ಆಸ್ಟ್ರೇಲಿಯಾದಲ್ಲಿ ಯಶಸ್ವಿ ಜೈಸ್ವಾಲ್ ಯಶಸ್ವಿಯಾಗುತ್ತಾರೋ ಇಲ್ಲವೋ; ಮೈಕಲ್ ವಾನ್ ಪ್ರಶ್ನೆಗೆ ಅಶ್ವಿನ್ ಅದ್ಭುತ ಉತ್ತರ
Mar 29, 2024 02:16 PM IST
ಮೈಕಲ್ ವಾನ್ ಪ್ರಶ್ನೆಗೆ ಅಶ್ವಿನ್ ಅದ್ಭುತ ಉತ್ತರ
- Yashasvi Jaiswal : ತವರಿನಲ್ಲಿ ಇಂಗ್ಲೆಂಡ್ ಟೆಸ್ಟ್ ಸರಣಿಯಲ್ಲಿ ಮಿಂಚಿರುವ ಯಶಸ್ವಿ ಜೈಸ್ವಾಲ್ ಅವರು ಆಸ್ಟ್ರೇಲಿಯಾ ನೆಲದಲ್ಲಿ ಅದ್ಭುತ ಪ್ರದರ್ಶನ ನೀಡುತ್ತಾರೆಯೇ ಎಂದು ಕೇಳಿದ ಮೈಕಲ್ ವಾನ್ ಪ್ರಶ್ನೆ ಆರ್ ಅಶ್ವಿನ್ ಅದ್ಭುತ ಉತ್ತರ ನೀಡಿದ್ದಾರೆ.
17ನೇ ಆವೃತ್ತಿಯ ಐಪಿಎಲ್ ಆರಂಭಕ್ಕೂ ಮುನ್ನ ಮುಕ್ತಾಯಗೊಂಡ ಇಂಗ್ಲೆಂಡ್ ವಿರುದ್ಧದ 5 ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಅತ್ಯಮೋಘ ಪ್ರದರ್ಶನ ನೀಡಿದ್ದ ಎಡಗೈ ಆರಂಭಿಕ ಆಟಗಾರ ಯಶಸ್ವಿ ಜೈಸ್ವಾಲ್, ದಾಖಲೆಗಳ ಜಾತ್ರೆ ನಡೆಸಿದ್ದರು. 712 ರನ್ ಗಳಿಸಿದ ಯಶಸ್ವಿ ಅವರು ಸುನಿಲ್ ಗವಾಸ್ಕರ್ ನಂತರ ಟೆಸ್ಟ್ ಸಿರೀಸ್ವೊಂದರಲ್ಲಿ 700ಕ್ಕೂ ಅಧಿಕ ರನ್ ಗಳಿಸಿದ ಭಾರತದ 2ನೇ ಆಟಗಾರ ಎಂಬ ದಾಖಲೆ ಬರೆದಿದ್ದರು.
ಜೈಸ್ವಾಲ್ ಅವರು ಎರಡನೇ ಮತ್ತು ಮೂರನೇ ಟೆಸ್ಟ್‌ನಲ್ಲಿ ಬ್ಯಾಕ್-ಟು-ಬ್ಯಾಕ್ ದ್ವಿಶತಕ ಬಾರಿಸಿ ಭಾರತ ತಂಡಕ್ಕೆ ಸರಣಿಯಲ್ಲಿ ಮುನ್ನಡೆ ತಂದುಕೊಟ್ಟರು. ಸ್ವದೇಶದಲ್ಲಿ ಎಡಗೈ ಆಟಗಾರ ವೀರಾವೇಶಕ್ಕೆ ವ್ಯಾಪಕ ಪ್ರಶಂಸೆ ವ್ಯಕ್ತವಾಗಿತ್ತು. ಇದರ ಬೆನ್ನಲ್ಲೇ ಜೈಸ್ವಾಲ್ ವಿದೇಶಿ ಪಿಚ್ ಮತ್ತು ಅಲ್ಲಿನ ಪರಿಸ್ಥಿತಿಗಳಲ್ಲಿ ಇಂತಹದ್ದೇ ಪ್ರದರ್ಶನವನ್ನು ಪುನರಾವರ್ತಿಸಲು ಸಾಧ್ಯವೇ ಎಂಬ ಪ್ರಶ್ನೆಗಳು ಎದ್ದಿವೆ.
ಈ ವರ್ಷದ ನವೆಂಬರ್‌ನಲ್ಲಿ 5 ಪಂದ್ಯಗಳ ಟೆಸ್ಟ್ ಸರಣಿಗಾಗಿ ಟೀಮ್ ಇಂಡಿಯಾ, ಆಸ್ಟ್ರೇಲಿಯಾ ಪ್ರವಾಸ ಕೈಗೊಳ್ಳಲಿದೆ. ಹೈವೋಲ್ಟೇಜ್ ಟೆಸ್ಟ್ ಸರಣಿಗೆ ಜೈಸ್ವಾಲ್ ಅವರು ಆಯ್ಕೆಯಾಗುವುದು ಬಹುತೇಕ ಖಚಿತ. ಹಾಗಾಗಿ ಆಸೀಸ್ ಪಿಚ್ಗಳಲ್ಲಿ ಯಾವ ರೀತಿಯ ಪ್ರದರ್ಶನ ನೀಡಲಿದ್ದಾರೆ ಎಂಬುದು ಕುತೂಹಲ ಮೂಡಿಸಿದೆ. ಈ ಬಗ್ಗೆ ಮಾಜಿ ಕ್ರಿಕೆಟರ್ಗಳು ಸಹ ಅನುಮಾನ ವ್ಯಕ್ತಪಡಿಸಿದ್ದಾರೆ.
ಜೈಸ್ವಾಲ್ ಯಶಸ್ವಿಯಾಗ್ತಾರಾ ಎಂದ ಮೈಕಲ್ ವಾನ್
'ಕ್ಲಬ್ ಪ್ರೈರೀ ಫೈರ್' ಯೂಟ್ಯೂಬ್ ಚಾನೆಲ್ನಲ್ಲಿ ನಡೆದ ಶೋನಲ್ಲಿ ಆಸ್ಟ್ರೇಲಿಯಾ ಮತ್ತು ಇಂಗ್ಲೆಂಡ್ ಮಾಜಿ ಕ್ರಿಕೆಟಿಗರು ಆಸೀಸ್ ಪಿಚ್ಗಳಲ್ಲಿ ಜೈಸ್ವಾಲ್ ಹೇಗೆ ಪ್ರದರ್ಶನ ನೀಡಲಿದ್ದಾರೆ ಎಂಬುದರ ಚರ್ಚೆ ನಡೆದಿದೆ. ವಿಶೇಷ ಅಂದರೆ ಈ ಚರ್ಚೆಯಲ್ಲಿ ಭಾರತದ ಆಫ್ ಸ್ಪಿನ್ನರ್ ಆ ಅಶ್ವಿನ್ ಅವರು ಕೂಡ ಭಾಗಿಯಾಗಿದ್ದರು. ಇದೇ ವೇಳೆ ಇಂಗ್ಲೆಂಡ್ ಮಾಜಿ ಆಟಗಾರ ಮೈಕಲ್ ವಾನ್ ಕೇಳಿದ ಪ್ರಶ್ನೆಗೆ ಅಶ್ವಿನ್ ಅದ್ಭುತ ಉತ್ತರ ಕೊಟ್ಟಿದ್ದಾರೆ.
ಅದ್ಭುತ ಉತ್ತರ ಕೊಟ್ಟ ಅಶ್ವಿನ್
ಆಸ್ಟ್ರೇಲಿಯಾದಲ್ಲಿ ಅವರು ಹೇಗೆ ಆಡುತ್ತಾರೆ ಎಂದು ಕಾದು ನೋಡೋಣ. ಯಶಸ್ವಿ ಜೈಸ್ವಾಲ್ ವಿಭಿನ್ನ ಪರಿಸ್ಥಿತಿಗಳಲ್ಲಿ ಉತ್ತಮ ಪ್ರದರ್ಶನ ನೀಡಲಿದ್ದಾರೆಯೇ? ಎಂದು ಅಶ್ವಿನ್ಗೆ ವಾನ್ ಪ್ರಶ್ನಿಸಿದ್ದಾರೆ. ಇದಕ್ಕೆ ಉತ್ತರಿಸಿದ ಅಶ್ವಿನ್, ಯಾರಾದರೂ ಆಟಗಾರರು ವಿಫಲರಾಗಬೇಕೆಂದು ಬಯಸಿದರೆ ಮಾತ್ರ ಇಂತಹ ಪ್ರಶ್ನೆಗಳನ್ನು ಕೇಳಲು ಸಾಧ್ಯ. ಇದು ತುಂಬಾ ಹಾಸ್ಯಾಸ್ಪದ ತಮಾಷೆಯಾಗಿದೆ ಎಂದು ಅಶ್ವಿನ್ ಹೇಳಿದ್ದಾರೆ.
ನೀವು ಕೇಳಿದ ಪ್ರಶ್ನೆಯನ್ನು ಹಾಸ್ಯಾಸ್ಪದ ಮತ್ತು ತಮಾಷೆಯಾಗಿ ಕಾಣುತ್ತೇನೆ. ಏಕೆಂದರೆ ಯಾರಾದರೂ ವಿಫಲರಾಗಬೇಕೆಂದು ನೀವು ಬಯಸದಿದ್ದರೆ ಇಂತಹ ಪ್ರಶ್ನೆಯನ್ನು ಕೇಳುವುದಿಲ್ಲ. ಯಾರಾದರೂ ವಿಫಲರಾಗುವುದಕ್ಕೆ ನೀವು ಎದುರು ನೋಡುತ್ತಿದ್ದೀರಿ ಎಂದರ್ಥ. ಜೈಸ್ವಾಲ್ ಆಸ್ಟ್ರೇಲಿಯಾದಲ್ಲಿ ಯಶಸ್ವಿಯಾಗಬಹುದು ಅಥವಾ ಯಶಸ್ವಿಯಾಗದೇ ಇರಬಹುದು. ಆದರೆ ಇದು ಅವರಿಗೆ ಉತ್ತಮ ಕಲಿಕೆಯ ಅನುಭವವಾಗಿದೆ ಎಂದು ಅಶ್ವಿನ್ ಹೇಳಿದ್ದಾರೆ.
ಸರಣಿ ಒಬ್ಬ ಆಟಗಾರನಿಗೆ ಅನುಭವ ಕಲಿಸುತ್ತದೆ. ಹೊಸ ವಿಷಯಗಳನ್ನು ಕಲಿಸುತ್ತದೆ. ಅದು ಯಾವಾಗಲೂ ಸವಾಲಿನಿಂದ ಕೂಡಿರುತ್ತದೆ. ಆದರೆ ದಿನದ ಕೊನೆಯಲ್ಲಿ ಕ್ರಿಕೆಟಿಗನ ಮನೋಭಾವವು ಎಲ್ಲವನ್ನೂ ಜಯಿಸುವುದು, ತಂಡವನ್ನು ಉನ್ನತ ಸ್ಥಾನಕ್ಕೆ ತಲುಪಿಸುವ ಗುರಿಯಾಗಿರುತ್ತದೆ. ಯಶಸ್ವಿ ಅಂತಹವರು ಸ್ವಾಭಾವಿಕವಾಗಿ ಪ್ರತಿಭಾನ್ವಿತ ಬಾಲ್ ಸ್ಟ್ರೈಕರ್. ಅವರು ಮುಟ್ಟಿದ್ದೆಲ್ಲ ಚಿನ್ನವಾಗಿ ಮಾರ್ಪಟ್ಟಿರುವ ವ್ಯಕ್ತಿ ಎಂದಿದ್ದಾರೆ.
ಆಸ್ಟ್ರೇಲಿಯಾ ಮತ್ತು ಭಾರತ ನಡುವಿನ ಬಾರ್ಡರ್ ಗವಾಸ್ಕರ್ ಟ್ರೋಫಿಯ ಮೊದಲ ಟೆಸ್ಟ್ ಪಂದ್ಯವು ನವೆಂಬರ್ 22 ರಿಂದ ಪರ್ತ್ನಲ್ಲಿ ಆರಂಭವಾಗಲಿದೆ. ಡಿಸೆಂಬರ್ 6 ರಿಂದ 2ನೇ ಟೆಸ್ಟ್ ಪಂದ್ಯ ಅಡಿಲೇಡ್ನಲ್ಲಿ ಜರುಗಲಿದೆ. 3ನೇ ಟೆಸ್ಟ್ ಡಿಸೆಂಬರ್ 14ರಿಂದ ಬ್ರಿಸ್ಬೇನ್‌ನಲ್ಲಿ ನಡೆಯಲಿದೆ. ಮೆಲ್ಬೋರ್ನ್, ಡಿಸೆಂಬರ್ 26 ರಿಂದ ನಾಲ್ಕನೇ ಟೆಸ್ಟ್‌ಗೆ ಆತಿಥ್ಯ ವಹಿಸಲಿದೆ. ಜನವರಿ 3 ರಿಂದ ಸಿಡ್ನಿಯಲ್ಲಿ ನಡೆಯಲಿರುವ ಅಂತಿಮ ಟೆಸ್ಟ್‌ನೊಂದಿಗೆ ಟೆಸ್ಟ್ ಸರಣಿಯು ಮುಕ್ತಾಯಗೊಳ್ಳಲಿದೆ.
ಭಾರತ-ಆಸ್ಟ್ರೇಲಿಯಾ ಟೆಸ್ಟ್ ಸರಣಿಯ ವೇಳಾಪಟ್ಟಿ
1 ನೇ ಟೆಸ್ಟ್ - ನವೆಂಬರ್ 22-26 : ಪರ್ತ್ ಸ್ಟೇಡಿಯಂ, ಪರ್ತ್
2 ನೇ ಟೆಸ್ಟ್ - ಡಿಸೆಂಬರ್ 6-10 : ಅಡಿಲೇಡ್ ಓವಲ್, ಅಡಿಲೇಡ್ (ಪಿಂಕ್ ಬಾಲ್ ಟೆಸ್ಟ್)
3 ನೇ ಟೆಸ್ಟ್ - ಡಿಸೆಂಬರ್ 14-18 : ದಿ ಗಬ್ಬಾ, ಬ್ರಿಸ್ಬೇನ್
4 ನೇ ಟೆಸ್ಟ್ - ಡಿಸೆಂಬರ್ 26-30 : ಎಂಸಿಜಿ, ಮೆಲ್ಬೋರ್ನ್
5 ನೇ ಟೆಸ್ಟ್ - ಜನವರಿ 3-7 : ಎಸ್ಸಿಜಿ, ಸಿಡ್ನಿ