ಏಷ್ಯನ್ ಗೇಮ್ಸ್ನಲ್ಲಿ ಭಾರತ 100 ಪದಕಗಳ ಐತಿಹಾಸಿಕ ಸಾಧನೆ; ಪ್ರಧಾನಿ ನರೇಂದ್ರ ಮೋದಿ ಅಭಿನಂದನೆ
Oct 07, 2023 02:02 PM IST
ಏಷ್ಯನ್ ಗೇಮ್ಸ್ನಲ್ಲಿ ಭಾರತ 100 ಪದಕಗಳ ಐತಿಹಾಸಿಕ ಸಾಧನೆ; ಪ್ರಧಾನಿ ಮೋದಿ ಅಭಿನಂದನೆ.
- Asian Games 2023, 100 medals for India: ಏಷ್ಯನ್ ಗೇಮ್ಸ್ನಲ್ಲಿ ಭಾರತ 100 ಪದಕಗಳ ಐತಿಹಾಸಿಕ ಸಾಧನೆ ಮಾಡಿದೆ. ನೂತನ ಮೈಲಿಗಲ್ಲು ನಿರ್ಮಿಸಲು ಕಾರಣರಾದ ಕ್ರೀಡಾಪಟುಗಳಿಗೆ ಪ್ರಧಾನಿ ನರೇಂದ್ರ ಮೋದಿ ಅಭಿನಂದನೆ ಸಲ್ಲಿಸಿದ್ದಾರೆ.
ಚೀನಾದಲ್ಲಿ ಹ್ಯಾಂಗ್ಝೌನಲ್ಲಿ ನಡೆಯುತ್ತಿರುವ 19ನೇ ಏಷ್ಯನ್ ಕ್ರೀಡಾಕೂಟದಲ್ಲಿ (Asian Games 2023) ಭಾರತ ನೂರು ಪದಕಗಳ ಐತಿಹಾಸಿಕ ಸಾಧನೆ ಮಾಡಿದೆ. ಏಷ್ಯನ್ ಕ್ರೀಡಾಕೂಡದ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ 100 ಪದಕಗಳನ್ನು ಗೆದ್ದಿದೆ. ಈ 2018ರಲ್ಲಿ ಜಕಾರ್ತದಲ್ಲಿ ಭಾರತ (India) 70 ಪದಕ ಗೆದ್ದಿದ್ದೇ ಈವರೆಗಿನ ಸಾಧನೆಯಾಗಿತ್ತು. ಇದೀಗ ಕ್ರೀಡಾಕೂಟದ 14ನೇ ದಿನದಂದು ಭಾರತ ಮಹಿಳಾ ಕಬಡ್ಡಿ ತಂಡ (Womens Kabaddi Team) ಚಿನ್ನದ ಪದಕ ಗೆಲ್ಲುವ ಮೂಲಕ ಭಾರತ ಪದಕಗಳ ಪಟ್ಟಿಯಲ್ಲಿ ಶತಕ ಪೂರೈಸಿತು.
ಏಷ್ಯನ್ ಗೇಮ್ಸ್ ಆರಂಭಗೊಂಡು 14 ದಿನಗಳಾಗಿದ್ದು, 100 ಪದಕಗಳ ಸಾಧನೆ ಮಾಡಿದೆ. ಅಕ್ಟೋಬರ್ 8ರಂದು ಏಷ್ಯನ್ ಗೇಮ್ಸ್ ಮುಕ್ತಾಯವಾಗಲಿದೆ. ಇನ್ನೂ ಒಂದು ದಿನ ಮುಂಚಿತವಾಗಿಯೇ ಭಾರತ ಇತಿಹಾಸ ನಿರ್ಮಿಸಿದೆ. ನೂರು ಪದಕಗಳ ಪೈಕಿ 25 ಚಿನ್ನ, 35 ಬೆಳ್ಳಿ ಹಾಗೂ 40 ಕಂಚು (ಈ ಸುದ್ದಿ ಅಪ್ಡೇಟ್ ಮಾಡುವವರೆಗೂ) ಸೇರಿವೆ ಎಂಬುದು ವಿಶೇಷ. ಪದಕ ಬೇಟೆ ಮುಂದುವರೆದಿದ್ದು, ಇನ್ನಷ್ಟು ಭಾರತದ ಮಡಿಲಿಗೆ ಸೇರುವ ಸಾಧ್ಯತೆ ಇದೆ.
ಕಳೆದ ಬಾರಿ ರನ್ನರ್ಅಪ್, ಈ ಬಾರಿ ಚಾಂಪಿಯನ್
ಏಷ್ಯನ್ ಕ್ರೀಡಾಕೂಟದ ಮಹಿಳೆಯರ ಕಬಡ್ಡಿಯಲ್ಲಿ ಫೈನಲ್ನಲ್ಲಿ ಚೈನೀಸ್ ತೈಪೈ ವಿರುದ್ಧ ಭಾರತ ಗೆದ್ದಿದೆ. ರೋಚಕ ಹಣಾಹಣಿಯಲ್ಲಿ 25-26 ಅಂಕಗಳಿಂದ ಗೆದ್ದು ಭಾರತ ಐತಿಹಾಸಿಕ ಚಿನ್ನದ ಪದಕಕ್ಕೆ ಮುತ್ತಿಕ್ಕಿತು. ಈ ಮೊದಲು ಎರಡು ಬಾರಿ ಚಾಂಪಿಯನ್ ಆಗಿದ್ದ ಭಾರತ ಮೊದಲಾರ್ಧದಲ್ಲಿ ಸಮಬಲದ ಅಂಕ ಸಾಧಿಸಿತು. ಆದರೆ ಪೂಜಾ ಹಥ್ವಾಲಾ ಅತ್ಯುತ್ತಮ ರೇಡ್ಗಳ ಮೂಲಕ ಚೈನೀಸ್ ತೈಪೈ ತಂಡವನ್ನು ಗೊಂದಲ ಗೊಳಿಸಿದರು.
ಈ ಗೆಲುವಿನೊಂದಿಗೆ ಏಷ್ಯನ್ ಗೇಮ್ಸ್ನಲ್ಲಿ ಭಾರತ ಮಹಿಳಾ ಕಬಡ್ಡಿ ತಂಡವು, 3ನೇ ಚಿನ್ನದ ಪದಕ ಗೆದ್ದಾಂತಾಯಿತು. ಆದರೆ 2018ರ ಏಷ್ಯನ್ ಗೇಮ್ಸ್ನಲ್ಲಿ ಭಾರತ ರನ್ನರ್ಅಪ್ ಆಗಿತ್ತು. ಆದರೆ ಈ ಬಾರಿ ಮಹಿಳಾ ಕಬಡ್ಡಿ ತಂಡ ಗೆದ್ದ ಚಿನ್ನ ಭಾರತದ 100ನೇ ಪದಕ ಎಂಬುದು ವಿಶೇಷ. ಈ ದಿನ ಆರ್ಚರಿಯಲ್ಲಿ ಸ್ವರ್ಣ ಗೆಲ್ಲುವ ಮೂಲಕ ಭಾರತದ ಜ್ಯೋತಿ ವೆನ್ನಮ್ ದಿನವನ್ನು ಆರಂಭಿಸಿದರು. ಅದಿತಿ ಸ್ವಾಮಿ ಕಾಂಪೌಂಡ್ ಆರ್ಚರಿಯಲ್ಲಿ ಕಂಚಿನ ಪದಕಕ್ಕೆ ಮುತ್ತಿಕ್ಕಿದರು.
ಪ್ರಧಾನಿ ಮೋದಿ ಅಭಿನಂದನೆ
ಏಷ್ಯನ್ ಗೇಮ್ಸ್ನಲ್ಲಿ ಭಾರತ 100 ಪದಕಗಳ ಸಾಧನೆಯನ್ನು ಪ್ರಧಾನಿ ನರೇಂದ್ರ ಮೋದಿ ಕೊಂಡಾಡಿದ್ದಾರೆ. ಎಕ್ಸ್ ಖಾತೆಯಲ್ಲಿ ಪೋಸ್ಟ್ ಮಾಡಿರುವ ಪ್ರಧಾನಿ, ‘ಏಷ್ಯನ್ ಕ್ರೀಡಾಕೂಟದಲ್ಲಿ ಭಾರತ ಅಮೋಘ ಸಾಧನೆ ಮಾಡಿದೆ. ನಾವು 100 ಪದಕಗಳ ಗಮನಾರ್ಹ ಮೈಲಿಗಲ್ಲು ತಲುಪಿರುವುದು ಭಾತೀಯರನ್ನು ರೋಮಾಂಚನಗೊಳಿಸುವಂತೆ ಮಾಡಿದೆ. ನಮ್ಮ ಅಸಾಧಾರಣ ಕ್ರೀಡಾಪಟುಗಳಿಗೆ ಹೃತ್ಪೂರ್ವಕ ಅಭಿನಂದನೆಗಳನ್ನು ಸಲ್ಲಿಸುತ್ತೇನೆ. ಅಕ್ಟೋಬರ್ 10 ರಂದು ಪದಕಗಳನ್ನು ಜಯಿಸಿದ ಕ್ರೀಡಾಪಟುಗಳೊಂದಿಗೆ ಸಂವಾದ ನಡೆಸಲು ನಾನು ಕಾಯುತ್ತಿದ್ದೇನೆ ಎಂದು ಬರದುಕೊಂಡಿದ್ದಾರೆ.