ಕಾನೂನು ಕ್ರಮ, ಆರ್ಥಿಕ ನಷ್ಟ, ಬಹಿಷ್ಕಾರ; ಚಾಂಪಿಯನ್ಸ್ ಟ್ರೋಫಿಯಿಂದ ಹಿಂದೆ ಸರಿದರೆ ಪಾಕಿಸ್ತಾನಕ್ಕೆ ಸಮಸ್ಯೆ ಒಂದೆರಡಲ್ಲ
Dec 11, 2024 03:42 PM IST
ಚಾಂಪಿಯನ್ಸ್ ಟ್ರೋಫಿಯಿಂದ ಹಿಂದೆ ಸರಿದರೆ ಪಾಕಿಸ್ತಾನಕ್ಕೆ ಸಮಸ್ಯೆ ಒಂದೆರಡಲ್ಲ
- ICC Champions Trophy: ಒಂದು ವೇಳೆ 2025ರ ಚಾಂಪಿಯನ್ಸ್ ಟ್ರೋಫಿಯಿಂದ ಪಾಕಿಸ್ತಾನ ತಂಡ ಹಿಂದೆ ಸರಿದರೆ, ಅದು ಭಾರಿ ಆರ್ಥಿಕ ನಷ್ಟವನ್ನು ಅನುಭವಿಸಬೇಕಾಗುತ್ತದೆ. ಇದೇ ವೇಳೆ ಕಾನೂನು ಕ್ರಮದ ಜೊತೆಗೆ ಅಂತಾರಾಷ್ಟ್ರೀಯ ಪಂದ್ಯಗಳಿಂದ ಬಹಿಷ್ಕಾರವನ್ನೂ ಎದುರಿಸಬೇಕಾಗಬಹುದು.
ಚಾಂಪಿಯನ್ಸ್ ಟ್ರೋಫಿ ಹೈಬ್ರಿಡ್ ಮಾದರಿಗೆ ಇನ್ನೂ ಒಪ್ಪದ ಪಾಕಿಸ್ತಾನ, ಭಾರತದಲ್ಲಿ ನಡೆಯಲಿರುವ ಮುಂಬರುವ ಐಸಿಸಿ ಪಂದ್ಯಗಳನ್ನು ಕೂಡಾ ಹೈಬ್ರಿಡ್ ಮಾದರಿಯಲ್ಲೇ ನಡೆಸಬೇಕು ಎಂಬ ಬೇಡಿಕೆ ಇಟ್ಟಿತ್ತು. ಒಂದು ವೇಳೆ ಅದಕ್ಕೆ ಬಿಸಿಸಿಐ ಮತ್ತು ಐಸಿಸಿ ಒಪ್ಪದಿದ್ದರೆ, ಚಾಂಪಿಯನ್ಸ್ ಟ್ರೋಫಿಯಿಂದ ಹಿಂದೆ ಸರಿಯುವುದಾಗಿ ಹೇಳಿತ್ತು. ಆದರೆ, ಪಿಸಿಬಿಯ ಬೆದರಿಕೆಗೆ ಐಸಿಸಿ ಸೊಪ್ಪು ಹಾಕುತ್ತಿಲ್ಲ. ಒಂದು ವೇಳೆ ಐಸಿಸಿ ಟೂರ್ನಿಯನ್ನು ಬಹಷ್ಕರಿಸಿದರೆ, ನಿಮಗೇ ನಷ್ಟ ಎಂಬಂತೆ ಕಡ್ಡಿ ಮುರಿದಂತೆ ಹೇಳಿದೆ. ಐಸಿಸಿ ಟೂರ್ನಿಯಿಂದ ಹಿಂದೆ ಸರಿದರೆ ಪಿಸಿಬಿ ಭಾರಿ ಆರ್ಥಿಕ ನಷ್ಟ ಎದುರಿಸಬೇಕಾಗುತ್ತದೆ. ಅಲ್ಲದೆ ಕಾನೂನು ಕ್ರಮ ಎದುರಿಸುವುದು ಮಾತ್ರವಲ್ಲದೆ ಅಂತಾರಾಷ್ಟ್ರೀಯ ಬಹಿಷ್ಕಾರ ಎದುರಿಸಬೇಕಾಗುತ್ತದೆ ಎಂದು ಐಸಿಸಿ ಈವೆಂಟ್‌ಗಳ ಬಗ್ಗೆ ತಿಳಿದಿರುವ ಹಿರಿಯ ಕ್ರಿಕೆಟ್ ನಿರ್ವಾಹಕರು ಹೇಳಿದ್ದಾರೆ.
ಜನವರಿ ತಿಂಗಳಿಂದ ಮಾರ್ಚ್‌ವರೆಗೆ ನಡೆಯಲಿರುವ ಚಾಂಪಿಯನ್ಸ್ ಟ್ರೋಫಿಯ ಆತಿಥ್ಯ ವಹಿಸಿರುವ ಪಾಕಿಸ್ತಾನವು ಹೈಬ್ರಿಡ್ ಮಾದರಿಗೆ ಇನ್ನೂ ಹಸಿರು ನಿಶಾನೆ ತೋರಿಲ್ಲ. ಭದ್ರತಾ ಕಾರಣಗಳಿಂದಾಗಿ ಪಾಕಿಸ್ತಾನಕ್ಕೆ ಪ್ರಯಾಣಿಸಲು ಭಾರತ ನಿರಾಕರಿಸಿದ ಹಿನ್ನೆಲೆಯಲ್ಲಿ, ಟೂರ್ನಿ ನಡೆಸಲು ಹೈಬ್ರಿಡ್ ಮಾದರಿ ಒಂದೇ ಪರಿಹಾರವಾಗಿದೆ. ಆದರೆ, ಇದಕ್ಕೆ ಹತ್ತಾರು ಕಂಡೀಶನ್ ಹಾಕುತ್ತಿರುವ ಪಾಕ್, ಭಾರತ ಅದಕ್ಕೆ ತಲೆಬಾಗಬೇಕೆಂಬ ನಿರೀಕ್ಷೆಯಲ್ಲಿದೆ.
ಐಸಿಸಿ ಈವೆಂಟ್‌ಗಳ ಆಯೋಜನೆಯ ಬಗ್ಗೆ ಚೆನ್ನಾಗಿ ತಿಳಿದಿರುವ ಹಿರಿಯ ಕ್ರಿಕೆಟ್ ಆಡಳಿತಗಾರರೊಬ್ಬರು, ಐಸಿಸಿಯೊಂದಿಗಿನ ಪಿಸಿಬಿಯ ಒಪ್ಪಂದದ ಬಗ್ಗೆ ಬಹಿರಂಗಪಡಿಸಿದ್ದಾರೆ. “ಪಾಕಿಸ್ತಾನವು ಐಸಿಸಿಯೊಂದಿಗೆ ಆತಿಥ್ಯ ಒಪ್ಪಂದಕ್ಕೆ ಸಹಿ ಹಾಕಿದೆ. ಅಲ್ಲದೆ ಈವೆಂಟ್‌ನಲ್ಲಿ ಭಾಗವಹಿಸುವ ಇತರ ಎಲ್ಲಾ ರಾಷ್ಟ್ರಗಳಂತೆ, ಐಸಿಸಿಯೊಂದಿಗೆ ಕಡ್ಡಾಯ ಸದಸ್ಯರ ಭಾಗವಹಿಸುವಿಕೆ ಒಪ್ಪಂದಕ್ಕೆ (ಎಂಪಿಎ) ಕೂಡಾ ಸಹಿ ಹಾಕಿದೆ” ಎಂದು ಆಡಳಿತಾಧಿಕಾರಿ ಪಿಟಿಐಗೆ ತಿಳಿಸಿದ್ದಾರೆ.
ಸಹಿ ಹಾಕಿದ ಮೇಲೆ ಆಡಲೇ ಬೇಕು
“ಸದಸ್ಯ ರಾಷ್ಟ್ರವು ಐಸಿಸಿ ಈವೆಂಟ್‌ನಲ್ಲಿ ಆಡಲು ಎಂಪಿಎಗೆ ಸಹಿ ಹಾಕಿದ ನಂತರವೇ ಅದು ಐಸಿಸಿ ಈವೆಂಟ್‌ಗಳಿಂದ ಬರುವ ಆದಾಯದ ಪಾಲನ್ನು ಪಡೆಯಲು ಅರ್ಹವಾಗಿರುತ್ತದೆ. ಎಲ್ಲಕ್ಕಿಂತ ಮುಖ್ಯವಾಗಿ ಐಸಿಸಿ ತನ್ನ ಎಲ್ಲಾ ಈವೆಂಟ್‌ಗಳ ಪ್ರಸಾರ ಒಪ್ಪಂದಕ್ಕೆ ಸಹಿ ಹಾಕುವಾಗ, ಐಸಿಸಿಯ ಎಲ್ಲಾ ಸದಸ್ಯ ರಾಷ್ಟ್ರಗಳು ತನ್ನ ಟೂರ್ನಿಗಳಲ್ಲಿ ಆಡಲು ಲಭ್ಯವಿರುತ್ತಾರೆ ಎಂಬ ಖಾತರಿಯನ್ನು ನೀಡುತ್ತದೆ. ಅದರಲ್ಲಿ ಚಾಂಪಿಯನ್ಸ್ ಟ್ರೋಫಿಯೂ ಸೇರಿದೆ” ಎಂದು ಅವರು ಹೇಳಿದ್ದಾರೆ.
ಹೈಬ್ರಿಡ್ ಮಾದರಿ
ಎಂಟು ತಂಡಗಳು ಭಾಗವಹಿಸುವ ಚಾಂಪಿಯನ್ಸ್ ಟ್ರೋಫಿಯನ್ನು ಹೈಬ್ರಿಡ್ ಮಾದರಿಯಲ್ಲಿ ನಡೆಸಲು ಐಸಿಸಿ ಒಮ್ಮತಕ್ಕೆ ಬಂದಿದೆ. ಅದರ ಪ್ರಕಾರ ಭಾರತದ ಪಂದ್ಯಗಳು ದುಬೈನಲ್ಲಿ ನಡೆಯಲಿದೆ. ಆದರೆ 2027ರವರೆಗೆ ನಡೆಯುವ ಬಹುಪಕ್ಷೀಯ ಸ್ಪರ್ಧೆಗಳಿಗೂ ಇದೇ ರೀತಿಯ ವ್ಯವಸ್ಥೆಗೆ ತಾತ್ವಿಕವಾಗಿ ಐಸಿಸಿ ಒಪ್ಪಿಕೊಂಡಿದೆ. ಆದರೆ, ಅಧಿಕೃತ ಪ್ರಕಟಣೆ ಬರಬೇಕಿದೆ. ಈ ಒಪ್ಪಂದದ ಪ್ರಕಾರ, 2027ರವರೆಗೆ ನಡೆಯಲಿರುವ ಐಸಿಸಿ ಟೂರ್ನಿಗಳಿಗಾಗಿ ಪಾಕಿಸ್ತಾನವು ಭಾರತಕ್ಕೆ ಪ್ರಯಾಣಿಸುವಂತಿಲ್ಲ.