logo
ಕನ್ನಡ ಸುದ್ದಿ  /  ಕ್ರಿಕೆಟ್  /  ಆರ್​​ಸಿಬಿ ಎಂದಿಗೂ ಐಪಿಎಲ್ ಟ್ರೋಫಿ ಗೆಲ್ಲಲ್ಲ; ನೀರಸ ಪ್ರದರ್ಶನದ ಬಳಿಕ ಸಿಎಸ್​​ಕೆ ಮಾಜಿ ಆಟಗಾರ ಅಪಶಕುನ

ಆರ್​​ಸಿಬಿ ಎಂದಿಗೂ ಐಪಿಎಲ್ ಟ್ರೋಫಿ ಗೆಲ್ಲಲ್ಲ; ನೀರಸ ಪ್ರದರ್ಶನದ ಬಳಿಕ ಸಿಎಸ್​​ಕೆ ಮಾಜಿ ಆಟಗಾರ ಅಪಶಕುನ

Prasanna Kumar P N HT Kannada

Apr 03, 2024 06:08 PM IST

google News

ಆರ್​​ಸಿಬಿ ನೀರಸ ಪ್ರದರ್ಶನದ ಬಳಿಕ ಸಿಎಸ್​​ಕೆ ಮಾಜಿ ಆಟಗಾರ ಅಂಬಾಟಿ ರಾಯುಡು ಟೀಕೆ

    •  Ambati Rayudu : ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಬ್ಯಾಟಿಂಗ್ ವಿಭಾಗವನ್ನು ಟೀಕಿಸಿರುವ ಅಂಬಾಟಿ ರಾಯುಡು, 16 ವರ್ಷಗಳಿಂದ ಇದೇ ಕಥೆಯಾಗಿದೆ ಎಂದಿದ್ದಾರೆ. ಬ್ಯಾಟಿಂಗ್ ಕ್ರಮಾಂಕ ಬದಲಿಸಲಿದ್ದರೆ ಮುಂದೆಯೂ ಗೆಲ್ಲಲ್ಲ ಎಂದು ಹೇಳಿದ್ದಾರೆ.
ಆರ್​​ಸಿಬಿ ನೀರಸ ಪ್ರದರ್ಶನದ ಬಳಿಕ ಸಿಎಸ್​​ಕೆ ಮಾಜಿ ಆಟಗಾರ ಅಂಬಾಟಿ ರಾಯುಡು ಟೀಕೆ
ಆರ್​​ಸಿಬಿ ನೀರಸ ಪ್ರದರ್ಶನದ ಬಳಿಕ ಸಿಎಸ್​​ಕೆ ಮಾಜಿ ಆಟಗಾರ ಅಂಬಾಟಿ ರಾಯುಡು ಟೀಕೆ

ರಾಯಲ್ ಚಾಲೆಂಜರ್ಸ್ ಬೆಂಗಳೂರು (Royal Challengers Bengaluru) ಮಹಿಳಾ ತಂಡ ಡಬ್ಲ್ಯುಪಿಎಲ್ ಟ್ರೋಫಿ (WPL 2024) ಗೆದ್ದ ನಂತರ ಅದೇ ಆತ್ಮವಿಶ್ವಾಸದೊಂದಿಗೆ ಐಪಿಎಲ್​ ಪ್ರವೇಶಿಸಿದ ಪುರುಷರ ತಂಡ, ಈಗ ಗೆಲ್ಲಲು ಪರದಾಟ ನಡೆಸುತ್ತಿದೆ. ಆಡಿರುವ 4 ಪಂದ್ಯಗಳಲ್ಲಿ ಮೂರರಲ್ಲಿ ಸೋತು ಅಂಕಪಟ್ಟಿಯಲ್ಲಿ 9ನೇ ಸ್ಥಾನದಲ್ಲಿರುವ ತಂಡದ ಕಳಪೆ ಪ್ರದರ್ಶನವನ್ನು ಚೆನ್ನೈ ಸೂಪರ್ ಕಿಂಗ್ಸ್ (Chennai Super Kings) ತಂಡದ ಮಾಜಿ ಆಟಗಾರ ಅಂಬಾಟಿ ರಾಯುಡು (Ambati Rayudu) ಟೀಕಿಸಿದ್ದಾರೆ. 'ಆರ್​​ಸಿಬಿ ಎಂದೂ ಐಪಿಎಲ್ ಪ್ರಶಸ್ತಿ ಗೆಲ್ಲಲ್ಲ' ಎಂದು ಹೇಳಿದ್ದಾರೆ.

ಆರ್​​​ಸಿಬಿಯಂತಹ ತಂಡವು ಟ್ರೋಫಿ ಗೆಲ್ಲಲು ಸಾಧ್ಯವಿಲ್ಲ ಎಂದು ಟೀಕಿಸಲು ರಾಯುಡು ಬಲವಾದ ಕಾರಣ ನೀಡಿದ್ದಾರೆ. ಆ ತಂಡದಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್​​​ನ ಎಲ್ಲಾ ಅಗ್ರ ಆಟಗಾರರು ಅಗ್ರಸ್ಥಾನದಲ್ಲಿ ಬ್ಯಾಟಿಂಗ್ ಮಾಡಿ ವಿಫಲರಾಗುತ್ತಿದ್ದಾರೆ. ಇದರೊಂದಿಗೆ ಕೆಳ ಮಧ್ಯಮ ಕ್ರಮಾಂಕದಲ್ಲಿ ಬರುವ ಅನುಜ್ ರಾವತ್, ದಿನೇಶ್ ಕಾರ್ತಿಕ್ ಮತ್ತು ಮಹಿಪಾಲ್ ಲೊಮ್ರೋರ್ ಅವರಂತಹವರ ಮೇಲೆ ಹೊರೆ ಬೀಳುತ್ತದೆ. ಹೀಗಾದರೆ ಟ್ರೋಫಿ ಗೆಲ್ಲುವುದು ಹೇಗೆ ಎಂದು ರಾಯುಡು ಪ್ರಶ್ನಿಸಿದ್ದಾರೆ.

16 ವರ್ಷಗಳಿಂದ ಇದೇ ನಡೆಯುತ್ತಿದೆ ಎಂದ ರಾಯುಡು

ಆರ್​​ಸಿಬಿ ತಂಡವನ್ನು ಒಮ್ಮೆ ಗಮನಿಸಿ ನೋಡಿ. ಒತ್ತಡ ಹೆಚ್ಚಾದಾಗ, ಆ ಒತ್ತಡವನ್ನು ನಿಭಾಯಿಸಬಲ್ಲ ಆಟಗಾರರೇ ಇಲ್ಲ. ದಿನೇಶ್ ಕಾರ್ತಿಕ್ ಮತ್ತು ಭಾರತದ ಯುವ ಬ್ಯಾಟ್ಸ್‌ಮನ್‌ಗಳು ಮಾತ್ರ ಕೊನೆಯಲ್ಲಿ ಆಡುತ್ತಿದ್ದಾರೆ. ತಂಡದ ದೊಡ್ಡ ಆಟಗಾರರು, ಒತ್ತಡ ನಿಭಾಯಿಸಬಲ್ಲ ಅಂತಾರಾಷ್ಟ್ರೀಯ ಕ್ರಿಕೆಟ್ ಆಟಗಾರರು ಎಲ್ಲಿದ್ದಾರೆ? ಅವರೆಲ್ಲರೂ ಔಟಾಗಿ ಡ್ರೆಸ್ಸಿಂಗ್ ರೂಮ್‌ನಲ್ಲಿ ಕುಳಿತಿರುತ್ತಾರೆ. ಕಳೆದ 16 ವರ್ಷಗಳಿಂದ ಇದೇ ನಡೆಯುತ್ತಿದೆ ಎಂದು ರಾಯುಡು ಹೇಳಿದ್ದಾರೆ.

‘ಹೀಗಾದರೆ ಮುಂದೆಯೂ ಗೆಲ್ಲಲ್ಲ’

ಈ ಹಿಂದೆ ಗೇಲ್, ಕೊಹ್ಲಿ, ಡಿವಿಲಿಯರ್ಸ್ ಇದ್ದಾಗಲೂ ಸಹ ಬ್ಯಾಟಿಂಗ್ ಕ್ರಮಾಂಕದಲ್ಲಿ ಅವರು ಅಗ್ರಸ್ಥಾನದಲ್ಲೇ ಬರುತ್ತಿದ್ದನ್ನು ಪ್ರಸ್ತಾಪಿಸಿದ ರಾಯುಡು, ಆರ್‌ಸಿಬಿ ಕಥೆ ಯಾವಾಗಲೂ ಒಂದೇ ಆಗಿರುತ್ತದೆ. ಒತ್ತಡದಲ್ಲಿ ಅವರ ತಂಡದಲ್ಲಿ ಒಬ್ಬ ದೊಡ್ಡ ಆಟಗಾರ ಕಾಣಿಸಲ್ಲ. ಎಲ್ಲ ದೊಡ್ಡ ಆಟಗಾರರು ಅಗ್ರಸ್ಥಾನದಲ್ಲಿ ಕಾಣಿಸಿಕೊಂಡರೆ, ಯುವ ಆಟಗಾರರು ಕೆಳ ಕ್ರಮಾಂಕದಲ್ಲಿ ಬರುತ್ತಿದ್ದಾರೆ. ಇದೇ ಕಾರಣಕ್ಕೆ ಐಪಿಎಲ್‌ ಗೆಲ್ಲಲು ಹಲವು ವರ್ಷಗಳಿಂದ ಸಾಧ್ಯವಾಗುತ್ತಿಲ್ಲ. ಈ ವಿಧಾನ ಬದಲಿಸಿದ್ದರೆ, ಮುಂದೆಯೂ ಗೆಲ್ಲುವುದಿಲ್ಲ ಎಂದಿದ್ದಾರೆ.

ಆರ್​​ಸಿಬಿ ಮಹಿಳಾ ತಂಡವು ಈ ವರ್ಷ ಡಬ್ಲ್ಯುಪಿಎಲ್​ ಗೆದ್ದ ಕಾರಣ ಈ ಬಾರಿ, ಪುರುಷರ ತಂಡವು ಅದ್ಭುತ ಸೃಷ್ಟಿಸುತ್ತದೆ ಎಂಬ ಭರವಸೆ ಇತ್ತು. ಆದರೆ, ಮೊದಲ ನಾಲ್ಕು ಪಂದ್ಯಗಳಲ್ಲೇ ಭರವಸೆ ಕಳೆದುಕೊಂಡಿದೆ. ಆರ್‌ಸಿಬಿ ವಿಶೇಷವಾಗಿ ತನ್ನ ತವರು ಮೈದಾನದ ಚಿನ್ನಸ್ವಾಮಿಯಲ್ಲೇ ಅತ್ಯಂತ ಕೆಟ್ಟ ದಾಖಲೆ ಬರೆದಿದೆ. ಈ ಕ್ರೀಡಾಂಗಣದಲ್ಲಿ ಆರ್​​ಸಿಬಿ ಗೆಲುವಿನ ಶೇಕಡವಾರು 46.51 ಮಾತ್ರ. ಚೆನ್ನೈ ಸೂಪರ್ ಕಿಂಗ್ಸ್ ತಂಡದ ದಾಖಲೆ ಗಮನಿಸಿದರೆ, ಅವರದೇ ನೆಲವಾದ ಚೆಪಾಕ್‌ನಲ್ಲಿ ಶೇಕಡಾ 70.96ರಷ್ಟು ಜಯದ ಪ್ರಮಾಣ ಹೊಂದಿದೆ.

ಮುಂಬೈ ಇಂಡಿಯನ್ಸ್ ವಾಂಖೆಡೆಯಲ್ಲಿ ಶೇಕಡಾ 62.33ರಷ್ಟು, ಸನ್​ರೈಸರ್ಸ್ ಹೈದರಾಬಾದ್ ಶೇಕಡಾ 62 ರಷ್ಟು, ನೈಟ್ ರೈಡರ್ಸ್ ಈಡನ್ ಗಾರ್ಡನ್ಸ್‌ನಲ್ಲಿ ಶೇಕಡಾ 57.31 ರಷ್ಟು ಗೆದ್ದಿದೆ. ಆರ್‌ಸಿಬಿ ಪರ ಕೊಹ್ಲಿ ಮಾತ್ರ ಈ ಋತುವಿನಲ್ಲಿ ಅಗ್ರ ಕ್ರಮಾಂಕದಲ್ಲಿ ಸ್ಥಿರವಾಗಿ ಆಡುತ್ತಿದ್ದಾರೆ. ಅವರು ಈಗಾಗಲೇ ಎರಡು ಅರ್ಧಶತಕ ಗಳಿಸಿದ್ದಾರೆ. ಆದರೆ ಫಾಫ್ ಡು ಪ್ಲೆಸಿಸ್, ಗ್ಲೆನ್ ಮ್ಯಾಕ್ಸ್‌ವೆಲ್, ಕ್ಯಾಮರೂನ್ ಗ್ರೀನ್, ರಜತ್ ಪಾಟಿದಾರ್ ಸೇರಿ ಪ್ರಮುಖ ಆಟಗಾರರು ಸತತ ವೈಫಲ್ಯ ವೈಫಲ್ಯ ಅನುಭವಿಸುತ್ತಿದ್ದು, ಆರ್​​​ಸಿಬಿಗೆ ಪೆಟ್ಟು ನೀಡುತ್ತಿದ್ದಾರೆ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ