ಮನೆಯ ಮುಖ್ಯ ಬಾಗಿಲು ಯಾವ ಬಣ್ಣದಲ್ಲಿರಬೇಕು? ಸುಖ, ಶಾಂತಿ, ಸಮೃದ್ಧಿಗಾಗಿ ಇಲ್ಲಿದೆ ವಾಸ್ತು ಟಿಪ್ಸ್
Sep 25, 2024 01:37 PM IST
ಮನೆಯ ಬಾಗಿಲುಗಳಿಗೆ ಈ ರೀತಿಯಾಗಿ ಬಣ್ಣ ಆಯ್ದುಕೊಳ್ಳಿ
- ಮನೆಯಲ್ಲಿ ಶಾಂತಿ, ನೆಮ್ಮದಿ, ಸಮೃದ್ಧಿ ನೆಲೆಸಲು ಏನು ಮಾಡಬೇಕು ಎಂದು ವಿಸ್ತಾರವಾಗಿ ವಾಸ್ತ ಶಾಸ್ತ್ರದಲ್ಲಿ ಹೇಳಲಾಗಿದೆ. ಅದೇ ರೀತಿ ಮನೆಯ ಬಾಗಿಲಿನ ಬಣ್ಣದ ಬಗ್ಗೆಯೂ ವಿವರಿಸಲಾಗಿದೆ. ದಿಕ್ಕಿಗೆ ಅನುಗುಣವಾಗಿ ಬಾಗಿಲಿನ ಬಣ್ಣ ಎಷ್ಟು ಮುಖ್ಯ? ಮನೆಯಲ್ಲಿ ಸಕಾರಾತ್ಮಕ ವಾತಾವರಣ ಉಳಿಯಲು ಬಾಗಿಲುಗಳಿಗೆ ಈ ರೀತಿಯಾಗಿ ಬಣ್ಣ ಇರಬೇಕು ಎಂಬುದನ್ನು ತಿಳಿಯಿರಿ. (ಬರಹ: ಅರ್ಚನಾ)
ವಾಸ್ತುಶಾಸ್ತ್ರವು ಭಾರತದ ಅತ್ಯಂತ ಪ್ರಾಚೀನ ವಾಸ್ತುಶಿಲ್ಪ ವಿಜ್ಞಾನವಾಗಿದೆ. ಇದರಲ್ಲಿ ಮನೆಯ ಪ್ರತಿಯೊಂದು ಅಂಶದ ಬಗ್ಗೆಯೂ ಹೇಳಲಾಗಿದೆ. ಮನೆಯಲ್ಲಿ ಸುಖ, ಶಾಂತಿ ಮತ್ತು ಸಾಮರಸ್ಯದ ಬದುಕಿನ ಮೇಲೆ ವಾಸ್ತುವು ಬಹಳಷ್ಟು ಪ್ರಭಾವ ಬೀರುತ್ತದೆ. ಅದು ನಿರ್ಣಾಯಕ ಪಾತ್ರವನ್ನೂ ವಹಿಸುತ್ತದೆ. ಸಾಮಾನ್ಯವಾಗಿ ಮನೆ ಕಟ್ಟುವಾಗ ಆಯ, ಕೋಣೆಗಳು, ಬಾಗಿಲು, ಕಿಟಕಿಗಳು ಎಲ್ಲಿ ಮತ್ತು ಯಾವ ರೀತಿ ಇರಬೇಕು ಎಂದು ವಾಸ್ತುವನ್ನು ಅನುಸರಿಸಲಾಗುತ್ತದೆ. ಕೆಲವೊಮ್ಮೆ ಬಣ್ಣಗಳನ್ನು ಆಯ್ದುಕೊಳ್ಳುವಾಗ ವಾಸ್ತುವನ್ನು ಮರೆತುಬಿಡುತ್ತೇವೆ. ಆದರೆ ವಾಸ್ತು ಪ್ರಕಾರ, ಬಣ್ಣವು ಮನೆಯ ಸೌಂದರ್ಯವನ್ನು ಹೆಚ್ಚಿಸುವುದರ ಜೊತೆಗೆ ಧನಾತ್ಮಕ ಶಕ್ತಿ ಮತ್ತು ಸಮೃದ್ಧಿಯನ್ನು ತರುವಂತಾಗಿರಬೇಕು ಎನ್ನುತ್ತದೆ. ಹಾಗಾಗಿ ವಾಸ್ತುಶಾಸ್ತ್ರದಲ್ಲಿ ಮನೆಯ ಪ್ರತಿಯೊಂದು ಬಾಗಿಲುಗಳು ಯಾವ ಬಣ್ಣದಿದ್ದರೆ ಒಳ್ಳೆಯದು ಎಂದು ವಿವರಿಸಲಾಗಿದೆ.
ತಾಜಾ ಫೋಟೊಗಳು
ದಿಕ್ಕಿಗೆ ಅನುಗುಣವಾಗಿ ಬಾಗಿಲುಗಳಿಗೆ ಬಣ್ಣಗಳನ್ನು ನಿರ್ಧರಿಸಲಾಗುತ್ತೆ. ವಾಸ್ತುಶಾಸ್ತ್ರದ ಪ್ರಕಾರ, ಬಾಗಿಲಿನ ಬಣ್ಣಗಳು ಮನೆಯಲ್ಲಿ ಶಾಂತಿ, ಸಮೃದ್ಧಿ ಮತ್ತು ಅಭಿವೃದ್ಧಿಗೆ ಪ್ರಮುಖವಾಗಿದೆ. ಹಾಗಾದರೆ ಯಾವ ದಿಕ್ಕಿನ ಬಾಗಲಿಗೆ ಯಾವ ಬಣ್ಣಗಳು ಸೂಕ್ತವಾಗಿದೆ ಎಂದು ನೋಡೋಣ.
ಮನೆಯ ಮುಖ್ಯ ದ್ವಾರ
ಮನೆಯ ಮುಖ್ಯ ದ್ವಾರ ಮನೆಗೆ ಧನಾತ್ಮಕ ಶಕ್ತಿ ಹರಿದು ಬರುವಂತೆ ಮಾಡುವು ಪ್ರಮುಖವಾದ ಮಾರ್ಗವಾಗಿದೆ. ವಾಸ್ತು ಶಾಸ್ತ್ರದ ಪ್ರಕಾರ ಮನೆಯಲ್ಲಿ ನೆಮ್ಮದಿ ಮತ್ತು ಸಮೃದ್ಧಿಗೆ ಬಾಗಿಲ ಬಣ್ಣ ಪ್ರಮುಖವಾಗಿದೆ ಎಂದು ಹೇಳಲಾಗಿದೆ. ಮನೆಯ ಮುಂಬಾಗಿಲು ಯಾವ ದಿಕ್ಕಿನಲ್ಲಿದೆ ಎನ್ನುವುದರ ಮೇಲೆ ಬಣ್ಣವೂ ನಿರ್ಧಾರವಾಗುತ್ತದೆ.
1) ಮನೆಯ ಮುಂಬಾಗಿಲು ಪೂರ್ವಾಭಿಮುಖವಾಗಿದ್ದರೆ, ಬಿಳಿ, ತಿಳಿ ನೀಲಿ ಅಥವಾ ತಿಳಿ ಹಸಿರು ಬಣ್ಣಗಳು ಸೂಕ್ತ ಎಂದು ಶಾಸ್ತ್ರ ಹೇಳುತ್ತದೆ. ಈ ಬಣ್ಣಗಳು ಧನಾತ್ಮಕ ಶಕ್ತಿಯನ್ನು ಆಕರ್ಷಿಸುತ್ತವೆ ಮತ್ತು ಅಭಿವೃದ್ಧಿಗೆ ಅವಕಾಶಗಳನ್ನು ಹೆಚ್ಚಿಸುತ್ತದೆ ಎಂದು ನಂಬಲಾಗಿದೆ.
2) ಉತ್ತರಾಭಿಮುಖವಾಗಿ ಇರುವ ಮುಂಬಾಗಿಲಿಗೆ ನೀಲಿ, ಹಸಿರು ಅಥವಾ ತಿಳಿ ಕಂದು ಬಣ್ಣಗಳು ಹೆಚ್ಚಿನ ಪ್ರಯೋಜನ ನೀಡುತ್ತವೆ ಎಂದು ವಾಸ್ತು ಹೇಳುತ್ತದೆ. ಈ ಬಣ್ಣಗಳು ಸಂಪತ್ತು ಮತ್ತು ಬೆಳವಣಿಗೆಗೆ ಪೂರಕವಾಗಿವೆ.
3) ಮುಂಬಾಗಿಲು ದಕ್ಷಿಣಾಭಿಮುಖವಾಗಿದ್ದರೆ ಕೆಂಪು, ಕಿತ್ತಳೆ ಅಥವಾ ಕಂದು ಬಣ್ಣಗಳು ಹೆಚ್ಚು ಸೂಕ್ತವಾಗಿದೆ. ಈ ಗಾಢ ವರ್ಣಗಳು ಯಶಸ್ಸು ಮತ್ತು ಕೀರ್ತಿಯನ್ನು ಆಕರ್ಷಿಸುತ್ತವೆ ಎಂದು ವಾಸ್ತು ಹೇಳುತ್ತದೆ.
4) ಪಶ್ಚಿಮ ದಿಕ್ಕಿಗೆ ಇರುವ ಬಾಗಿಲುಗಳಿಗೆ ಹಳದಿ, ಕ್ರೀಮ್ ಅಥವಾ ತಿಳಿ ಕಂದು ಬಣ್ಣಗಳನ್ನು ವಾಸ್ತು ಸೂಚಿಸುತ್ತದೆ. ಅದು ಮನೆಯಲ್ಲಿ ಸಮತೋಲನ ಮತ್ತು ಸ್ಥಿರತೆಯನ್ನು ಕಾಪಾಡಿಕೊಳ್ಳಲು ಸಹಾಯಮಾಡುತ್ತದೆ.
ಮನೆಯೊಳಗಿನ ಬಾಗಿಲುಗಳು
ಮನೆಯ ಮುಂಬಾಗಿಲು ಎಷ್ಟು ಮುಖ್ಯವೋ ಅದೇ ರೀತಿ ಮನೆಯೊಳಗಿನ ಬಾಗಿಲುಗಳು ಮುಖ್ಯವಾಗಿದೆ. ಮನೆಯೊಳಗಿನ ಧನಾತ್ಮಕ ಶಕ್ತಿಯನ್ನು ಕಾಪಾಡಿಕೊಳ್ಳುವಲ್ಲಿ ಇವು ಮಹತ್ವದ ಪಾತ್ರ ವಹಿಸುತ್ತದೆ. ಯಾವ ಉದ್ದೇಶಕ್ಕಾಗಿ ಮನೆಯ ಕೋಣೆಗಳಿವೆ ಎಂಬುದರ ಮೇಲೆ ಕೋಣೆಯ ಬಾಗಿಲುಗಳ ಬಣ್ಣ ನಿರ್ಧಾರವಾಗುತ್ತದೆ.
ಲಿವಿಂಗ್ ರೂಮ್: ಇದು ಮನೆಯಲ್ಲಿ ಸ್ವಾಗತಾರ್ಹ ವಾತಾವರಣ ನಿರ್ಮಿಸುವ ಹಾಗೂ ಉತ್ತಮ ಬಾಂಧವ್ಯ ಬೆಳೆಸುವ ಜಾಗವಾಗಿದ್ದರಿಂದ ಇಲ್ಲಿನ ಬಾಗಿಲು ಹೆಚ್ಚು ಮುಖ್ಯವಾಗಿರುತ್ತದೆ. ಅದಕ್ಕೆ ತಿಳಿ ಕಂದು ಬಣ್ಣ ಅಥವಾ ಪೀಚ್ ಬಣ್ಣಗಳನ್ನು ಆಯ್ದುಕೊಳ್ಳಬಹುದು.
ಮಲಗುವ ಕೋಣೆ: ಇದು ವಿಶ್ರಾಂತಿ ಮತ್ತು ಶಾಂತಿಯುತ ವಾತಾವರಣವನ್ನು ನಿರ್ಮಿಸುವ ಜಾಗ. ಹಾಗಾಗಿ ಈ ಕೋಣೆಗೆ ತಿಳಿ ನೀಲಿ, ಲ್ಯಾವೆಂಡರ್ ಅಥವಾ ತಿಳಿ ಹಸಿರು ಬಣ್ಣಗಳು ಪ್ರಶಾಂತತೆಯನ್ನು ನೀಡುತ್ತವೆ ಎಂದು ವಾಸ್ತು ಹೇಳುತ್ತದೆ.
ಗೃಹ ಕಚೇರಿ: ವರ್ಕ್ ಫ್ರಾಂ ಹೋಮ್ ಸಂಸ್ಕೃತಿ ಶುರುವಾದಾಗಿನಿಂದ ಮನೆಯ ಒಂದು ಕೋಣೆ ಆಫೀಸ್ ಆಗಿ ಬದಲಾಗಿರುತ್ತೆ. ಅಲ್ಲಿ ಕೆಲಸಕ್ಕೆ ಹೆಚ್ಚು ಒತ್ತು ಕೊಡಲಾಗುವುದರಿಂದ ಏಕಾಗ್ರತೆ ಮತ್ತು ಉತ್ಪಾದಕತೆಯನ್ನು ಹೆಚ್ಚಿಸುವ ಬಣ್ಣಗಳನ್ನೇ ಆಯ್ದುಕೊಳ್ಳಬೇಕಾಗುತ್ತದೆ. ಹಾಗಾಗಿ ಬಿಳಿ, ತಿಳಿ ಬೂದು ಅಥವಾ ತಿಳಿ ಹಳದಿ ಬಣ್ಣಗಳು ಸೂಕ್ತ ಎಂದು ವಾಸ್ತು ಹೇಳುತ್ತದೆ.
ನಕಾರತ್ಮಕ ಶಕ್ತಿ ಹೆಚ್ಚಿಸುವ ಬಣ್ಣಗಳು ಬೇಡ
ವಾಸ್ತು ಶಾಸ್ತ್ರದಲ್ಲಿ ನಕಾರಾತ್ಮಕ ಶಕ್ತಿ ಹೆಚ್ಚಿಸುವ ಬಣ್ಣಗಳು ಸಂಬಂಧಗಳ ನಡುವೆ ಘರ್ಷಣೆಗೆ ಕಾರಣವಾಗುವುದರಿಂದ ಅಂತಹ ಬಣ್ಣಗಳಿಂದ ದೂರವಿರಲು ಸಲಹೆ ನೀಡಲಾಗುತ್ತದೆ. ಅದರ ಪ್ರಕಾರ ಕಪ್ಪು, ಗಾಢ ಕಂದು ಅಥವಾ ಕೆಂಪು ಬಣ್ಣಗಳು ಬಾಗಲಿಗೆ ಅಶುಭ ಎಂದು ಪರಿಗಣಿಸಲಾಗಿದೆ. ಏಕೆಂದರೆ ಇವು ನಕಾರಾತ್ಮಕ ಶಕ್ತಿಯನ್ನು ಹೆಚ್ಚಿಸುತ್ತವೆ. ಇವುಗಳ ಬದಲಿಗೆ ಸಕಾರಾತ್ಮಕ ಶಕ್ತಿ ಆಕರ್ಷಿಸುವ ತಿಳಿ ಹಾಗೂ ಪ್ರಕಾಶಮಾನವಾದ ಬಣ್ಣಗಳನ್ನು ಆಯ್ದುಕೊಳ್ಳಬೇಕೆಂದು ವಾಸ್ತು ಹೇಳುತ್ತದೆ.
ಬಣ್ಣದಷ್ಟೇ ಮುಖ್ಯ ಬಾಗಿಲಿನ ಗುಣಮಟ್ಟ
ವಾಸ್ತುವಿನ ಪ್ರಕಾರ ಬಾಗಿಲಿನ ಗುಣಮಟ್ಟ ಹಾಗೂ ಸ್ಥಿತಿ ಬಹಳ ಪ್ರಮುಖವಾಗಿದೆ. ಯಾವುದೇ ಹಾನಿಯಾಗಿರದ ಮತ್ತು ಸ್ವಚ್ಛವಾಗಿರುವ ಬಾಗಿಲುಗಳು ಮನೆಗೆ ಶೋಭೆ ನೀಡುವ ಜೊತೆಗೆ ಮನೆಯಲ್ಲಿ ಧನಾತ್ಮಕ ಶಕ್ತಿ ನೆಲೆಸುವಂತೆ ಮಾಡುತ್ತವೆ. ಹಾಗಾಗಿ ಬಾಗಿಲಿನ ಬಣ್ಣದ ಜೊತೆಗೆ ಅದರ ಗುಣಮಟ್ಟವನ್ನೂ ಕಾಪಾಡಿಕೊಳ್ಳಬೇಕು ಎಂದು ವಾಸ್ತು ಹೇಳುತ್ತದೆ. (ಬರಹ: ಅರ್ಚನಾ)
(ಗಮನಿಸಿ: ಇದು ನಂಬಿಕೆ ಮತ್ತು ಶಾಸ್ತ್ರವನ್ನು ಆಧರಿಸಿದ ಬರಹ. ಇದರಲ್ಲಿರುವ ಎಲ್ಲ ಅಂಶಗಳನ್ನೂ "ಹಿಂದೂಸ್ತಾನ್ ಟೈಮ್ಸ್ ಕನ್ನಡ" ಪುಷ್ಟೀಕರಿಸುವುದಿಲ್ಲ. ನಿಮ್ಮ ಸ್ವಂತ ವಿವೇಚನೆ ಬಳಸಿ ನಿರ್ಧಾರಗಳನ್ನು ತೆಗೆದುಕೊಳ್ಳಿ.)