ಟೀಮ್ ಇಂಡಿಯಾ ಆಟಗಾರರ ಮೇಲೆ ಬಾಲ್ ಟ್ಯಾಂಪರಿಂಗ್ ಆರೋಪ; ಸಂಕಷ್ಟಕ್ಕೆ ಸಿಲುಕಿದ ಭಾರತ -AUS A vs IND A
ಕನ್ನಡ ಸುದ್ದಿ  /  ಕ್ರಿಕೆಟ್  /  ಟೀಮ್ ಇಂಡಿಯಾ ಆಟಗಾರರ ಮೇಲೆ ಬಾಲ್ ಟ್ಯಾಂಪರಿಂಗ್ ಆರೋಪ; ಸಂಕಷ್ಟಕ್ಕೆ ಸಿಲುಕಿದ ಭಾರತ -Aus A Vs Ind A

ಟೀಮ್ ಇಂಡಿಯಾ ಆಟಗಾರರ ಮೇಲೆ ಬಾಲ್ ಟ್ಯಾಂಪರಿಂಗ್ ಆರೋಪ; ಸಂಕಷ್ಟಕ್ಕೆ ಸಿಲುಕಿದ ಭಾರತ -AUS A vs IND A

Australia A vs India A: ಟೀಮ್ ಇಂಡಿಯಾ ಮೇಲೆ ಪಂದ್ಯದ ವೇಳೆ ಬಾಲ್ ಟ್ಯಾಂಪರಿಂಗ್ ಆರೋಪ ಕೇಳಿಬಂದಿದೆ. ಫೀಲ್ಡ್ ಅಂಪೈರ್ ಶಾನ್ ಕ್ರೇಗ್ ಅವರು ಭಾರತೀಯ ಆಟಗಾರರ ವಿರುದ್ಧ ಈ ಆರೋಪ ಮಾಡಿದ್ದಾರೆ.

ಟೀಮ್ ಇಂಡಿಯಾ ಆಟಗಾರರ ಮೇಲೆ ಬಾಲ್ ಟ್ಯಾಂಪರಿಂಗ್ ಆರೋಪ; ಸಂಕಷ್ಟಕ್ಕೆ ಸಿಲುಕಿದ ಭಾರತ
ಟೀಮ್ ಇಂಡಿಯಾ ಆಟಗಾರರ ಮೇಲೆ ಬಾಲ್ ಟ್ಯಾಂಪರಿಂಗ್ ಆರೋಪ; ಸಂಕಷ್ಟಕ್ಕೆ ಸಿಲುಕಿದ ಭಾರತ (Getty)

ಭಾರತ ಹಿರಿಯರ ಕ್ರಿಕೆಟ್ ತಂಡ ಸದ್ಯ ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ನ್ಯೂಜಿಲೆಂಡ್ ವಿರುದ್ಧ ಮೂರನೇ ಹಾಗೂ ಅಂತಿಮ ಟೆಸ್ಟ್ ಪಂದ್ಯವನ್ನು ಆಡುತ್ತಿದೆ. ಅತ್ತ ಭಾರತ ಎ ತಂಡ ಆಸ್ಟ್ರೇಲಿಯಾ ಪ್ರವಾಸದಲ್ಲಿದ್ದು, ಮೊದಲ ಅನಧಿಕೃತ ಟೆಸ್ಟ್ ಪಂದ್ಯದಲ್ಲಿ ಸೋಲು ಕಂಡಿದೆ. ಈ ಸೋಲಿನ ಜೊತೆಗೆ ಭಾರತ ಎ ತಂಡಕ್ಕೆ ಮತ್ತೊಂದು ಆಘಾತ ಉಂಟಾಗಿದೆ. ಟೀಮ್ ಇಂಡಿಯಾ ಮೇಲೆ ಪಂದ್ಯದ ವೇಳೆ ಬಾಲ್ ಟ್ಯಾಂಪರಿಂಗ್ ಆರೋಪ ಕೇಳಿಬಂದಿದೆ.

ಫೀಲ್ಡ್ ಅಂಪೈರ್ ಶಾನ್ ಕ್ರೇಗ್ ಅವರು ಭಾರತೀಯ ಆಟಗಾರರ ವಿರುದ್ಧ ಈ ಆರೋಪ ಮಾಡಿದ್ದಾರೆ. ಮ್ಯಾಕ್‌ಕಾಯ್‌ನಲ್ಲಿ ನಡೆಯುತ್ತಿರುವ ಪಂದ್ಯದ ನಾಲ್ಕನೇ ದಿನದಂದು ಭಾರತ ಎ ತಂಡವು ಚೆಂಡನ್ನು ಬದಲಾಯಿಸುವ ಬಗ್ಗೆ ಅಂಪೈರ್ ಜೊತೆ ಚರ್ಚೆಗೆ ಇಳಿಯಿತು. ಈ ಸಂದರ್ಭ ಅಂಪೈರ್ ಶಾನ್ ಕ್ರೇಗ್ ಹಾಗೂ ಭಾರತ ಎ ತಂಡದ ಆಟಗಾರರ ಮಧ್ಯೆ ಬಹಳ ಸಮಯ ಮಾತುಕತೆ ನಡೆದಿದೆ. ಬಳಿಕ ಅಂಪೈರ್ ಈ ಆರೋಪ ಮಾಡಿದ್ದಾರೆ. ಈ ಚರ್ಚೆಯಿಂದಾಗಿ ನಾಲ್ಕನೇ ದಿನದ ಆಟ ಕೂಡ ತಡವಾಗಿ ಆರಂಭವಾಯಿತು. ಚೆಂಡಿನ ಮೇಲೆ ಸ್ಕ್ರ್ಯಾಚ್ ಮಾರ್ಕ್ಸ್ ಇದ್ದ ಕಾರಣ ಚೆಂಡನ್ನು ಬದಲಾಯಿಸಲು ಅಂಪೈರ್ ನಿರ್ಧರಿಸಿದ್ದರು.

ಅಂಪೈರ್ ಮತ್ತು ಇಶಾನ್ ಕಿಶನ್ ನಡುವೆ ಏನಾಯಿತು?

ಚರ್ಚೆಯ ವೇಳೆ, ಅಂಪೈರ್ ಶಾನ್ ಕ್ರೇಗ್ ಮತ್ತು ಇಶಾನ್ ಕಿಶನ್ ನಡುವೆ ಬಿಸಿ ಬಿಸಿ ಚರ್ಚೆ ನಡೆಯಿತು. ಕೊನೆಯದಾಗಿ ಅಂಪೈರ್ ಅವರು, ಇನ್ನು ಚರ್ಚೆ ಬೇಡ ಆಟ ಶುರುವಾಗಲಿ ಎಂದು ಹೇಳಿರುವುದು ಸ್ಟಂಪ್ ಮೈಕ್‌ನಲ್ಲಿ ಕೇಳಿಸಿತು. ಅಂಪೈರ್‌ನ ಈ ಹೇಳಿಕೆಗೆ ಪ್ರತಿಕ್ರಿಯಿಸಿದ ಇಶಾನ್ ಕಿಶನ್, ನಾವು ಈ ಚೆಂಡಿನೊಂದಿಗೆ ಆಡಲಿದ್ದೇವೆಯೇ? ಇದು ಚರ್ಚೆಯಾಗಿರಲಿಲ್ಲ, ಇದೊಂದು ಮೂರ್ಖತನದ ನಿರ್ಧಾರ ಎಂದು ಹೇಳಿದ್ದಾರೆ. ಅಂಪೈರ್ ಶಾನ್ ಕ್ರೇಗ್ ಅವರು ಭಾರತೀಯ ವಿಕೆಟ್ ಕೀಪರ್ ಅವರ ಈ ಹೇಳಿಕೆಯನ್ನು ತಿರಸ್ಕರಿಸಿದ್ದಾರೆ ಮತ್ತು ಅವರು ಈ ವರ್ತನೆಯ ಬಗ್ಗೆ ದೂರು ನೀಡುವುದಾಗಿ ಹೇಳಿದ್ದಾರೆ.

ಭಾರತೀಯ ಆಟಗಾರರ ಮೇಲೆ ಚೆಂಡು ವಿರೂಪಗೊಳಿಸಿದ ಆರೋಪ

ಚರ್ಚೆ ಇಲ್ಲಿಗೆ ಮುಗಿಯಲಿಲ್ಲ. ಅಂಪೈರ್ ಶಾನ್ ಕ್ರೇಗ್ ಭಾರತದ ಆಟಗಾರರು ಬಾಲ್ ಟ್ಯಾಂಪರಿಂಗ್ ಮಾಡಿದ್ದಾರೆ ಎಂದು ಹೇಳಿದ್ದಾರೆ. ನೀವು ಚೆಂಡನ್ನು ಸ್ಕ್ರ್ಯಾಚ್ ಮಾಡಿದ್ದೀರಿ, ಅದಕ್ಕಾಗಿ ನಾವು ಅದನ್ನು ಬದಲಾಯಿಸಿದ್ದೇವೆ ಎಂದು ಅವರು ಭಾರತೀಯ ಆಟಗಾರರಿಗೆ ಹೇಳಿದ್ದು ಕೇಳಿಸಿದೆ. ಅಂದರೆ ಈ ಪ್ರಕರಣ ಮುಂದುವರಿದರೆ ಭಾರತೀಯ ಆಟಗಾರರ ವಿರುದ್ಧವೂ ಕ್ರಮ ಕೈಗೊಳ್ಳಬಹುದು.

ಕ್ರಿಕೆಟ್ ಆಸ್ಟ್ರೇಲಿಯಾದ ನೀತಿ ಸಂಹಿತೆಯ ಪ್ರಕಾರ, ಭಾರತ ಎ ಆಟಗಾರರು ಉದ್ದೇಶಪೂರ್ವಕವಾಗಿ ಬಾಲ್ ಟ್ಯಾಂಪರಿಂಗ್ ಮಾಡುತ್ತಿರುವುದು ಕಂಡುಬಂದರೆ, ಅದರಲ್ಲಿ ಭಾಗಿಯಾಗಿರುವ ಆಟಗಾರರನ್ನು ನಿಷೇಧಿಸಬಹುದು.

Whats_app_banner