ತೂಫಾನ್ ಬ್ಯಾಟಿಂಗ್ ನಡೆಸಿ ಐಪಿಎಲ್ನಲ್ಲಿ 2ನೇ ಬೃಹತ್ ಮೊತ್ತ ದಾಖಲಿಸಿದ ಕೆಕೆಆರ್; 3ನೇ ಸ್ಥಾನಕ್ಕೆ ಕುಸಿದ ಆರ್ಸಿಬಿ, SRH ರೆಕಾರ್ಡ್ ಸೇಫ್
Apr 04, 2024 06:03 AM IST
ತೂಫಾನ್ ಬ್ಯಾಟಿಂಗ್ ನಡೆಸಿ ಐಪಿಎಲ್ನಲ್ಲಿ 2ನೇ ಬೃಹತ್ ಮೊತ್ತ ದಾಖಲಿಸಿದ ಕೆಕೆಆರ್
- KKR New Record: ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಕೋಲ್ಕತ್ತಾ ನೈಟ್ ರೈಡರ್ಸ್ 272 ರನ್ ಕಲೆ ಹಾಕುವುದರ ಮೂಲಕ ಐಪಿಎಲ್ ಇತಿಹಾಸದಲ್ಲಿ ಬೃಹತ್ ಮೊತ್ತ ಗಳಿಸಿದ ಎರಡನೇ ತಂಡವಾಗಿದೆ.
ಐಪಿಎಲ್ ಇತಿಹಾಸದಲ್ಲಿ ಮತ್ತೊಂದು ಬೃಹತ್ ಮೊತ್ತ ದಾಖಲಾಗಿದೆ. ಸಿಡಿಲಬ್ಬರದ ಬ್ಯಾಟಿಂಗ್ ನಡೆಸಿದ ಕೋಲ್ಕತ್ತಾ ನೈಟ್ ರೈಡರ್ಸ್ (Delhi Capitals vs Kolkata Knight Riders) ತಂಡ ಶ್ರೀಮಂತ ಲೀಗ್ನಲ್ಲಿ ಎರಡನೇ ಗರಿಷ್ಠ ಮೊತ್ತವನ್ನು ಸಿಡಿಸಿದೆ. ವಿಶಾಖಪಟ್ಟಣದಲ್ಲಿ ನಡೆದ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಕೆಕೆಆರ್ 272 ರನ್ ಗಳಿಸಿದೆ. ಇದರೊಂದಿಗೆ ಇಂಡಿಯನ್ ಪ್ರೀಮಿಯರ್ ಲೀಗ್ನಲ್ಲಿ ಅಧಿಕ ರನ್ ಗಳಿಸಿದ 2ನೇ ತಂಡ ಎಂಬ ದಾಖಲೆ ಬರೆದಿದೆ.
ಇತ್ತೀಚೆಗಷ್ಟೇ ಎರಡನೇ ಸ್ಥಾನಕ್ಕೆ ಕುಸಿದಿದ್ದ ಆರ್ಸಿಬಿ, ಈಗ ಮೂರನೇ ಸ್ಥಾನಕ್ಕೆ ಕುಸಿದಿದೆ. ಕಳೆದ ವಾರ ಮುಂಬೈ ಇಂಡಿಯನ್ಸ್ ವಿರುದ್ಧ ಸನ್ರೈಸರ್ಸ್ ಹೈದರಾಬಾದ್ 277 ರನ್ ಬಾರಿಸಿ ಐಪಿಎಲ್ನಲ್ಲಿ ಗರಿಷ್ಠ ಮೊತ್ತ ಗಳಿಸಿದ ರೆಕಾರ್ಡ್ ಸೃಷ್ಟಿಸಿತ್ತು. ಇದೀಗ ಒಂದೇ ವಾರದ ಅಂತರದಲ್ಲಿ ಮತ್ತೊಂದು ದ್ವಿತೀಯ ಗರಿಷ್ಠ ಮೊತ್ತ ದಾಖಲಾಗಿದೆ. 6 ವಿಕೆಟ್ ನಷ್ಟಕ್ಕೆ 246 ರನ್ ಗಳಿಸಿದ್ದು, ಕೆಕೆಆರ್ ಇದುವರೆಗಿನ ಗರಿಷ್ಠ ಐಪಿಎಲ್ ಮೊತ್ತವಾಗಿದೆ. ರಾಜಸ್ಥಾನ್ ರಾಯಲ್ಸ್ ವಿರುದ್ಧ ಈ ದೊಡ್ಡ ಮೊತ್ತವನ್ನು ಗಳಿಸಿತ್ತು.
ವೈಜಾಗ್ನಲ್ಲಿ ಜರುಗಿದ ಈ ಪಂದ್ಯದಲ್ಲಿ ಟಾಸ್ ಜಯಿಸಿ ಬ್ಯಾಟಿಂಗ್ ನಡೆಸಿದ ಕೆಕೆಆರ್, ನಾಯಕನ ನಿರ್ಧಾರವನ್ನು ಸಮರ್ಥಿಸುವಂತೆ ಬ್ಯಾಟಿಂಗ್ ನಡೆಸಿದ್ದಾರೆ. ಆರಂಭದಿಂದಲೇ ಬಿರುಸಿನ ಬ್ಯಾಟಿಂಗ್ ನಡೆಸಿದ ಕೆಕೆಆರ್ ಬ್ಯಾಟರ್ಸ್, ಜಿದ್ದಿಗೆ ಜಿದ್ದವರಂತೆ ರನ್ ಬಾರಿಸಿದರು. ಸುನಿಲ್ ನರೈನ್ (85) ಮತ್ತು ಆಂಗ್ಕ್ರಿಶ್ ರಘುವಂಶಿ (54) ಅವರ ಅರ್ಧಶತಕ ಸಿಡಿಸಿದರೆ, ಆ್ಯಂಡ್ರೆ ರಸೆಲ್ (41), ರಿಂಕು ಸಿಂಗ್ (26) ಕಡಿಮೆ ಬಾಲ್ಗಳಲ್ಲಿ ಬೃಹತ್ ಮೊತ್ತ ಪೇರಿಸಲು ನೆರವಾದರು.
ನಿಗದಿತ 20 ಓವರ್ಗಳಲ್ಲಿ ನಡೆಸಿದ ಕೆಕೆಆರ್ 7 ವಿಕೆಟ್ ನಷ್ಟಕ್ಕೆ 272 ರನ್ ಬಾರಿಸಿತು. ಇನ್ನೊಂದು 6 ರನ್ ಬಾರಿಸಿದ್ದರೆ ಸನ್ರೈಸರ್ಸ್ ಹೈದರಾಬಾದ್ ತಂಡದ ದಾಖಲೆ ಪತನಗೊಳ್ಳುತ್ತಿತ್ತು. ಆದರೆ ದೊಡ್ಡ ಗುರಿಯನ್ನು ಬೆನ್ನಟ್ಟಿದ ಡೆಲ್ಲಿ ಕ್ಯಾಪಿಟಲ್ಸ್ 17.2 ಓವರ್ಗಳಲ್ಲಿ 166 ರನ್ ಗಳಿಸಿ ಸರ್ವಪತನಗೊಂಡಿತು. ಇದರೊಂದಿಗೆ ಕೆಕೆಆರ್ 106 ರನ್ಗಳ ಬೃಹತ್ ಮೊತ್ತದೊಂದಿಗೆ ಭರ್ಜರಿ ಗೆಲುವು ಸಾಧಿಸಿತು. ಮತ್ತೊಂದೆಡೆ ಅಂಕಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿದೆ. ಆದರೆ ಸೋತ ಡೆಲ್ಲಿ ಕ್ಯಾಪಿಟಲ್ಸ್ 7 ರಿಂದ 9ನೇ ಸ್ಥಾನಕ್ಕೆ ಕುಸಿತ ಕಂಡಿದೆ.
ಐಪಿಎಲ್ನಲ್ಲಿ ಗರಿಷ್ಠ ಮೊತ್ತಗಳು
2024 ರಲ್ಲಿ ಸನ್ರೈಸರ್ಸ್ ಹೈದರಾಬಾದ್ 277/3 vs ಮುಂಬೈ ಇಂಡಿಯನ್ಸ್
2024 ರಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ 272/7 vs ಡೆಲ್ಲಿ ಕ್ಯಾಪಿಟಲ್ಸ್*
2013 ರಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು 263/5 vs ಪುಣೆ ವಾರಿಯರ್ಸ್
2023 ರಲ್ಲಿ ಲಕ್ನೋ ಸೂಪರ್ ಜೈಂಟ್ಸ್ 256/5 vs ಪಂಜಾಬ್ ಕಿಂಗ್ಸ್
2016 ರಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು 248/3 vs ಗುಜರಾತ್ ಲಯನ್ಸ್
2010 ರಲ್ಲಿ ಚೆನ್ನೈ ಸೂಪರ್ ಕಿಂಗ್ಸ್ 246/5 vs ರಾಜಸ್ಥಾನ್ ರಾಯಲ್ಸ್
2024 ರಲ್ಲಿ ಮುಂಬೈ ಇಂಡಿಯನ್ಸ್ 246/5 vs ಸನ್ರೈಸರ್ಸ್ ಹೈದರಾಬಾದ್*
2018 ರಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ 245/6 vs ಪಂಜಾಬ್ ಕಿಂಗ್ಸ್
2008 ರಲ್ಲಿ ಚೆನ್ನೈ ಸೂಪರ್ ಕಿಂಗ್ಸ್ 240/5 vs ಪಂಜಾಬ್ ಕಿಂಗ್ಸ್
2023 ರಲ್ಲಿ ಚೆನ್ನೈ ಸೂಪರ್ ಕಿಂಗ್ಸ್ 235/4 vs ಕೋಲ್ಕತ್ತಾ ನೈಟ್ ರೈಡರ್ಸ್