ಗಾಯದ ಕಾರಣ ರೋಹಿತ್ ಶರ್ಮಾ-ಕೆಎಲ್ ರಾಹುಲ್ ಔಟ್? ಈ ಇಬ್ಬರಿಗೆ ಅವಕಾಶ ಸಾಧ್ಯತೆ; ಹೀಗಿರಲಿದೆ ಭಾರತದ ಸಂಭಾವ್ಯ ಪ್ಲೇಯಿಂಗ್ 11
Dec 22, 2024 01:38 PM IST
ಗಾಯದ ಕಾರಣ ರೋಹಿತ್ ಶರ್ಮಾ-ಕೆಎಲ್ ರಾಹುಲ್ ಔಟ್? ಈ ಇಬ್ಬರಿಗೆ ಅವಕಾಶ ಸಾಧ್ಯತೆ; ಹೀಗಿರಲಿದೆ ಭಾರತದ ಸಂಭಾವ್ಯ ಪ್ಲೇಯಿಂಗ್ 11
- India Playing XI MCG Test: ಮೆಲ್ಬೋರ್ನ್ ಟೆಸ್ಟ್ಗೂ ಮುನ್ನ ಗಾಯಗೊಂಡ ಕೆಎಲ್ ರಾಹುಲ್ ಬದಲಿಗೆ ಅಭಿಮನ್ಯು ಈಶ್ವರನ್ ಮತ್ತು ರೋಹಿತ್ ಶರ್ಮಾ ಬದಲಿಗೆ ಧ್ರುವ್ ಜುರೆಲ್ ಅಥವಾ ವಾಷಿಂಗ್ಟನ್ ಸುಂದರ್ ಸ್ಥಾನ ಪಡೆಯಬಹುದು. ಜಸ್ಪ್ರೀತ್ ಬುಮ್ರಾ ತಂಡವನ್ನು ಮುನ್ನಡೆಸಲಿದ್ದಾರೆ.
ಬಾರ್ಡರ್ ಗವಾಸ್ಕರ್ ಟ್ರೋಫಿಯಲ್ಲಿ ಆಸ್ಟ್ರೇಲಿಯಾ ವಿರುದ್ಧದ 4ನೇ ಟೆಸ್ಟ್ ಪಂದ್ಯಕ್ಕೆ ಭಾರತ ತಂಡ ಭರ್ಜರಿ ಸಿದ್ಧತೆ ಮಾಡಿಕೊಳ್ಳುತ್ತಿದೆ. ಮೆಲ್ಬೋರ್ನ್ ಕ್ರಿಕೆಟ್ ಮೈದಾನದಲ್ಲಿ ಡಿಸೆಂಬರ್ 26ರಂದು ಆರಂಭವಾಗುವ ಬಾಕ್ಸಿಂಗ್ ಡೇ ಟೆಸ್ಟ್ಗೂ ಮುನ್ನ ಭಾರತ ತಂಡ ಗಾಯದ ಹೊಡೆತಕ್ಕೆ ಸಿಲುಕಿದೆ. ನಾಯಕ ರೋಹಿತ್ ಶರ್ಮಾ ಮತ್ತು ಆರಂಭಿಕ ಆಟಗಾರ ಕೆಎಲ್ ರಾಹುಲ್ ಇಬ್ಬರೂ ಗಾಯದ ಸಮಸ್ಯೆಗೆ ತುತ್ತಾಗಿದ್ದಾರೆ. ಇದು ಅಭಿಮಾನಿಗಳಲ್ಲಿ ಆತಂಕ ಮನೆ ಮಾಡಿದೆ. ಮತ್ತೊಂದೆಡೆ ಆಸ್ಟ್ರೇಲಿಯಾ ತಂಡಕ್ಕಿದು ಸಂತಸದ ಸಂಗತಿ.
ಮೆಲ್ಬೋರ್ನ್ ಟೆಸ್ಟ್ ಪಂದ್ಯಕ್ಕೂ ಮುನ್ನ ನಾಯಕ ರೋಹಿತ್ ಶರ್ಮಾ ಮೊಣಕಾಲಿನ ಗಾಯದಿಂದ ಬಳಲುತ್ತಿದ್ದಾರೆ. ಹಾಗೂ ಕೆಎಲ್ ರಾಹುಲ್ ಬಲಗೈಗೆ ಚೆಂಡು ಬಡಿದು ಪೆಟ್ಟಾಗಿದೆ. ಇಬ್ಬರೂ ಸಹ ಫಿಸಿಯೋಗಳ ಬಳಿ ಚಿಕಿತ್ಸೆ ಪಡೆಯುತ್ತಿದ್ದಾರೆ. ರೋಹಿತ್ ಗಾಯ ಗಂಭೀರವಲ್ಲ . ಆದರೆ ರಾಹುಲ್ ಗಾಯದ ತೀವ್ರತೆ ಎಷ್ಟಿದೆ ಎನ್ನುವುದು ಇನ್ನೂ ಸ್ಪಷ್ಟವಾಗಿಲ್ಲ ಎಂದು ತಿಳಿದುಬಂದಿದೆ. ಆದರೆ ಮುಂದಿನ ಟೆಸ್ಟ್ ಪಂದ್ಯಕ್ಕೆ ಇಬ್ಬರು ಅಲಭ್ಯರಾಗುತ್ತಾರೆ ಎನ್ನುವ ವರದಿಯಾಗುತ್ತಿದೆ. ಅವರ ಬದಲಿಗೆ ಯಾರಾಗಬಹುದು?
ಶೀಘ್ರದಲ್ಲೇ ವೈದ್ಯಕೀಯ ತಂಡವು ಇಬ್ಬರ ಗಾಯದ ಬಗ್ಗೆ ಅಪ್ಡೇಟ್ ನೀಡುವ ಸಾಧ್ಯತೆ ಇದೆ. ಆದರೆ ಒಂದು ವೇಳೆ ಇಬ್ಬರು ಸಹ ಮುಂದಿನ ಟೆಸ್ಟ್ನಿಂದ ಹೊರಗುಳಿದರೆ, ಅವರ ಸ್ಥಾನವನ್ನು ಯಾರು ತುಂಬುತ್ತಾರೆ ಎಂಬ ಪ್ರಶ್ನೆ ಅಭಿಮಾನಿಗಳಲ್ಲಿ ಉದ್ಭವಿಸಿದೆ. ಪ್ರಸ್ತುತ ಮೂರು ಪಂದ್ಯಗಳು ಮುಕ್ತಾಯಗೊಂಡಿದ್ದು, ಸರಣಿಯು 1-1ರಲ್ಲಿ ಸಮಬಲ ಸಾಧಿಸಿದೆ. ಇದೀಗ ಎಂಸಿಜಿಯಲ್ಲಿ ನಡೆಯಲಿರುವ ನಾಲ್ಕನೇ ಟೆಸ್ಟ್ ಪಂದ್ಯವು ಎರಡೂ ತಂಡಗಳಿಗೆ ಬಹಳ ಮುಖ್ಯವಾಗಿದ್ದು, ಗೆಲ್ಲುವುದು ಅನಿವಾರ್ಯವಾಗಿದೆ. ಏಕೆಂದರೆ ಸರಣಿ ಗೆಲ್ಲುವುದರ ಜೊತೆಗೆ ಡಬ್ಲ್ಯುಟಿಸಿ ಫೈನಲ್ಗೇರಲು ಗೆಲುವು ಅಗತ್ಯವಾಗಿದೆ.
ಕೆಎಲ್ ರಾಹುಲ್ ಸ್ಥಾನಕ್ಕೆ ಯಾರು?
ಕೆಎಲ್ ರಾಹುಲ್ ಸ್ಥಾನವನ್ನು ಅಭಿಮನ್ಯು ಈಶ್ವರನ್ ತುಂಬಬಹುದು. ಆರಂಭಿಕನಾಗಿ ಈಗಾಗಲೇ ದೇಶೀಯ ಕ್ರಿಕೆಟ್ನಲ್ಲಿ ತನ್ನ ಸಾಮರ್ಥ್ಯ ಸಾಬೀತುಪಡಿಸಿರುವ ಈಶ್ವರನ್, ಟನ್ಗಟ್ಟಲೇ ರನ್ ಕೂಡ ಗಳಿಸಿದ್ದಾರೆ. ಇದೀಗ ಆಸೀಸ್ ಪ್ರವಾಸಕ್ಕೆ ಭಾರತ ತಂಡಕ್ಕೆ ಆಯ್ಕೆಯಾದ ಅವರು ದೇಶೀಯ ಕ್ರಿಕೆಟ್ನಲ್ಲಿ ಸ್ಥಿರ ಪ್ರದರ್ಶನ ನೀಡಿದ್ದಾರೆ. ಪ್ರತಿ ಪಂದ್ಯದಲ್ಲೂ ರನ್ ಗಳಿಸುವ ಮೂಲಕ ಹಿರಿಯ ತಂಡದಲ್ಲಿ ತಮ್ಮ ಸ್ಥಾನ ಗಳಿಸಿದ್ದಾರೆ. ಹೀಗಿದ್ದರೂ ಅವರಿಗೆ ಪದಾರ್ಪಣೆ ಮಾಡಲು ಇನ್ನೂ ಅವಕಾಶ ಒದಗಿ ಬಂದಿಲ್ಲ. ಈಶ್ವರನ್ ಅವರು ಈವರೆಗೆ 101 ಪ್ರಥಮ ದರ್ಜೆ ಪಂದ್ಯಗಳಲ್ಲಿ ಕಣಕ್ಕಿಳಿದಿದ್ದಾರೆ. 48.87ರ ಸರಾಸರಿಯಲ್ಲಿ 7674 ರನ್ ಗಳಿಸಿದ್ದಾರೆ. 27 ಶತಕ, 29 ಅರ್ಧಶತಕ ಚಚ್ಚಿದ್ದಾರೆ.
ರೋಹಿತ್ ಶರ್ಮಾ ಸ್ಥಾನಕ್ಕೆ ಯಾರು?
ನಾಯಕ ರೋಹಿತ್ ಶರ್ಮಾ ಅವರ ಸ್ಥಾನವನ್ನು ತುಂಬಲು ಅನೇಕ ಆಯ್ಕೆಗಳಿವೆ. ಟೀಮ್ ಮ್ಯಾನೇಜ್ಮೆಂಟ್ ಬ್ಯಾಟಿಂಗ್ ಅನ್ನು ಬಲಪಡಿಸಲು ಅವರು ಧ್ರುವ್ ಜುರೆಲ್ಗೆ ಅವಕಾಶ ನೀಡಬಹುದು. ಅಲ್ಲದೆ, ವಾಷಿಂಗ್ಟನ್ ಸುಂದರ್ ಕೂಡ ಉತ್ತಮ ಆಯ್ಕೆಯಾಗಬಹುದು. ಏಕೆಂದರೆ ಅವರು ಬ್ಯಾಟಿಂಗ್ ಮತ್ತು ಬೌಲಿಂಗ್ ಎರಡರಲ್ಲೂ ಕೊಡುಗೆ ನೀಡಬಹುದು. ಒಂದು ವೇಳೆ ರೋಹಿತ್ ಹೊರಬಿದ್ದರೆ ಜಸ್ಪ್ರೀತ್ ಬುಮ್ರಾ ಮತ್ತೆ ತಂಡವನ್ನು ಮುನ್ನಡೆಸಬಹುದು. ರೋಹಿತ್ ಶರ್ಮಾ ತಮ್ಮ ಎರಡನೇ ಮಗುವಿನ ಜನನದಿಂದಾಗಿ ಪರ್ತ್ ಟೆಸ್ಟ್ನಿಂದ ಹೊರಗುಳಿದಿದ್ದರು. ಆಗ ಬುಮ್ರಾ ತಂಡವನ್ನು ಮುನ್ನಡೆಸಿ ಗೆಲುವು ಸಾಧಿಸಿದ್ದರು.
ಈ ಮೊದಲು ಶುಭ್ಮನ್ ಗಿಲ್, ರವೀಂದ್ರ ಜಡೇಜಾ ಮತ್ತು ಮೊಹಮ್ಮದ್ ಸಿರಾಜ್ ಅವರನ್ನು ನಾಲ್ಕನೇ ಟೆಸ್ಟ್ಗೆ ಕೈ ಬಿಡಲು ಟೀಮ್ ಮ್ಯಾನೇಜ್ಮೆಂಟ್ ಚಿಂತಿಸಿತ್ತು. ಆದರೆ ಪ್ರಮುಖ ಆಟಗಾರರೇ ಹೊರ ಬಿದ್ದರೆ ತಂಡದ ಬಲ ಕ್ಷೀಣಿಸಲಿದೆ ಎನ್ನುವ ಕಾರಣಕ್ಕೆ ಅವರನ್ನು ತಂಡದಲ್ಲೇ ಉಳಿಸಿಕೊಳ್ಳುವ ಕುರಿತು ಚರ್ಚೆ ನಡೆಯುತ್ತಿದೆ ಎಂದು ವರದಿಯಾಗಿದೆ. ಅಂತಿಮವಾಗಿ ಯಾರಿಗೆಲ್ಲಾ 11ರ ಬಳಗದಲ್ಲಿ ಅವಕಾಶ ಸಿಗುತ್ತದೆ ಎಂಬುದನ್ನು ಕಾದುನೋಡಬೇಕಿದೆ.
ಮೆಲ್ಬೋರ್ನ್ ಟೆಸ್ಟ್ಗೆ ಭಾರತ ಸಂಭಾವ್ಯ 11
ಅಭಿಮನ್ಯು ಈಶ್ವರನ್, ಯಶಸ್ವಿ ಜೈಸ್ವಾಲ್, ಶುಭ್ಮನ್ ಗಿಲ್, ವಿರಾಟ್ ಕೊಹ್ಲಿ, ರಿಷಭ್ ಪಂತ್, ಧ್ರುವ್ ಜುರೆಲ್/ವಾಷಿಂಗ್ಟನ್ ಸುಂದರ್, ರವೀಂದ್ರ ಜಡೇಜಾ, ನಿತೀಶ್ ಕುಮಾರ್ ರೆಡ್ಡಿ, ಆಕಾಶ್ ದೀಪ್, ಜಸ್ಪ್ರೀತ್ ಬುಮ್ರಾ, ಮೊಹಮ್ಮದ್ ಸಿರಾಜ್.