹಿನ್ನೆಲೆಯಲ್ಲಿ ವಾಲ್ಮೀಕಿಗೆ ಸಂಬಂಧಿಸಿದ ಕಥೆಗಳನ್ನು ಓದಿ.
- ಅಕ್ಟೋಬರ್ 17ರ ಗುರುವಾರ ರಾಮಾಯಣ ಕರ್ತೃ ಮಹರ್ಷಿ ವಾಲ್ಮೀಕಿ ಜಯಂತಿ. ಈ ವಿಶೇಷ ದಿನದ ಸಲುವಾಗಿ ಮಹರ್ಷಿ ವಾಲ್ಮೀಕಿಗೆ ಸಂಬಂಧಿಸಿದ ಕಥೆಗಳನ್ನು ಇಲ್ಲಿ ನೀಡಲಾಗಿದೆ. ಋಕ್ಷನು ವಾಲ್ಮೀಕಿಯಾಗಿದ್ದು ಮತ್ತು ನಾರದ, ಬ್ರಹ್ಮ ಮತ್ತು ವಾಲ್ಮೀಕಿಯ ನಡುವಿನ ಸಂಭಾಷಣೆ, ರಾಮಾಯಣ ಬರೆಯಲು ಪ್ರೇರಣೆಯಾದ ಪ್ರಸಂಗವನ್ನು ಇಲ್ಲಿ ನೀಡಲಾಗಿದೆ. (ಬರಹ: ಎಚ್. ಸತೀಶ್, ಜ್ಯೋತಿಷಿ)
ರಾಮಾಯಣ ಕರ್ತೃ ಮಹರ್ಷಿ ವಾಲ್ಮೀಕಿ ಜಯಂತಿಯನ್ನು ಪ್ರತಿವರ್ಷ ಆಚರಿಸಲಾಗುತ್ತದೆ. ಅದರಂತೆ ಈ ವರ್ಷ ಅಕ್ಟೋಬರ್ 17 ರಂದು ಕರ್ನಾಟಕ ಸೇರಿದಂತೆ ದೇಶಾದ್ಯಂತ ವಾಲ್ಮೀಕಿ ಜಯಂತಿಯನ್ನು ಅದ್ಧೂರಿಯಾಗಿ ಆಚರಿಸಲಾಗುತ್ತದೆ. ಮಹರ್ಷಿಗಳಿಗೆ ಸಂಬಂಧಿಸಿದಂತೆ ಒಂದೊಂದು ಧಾರ್ಮಿಕ ಗ್ರಂಥ ಒಂದೊಂದು ಕಥೆಯನ್ನು ಹೇಳುತ್ತದೆ. ಋಕ್ಷನು ವಾಲ್ಮೀಕಿಯಾಗಿದ್ದು ಹೇಗೆ, ರಾಮಾಯಣ ಬರೆಯಲು ಪ್ರೇರಣೆ, ನಾರದರು, ವಾಲ್ಮೀಕಿಯವರ ಆಶ್ರಮಕ್ಕೆ ಬ್ರಹ್ಮ ದೇವರ ಪ್ರವೇಶ ಸೇರಿದಂತೆ ಆಸಕ್ತಿಕರ ವಿಚಾರಗಳನ್ನು ಇಲ್ಲಿ ನೀಡಲಾಗಿದೆ.
ತಾಜಾ ಫೋಟೊಗಳು
ಭೃಗು ವಂಶದಲ್ಲಿ ಜನಿಸಿದ ಮಹರ್ಷಿಯೊಬ್ಬನಿದ್ದನು. ಸತ್ಯಸಂಧನು, ನೇಮನಿಷ್ಠೆಯಾಗಿದ್ದ ಇವನ ಹೆಸರು ಪ್ರಚೇತಸ. ಇವನ ಮಗನ ಹೆಸರು ಋಕ್ಷ. ತಂದೆಯಿಂದಲೇ ಪ್ರೇರಿತನಾದ ಈತನು ಘೋರ ತಪಸ್ಸನ್ನು ಆಚರಿಸಲು ತೀರ್ಮಾನಿಸುತ್ತಾನೆ. ಯೋಗ್ಯವಾದ ಸ್ಥಳವನ್ನು ಆಯ್ಕೆ ಮಾಡಿ ತಪಸ್ಸನ್ನು ಆರಂಭಿಸುತ್ತಾನೆ. ಯಾವುದೇ ಪ್ರಾಕೃತಿಕ ಬದಲಾವಣೆಗಳಿಗೂ ಮಣಿಯದೆ ಅನೇಕ ವರ್ಷಗಳು ತಪಸ್ಸನ್ನು ಆಚರಿಸುತ್ತಾ ಇರುತ್ತಾನೆ. ಇವನ ಮೇಲೆ ಬೃಹತ್ ಪ್ರಮಾಣದ ಹುತ್ತವು ಬೆಳೆಯುತ್ತದೆ. ಋಕ್ಷನು ಆ ಹುತ್ತದ ಒಳಗೆ ಸೇರಿಹೋಗುತ್ತಾನೆ.
ತನ್ನ ಮಗನ ತಪಸ್ಸಿಗೆ ಯಾವುದೇ ಲೋಪ ಬಾರದಂತೆ ಕಾಪಾಡಬೇಕೆಂದು ದೇವತೆಗಳಲ್ಲಿ ಪ್ರಚೇತಸನು ಪ್ರಾರ್ಥಿಸುತ್ತಾನೆ. ಆಗ ವಾಯು ವೇಗವಾಗಿ ಗಾಳಿಯನ್ನು ಸೃಷ್ಟಿಸುತ್ತಾನೆ. ಅದರಿಂದ ಬೆಳೆದ ಹುತ್ತವು ಅಲುಗಾಡುವುದೂ ಇಲ್ಲ. ಆಗ ವರುಣನು ಬಾರಿ ಪ್ರಮಾಣದ ಮಳೆಯನ್ನು ಹುತ್ತದ ಮೇಲೆ ಬೀಳುವಂತೆ ಮಾಡುತ್ತಾನೆ. ವರ್ಷಧಾರೆಯನ್ನು ತಡೆಯಲಾರದೆ ಬೆಳೆದ ಹುತ್ತವು ಕ್ಷಣಮಾತ್ರದಲ್ಲಿ ಕರಗಿಹೋಗುತ್ತದೆ. ತಪಸ್ಸನ್ನು ಮಾಡುತ್ತಿದ್ದ ಋಕ್ಷನು ಆ ಸ್ಥಳದಿಂದ ಹೊರಬರುತ್ತಾನೆ. ಹೊರಬಂದ ಮಗನನ್ನು ಕಂಡು ಸಂತೋಷಗೊಂಡ ಪ್ರಚೇತಸನನು ದೇವತೆಗಳಿಗೆ ಧನ್ಯವಾದಗಳನ್ನು ಅರ್ಪಿಸುತ್ತಾನೆ. ಪ್ರೀತಿ ಮತ್ತು ಮಮತೆಯಿಂದ ಮಗನನ್ನು ಬಿಗಿದಪ್ಪುತ್ತಾನೆ.
ವಾಲ್ಮೀಕಿ ಹೆಸರು ಹೇಗೆ ಪ್ರಸಿದ್ಧವಾಗುತ್ತೆ?
ವಾಲ್ಮೀಕಿ ಎಂದರೆ ಹುತ್ತ ಎಂದು ಅರ್ಥ. ಆದ್ದರಿಂದ ಹುತ್ತದಿಂದ ಹೊರಬಂದು ಮರುಜನ್ಮ ಪಡೆದ ಋಕ್ಷನು ವಾಲ್ಮೀಕಿ ಎಂಬ ಹೆಸರಿನಿಂದ ಪ್ರಸಿದ್ದನಾಗುತ್ತಾನೆ. ಇವರಿಗೆ ಪ್ರಾಚೇತಸ ಎಂಬ ಹೆಸರೂ ಇದೆ. ಇವರೇ ರಾಮಾಯಣ ಗ್ರಂಥವನ್ನು ರಚಿಸಿದವರು. ಆದ್ದರಿಂದಲೇ ಇದನ್ನು ವಾಲ್ಮೀಕಿ ರಾಮಾಯಣ ಎಂದೇ ಕರೆಯುತ್ತೇವೆ. ಭಗವಾನ್ ಶ್ರೀರಾಮಚಂದ್ರರ ಜಿವಿತಾವಧಿಯಲ್ಲಿಯೇ ಈ ಗ್ರಂಥವನ್ನು ರಚಿಸಲಾಗಿದೆ ಎಂಬುದಕ್ಕೆ ಪುರಾವೆ ದೊರೆಯುತ್ತದೆ. ಶ್ರೀರಾಮನ ಮಕ್ಕಳಾದ ಲವ ಕುಶರು ವಾಲ್ಮೀಕಿ ಆಶ್ರಮದಲ್ಲಿ ಬೆಳೆಯುತ್ತಾರೆ. ಸ್ವತಃ ವಾಲ್ಮೀಕಿಗಳೇ ರಾಮಾಯಣವನ್ನು ಲವ ಕುಶರಿಗೆ ಬೋಧಿಸುತ್ತಾರೆ. ಲವ-ಕುಶರು ಇದನ್ನು ಹಾಡಿನ ರೂಪದಲ್ಲಿ ಶ್ರೀರಾಮನ ಆಸ್ಥಾನದಲ್ಲಿ ಹಾಡುತ್ತಾರೆ. ಆದರಿಂದ ರಾಮರ ಆಡಳಿತವನ್ನು ಕಂಡವರಲ್ಲಿ ವಾಲ್ಮೀಕಿಗಳು ಮೊದಲಿಗರಾಗುತ್ತಾರೆ.
ಒಮ್ಮೆ ನಾರದ ಮುನಿಗಳು ವಾಲ್ಮೀಕಿಗಳ ಆಶ್ರಮಕ್ಕೆ ಆಗಮಿಸುತ್ತಾರೆ. ಸಕಲಗುಣಪರಿಪೂರ್ಣನಾದ ವ್ಯಕ್ತಿಯನ್ನು ತಿಳಿಸೆಂದು ಕೇಳುತ್ತಾರೆ. ಇವರ ಮನದಲ್ಲಿ ಶ್ರೀರಾಮರೇ ಇರುತ್ತಾರೆ. ಆಗ ನಾರದರು ವೈವಸ್ವತ ಮನುವಿನ ಮೊದಲ ಮಗನಬಗ್ಗೆ ಹೇಳುತ್ತಾರೆ. ಅವರು ಇಕ್ಷ್ವಾಕು ವಂಶದಲ್ಲಿ ಜನಿಸಿದ ಶ್ರೀರಾಮರ ಬಗ್ಗೆ ಹೇಳುತ್ತಾರೆ.
ನಾರದರನ್ನು ವಾಲ್ಮೀಕಿ ಮುನಿಗಳು ತನಗೆ ಓರ್ವ ವ್ಯಕ್ತಿಯ ಕಥೆಯನ್ನು ಹೇಳಬೇಕು ಎಂದು ಕೇಳುತ್ತಾರೆ. ಆದರೆ ಆ ವ್ಯಕ್ತಿಯು ಎಲ್ಲಾ ರೀತಿಯ ಒಳ್ಳೆಯ ಗುಣಗಳನ್ನು ಮೈಗೂಡಿಸಿಕೊಂಡಿರಬೇಕೆಂಬ ಷರತ್ತನ್ನು ವಿಧಿಸುತ್ತಾರೆ. ಮಹಾಜ್ಞಾನಿಗಳಾದ ನಾರದರು ಈ ಮಾತನ್ನು ಕೇಳಿದ ನಂತರ ಎಲ್ಲಾ ರೀತಿಯ ಒಳ್ಳೆಯ ಗುಣಗಳನ್ನು ಹೊಂದಿರುವ ವ್ಯಕ್ತಿ ಎಂದರೆ ಶ್ರೀರಾಮ ಮಾತ್ರ ಎಂಬ ತೀರ್ಮಾನಕ್ಕೆ ಬರುತ್ತಾರೆ. ಆಗ ಶ್ರೀರಾಮನ ಕಥೆಯನ್ನು ಹೇಳಲು ಆರಂಭಿಸುತ್ತಾರೆ. ಸ್ವತ: ಬ್ರಹ್ಮನೇ ಶ್ರೀರಾಮರ ಕಥೆಯನ್ನುನಾರದರಿಗೆ ತಿಳಿಸುತ್ತಾನೆ.
ವಾಲ್ಮೀಕಿಗಳ ಆತಿಥ್ಯಕ್ಕೆ ಮನಸೋತ ಬ್ರಹ್ಮ ದೇವರು
ನಾರದರು ತಮಗೆ ತಿಳಿದ ಕಥೆಯನ್ನು ಸಂಕ್ಷಿಪ್ತ ಚರಿತೆಯನ್ನಾಗಿ ಮಾಡಿ ವಾಲ್ಮೀಕಿ ಮಹರ್ಷಿಗಳಿಗೆ ತಿಳಿಸುತ್ತಾರೆ. ಇದರಿಂದ ವಾಲ್ಮೀಕಿಗಳು ಅಪೂರ್ಣವಾದ ವಿಚಾರ ತಿಳಿದಂತಾಗುತ್ತದೆ. ಆದರೆ ದೈವಾನುಗ್ರಹದಿಂದ ಅವರ ಆಶ್ರಮಕ್ಕೆ ಸಕ್ಷಾತ್ ಬ್ರಹ್ಮದೇವರು ಆಗಮಿಸುತ್ತಾರೆ. ಬ್ರಹ್ಮದೇವನನ್ನು ಕಂಡು ಸಂತಸಗೊಂಡ ವಾಲ್ಮೀಕಿಗಳು ಗೌರವಾದರಗಳಿಂದ ಸತ್ಕರಿಸುತ್ತಾರೆ. ವಾಲ್ಮೀಕಿ ಮುನಿಗಳಿಂದ ಆತಿಥ್ಯವನ್ನು ಸ್ವೀಕರಿಸಿ ಬ್ರಹ್ಮದೇವನು ಸಂತುಷ್ಟನಾಗುತ್ತಾನೆ.
ವಾಲ್ಮೀಕಿಗಳ ಮನವನ್ನು ಅರಿತ ಬ್ರಹ್ಮನು, ಅವರಿಗೆ ನಾರದ ಮಹರ್ಷಿಗಳು ಸಂಕ್ಷಿಪ್ತವಾಗಿ ತಿಳಿಸಿದ ಶ್ರೀರಾಮನ ಕಥೆಯನ್ನು ವಿಸ್ತರಿಸಿ ಬರೆಯಬೇಕೆಂದು ವಿನಂತಿಸಿಕೊಳ್ಳುತ್ತಾನೆ. ವಾಲ್ಮೀಕಿಗಳು ಅದರ ಬಗ್ಗೆ ಸಂಪೂರ್ಣ ಜ್ಞಾನ ಇಲ್ಲವೆಂದು ತಿಳಿಸುತ್ತಾರೆ. ಆಗ ಬ್ರಹ್ಮನು ಶ್ರೀರಾಮನ ಜೀವನ ಚರಿತೆಯು ನಿಮ್ಮ ಕಣ್ಣೆದುರೇ ನಡೆದಿದೆ, ಅದು ನಿಮಗೆ ಗೋಚರಿಸುತ್ತದೆ. ಆದ್ದರಿಂದ ನಾರದರು ನಿಮಗೆ ತಿಳಿಸದೆ ಹೋದ ಎಲ್ಲಾ ವಿಚಾರಗಳು ನಿಮಗೆ ತಿಳಿಯುತ್ತದೆ. ಇದೊಂದು ಮಹಾಕಾವ್ಯವಾಗಿ ಸೂರ್ಯ ಚಂದ್ರ ಇರುವವರೆಗೂ ಜನರು ಇದನ್ನು ಓದುತ್ತಾರೆ ಎಂದು ನುಡಿಯುತ್ತಾನೆ. ಆ ನಂತರ ವಾಲ್ಮೀಕಿ ಮುನಿಗಳು 24,000 ಶ್ಲೋಕಗಳ ರಾಮಾಯಣ ಗ್ರಂಥವನ್ನು ಬರೆದು ಮುಗಿಸುತ್ತಾರೆ.