logo
ಕನ್ನಡ ಸುದ್ದಿ  /  ಕ್ರಿಕೆಟ್  /  Explainer: ಗಬ್ಬಾ ಟೆಸ್ಟ್ ಮಳೆಯಿಂದ ರದ್ದಾದರೆ ಡಬ್ಲ್ಯುಟಿಸಿ ಫೈನಲ್ ಲೆಕ್ಕಾಚಾರವೇನು; ಭಾರತಕ್ಕೆ ಫೈನಲ್‌ ಪ್ರವೇಶ ಸಾಧ್ಯವೇ?

Explainer: ಗಬ್ಬಾ ಟೆಸ್ಟ್ ಮಳೆಯಿಂದ ರದ್ದಾದರೆ ಡಬ್ಲ್ಯುಟಿಸಿ ಫೈನಲ್ ಲೆಕ್ಕಾಚಾರವೇನು; ಭಾರತಕ್ಕೆ ಫೈನಲ್‌ ಪ್ರವೇಶ ಸಾಧ್ಯವೇ?

Jayaraj HT Kannada

Dec 15, 2024 08:08 AM IST

google News

ಗಬ್ಬಾ ಟೆಸ್ಟ್ ಮಳೆಯಿಂದ ರದ್ದಾದರೆ ಭಾರತ ತಂಡಕ್ಕೆ ಡಬ್ಲ್ಯುಟಿಸಿ ಫೈನಲ್ ಪ್ರವೇಶ ಸಾಧ್ಯವೇ?

    • WTC final: ಡಬ್ಲ್ಯುಟಿಸಿ ಅಂಕಗಳ ಹಂಚಿಕೆ ನಿಯಮದ ಪ್ರಕಾರ, ಒಂದು ತಂಡವು ಗೆಲುವು ಸಾಧಿಸಿದರೆ 12 ಅಂಕಗಳನ್ನು ನೀಡಲಾಗುತ್ತದೆ. ಡ್ರಾ ಆದರೆ 4 ಅಂಕಗಳನ್ನು ಮಾತ್ರ ನೀಡಲಾಗುತ್ತದೆ. ಪಂದ್ಯ ಟೈ ಆದರೆ ಎರಡೂ ತಂಡಗಳಿಗೆ 6 ಅಂಕಗಳನ್ನು ನೀಡಲಾಗುತ್ತದೆ. ಒಂದು ವೇಳೆ ಗಬ್ಬಾ ಟೆಸ್ಟ್ ಮಳೆಯಿಂದಾಗಿ ಪಂದ್ಯ ರದ್ದಾದರೆ ಅದನ್ನು ಡ್ರಾ ಎಂಬಂತೆ ಪರಿಗಣಿಸಲಾಗುತ್ತದೆ.
ಗಬ್ಬಾ ಟೆಸ್ಟ್ ಮಳೆಯಿಂದ ರದ್ದಾದರೆ ಭಾರತ ತಂಡಕ್ಕೆ ಡಬ್ಲ್ಯುಟಿಸಿ ಫೈನಲ್ ಪ್ರವೇಶ ಸಾಧ್ಯವೇ?
ಗಬ್ಬಾ ಟೆಸ್ಟ್ ಮಳೆಯಿಂದ ರದ್ದಾದರೆ ಭಾರತ ತಂಡಕ್ಕೆ ಡಬ್ಲ್ಯುಟಿಸಿ ಫೈನಲ್ ಪ್ರವೇಶ ಸಾಧ್ಯವೇ?

ಬಾರ್ಡರ್-ಗವಾಸ್ಕರ್ ಟ್ರೋಫಿ ಟೆಸ್ಟ್ ಸರಣಿಯ ನಡುವೆ, ಡಬ್ಲ್ಯುಟಿಸಿ ಫೈನಲ್ ಲೆಕ್ಕಾಚಾರ ಗರಿಗೆದರಿವೆ. ಬ್ರಿಸ್ಬೇನ್‌ನ ಗಬ್ಬಾದಲ್ಲಿ ಭಾರತ ಮತ್ತು ಆಸ್ಟ್ರೇಲಿಯಾ ತಂಡಗಳ ನಡುವಿನ ಮೂರನೇ ಟೆಸ್ಟ್ ಪಂದ್ಯ ನಡೆಯುತ್ತಿದ್ದು, ಡಿಸೆಂಬರ್‌ 14ರ ಶನಿವಾರ ಆರಂಭವಾದ ಮೊದಲ ದಿನದಾಟಕ್ಕೆ ಮಳೆ ಕಾಟ ಕೊಟ್ಟಿತು. ಮೊದಲ ದಿನ ಕೇವಲ 13.2 ಓವರ್‌ಗಳ ಆಟ ಮಾತ್ರವೇ ನಡೆದಿದ್ದು, ಇದೀಗ ಎರಡನೇ ದಿನದಾಟವು ಆರಂಭವಾಗಿದ್ದು, ಬೆಳಗ್ಗೆ 7:30ರವರೆಗೂ ಮಳೆ ಬಂದಿಲ್ಲ. ಆದರೆ ಪಂದ್ಯದ ಮುಂದಿನ ದಿನಗಳಲ್ಲಿಯೂ ಮಳೆಯ ಆಗಮನವಾಗುವ ಮುನ್ಸೂಚನೆ ಇದೆ.

ಇಂದು (ಡಿಸೆಂಬರ್ 15) ಮತ್ತು ನಾಳೆ (ಡಿ.16)ಯ ಹವಾಮಾನ ಮುನ್ಸೂಚನೆಯ ಪ್ರಕಾರ, ಬ್ರಿಸ್ಬೇನ್‌ಲ್ಲಿ ಮಳೆಯಾಗುವ ಮುನ್ಸೂಚನೆ ಇದೆ. ಆಕ್ಯುವೆದರ್ ಪ್ರಕಾರ,‌ ಪಂದ್ಯದ ಎರಡನೇ ದಿನದಾಟಕ್ಕೆ 46 ಪ್ರತಿಶತ ಮಳೆಯ ಸಾಧ್ಯತೆ ಇದೆ. ಉಳಿದಂತೆ ಮೂರು, ನಾಲ್ಕನೇ ಮತ್ತು ಐದನೇ ದಿನಗಳಲ್ಲಿ ಕ್ರಮವಾಗಿ 67, 68 ಮತ್ತು 55 ಪ್ರತಿಶತ ಮಳೆಯಾಗುವ ಸಂಭವವಿದೆ.

ಭಾರತಕ್ಕೆ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್‌ನಲ್ಲಿ ಸ್ಥಾನ ಗಿಟ್ಟಿಸಿಕೊಳ್ಳುವ ಚಿಂತೆ ಶುರುವಾಗಿದೆ. ಒಂದು ವೇಳೆ ಪಂದ್ಯವು ಮಳೆಯಿಂದಾಗಿ ರದ್ದಾದರೆ, ಲಾರ್ಡ್ಸ್‌ನಲ್ಲಿ ನಡೆಯಲಿರು‌ವ ಡಬ್ಲ್ಯುಟಿಸಿ ಫೈನಲ್ ಪಂದ್ಯಕ್ಕೆ ಅರ್ಹತೆ ಪಡೆಯುವ ಭಾರತ ಅವಕಾಶಗಳು ದುರ್ಬಲಗೊಳ್ಳಲಿವೆ. ಭಾರತ ಮಾತ್ರವಲ್ಲದೆ ಆಸ್ಟ್ರೇಲಿಯಾ ತಂಡಕ್ಕೂ ನಷ್ಟವಾಗಲಿದೆ.

ಡಬ್ಲ್ಯುಟಿಸಿ ಅಂಕಗಳ ಹಂಚಿಕೆ ನಿಯಮದ ಪ್ರಕಾರ, ಒಂದು ತಂಡವು ಗೆಲುವು ಸಾಧಿಸಿದರೆ 12 ಅಂಕಗಳನ್ನು ಪಡೆಯುತ್ತದೆ. ಡ್ರಾ ಆದರೆ ನಾಲ್ಕು ಅಂಕಗಳನ್ನು ಮಾತ್ರ ನೀಡಲಾಗುತ್ತದೆ. ಒಂದು ವೇಳೆ ಪಂದ್ಯ ಟೈ ಆದರೆ ಎರಡೂ ತಂಡಗಳಿಗೆ ಆರು ಅಂಕಗಳನ್ನು ನೀಡಲಾಗುತ್ತದೆ. ಮಳೆಯಿಂದಾಗಿ ಪಂದ್ಯ ರದ್ದಾದರೆ ಅಥವಾ ಫಲಿತಾಂಶ ಬಾರದಿದ್ದರೆ ಅದನ್ನು ಡ್ರಾ ಎಂಬಂತೆ ಪರಿಗಣಿಸಲಾಗುತ್ತದೆ.

ಭಾರತ-ಆಸ್ಟ್ರೇಲಿಯಾ 3ನೇ ಟೆಸ್ಟ್ ಪಂದ್ಯ ರದ್ದಾದರೆ ಏನಾಗುತ್ತದೆ?

ಒಂದು ವೇಳೆ ಪಂದ್ಯ ರದ್ದಾದರೆ ಭಾರತ ಮತ್ತು ಆಸ್ಟ್ರೇಲಿಯಾ ತಲಾ ನಾಲ್ಕು ಅಂಕಗಳನ್ನು ಪಡೆಯಲಿವೆ. ಆಗ ಭಾರತದ ಅಂಕ 114ಕ್ಕೆ ಏರಿದರೆ, ಆಸ್ಟ್ರೇಲಿಯಾ 106 ಅಂಕ ಗಳಿಸಲಿದೆ. ಅಂಕಗಳು ಏರಿಕೆಯಾದರೂ, ಪಿಸಿಟಿ ಅಥವಾ ಶೇಕಡಾವಾರು ಪ್ರಮಾಣ 55.88ಕ್ಕೆ ಇಳಿಯುತ್ತದೆ. ಅತ್ತ ಆಸ್ಟ್ರೇಲಿಯಾದ ಪಿಸಿಟಿ 58.89ಕ್ಕೆ ಇಳಿಕೆಯಾಗುತ್ತದೆ. ಆದರೂ ಎರಡೂ ತಂಡಗಳು ಈಗ ಇರುವಂತೆಯೇ ಮೂರು ಮತ್ತು ಎರಡನೇ ಸ್ಥಾನಗಳನ್ನು ಉಳಿಸಿಕೊಳ್ಳಲಿವೆ.

ಭಾರತದ ಮುಂದಿರುವ ಅವಕಾಶಗಳು ಯಾವುವು?

ಸತತ ಮೂರನೇ ಬಾರಿ ಡಬ್ಲ್ಯುಟಿಸಿ ಫೈನಲ್‌ಗೆ ಅರ್ಹತೆ ಪಡೆಯಲು, ಭಾರತಕ್ಕೆ ಉಳಿದ ಮೂರೂ ಪಂದ್ಯಗಳಲ್ಲಿ ಕನಿಷ್ಠ ಎರಡು ಪಂದ್ಯಗಳಲ್ಲಿ ಗೆಲ್ಲಲೇಬೇಕಾದ ಒತ್ತಡವಿದೆ. ಅಂದರೆ ಕನಿಷ್ಠ ಎರಡು ಗೆಲುವುಗಳು ಮತ್ತು ಒಂದು ಪಂದ್ಯ ಡ್ರಾ ಆಗುವ ಅಗತ್ಯವಿದೆ. ಆಗ ಭಾರತದ ಪಿಸಿಟಿ 60.53 ತಲುಪುತ್ತದೆ. ಆಗ ರೋಹಿತ್ ಶರ್ಮಾ ಪಡೆ ಅಂಕಪಟ್ಟಿಯಲ್ಲಿ ಎರಡನೇ ಸ್ಥಾನವನ್ನು ಖಚಿತಪಡಿಸುತ್ತದೆ. ಈಗಾಗಲೇ ದಕ್ಷಿಣ ಆಫ್ರಿಕಾ ಅಗ್ರಸ್ಥಾನದಲ್ಲಿದೆ. ಈಗ ಭಾರತವು 3-2 ಅಂತರದಲ್ಲಿ ಸರಣಿ ಗೆದ್ದರೆ 58.77ರ ಪಿಸಿಟಿಯೊಂದಿಗೆ ಅರ್ಹತೆ ಪಡೆಯಲಿದೆ. ಆ ನಂತರ ಆಸ್ಟ್ರೇಲಿಯಾ ತಂಡವು ಶ್ರೀಲಂಕಾ ವಿರುದ್ಧ ಸರಣಿ ಆಡಲಿದ್ದು, 1-0 ಅಂತರದಿಂದ ಮಣಿಸಿದರೂ ಪ್ಯಾಟ್ ಕಮಿನ್ಸ್ ಪಡೆ ಮೂರನೇ ಸ್ಥಾನ ಪಡೆಯಲಿದೆ.

ಒಂದು ವೇಳೆ ಭಾರತವು ಬಿಜಿಟಿ ಸರಣಿಯಲ್ಲಿ 2-3 ಅಂತರದಲ್ಲಿ ಸೋತರೆ, ಟೀಮ್‌ ಇಂಡಿಯಾದ ಎಲ್ಲಾ ನಿರೀಕ್ಷೆಗಳು ಹುಸಿಯಾಗಲಿದೆ. ಆಸ್ಟ್ರೇಲಿಯಾ, ಶ್ರೀಲಂಕಾ ಮತ್ತು ದಕ್ಷಿಣ ಆಫ್ರಿಕಾ ತಂಡಗಳು ಅಗ್ರ ಮೂರು ತಂಡಗಳಾಗಿ ಅಂಕಪಟ್ಟಿಯಲ್ಲಿ ಭದ್ರವಾಗಲಿವೆ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ