logo
ಕನ್ನಡ ಸುದ್ದಿ  /  ಕರ್ನಾಟಕ  /  ಬೆಂಗಳೂರಲ್ಲಿ ಮಹಾಲಕ್ಷ್ಮಿ ಭೀಕರ ಕೊಲೆ, ಹಲವರಿಂದ ಕೃತ್ಯ ಶಂಕೆ; ಆತ್ಮಹತ್ಯೆ ಮಾಡಿಕೊಂಡ ಮುಕ್ತಿ ಲ್ಯಾಪ್‌ಟಾಪ್‌ನಲ್ಲಿ ಫೋಟೊ, ವೀಡಿಯೋ ಪತ್ತೆ

ಬೆಂಗಳೂರಲ್ಲಿ ಮಹಾಲಕ್ಷ್ಮಿ ಭೀಕರ ಕೊಲೆ, ಹಲವರಿಂದ ಕೃತ್ಯ ಶಂಕೆ; ಆತ್ಮಹತ್ಯೆ ಮಾಡಿಕೊಂಡ ಮುಕ್ತಿ ಲ್ಯಾಪ್‌ಟಾಪ್‌ನಲ್ಲಿ ಫೋಟೊ, ವೀಡಿಯೋ ಪತ್ತೆ

Umesha Bhatta P H HT Kannada

Sep 26, 2024 10:43 AM IST

google News

ಬೆಂಗಳೂರಿನಲ್ಲಿ ಮಹಾಲಕ್ಷ್ಮಿ ಭೀಭತ್ಸ ಕೊಲೆ ಪ್ರಕರಣದ ಆರೋಪಿ ಎನ್ನಲಾದ ಮುಕ್ತಿರಂಜನ್‌ ಆತ್ಮಹತ್ಯೆ ಮಾಡಿಕೊಂಡಿದ್ದು ಪೊಲೀಸ್‌ ತನಿಖೆ ಮುಂದುವರಿದಿದೆ.

    • Mahalakshami Murder case: ಬೆಂಗಳೂರಿನಲ್ಲಿ ನಡೆದ ಮಹಾಲಕ್ಷ್ಮಿ ಭೀಭತ್ಸ ಕೊಲೆ ಪ್ರಕರಣದ ತನಿಖೆ ಚುರುಕುಗೊಂಡಿದ್ದು, ಹಲವರು ಇದರಲ್ಲಿ ಭಾಗಿಯಾಗಿರಬಹುದು ಎನ್ನುವ ಶಂಕೆ ಪೊಲೀಸರದ್ದು.
ಬೆಂಗಳೂರಿನಲ್ಲಿ ಮಹಾಲಕ್ಷ್ಮಿ ಭೀಭತ್ಸ ಕೊಲೆ ಪ್ರಕರಣದ ಆರೋಪಿ ಎನ್ನಲಾದ ಮುಕ್ತಿರಂಜನ್‌ ಆತ್ಮಹತ್ಯೆ ಮಾಡಿಕೊಂಡಿದ್ದು ಪೊಲೀಸ್‌ ತನಿಖೆ ಮುಂದುವರಿದಿದೆ.
ಬೆಂಗಳೂರಿನಲ್ಲಿ ಮಹಾಲಕ್ಷ್ಮಿ ಭೀಭತ್ಸ ಕೊಲೆ ಪ್ರಕರಣದ ಆರೋಪಿ ಎನ್ನಲಾದ ಮುಕ್ತಿರಂಜನ್‌ ಆತ್ಮಹತ್ಯೆ ಮಾಡಿಕೊಂಡಿದ್ದು ಪೊಲೀಸ್‌ ತನಿಖೆ ಮುಂದುವರಿದಿದೆ.

ಬೆಂಗಳೂರು: ಬೆಂಗಳೂರಿನಲ್ಲಿ ಕೊಲೆ ಮಾಡಿ ದೇಹವನ್ನು 50 ತುಂಡು ಮಾಡಿ ಫ್ರಿಡ್ಜ್‌ನಲ್ಲಿ ಇರಿಸಿದ್ದ ಪ್ರಕರಣದ ತನಿಖೆ ಚುರುಕುಗೊಂಡಿದೆ. ಮಹಾಲಕ್ಷ್ಮಿ ಭೀಭತ್ಸ ಕೊಲೆ ಪ್ರಕರಣದ ಜಾಡು ಹಿಡಿದು ಪೊಲೀಸರು ಆರು ತಂಡಗಳಲ್ಲಿ ತನಿಖೆ ಚುರುಕುಗೊಳಿಸಿದ್ದಾರೆ. ಈ ಪ್ರಕರಣದ ಪ್ರಮುಖ ಆರೋಪಿ ಎನ್ನಲಾದ ವ್ಯಕ್ತಿ ಒಡಿಶಾದಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದು, ಆತನ ಲ್ಯಾಪ್‌ ಟಾಪ್‌ ಅನ್ನು ಪೊಲೀಸರು ವಶಪಡಿಸಿಕೊಂಡಿದ್ಧಾರೆ. ಅದರಲ್ಲಿ ಪ್ರಮುಖ ಫೋಟೋ, ವೀಡಿಯೋ ಸಹಿತ ದಾಖಲೆಗಳಿದ್ದು,. ಅವುಗಳನ್ನು ಸಂಗ್ರಹಿಸಿಕೊಂಡಿದ್ದಾರೆ. ಇದರೊಟ್ಟಿಗೆ ಘಟನೆ ನಡೆದ ಸ್ಥಳದಲ್ಲಿ ಹಲವರ ಬೆರಳಚ್ಚುಗಳ ಮಾದರಿ ಸಿಕ್ಕಿರುವುದರಿಂದ ಈ ಕೊಲೆ ಪ್ರಕರಣದಲ್ಲಿ ಹಲವರ ಕೈವಾಡ ಇರುವ ಶಂಕೆ ಪೊಲೀಸರಿಗೆ ಇದೆ. ಈ ಕಾರಣದಿಂದ ಹಲವು ಆಯಾಮಗಳಲ್ಲಿ ಮಾಹಿತಿಯನ್ನು ಪೊಲೀಸರು ಕಲೆ ಹಾಕುತ್ತಿದ್ದಾರೆ.

ಮಹಾಲಕ್ಷ್ಮಿ ಭೀಕರ ಕೊಲೆ ಪ್ರಕರಣ ನಾಲ್ಕು ದಿನದ ಬಯಲಾಗಿದೆ. ಇದಾಗುತ್ತಲೇ ಮೊಕದ್ದಮೆ ದಾಖಲಿಸಿಕೊಂಡಿದ್ದ ಬೆಂಗಳೂರು ಕೇಂದ್ರ ಉಪವಿಭಾಗದ ವೈಯಾಲಿಕಾವಲ್‌ ಪೊಲೀಸರು ಆರು ತಂಡಗಳನ್ನು ರಚಿಸಿದ್ದರು. ಇದರಲ್ಲಿ ಕೆಲವು ತಂಡಗಳು ಬೆಂಗಳೂರಿನಲ್ಲಿಯೇ ತನಿಖೆ ನಡೆಸಿದರೆ, ಇನ್ನೂ ಕೆಲ ತಂಡಗಳು ಹೊರ ರಾಜ್ಯಕ್ಕೆ ಹೋಗಿದ್ದವು.

ಅದರಲ್ಲೂ ನೇಪಾಳದ ಮೂಲದ ಮಹಾಲಕ್ಷ್ಮಿ ನೆಲಮಂಗಲದಲ್ಲಿದ್ದರೂ ವರ್ಷದ ಹಿಂದೆ ಬೆಂಗಳೂರಿನಲ್ಲಿ ಒಬ್ಬಂಟಿಯಾಗಿ ನೆಲೆಸಿದ್ದರು. ಆಕೆ ಕೆಲಸ ಮಾಡುತ್ತಿದ್ದ ಸ್ಥಳದಲ್ಲಿ ಹಲವರ ಪರಿಚಯವಿತ್ತು. ಅವರು ಮನೆಗೂ ಬಂದು ಹೋಗುತ್ತಿದ್ದರು. ಈ ಮಾಹಿತಿ ಆಧರಿಸಿಯೇ ಪೊಲೀಸರು ಆಕೆಯೊಂದಿಗೆ ಕೆಲಸ ಮಾಡಿದ್ದ ಹಲವರನ್ನು ವಿಚಾರಣೆಗೆ ಒಳಪಡಿಸಿದ್ದರು.

ಇದರಲ್ಲಿ ಒಡಿಶಾದ ಮುಕ್ತಿರಂಜನ್‌ ಪಾತ್ರ ಮುಖ್ಯವಾಗಿರುವ ಅನುಮಾನ ಆಧರಿಸಿಯೇ ಎರಡು ಪೊಲೀಸ್‌ ತಂಡಗಳು ಅಲ್ಲಿಗೆ ತೆರಳಿದ್ದವು.

ಆತ ಮಹಾಲಕ್ಷ್ಮಿ ಜತೆಗೆ ಲಿವಿಂಗ್‌ ಟುಗೆದರ್‌ನಲ್ಲಿದ್ದ. ಆಕೆಯನ್ನು ಮನೆಗೆ ಕರೆ ತರುವುದು, ಕರೆದುಕೊಂಡು ಹೋಗುವುದನ್ನೂ ಮಾಡುತ್ತಿದ್ದ. ಕೆಲ ದಿನಗಳಿಂದ ಮಹಾಲಕ್ಷ್ಮಿ ಇನ್ನೊಬ್ಬನೊಂದಿಗೆ ನಂಟು ಬೆಳೆಸಿಕೊಂಡಿದ್ದು ಆತನಿಗೆ ಆಗಿ ಬಂದಿರಲಿಲ್ಲ. ಇದರಿಂದಲೇ ಮಹಾಲಕ್ಷ್ಮಿಯನ್ನು ಭೀಕರವಾಗಿ ಕೊಲೆ ಮಾಡಿ ಮುಕ್ತಿ ರಂಜನ್‌ ಪರಾರಿಯಾಗಿರುವ ಕುರಿತು ಪೊಲೀಸರು ವಿವರವಾಗಿಯೇ ಸಾಕ್ಷಿ ಸಂಗ್ರಹಿಸಿದ್ದರು.

ಆತನನ್ನು ವಶಕ್ಕೆ ಪಡೆಯುವ ಮುನ್ನವೇ ಆತ ಒಡಿಶಾದಲ್ಲಿ ಆತ್ಮಹತ್ಯೆ ಮಾಡಿಕೊಂಡಿರುವುದು ಬೆಳಕಿಗೆ ಬಂದಿತು. ಇದರ ನಡುವೆಯೂ ಆತನ ಲ್ಯಾಪ್‌ ಟಾಪ್‌ ಸಹಿತ ಹಲವು ಮಾಹಿತಿಯನ್ನು ಸಂಗ್ರಹಿಸಿದ್ದಾರೆ.

ಬೆಂಗಳೂರಿನಲ್ಲಿಯೇ ಇರುವ ಮುಕ್ತಿ ರಂಜನ್‌ ಸಹೋದರ ಹೆಬ್ಬಗೋಡಿಯಲ್ಲಿ ವಾಸವಾಗಿದ್ದ. ಆತನೊಂದಿಗೆ ಇದ್ದು ಕೆಲಸಕ್ಕೆ ಹೋಗಿ ಬರುತ್ತಿದ್ದ. ತಾನು ಹೋಗುತ್ತಿದ್ದ ಬಟ್ಟೆ ಅಂಗಡಿ ಶೋ ರೂಂನಲ್ಲಿಯೇ ಮಹಾಲಕ್ಷ್ಮಿ ಪರಿಚಯವಾಗಿದ್ದು ಆಕೆಯನ್ನು ಕೊಲೆ ಮಾಡಿದ್ದನ್ನು ಸಹೋದರನ ಬಳಿಯೂ ಹೇಳಿಕೊಂಡಿದ್ದ. ಆನಂತರ ಒಡಿಶಾಕ್ಕೆ ಪರಾರಿಯಾಗಿದ್ದ. ಸಹೋದರನ ಹೇಳಿಕೆ, ಇತರೆ ಸಾಕ್ಷ್ಯಗಳನ್ನಾಧರಿಸಿ ಮುಕ್ತಿರಂಜನ್‌ ಈ ಕೊಲೆ ಮಾಡಿರುವುದನ್ನು ಪೊಲೀಸರು ಖಚಿತಪಡಿಸಿಕೊಳ್ಳುತ್ತಿದ್ದಾರೆ.

ಮಹಾಲಕ್ಷ್ಮಿ ವಾಸಿಸುತ್ತಿದ್ದ ಮನೆಯ ಬಾಗಿಲು, ಫ್ರಿಡ್ಜ್‌, ಕೆಲ ವಸ್ತುಗಳನ್ನು ಪೊಲೀಸರು ಪರಿಶೀಲಿಸಿ ಬೆರಳಚ್ಚು ಮಾದರಿ ಸಂಗ್ರಹಿಸಿದ್ದರು. ಅದನ್ನು ವಿಧಿ ವಿಜ್ಞಾನ ಪ್ರಯೋಗಾಲಯದ (ಎಫ್‌ಎಸ್‌ಎಲ್‌) ತಜ್ಞರು ಆರೋಪಿ ಗುರುತು ಪತ್ತೆಗೆ ಶೋಧ ನಡೆಸಿದ್ದರು. ಮುಕ್ತಿ ರಂಜನ್‌ ತಾನೊಬ್ಬನೇ ಈ ಕೃತ್ಯ ಎಸಗಿಲ್ಲ. ಬದಲಿಗೆ ಕೆಲವರ ಸಹಕಾರ ಪಡೆದಿರುವ ಕುರಿತೂ ಅನುಮಾನಗಳಿವೆ. ಈ ಆಯಾಮದಲ್ಲೂ ಪೊಲೀಸ್‌ ತನಿಖೆ ಮುಂದುವರಿದಿದೆ ಎಂದು ಮೂಲಗಳು ಖಚಿತಪಡಿಸಿವೆ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ