ಟಿಕೆಟ್ ಪ್ರೈಸ್ಗೂ ನೀವು ಆಡೋ ಆಟಕ್ಕೂ ಸ್ವಲ್ಪನೂ ನ್ಯಾಯ ಇಲ್ವಲ್ರೋ; ಬಾಯ್ಕಾಟ್ ಆರ್ಸಿಬಿ ಎಂದು ಅಭಿಮಾನಿಗಳು ಬೇಸರ, ಮೀಮ್ಸ್ ಇಲ್ಲಿವೆ
Royal Challengers Bengaluru: ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧ ಸೋತ ಬಳಿಕ ಅಭಿಮಾನಿಗಳು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವನ್ನು ಟ್ರೋಲ್ ಮಾಡುತ್ತಿದ್ದಾರೆ.
17ನೇ ಆವೃತ್ತಿಯ ಐಪಿಎಲ್ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (Royal Challengers Bengaluru), ಮತ್ತೊಂದು ಸೋಲು ಕಂಡಿದೆ. ತವರಿನ ಮೈದಾನ ಚಿನ್ನಸ್ವಾಮಿಯಲ್ಲಿ ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧ 28 ರನ್ಗಳಿಂದ ಶರಣಾಗಿದೆ. 4 ಪಂದ್ಯಗಳಲ್ಲಿ 3ರಲ್ಲಿ ಸೋಲನುಭವಿಸಿದ್ದು, ಅಂಕಪಟ್ಟಿಯಲ್ಲಿ 9ನೇ ಸ್ಥಾನದಲ್ಲಿದೆ. ಆದರೀಗ ಕಳಪೆ ಬ್ಯಾಟಿಂಗ್-ಬೌಲಿಂಗ್ ಪ್ರದರ್ಶನದ ಮೂಲಕ ನಿರಾಸೆ ಮೂಡಿಸುತ್ತಿರುವ ಆರ್ಸಿಬಿ ವಿರುದ್ಧ ಅಭಿಮಾನಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಆರ್ಸಿಬಿ ವಿರುದ್ಧ ಅಭಿಮಾನಿಗಳು ತೀವ್ರ ಆಕ್ರೋಶಗೊಂಡಿದ್ದಾರೆ. ಅಭಿಮಾನಿಗಳ ಭಾವನೆಗಳನ್ನೇ ಬಂಡವಾಳ ಮಾಡಿಕೊಳ್ಳುತ್ತಿರುವ ಆರ್ಸಿಬಿ ತಂಡವನ್ನು 'ಬಾಯ್ಕಾಟ್' ಮಾಡುವುದೇ ಉತ್ತಮ ಎಂದು ಅಭಿಯಾನ ಆರಂಭಿಸಿದ್ದಾರೆ. ಪಂದ್ಯದಿಂದ ಪಂದ್ಯಕ್ಕೆ ತೀವ್ರ ಕಳಪೆ ಪ್ರದರ್ಶನ ನೀಡುತ್ತಿದ್ದು, ಅಭಿಮಾನಿಗಳ ಮನ ನೋಯಿಸುತ್ತಿದ್ದಾರೆ. ಆರ್ಸಿಬಿ ಪಂದ್ಯಗಳನ್ನು ಯಾರೂ ನೋಡಬೇಡಿ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಮನವಿ ಮಾಡುತ್ತಿದ್ದಾರೆ. ಸಿಕ್ಕಾಪಟ್ಟೆ ಟ್ರೋಲ್ ಕೂಡ ಮಾಡಲಾಗುತ್ತಿದೆ.
ಏಪ್ರಿಲ್ 2ರಂದು ಎಂ ಚಿನ್ನಸ್ವಾಮಿ ಮೈದಾನದಲ್ಲಿ ನಡೆದ ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧದ ಪಂದ್ಯದಲ್ಲಿ ಆರ್ಸಿಬಿ 28 ರನ್ಗಳಿಂದ ಮುಗ್ಗರಿಸಿತು. ಮೊದಲು ಬ್ಯಾಟಿಂಗ್ ನಡೆಸಿದ ಎಲ್ಎಸ್ಜಿ, 20 ಓವರ್ಗಳಲ್ಲಿ 5 ವಿಕೆಟ್ ನಷ್ಟಕ್ಕೆ 181 ರನ್ ಗಳಿಸಿತು. ಆದರೆ ಗುರಿ ಬೆನ್ನಟ್ಟಿದ 19.4 ಓವರ್ಗಳಲ್ಲಿ 153 ರನ್ ಗಳಿಸಿ ಆಲೌಟ್ ಆಯಿತು. ಫಾಫ್ ಡು ಪ್ಲೆಸಿಸ್, ಗ್ಲೆನ್ ಮ್ಯಾಕ್ಸ್ವೆಲ್, ರಜತ್ ಪಾಟೀದಾರ್, ಕ್ಯಾಮರೂನ್ ಗ್ರೀನ್, ಅನುಜ್ ರಾವತ್ ಪ್ರತಿಪಂದ್ಯದಲ್ಲೂ ವೈಫಲ್ಯ ಅನುಭವಿಸುತ್ತಿದ್ದಾರೆ.
ಬಾಯ್ಕಾಟ್ ಆರ್ಸಿಬಿ ಮ್ಯಾಚಸ್ ಎಂದ ಫ್ಯಾನ್ಸ್
ಆರ್ಸಿಬಿ ಆಟಗಾರರ ಆಟದ ವಿರುದ್ಧ ಕೋಪಗೊಂಡಿರುವ ಫ್ಯಾನ್ಸ್, ಮುಂದಿನ ಪಂದ್ಯಕ್ಕೆ ಯಾರೂ ಟಿಕೆಟ್ ಖರೀದಿ ಮಾಡಬೇಡಿ. ಖಾಲಿ ಸ್ಟೇಡಿಯಂನಲ್ಲಿ ಪಂದ್ಯಗಳು ನಡೆಯಬೇಕು. ಸ್ಟೇಡಿಯಂ ಒಂದು ಮ್ಯಾಚ್ಗೆ ಸ್ಟೇಡಿಯಂ ಖಾಲಿ ಖಾಲಿ ಹೊಡಿಬೇಕು. ಇವರು ಫ್ಯಾನ್ಸ್ ಎಮೋಷನ್ ಜೊತೆ ಆಡವಾಡ್ತಿದ್ದಾರೆ. ಅಭಿಮಾನಿಗಳ ಭಾವನೆಗಳನ್ನೇ ಬಂಡವಾಳ ಮಾಡಿಕೊಳ್ಳುತ್ತಿದ್ದಾರೆ. 'ಬಾಯ್ಕಾಟ್ ಆರ್ಸಿಬಿ ಮ್ಯಾಚಸ್' ಎಂಬ ಅಭಿಯಾನ ಆರಂಭಿಸಿದ್ದಾರೆ.
'ಟಿಕೆಟ್ ದುಡ್ಡಿಗೂ ಆಟಕ್ಕೂ ಸಂಬಂಧ ಇಲ್ಲ'
ಟಿಕೆಟ್ ಬೆಲೆಗೂ ನೀವು ಆಡುವ ಆಟಕ್ಕೂ ಸ್ವಲ್ಪ ನ್ಯಾಯ ಇಲ್ವಲ್ರೋ ಎಂದು ಅಭಿಮಾನಿಗಳು ಬೇಸರಗೊಂಡಿದ್ದಾರೆ. ಬೆಳಿಗ್ಗೆಯಿಂದ ಆರ್ಸಿಬಿ ಮ್ಯಾಚ್ ಇರೋ ಖುಷಿಲಿ ಕಾಯ್ತಾ ಇರ್ತೀವಿ. ಆದರೆ, ಎಷ್ಟು ಅಂತ ನೋವು ಕೊಡುತ್ತಿರೋ? ಈ ಟೀಮ್ ಅಲ್ಲಿ ಟ್ರೋಫಿ ಕನಸು ಮಾತ್ರ ಎಂದು ನಮಸ್ಕಾರ ಎಮೋಜಿ ಹಾಕುವ ಮೂಲಕ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಆರ್ಸಿಬಿ ಟಿಕೆಟ್ ಬೆಲೆ 4200 ರಿಂದ ಆರಂಭವಾಗಿ 50 ಸಾವಿರದವರೆಗೂ ಇದೆ. ಬೇರೆ ತಂಡಗಳ ಟಿಕೆಟ್ ಪ್ರೈಸ್ 500ರಿಂದ ಆರಂಭವಾಗಲಿದೆ.
ಎಬಿ ಡಿವಿಲಿಯರ್ಸ್ ನೆನೆದ ಫ್ಯಾನ್ಸ್
ಸತತ ಪಂದ್ಯಗಳನ್ನು ಆರ್ಸಿಬಿ ಸೋಲು ಕಂಡ ಬೆನ್ನಲ್ಲೇ ಎಬಿ ಡಿವಿಲಿಯರ್ಸ್ ಅವರನ್ನು ಅಭಿಮಾನಿಗಳನ್ನು ನೆನೆದಿದ್ದಾರೆ. ನಮ್ಮ ಎಬಿಡಿ ಇದ್ದಿದ್ದರೆ, ಯಾವ ಪಂದ್ಯಗಳನ್ನೂ ಆರ್ಸಿಬಿ ಸೋಲುತ್ತಿರಲಿಲ್ಲ ಎಂದು ಹೇಳುತ್ತಿದ್ದಾರೆ. ಪಂದ್ಯ ಸೋತ ಬೆನ್ನಲ್ಲೇ ಇವಾಗ ಯಾರ್ ತಪ್ಪು ಅಂತ ಅಂದುಕೊಳ್ಳೋಣ.? ಆರ್ಸಿಬಿ ಮ್ಯಾನೇಜ್ಮೆಂಟ್ದಾ? ಆರ್ಸಿಬಿ ಪ್ಲೇಯರ್ಸ್ದಾ? ಇಲ್ಲಾ ನಮ್ಮ ಹಣೆಬರಹನೆ ಸರಿ ಇಲ್ಲಾ ಅಂತಾ ಸುಮನ್ನಾಗೋದಾ ಎಂದು ಫ್ಯಾನ್ಸ್ ಬೇಸರ ವ್ಯಕ್ತಪಡಿಸಿದ್ದಾರೆ.
ಐಪಿಎಲ್ನ ಮೊದಲ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಸೋತ ಆರ್ಸಿಬಿ, ತನ್ನ ಎರಡನೇ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ವಿರುದ್ಧ ಗೆದ್ದಿತು. ಆದರೆ ಮೂರು ಮತ್ತು ನಾಲ್ಕನೇ ಪಂದ್ಯದಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ಮತ್ತು ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧ ಸೋಲನುಭವಿಸಿತು. ಇದೀಗ ತನ್ನ ಐದನೇ ಪಂದ್ಯಕ್ಕೆ ಆರ್ಸಿಬಿ ಸಜ್ಜಾಗುತ್ತಿದೆ.