logo
ಕನ್ನಡ ಸುದ್ದಿ  /  ಕ್ರಿಕೆಟ್  /  ರಿಷಭ್ ಪಂತ್ ನೋ ಲುಕ್ ಸಿಕ್ಸರ್​ಗೆ ಶಾರೂಖ್ ಖಾನ್ ಫಿದಾ; ಎದ್ದು ನಿಂತು ಚಪ್ಪಾಳೆ ತಟ್ಟಿದ ಕಿಂಗ್ ಖಾನ್, Video

ರಿಷಭ್ ಪಂತ್ ನೋ ಲುಕ್ ಸಿಕ್ಸರ್​ಗೆ ಶಾರೂಖ್ ಖಾನ್ ಫಿದಾ; ಎದ್ದು ನಿಂತು ಚಪ್ಪಾಳೆ ತಟ್ಟಿದ ಕಿಂಗ್ ಖಾನ್, VIDEO

Prasanna Kumar P N HT Kannada

Apr 04, 2024 03:46 PM IST

ರಿಷಭ್ ಪಂತ್ ನೋ ಲುಕ್ ಸಿಕ್ಸರ್​ಗೆ ಶಾರೂಖ್ ಖಾನ್ ಫಿದಾ

    • Rishabh Pant :  ಕೋಲ್ಕತ್ತಾ ನೈಟ್ ರೈಡರ್ಸ್ ವಿರುದ್ಧದ 12ನೇ ಓವರ್​​ನಲ್ಲಿ 28 ರನ್ ಗಳಿಸಿದ ಡೆಲ್ಲಿ ಕ್ಯಾಪಿಟಲ್ಸ್ ನಾಯಕ ರಿಷಭ್ ಪಂತ್ ಇದೇ ನೋ ಲುಕ್ ಸಿಕ್ಸರ್​ ಸಿಡಿಸಿ ಗಮನ ಸೆಳೆದಿದ್ದಾರೆ.
ರಿಷಭ್ ಪಂತ್ ನೋ ಲುಕ್ ಸಿಕ್ಸರ್​ಗೆ ಶಾರೂಖ್ ಖಾನ್ ಫಿದಾ
ರಿಷಭ್ ಪಂತ್ ನೋ ಲುಕ್ ಸಿಕ್ಸರ್​ಗೆ ಶಾರೂಖ್ ಖಾನ್ ಫಿದಾ

2022ರ ಡಿಸೆಂಬರ್​ 30ರಂದು ಭೀಕರ ಅಪಘಾತದಿಂದ ಚೇತರಿಸಿಕೊಂಡು ಒಂದು ವರ್ಷಕ್ಕೂ ಹೆಚ್ಚು ಅವಧಿಯ ನಂತರ ಕ್ರಿಕೆಟ್​ ಮೈದಾನಕ್ಕೆ ಮರಳಿದ ವಿಕೆಟ್​ ಕೀಪರ್ ಬ್ಯಾಟ್ಸ್​ಮನ್​ ರಿಷಭ್ ಪಂತ್​ ತನ್ನ ಹಳೆಯ ಖದರ್​ಗೆ ಮರಳಿದ್ದಾರೆ. 17ನೇ ಆವೃತ್ತಿಯ ಐಪಿಎಲ್​ನಲ್ಲಿ ಬೊಂಬಾಟ್ ಬ್ಯಾಟಿಂಗ್ ಮೂಲಕ ಉತ್ತಮ ಫಾರ್ಮ್​​ನಲ್ಲಿರುವ ಪಂತ್ ಅವರ ನೋ ಲುಕ್ ಸಿಕ್ಸರ್​ಗೆ ಶಾರೂಖ್ ಖಾನ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಟ್ರೆಂಡಿಂಗ್​ ಸುದ್ದಿ

ಆರ್​ಸಿಬಿ ಫೈನಲ್​ ಗೆದ್ದಂತೆ ಹಾರಾಡ್ತಿದೆ ಎಂದ ರಾಯುಡು; ಇವರಿಗೆ ಅರಗಿಸಿಕೊಳ್ಳೊಕೆ ಆಗ್ತಿಲ್ಲ ಎಂದ ಬೆಂಗಳೂರು ಮಾಜಿ ಆಟಗಾರ

ವಿರಾಟ್ ಕೊಹ್ಲಿಗೆ ಕರ್ನಾಟಕದ ನಂಟು; ಎರಡನೇ ತವರು ಬೆಂಗಳೂರಲ್ಲಿ ವಿರುಷ್ಕಾ ದಂಪತಿ ಓಡಾಡಿರುವ ಜಾಗಗಳಿವು

ಬ್ಯಾಟರ್‌ಗಳ ಅಬ್ಬರ; ಪಂಜಾಬ್‌ ಮಣಿಸಿ ಅಂಕಪಟ್ಟಿಯಲ್ಲಿ ಎರಡನೇ ಸ್ಥಾನಕ್ಕೆ ನೆಗೆದ ಸನ್‌ರೈಸರ್ಸ್‌ ಹೈದರಾಬಾದ್

ಕದನದೊಳ್ ಕಿಂಗ್ ಕೊಹ್ಲಿ ಕೆಣಕಿ ಉಳಿದವರಿಲ್ಲ; ರವೀಂದ್ರ ಜಡೇಜಾಗೆ ಅಲ್ಲೇ ಡ್ರಾ, ಅಲ್ಲೇ ಬಹುಮಾನ, ವಿಡಿಯೋ

ಸ್ಪರ್ಧಾತ್ಮಕ ಕ್ರಿಕೆಟ್​ಗೆ ಮರಳಿದ ಮೊದಲ ಎರಡು ಪಂದ್ಯಗಳಲ್ಲಿ ಲಯ ಕಂಡುಕೊಳ್ಳಲು ಪರದಾಡಿದ ರಿಷಭ್, ಪ್ರಸ್ತುತ ಅದ್ಭುತ ಫಾರ್ಮ್​ನಲ್ಲಿದ್ದಾರೆ. ಬ್ಯಾಕ್ ಟು ಬ್ಯಾಕ್ ಹಾಫ್ ಸೆಂಚುರಿ ಬಾರಿಸಿ ಮಿಂಚಿರುವ ರಿಷಭ್, ಟಿ20 ವಿಶ್ವಕಪ್​ಗೆ ನಾನು ಸಿದ್ಧ ಎಂದು ಬಿಸಿಸಿಐ ಆಯ್ಕೆದಾರರಿಗೆ ಸಂದೇಶ ರವಾನಿಸಿದ್ದಾರೆ. ಇಶಾನ್ ಕಿಶನ್ ಬದಲಿಗೆ ರಿಷಭ್​ ಅವರನ್ನೇ ಆಯ್ಕೆ ಮಾಡಲಾಗುತ್ತದೆ ಎಂದು ಬಿಸಿಸಿಐ ಮೂಲಗಳು ಹೇಳುತ್ತಿವೆ. ಸಂಪೂರ್ಣ ಫಿಟ್ ಆಗಿರುವ ಪಂತ್​, ಮುಂದಿನ ಪಂದ್ಯಗಳಲ್ಲೂ ಆರ್ಭಟಿಸುವ ವಿಶ್ವಾಸವನ್ನು ಹುಟ್ಟು ಹಾಕಿದ್ದಾರೆ.

ಸಿಎಸ್​ಕೆ ಬಳಿಕ ಕೆಕೆಆರ್​ ವಿರುದ್ಧ ಪಂತ್ ಅರ್ಧಶತಕ

ವೈಜಾಗ್​ನ ಡಾ ವೈಎಸ್ ರಾಜಶೇಖರರೆಡ್ಡಿ ಮೈದಾನದಲ್ಲಿ ನಡೆದ ಡೆಲ್ಲಿ ಕ್ಯಾಪಿಟಲ್ಸ್​ನ ಮೂರನೇ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ 32 ಎಸೆತಗಳಲ್ಲಿ 4 ಬೌಂಡರಿ, 3 ಸಿಕ್ಸರ್ ಸಹಿತ 51 ರನ್ ಚಚ್ಚಿದ್ದ ಪಂತ್, ಇದೇ ಮೈದಾನದಲ್ಲಿ ಕೆಕೆಆರ್ ಎದುರಿನ ಪಂದ್ಯದಲ್ಲಿ 25 ಎಸೆತಗಳಲ್ಲಿ 4 ಬೌಂಡರಿ, 5 ಸಿಕ್ಸರ್ ಸಹಿತ 55 ರನ್ ಬಾರಿಸಿದರು. ಭರ್ಜರಿ ಬ್ಯಾಟಿಂಗ್ ನಡೆಸುತ್ತಿರುವ ರಿಷಭ್, ಆರೆಂಜ್ ಕ್ಯಾಪ್ ರೇಸ್​​ಗೆ ಇಳಿದಿದ್ದಾರೆ. ಸದ್ಯ ಪಂದ್ಯ ನಾಲ್ಕು ಪಂದ್ಯಗಳಿಂದ 152 ರನ್ ಕಲೆ ಹಾಕಿದ್ದಾರೆ.

ಒಂದೇ ಓವರ್​​ನಲ್ಲಿ 28 ರನ್ ಚಚ್ಚಿದ ಡೆಲ್ಲಿ ಕ್ಯಾಪ್ಟನ್

ಕೋಲ್ಕತ್ತಾ ವಿರುದ್ಧದ ಓವರ್​ವೊಂದರಲ್ಲಿ ರಿಷಭ್​ ಪಂತ್ ಬರೋಬ್ಬರಿ 28 ರನ್ ಬಾರಿಸಿದರು. ಮಧ್ಯಮ ಓವರ್​​ಗಳಲ್ಲಿ ಬಿರುಸಿನ ಬ್ಯಾಟಿಂಗ್​ಗೆ ಕೈ ಹಾಕಿದ ರಿಷಭ್, ವೆಂಕಟೇಶ್ ಅಯ್ಯರ್ ಎಸೆದ 12ನೇ ಓವರ್​ನಲ್ಲಿ ಎರಡು ಸಿಕ್ಸರ್, 4 ಬೌಂಡರಿ ಸಿಡಿಸಿದರು. ಮೊದಲ ಎಸೆತವನ್ನು ಬೌಂಡರಿಗೆ ಕಳುಹಿಸಿದರೆ, 2ನೇ ಎಸೆತದಲ್ಲಿ ಸಿಕ್ಸರ್​​ ಸಿಡಿಸಿದರು. 4, 6, 4, 4 ಕ್ರಮವಾಗಿ ಉಳಿದ ನಾಲ್ಕು ಎಸೆತಗಳಲ್ಲಿ ಈ ಸ್ಕೋರ್ ಮಾಡಿದರು. ಐದನೇ ಎಸೆತದಲ್ಲಿ ಬೌಂಡರಿ ಸಿಡಿಸಿ ತನ್ನ ಅರ್ಧಶತಕವನ್ನೂ ಪೂರ್ಣಗೊಳಿಸಿದರು. ಒಟ್ಟು 28 ರನ್​​ಗಳನ್ನು ಈ ಓವರ್​ನಲ್ಲಿ ಕಲೆ ಹಾಕಿದರು.

ನೋಡದೆಯೇ ಸಿಕ್ಸರ್ ಬಾರಿಸಿದ ಪಂತ್

ಕ್ರೀಸ್​ನಲ್ಲಿ ಇರುವವರೆಗೂ ಭರ್ಜರಿ ಬ್ಯಾಟಿಂಗ್ ನಡೆಸಿದ ಪಂತ್​ ಕೇವಲ 25 ಬಾಲ್​​ಗಳಲ್ಲಿ 5 ಸಿಕ್ಸರ್, 4 ಬೌಂಡರಿಗಳ ಸಹಿತ 55 ರನ್ ಚಚ್ಚಿದ ರಿಷಭ್ ಪಂತ್, 28 ರನ್ ಬಾರಿಸಿದ ಓವರ್​ನಲ್ಲೇ ಚೆಂಡು ನೋಡದೆಯೇ ಆಕರ್ಷಕ ಸಿಕ್ಸರ್​ ಸಿಡಿಸಿದರು. ಈ ವಿಡಿಯೋ ವೈರಲ್ ಆಗಿದೆ. ವೆಂಕಟೇಶ್ ಅಯ್ಯರ್ ಎಸೆದ ಚೆಂಡನ್ನು ಡೀಪ್​ ಬ್ಯಾಕ್​ವರ್ಡ್​ ಕಡೆ ನೋಡದೆಯೇ ಸಿಕ್ಸರ್​ ಚಚ್ಚಿದ್ದು, ಅದ್ಭುತವಾಗಿತ್ತು. ಪಂತ್ ತನ್ನ ಹಳೆಯ ಖದರ್​ಗೆ ಮರಳುತ್ತಿದ್ದಾರೆ ಎಂಬುದನ್ನು ಈ ಆಟವೇ ಸಾಬೀತುಪಡಿಸುತ್ತದೆ.

ಎದ್ದು ನಿಂತು ಚಪ್ಪಾಳೆ ತಟ್ಟಿದ ಶಾರೂಖ್ ಖಾನ್

ರಿಷಭ್ ಪಂತ್ ನೋ ಲುಕ್ ಸಿಕ್ಸರ್​ ಸಿಡಿಸಿದ ವೇಳೆ ಬಾಲಿವುಡ್ ನಟ ಮತ್ತು ಕೆಕೆಆರ್ ಮಾಲೀಕ ಶಾರೂಖ್ ಖಾನ್ ಅವರು ಎದ್ದು ನಿಂತು ಚಪ್ಪಾಳೆ ತಟ್ಟುವ ಮೂಲಕ ಪ್ರಶಂಸೆ ವ್ಯಕ್ತಪಡಿಸಿದರು. ಪಂದ್ಯದ ನಂತರ ರಿಷಭ್​ರನ್ನು ಭೇಟಿಯಾದ ಶಾರೂಖ್​, ಕುಶಲೋಪರಿ ವಿಚಾರಿಸಿದರು. ಕೆಲವೊಂದು ಮಾತುಕತೆ ನಡೆಸಿದರು. ಇದರ ವಿಡಿಯೋ ಮತ್ತು ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.

ಸ್ಕೋರ್ ವಿವರ

ಕೋಲ್ಕತ್ತಾ ನೈಟ್ ರೈಡರ್ಸ್ ವಿರುದ್ಧದ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ನೀರಸ ಪ್ರದರ್ಶನ ನೀಡಿತು. ಮೊದಲು ಬ್ಯಾಟಿಂಗ್ ನಡೆಸಿದ ಕೆಕೆಆರ್​, ಡೆಲ್ಲಿ ಬೌಲರ್​​ಗಳನ್ನು ದಂಡಿಸಿದರು. ಆರಂಭಿಕರಾಗಿ ಕಣಕ್ಕಿಳಿದ ಸುನಿಲ್ ನರೇನ್ (85) ಮತ್ತು ಆಂಗ್ರಿಶ್ ರಘುವಂಶಿ (54) ಭರ್ಜರಿ ಬ್ಯಾಟಿಂಗ್ ನಡೆಸಿದರು. ಆ ಬಳಿಕ ಆಂಡ್ರೆ ರಸೆಲ್ (41) ಮತ್ತು ರಿಂಕು ಸಿಂಗ್ (26)​ ಸಿಡಿಲಾರ್ಭಟ ಬ್ಯಾಟಿಂಗ್ ಮಾಡಿದರು. ಪರಿಣಾಮ ಕೆಕೆಆರ್ 7 ವಿಕೆಟ್ ನಷ್ಟಕ್ಕೆ 272 ರನ್ ಗಳಿಸಿತು. ಆದರೆ ಈ ಗುರಿ ಬೆನ್ನಟ್ಟಿದ ಡೆಲ್ಲಿ 166ಕ್ಕೆ ಆಲೌಟ್ ಆಯಿತು.

For latest Cricket News, Live Score, IPL stay connected with HT Kannada

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ