logo
ಕನ್ನಡ ಸುದ್ದಿ  /  ಮನರಂಜನೆ  /  Hina Khan: ಸ್ತನ ಕ್ಯಾನ್ಸರ್ ಚಿಕಿತ್ಸೆ ನಡುವೆ ವಿಗ್‌ ಧರಿಸಿ ಶೂಟಿಂಗ್‌ಗೆ ಮರಳಿದ ಹೀನಾ ಖಾನ್‌; ನಟಿಯ ಸ್ಪೂರ್ತಿದಾಯಕ ಮಾತುಗಳ ವಿಡಿಯೋ

Hina Khan: ಸ್ತನ ಕ್ಯಾನ್ಸರ್ ಚಿಕಿತ್ಸೆ ನಡುವೆ ವಿಗ್‌ ಧರಿಸಿ ಶೂಟಿಂಗ್‌ಗೆ ಮರಳಿದ ಹೀನಾ ಖಾನ್‌; ನಟಿಯ ಸ್ಪೂರ್ತಿದಾಯಕ ಮಾತುಗಳ ವಿಡಿಯೋ

Praveen Chandra B HT Kannada

Jul 15, 2024 05:33 PM IST

google News

Hina Khan: ಸ್ತನ ಕ್ಯಾನ್ಸರ್ ಚಿಕಿತ್ಸೆ ನಡುವೆ ವಿಗ್‌ ಧರಿಸಿ ಶೂಟಿಂಗ್‌ಗೆ ಮರಳಿದ ಹೀನಾ ಖಾನ್‌

  • Hina Khan: ಹಿಂದಿ ನಟಿ ಹಿನಾ ಖಾನ್‌ ಮೂರನೇ ಹಂತದ ಕ್ಯಾನ್ಸರ್‌ಗೆ ಚಿಕಿತ್ಸೆ ಪಡೆಯುತ್ತಿದ್ದಾರೆ. ಇದೀಗ ವಿಗ್‌ ಧರಿಸಿ ಮತ್ತೆ ಶೂಟಿಂಗ್‌ ಕೆಲಸಕ್ಕೆ ಆಗಮಿಸಿದ್ದಾರೆ. ಈ ಸಂದರ್ಭದಲ್ಲಿ ಪ್ರತಿದಿನ ಸಂತೋಷದಿಂದ ಇದ್ದು ಈ ರೋಗದಿಂದ ಬಳಲುವವರಿಗೆ ಸ್ಪೂರ್ತಿ ತುಂಬುವ ಮಾತುಗಳನ್ನಾಡಿದ್ದಾರೆ.

Hina Khan: ಸ್ತನ ಕ್ಯಾನ್ಸರ್ ಚಿಕಿತ್ಸೆ ನಡುವೆ ವಿಗ್‌ ಧರಿಸಿ ಶೂಟಿಂಗ್‌ಗೆ ಮರಳಿದ ಹೀನಾ ಖಾನ್‌
Hina Khan: ಸ್ತನ ಕ್ಯಾನ್ಸರ್ ಚಿಕಿತ್ಸೆ ನಡುವೆ ವಿಗ್‌ ಧರಿಸಿ ಶೂಟಿಂಗ್‌ಗೆ ಮರಳಿದ ಹೀನಾ ಖಾನ್‌

ಬೆಂಗಳೂರು:  ನಟಿ ಹಿನಾ ಖಾನ್ 3 ನೇ ಹಂತದ ಸ್ತನ ಕ್ಯಾನ್ಸರ್ ವಿರುದ್ಧ ಹೋರಾಡುತ್ತಿದ್ದಾರೆ. ಆದರೆ, ಈ ಕಾಯಿಲೆ ತಮ್ಮ ಉತ್ಸಾಹಕ್ಕೆ ಅಡ್ಡಿಯಾಗಲು ಬಿಡುವುದಿಲ್ಲ ಎಂದಿದ್ದಾರೆ. ಚಿಕಿತ್ಸೆ ಮುಂದುವರೆಯುತ್ತಿರುವ ನಡುವೆ ಅವರು ಕೆಲಸಕ್ಕೆ ಮರಳಿದ್ದಾರೆ. "ಈ ಕಾಯಿಲೆ ಬಂದಾಗಿದೆ. ಇದನ್ನು ಸಾಮಾನ್ಯಗೊಳಿಸುವ ಸಮಯ ಬಂದಿದೆ" ಎಂದು ಅವರು ಹೇಳಿದ್ದಾರೆ. ತಾನು ಮತ್ತೆ ಶೂಟಿಂಗ್‌ಗೆ ಮರಳುವ ವಿಡಿಯೋವನ್ನು ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ. ಈ ಸಂದರ್ಭದಲ್ಲಿ ತಾನು ವಿಗ್‌ ಧರಿಸಿರುವುದಾಗಿ ಹೇಳಿದ್ದಾರೆ. ಈ ವಿಡಿಯೋದಲ್ಲಿ ಇವರ ತಂಡವು ಆಕೆಯ ಆಪರೇಷನ್‌ನ ಗಾಯಗಳನ್ನು ಮರೆ ಮಾಚಲು ಪ್ರಯತ್ನಿಸುವುದನ್ನೂ ನೋಡಬಹುದು. ವಿಡಿಯೋದಲ್ಲಿ "ಶೋ ಮುಂದುವರೆಯಬೇಕು" ಎಂದು ಅವರು ಹೇಳಿದ್ದಾರೆ.

"ನನ್ನ ಸ್ತನ ಕ್ಯಾನ್ಸರ್‌ ರೋಗ ನಿರ್ಣಯದ ಬಳಿಕ ಇಂದು ಮತ್ತೆ ಮೊದಲ ಬಾರಿಗೆ ಕೆಲಸ ಆರಂಭಿಸಿದ್ದೇನೆ. ಭಾಷಣ ಮಾಡುವುದು ಸವಾಲಿನ ವಿಚಾರ. ವಿಶೇಷವಾಗಿ ಜೀವನದ ಅತಿದೊಡ್ಡ ಸವಾಲು ಎದುರಾಗುವ ಸಂದರ್ಭದಲ್ಲಿ ಮತ್ತೆ ಸಂತೋಷದಿಂದ ದಿನ ಆರಂಭಿಸುವುದು ಸವಾಲು. ಕೆಟ್ಟ ದಿನಗಳಲ್ಲಿ ನಿಮಗೆ ವಿರಾಮ ನೀಡಿ, ಪರವಾಗಿಲ್ಲ. ಅದರ ಅಗತ್ಯವೂ ಇರುತ್ತದೆ. ಆದರೆ, ಈ ಸಂದರ್ಭದಲ್ಲೂ ಜೀವನದಲ್ಲಿ ಸುಂದರವಾಗಿ ಬದುಕಲು ಮರೆಯಬೇಡಿ. ದಿನಗಳು ಎಷ್ಟೇ ಕಡಿಮೆ ಇದ್ದರೂ ಉಳಿದ ದಿನಗಳು ಇನ್ನೂ ಪ್ರಾಮುಖ್ಯತೆ ಹೊಂದಿವೆ. ಬದಲಾವಣೆಯನ್ನು ಸ್ವೀಕರಿಸಿ. ವ್ಯತ್ಯಾಸಗಳನ್ನು ಸ್ವೀಕರಿಸಿ. ಅದನ್ನು ಸಾಮಾನ್ಯಗೊಳಿಸಿ" ಎಂದು ಅವರು ವಿಡಿಯೋದ ಜತೆ ಟಿಪ್ಪಣಿ ಬರೆದಿದ್ದಾರೆ.

"ನಾನು ನನ್ನ ಒಳ್ಳೆಯ ದಿನಗಳನ್ನು ಎದುರು ನೋಡುತ್ತಿದ್ದೇನೆ. ನಾನು ಇಷ್ಟಪಡುವುದನ್ನು ಮಾಡುತ್ತೇನೆ. ಅದೇ ನನ್ನ ಕೆಲಸ. ನಾನು ನನ್ನ ಕೆಲಸವನ್ನು ಪ್ರೀತಿಸುವೆ. ನಾನು ಕೆಲಸ ಮಾಡುವಾಗ ನನ್ನ ಕನಸುಗಳ ಜತೆ ಬದುಕುತ್ತೇನೆ. ಅದೇ ನನಗೆ ದೊಡ್ಡ ಪ್ರೇರಣೆ. ನಾನು ಕೆಲಸ ಮಾಡುವುದನ್ನು ಮುಂದುವರೆಸಲು ಬಯಸುತ್ತೇನೆ. ಅನೇಕ ಜನರು ಚಿಕಿತ್ಸೆಯ ಸಮಯದಲ್ಲಿ ಯಾವುದೇ ಸಮಸ್ಯೆಗಳು ಇಲ್ಲದೆ ನಿಯಮಿತವಾಗಿ ಕೆಲಸಗಳನ್ನು ಮಾಡುತ್ತಾರೆ. ನಾನು ಕೂಡ ಭಿನ್ನವಾಗಿಲ್ಲ. ಇತ್ತೀಚೆಗೆ ನಾನು ಕೆಲವರನ್ನು ಭೇಟಿಯಾದೆ. ನನ್ನ ದೃಷ್ಟಿಕೋನ ಬದಲಾಯಿಸಲು ಇದು ನೆರವಾಯಿತು" ಎಂದು ನಟಿ ಹಿನಾ ಖಾನ್‌ ಹೇಳಿದ್ದಾರೆ.

"ನಾನು ಚಿಕಿತ್ಸೆ ಪಡೆಯುತ್ತಿದ್ದೇನೆ. ಇದರರ್ಥ ನಾನೂ ಯಾವಾಗಲೂ ಆಸ್ಪತ್ರೆಯಲ್ಲಿ ಇರುತ್ತೇನೆ ಎಂದಲ್ಲ. ಈ ರೋಗದ ವಿರುದ್ಧ ಹೋರಾಡುತ್ತಿರುವ ಎಲ್ಲಾ ಸುಂದರ ಜನರೇ ನೆನಪಿಡಿ, ಇದು ನಿಮ್ಮ ಕಥೆ, ನಿಮ್ಮ ಜೀವನ. ನಮಗೆ ಶಕ್ತಿ ಇದ್ದರೆ ಸಂತೋಷವನ್ನು ಉಂಟು ಮಾಡುವ ಕೆಲಸವನ್ನು ಮಾಡುತ್ತ ಇರೋಣ" ಎಂದು ಸ್ಪೂರ್ತಿದಾಯಕ ಮಾತುಗಳನ್ನಾಡಿದ್ದಾರೆ ಹಿನಾ ಖಾನ್‌. "ಈ ಸಂದರ್ಭದಲ್ಲಿ ಏನು ಮಾಡಬೇಕೆಂದು ನೀವು ನಿರ್ಧರಿಸಿ. ಬಿಟ್ಟುಕೊಡಬೇಡಿ. ನಿಮಗೆ ಇಷ್ಟವಾಗುವುದನ್ನು ಕಂಡುಕೊಳ್ಳಿ. ನಿಮ್ಮ ಕೆಲಸ, ನಿಮ್ಮ ಉತ್ಸಾಹಕ್ಕೆ ಪೂರಕವಾಗಿರುವುದು ಏನು ಎಂದು ತಿಳಿದುಕೊಳ್ಳಿ. ಚಿಕಿತ್ಸೆ ಪಡೆದುಕೊಳ್ಳುತ್ತ ಮುಂದುವರೆಯಿರಿ. ನೀವು ಇಷ್ಟಪಡುವುದನ್ನು ಮಾಡುವುದರಿಂದಲೂ ಚೇತರಿಕೆ ಉಂಟಾಗುತ್ತದೆ. ಇರುವ ರೋಗವನ್ನು ಸ್ವೀಕರಿಸಿ, ಒಪ್ಪಿಕೊಳ್ಳಿ, ಅಪ್ಪಿಕೊಳ್ಳಿ, ಸಾಮಾನ್ಯಗೊಳಿಸಿ" ಎಂದು ಅವರು ಬರೆದಿದಾರೆ.

ಈ ಸಂದರ್ಭದಲ್ಲಿ ಸ್ಪೂರ್ತಿದಾಯಕ ಹ್ಯಾಷ್‌ಟ್ಯಾಗ್‌ಗಳನ್ನು ಹಾಕಲು ಅವರು ಮರೆಯಲಿಲ್ಲ. “ಗಾಯವಾಗಿದೆ ಭಯವಾಗಿಲ್ಲ”, “ನನ್ನ ಜೀವನಕ್ಕೆ ಒಂದು ಕಿಟಕಿ”, “ಎಂದಿಗೂ ಬಿಟ್ಟುಕೊಡದ ಹುಡುಗಿ”, “ಅಪ್ಪನ ಸದೃಢ ಮಗಳು” ಎಂದೆಲ್ಲ ಹ್ಯಾಷ್‌ಟ್ಯಾಗ್‌ ಬರೆದಿದ್ದಾರೆ. (ಅವರು ನಮೂದಿಸಿರುವ ಹ್ಯಾಷ್‌ಟ್ಯಾಗ್‌ಗಳು #ScarredNotScared, #AWindowToMyJourney, #TheGirlWhoNeverGivesU, #DaddysStrongGirl ಮತ್ತು #OneDayAtATime.)

ಸ್ತನ ಕ್ಯಾನ್ಸರ್‌ ಕುರಿತು ಅಧಿಕೃತವಾಗಿ ತಿಳಿಸಿದ ಹಿನಾ

ಯೇ ರಿಶ್ತಾ ಕ್ಯಾ ಕೆಹ್ಲಾತಾ ಹೈ ಮತ್ತು ಕಸೌತಿ ಜಿಂದಗಿ ಕೇ ಮುಂತಾದ ಟಿವಿ ಕಾರ್ಯಕ್ರಮಗಳಲ್ಲಿನ ಪಾತ್ರಗಳಿಗೆ ಹೆಸರುವಾಸಿಯಾದ ನಟಿ ಹಿನಾ ಖಾನ್‌ ಕಳೆದ ತಿಂಗಳು ತನಗೆ ಮೂರನೇ ಹಂತದ ಸ್ತನ ಕ್ಯಾನ್ಸರ್‌ ಇರುವ ಕುರಿತು ಸೋಷಿಯಲ್‌ ಮೀಡಿಯಾದಲ್ಲಿ ಬರೆದುಕೊಂಡಿದ್ದರು. "ಇತ್ತೀಚೆಗೆ ಇರುವ ವದಂತಿ ಬಗೆಹರಿಸಲು ಬಯಸುವೆ. ನನಗೆ ಕ್ಯಾನ್ಸರ್‌ ಇರುವುದು ನಿಜ. ನನಗೆ ಮೂರನೇ ಹಂತದ ಕ್ಯಾನ್ಸರ್‌ ಇರುವುದು ಪತ್ತೆಯಾಗಿದೆ. ಈ ಸವಾಲಿನ ನಡುವೆಯೂ ನಾನು ಉತ್ತಮವಾಗಿದ್ದೇನೆ. ಈ ರೋಗವನ್ನು ನಿವಾರಿಸಲು ದೃಢ ನಿಶ್ಚಯ ಮಾಡಿದ್ದೇನೆ. ನನ್ನ ಚಿಕಿತ್ಸೆ ಆರಂಭವಾಗಿದೆ" ಎಂದು ಸುದೀರ್ಘವಾಗಿ ಬರೆದಿದ್ದರು.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ