ಡಬ್ಲ್ಯುಟಿಸಿ ಫೈನಲ್ ಪ್ರವೇಶಿಸಲು ಆಸ್ಟ್ರೇಲಿಯಾ ವಿರುದ್ಧ ಭಾರತ ತಂಡ ಎಷ್ಟು ಪಂದ್ಯ ಗೆಲ್ಲಬೇಕು? ಹೀಗಿದೆ ಫೈನಲ್ ಲೆಕ್ಕಾಚಾರ
Nov 03, 2024 04:45 PM IST
ಡಬ್ಲ್ಯುಟಿಸಿ ಫೈನಲ್ ಪ್ರವೇಶಿಸಲು ಆಸ್ಟ್ರೇಲಿಯಾ ವಿರುದ್ಧ ಭಾರತ ತಂಡ ಎಷ್ಟು ಪಂದ್ಯ ಗೆಲ್ಲಬೇಕು
- World Test Championship 2025: ನ್ಯೂಜಿಲೆಂಡ್ ವಿರುದ್ದ 3ನೇ ಟೆಸ್ಟ್ ಪಂದ್ಯದಲ್ಲಿ ಸೋತಿರುವ ಟೀಮ್ ಇಂಡಿಯಾ, ಡಬ್ಲ್ಯುಟಿಸಿ ಫೈನಲ್ ಪ್ರವೇಶಿಸಬಹುದೇ? ಮುಂದಿನ ಸರಣಿಯಲ್ಲಿ ಎಷ್ಟು ಪಂದ್ಯ ಗೆಲ್ಲಬೇಕಿದೆ.
ನ್ಯೂಜಿಲೆಂಡ್ ವಿರುದ್ಧದ ಮೂರನೇ ಹಾಗೂ ಅಂತಿಮ ಟೆಸ್ಟ್ ಪಂದ್ಯದಲ್ಲಿ ರೋಹಿತ್ ಪಡೆ 25 ರನ್ಗಳಿಂದ ಸೋತು ಸರಣಿಯನ್ನು 0-3 ಅಂತರದಿಂದ ಕಳೆದುಕೊಂಡ ನಂತರ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ (WTC 2025) ಫೈನಲ್ಗೆ ಅರ್ಹತೆ ಪಡೆಯುವ ಟೀಮ್ ಇಂಡಿಯಾದ ಅವಕಾಶಗಳಿಗೆ ದೊಡ್ಡ ಹೊಡೆತ ಬಿದ್ದಿದೆ. ತವರು ನೆಲದಲ್ಲಿ ನಡೆದ 3 ಪಂದ್ಯಗಳ ಟೆಸ್ಟ್ ಸರಣಿಯಲ್ಲಿ (India vs New Zealand 3rd Test) ಭಾರತ ವೈಟ್ವಾಶ್ ಆಗಿರುವುದು ಇದೇ ಮೊದಲು. ನಾಲ್ಕನೇ ಮತ್ತು ಅಂತಿಮ ಇನ್ನಿಂಗ್ಸ್ನಲ್ಲಿ ಏಜಾಜ್ ಪಟೇಲ್ 6 ವಿಕೆಟ್ಗಳೊಂದಿಗೆ ಅಬ್ಬರಿಸಿದ ಕಾರಣ ಆತಿಥೇಯರು 147 ರನ್ಗಳ ಗುರಿ ಬೆನ್ನಟ್ಟಲು ಸಾಧ್ಯವಾಗಲಿಲ್ಲ.
ನ್ಯೂಜಿಲೆಂಡ್ ವಿರುದ್ಧದ 3ನೇ ಟೆಸ್ಟ್ನ ಸೋಲು ಈಗ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಫೈನಲ್ ಪ್ರವೇಶಿಸಲು ಭಾರತ ತಂಡದ ಅವಕಾಶಗಳ ಮೇಲೆ ದುರಂತ ಪರಿಣಾಮ ಬೀರಿದೆ. ಏಕೆಂದರೆ ಈ ಆವೃತ್ತಿಯಲ್ಲಿ ಭಾರತಕ್ಕೆ ಉಳಿದಿರುವುದು ಐದು ಪಂದ್ಯಗಳು ಮಾತ್ರ. ಅದು ಕೂಡ ಆಸ್ಟ್ರೇಲಿಯಾ ವಿರುದ್ಧ. ಈ ಸೋಲಿನ ಪರಿಣಾಮ ಭಾರತ ತಂಡ ಈಗ ಡಬ್ಲ್ಯುಟಿಸಿ ಶ್ರೇಯಾಂಕದಲ್ಲಿ ಅಗ್ರ ಸ್ಥಾನ ಕಳೆದುಕೊಂಡಿದೆ. ಗೆಲುವಿನ ಶೇಕಡ 58.33ಕ್ಕೆ ಇಳಿದಿದೆ. ಪುಣೆ ಟೆಸ್ಟ್ ಸೋಲಿನ ವೇಳೆ 62.82 ಇತ್ತು. ಅದಕ್ಕೂ ಮುನ್ನ ಶೇ 74 ಇತ್ತು. ಪ್ರಸ್ತುತ ಆಸ್ಟ್ರೇಲಿಯಾ 62.50ರಷ್ಟು ಗೆಲುವಿನೊಂದಿಗೆ ಅಗ್ರಸ್ಥಾನದಲ್ಲಿದೆ.
ಭಾರತ ಮತ್ತು ಆಸ್ಟ್ರೇಲಿಯಾ ಮಾತ್ರವಲ್ಲ, ಶ್ರೀಲಂಕಾ, ದಕ್ಷಿಣ ಆಫ್ರಿಕಾ ಮತ್ತು ನ್ಯೂಜಿಲೆಂಡ್ ಕೂಡ ಡಬ್ಲ್ಯುಟಿಸಿ ಫೈನಲ್ ಪ್ರವೇಶಿಸುವ ಅವಕಾಶ ಹೊಂದಿವೆ. ಆದಾಗ್ಯೂ, ಈ ಹಿಂದೆ 2021 ಮತ್ತು 2023 ರಲ್ಲಿ ಫೈನಲ್ ತಲುಪಿದ್ದ ಭಾರತ ತಂಡವು ಈಗ ಸತತ 3ನೇ ಡಬ್ಲ್ಯುಟಿಸಿ ಫೈನಲ್ ತಲುಪಲು ಕಠಿಣ ಸವಾಲನ್ನು ಎದುರಿಸುತ್ತಿದೆ. ಹಾಗಾದರೆ ಮತ್ತೆ ಫೈನಲ್ ಪ್ರವೇಶಿಸಲು ಭಾರತದ ಮುಂದಿರುವ ಅವಕಾಶಗಳೇನು? ಇಲ್ಲಿದೆ ವಿವರ.
ಡಬ್ಲ್ಯುಟಿಸಿ ಫೈನಲ್ ಪ್ರವೇಶಿಸಲು ಭಾರತ ಎಷ್ಟು ಪಂದ್ಯ ಗೆಲ್ಲಬೇಕು?
ಬೇರೆ ತಂಡಗಳ ಫಲಿತಾಂಶ ಅವಲಂಬಿಸದೆ ಡಬ್ಲ್ಯುಟಿಸಿ ಫೈನಲ್ಗೆ ಅರ್ಹತೆ ಪಡೆಯಲು, ರೋಹಿತ್ ಪಡೆಯು ತಮ್ಮ ಉಳಿದ 5 ಪಂದ್ಯಗಳಲ್ಲಿ ಒಂದನ್ನೂ ಸೋಲಬಾರದು. ಸತತ 3ನೇ ಬಾರಿಗೆ ಫೈನಲ್ ಪ್ರವೇಶಿಸಲು ಭಾರತ ತಂಡವು ಹಾಲಿ ಡಬ್ಲ್ಯುಟಿಸಿ ಚಾಂಪಿಯನ್ಸ್ ವಿರುದ್ಧ 4-0 ಅಥವಾ 5-0 ಅಂತರದಲ್ಲಿ ಅದ್ಭುತ ಗೆಲುವು ಸಾಧಿಸಬೇಕಾಗಿದೆ. ಫೈನಲ್ಗೆ ಅರ್ಹತೆ ಪಡೆಯಲು ಭಾರತಕ್ಕೆ ಕನಿಷ್ಠ 2 ಗೆಲುವು ಅಗತ್ಯವಿದೆ. ಆದರೆ ಇದು ಬೇರೆ ತಂಡಗಳ ಫಲಿತಾಂಶದ ಆಧಾರದ ಮೇಲೆ ಪರಿಣಾಮ ಬೀರುತ್ತದೆ. ಗೆಲುವಿನ ಶೇಕಡವಾರು 60ರ ಗಡಿ ದಾಟಲು ಭಾರತ ಕನಿಷ್ಠ 2 ಪಂದ್ಯಗಳನ್ನು ಗೆಲ್ಲಬೇಕು, 3 ಪಂದ್ಯಗಳನ್ನು ಡ್ರಾ ಮಾಡಿಕೊಳ್ಳಬೇಕು.
ಟೀಮ್ ಇಂಡಿಯಾ, ಆಸ್ಟ್ರೇಲಿಯಾ ವಿರುದ್ಧ 4-0 ಅಥವಾ 5-0 ಅಂತರದಲ್ಲಿ ಗೆಲ್ಲಲು ವಿಫಲವಾದರೆ ರೋಹಿತ್ ಶರ್ಮಾ, ಶ್ರೀಲಂಕಾ-ಆಸ್ಟ್ರೇಲಿಯಾ, ದಕ್ಷಿಣ ಆಫ್ರಿಕಾ-ಶ್ರೀಲಂಕಾ ಮತ್ತು ದಕ್ಷಿಣ ಆಫ್ರಿಕಾ-ಪಾಕಿಸ್ತಾನ ನಡುವಿನ ಸರಣಿಯನ್ನು ಸೂಕ್ಷ್ಮವಾಗಿ ಗಮನಿಸುವ ಅಗತ್ಯ ಇದೆ. ಇಲ್ಲಿ ದಕ್ಷಿಣ ಆಫ್ರಿಕಾ-ಶ್ರೀಲಂಕಾ ತಂಡಗಳ ಫಲಿತಾಂಶದ ಆಧಾರದ ಮೇಲೆ ಭಾರತ ತಂಡದ ಫೈನಲ್ ಭವಿಷ್ಯ ನಿರ್ಧಾರವಾಗುತ್ತದೆ. ಒಂದು ವೇಳೆ ಆಸ್ಟ್ರೇಲಿಯಾದಲ್ಲಿ ಎರಡು ಪಂದ್ಯ ಗೆಲ್ಲದಿದ್ದರೆ, ಅಧಿಕೃತವಾಗಿ ಭಾರತ ಫೈನಲ್ ರೇಸ್ನಿಂದ ಹೊರಬೀಳಲಿದೆ.
ಡಬ್ಲ್ಯುಟಿಸಿ ಪಾಯಿಂಟ್ಸ್ ಟೇಬಲ್
ಆಸ್ಟ್ರೇಲಿಯಾ - ಗೆಲುವಿನ ಶೇಕಡವಾರು 62.5
ಭಾರತ - ಗೆಲುವಿನ ಶೇಕಡವಾರು 58.33
ಶ್ರೀಲಂಕಾ - ಗೆಲುವಿನ ಶೇಕಡವಾರು 55.56
ನ್ಯೂಜಿಲೆಂಡ್ - ಗೆಲುವಿನ ಶೇಕಡವಾರು 54.54
ದಕ್ಷಿಣ ಆಫ್ರಿಕಾ - ಗೆಲುವಿನ ಶೇಕಡವಾರು 54.16
ಇಂಗ್ಲೆಂಡ್ - ಗೆಲುವಿನ ಶೇಕಡವಾರು 40.79
ಪಾಕಿಸ್ತಾನ - ಗೆಲುವಿನ ಶೇಕಡವಾರು 33.33
ಬಾಂಗ್ಲಾದೇಶ - ಗೆಲುವಿನ ಶೇಕಡವಾರು 27.5
ವೆಸ್ಟ್ ಇಂಡೀಸ್ - ಗೆಲುವಿನ ಶೇಕಡವಾರು 18.5