logo
ಕನ್ನಡ ಸುದ್ದಿ  /  ಕರ್ನಾಟಕ  /  ಬೆಂಗಳೂರಿನ 4 ದಿಕ್ಕುಗಳನ್ನು ಸಂಪರ್ಕಿಸುವ 40 ಕಿಮೀ ಉದ್ದದ ಸುರಂಗ ರಸ್ತೆ ನಿರ್ಮಾಣದ ಯೋಜನೆ; 19,000 ಕೋಟಿ ರೂ ಸಾಲ ಪಡೆಯಲು ಬಿಬಿಎಂಪಿ ನಿರ್ಧಾರ

ಬೆಂಗಳೂರಿನ 4 ದಿಕ್ಕುಗಳನ್ನು ಸಂಪರ್ಕಿಸುವ 40 ಕಿಮೀ ಉದ್ದದ ಸುರಂಗ ರಸ್ತೆ ನಿರ್ಮಾಣದ ಯೋಜನೆ; 19,000 ಕೋಟಿ ರೂ ಸಾಲ ಪಡೆಯಲು ಬಿಬಿಎಂಪಿ ನಿರ್ಧಾರ

Raghavendra M Y HT Kannada

Dec 08, 2024 08:07 AM IST

google News

ಬೆಂಗಳೂರು ಸುರಂಗ ರಸ್ತೆ ಯೋಜನೆಗೆ 19,000 ಕೋಟಿ ಸಾಲ ಪಡೆಯಲು ಬಿಬಿಎಂಪಿ ಮುಂದಾಗಿದೆ

    • ಭಾರಿ ವಿರೋಧದ ನಡುವೆಯೇ ಕರ್ನಾಟಕ ಕಾಂಗ್ರೆಸ್ ಸರ್ಕಾರ ಬೆಂಗಳೂರಿನಲ್ಲಿ 40 ಕಿಲೋ ಮೀಟರ್ ಉದ್ದದ ಸುರಂಗ ರಸ್ತೆಯ ನಿರ್ಮಾಣಕ್ಕೆ ಮುಂದಾಗಿದ್ದು, ಇದರ ಭಾಗವಾಗಿ ಬಿಬಿಎಂಪಿ ಬರೋಬ್ಬರಿ 19,000 ಕೋಟಿ ರೂಪಾಯಿ ಸಾಲ ಪಡೆಯಲು ಮುಂದಾಗಿದೆ.
ಬೆಂಗಳೂರು ಸುರಂಗ ರಸ್ತೆ ಯೋಜನೆಗೆ 19,000 ಕೋಟಿ ಸಾಲ ಪಡೆಯಲು ಬಿಬಿಎಂಪಿ ಮುಂದಾಗಿದೆ
ಬೆಂಗಳೂರು ಸುರಂಗ ರಸ್ತೆ ಯೋಜನೆಗೆ 19,000 ಕೋಟಿ ಸಾಲ ಪಡೆಯಲು ಬಿಬಿಎಂಪಿ ಮುಂದಾಗಿದೆ

ಬೆಂಗಳೂರಿನಲ್ಲಿ ಸಂಚಾರ ದಟ್ಟಣೆ ತಪ್ಪಿಸಲು ಹಾಗೂ ವಾಹನಗಳ ಸುಲಭ ಸಂಚಾರಕ್ಕಾಗಿ ಬಿಬಿಎಂಪಿ ನಾನಾ ರೀತಿಯ ಕಸರತ್ತುಗಳನ್ನು ಮಾಡುತ್ತಿದ್ದು, 40 ಕಿಲೋ ಮೀಟರ್ ಉದ್ದದ ಸುರಂಗ ರಸ್ತೆ ನಿರ್ಮಾಣಕ್ಕೆ ಮುಂದಾಗಿದೆ. ಈ ಯೋಜನೆಗೆ ಬೇಕಾಗಿರುವ ಹಣವನ್ನು ಸಾಲ ಪಡೆಯಲು ಮುಂದಾಗಿದೆ ಎಂದು ವರದಿಯಾಗಿದೆ. ಬೆಂಗಳೂರಿನಲ್ಲಿ 40 ಕಿಲೋ ಮೀಟರ್‌ ಉದ್ದದ ಸುರಂಗ ಮಾರ್ಗ ನಿರ್ಮಾಣಕ್ಕೆ ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ೦) ಮುಕ್ತ ಮಾರುಕಟ್ಟೆಯಲ್ಲಿ 19,000 ಕೋಟಿ ರೂ.ಗಳ ಸಾಲವನ್ನು ಪಡೆಯಲು ಮುಂದಾಗಿದೆ. ಪ್ರಬಲ ವಿರೋಧದ ನಡುವೆಯೂ ಸರ್ಕಾರ ಈ ಯೋಜನೆಗೆ ಅತೀವ ಆಸಕ್ತಿ ತೋರಿದೆ.

ಈಗಾಗಲೇ ಬೆಂಗಳೂರಿನಲ್ಲಿ 73 ಕಿಮೀ ಉದ್ದದ ಫೆರಿಫೆರಲ್‌ ರಿಂಗ್‌ ರಸ್ತೆಯ ನಿರ್ಮಾಣಕ್ಕೆ ಹುಡ್ಕೊದಿಂದ 27,೦೦೦ ಕೋಟಿ ರೂ. ಸಾಲ ಪಡೆಯಲು ಬಿಬಿಎಂಪಿಗೆ ಗ್ಯಾರಂಟಿ ನೀಡಲು ಸರ್ಕಾರ ಒಪ್ಪಿದೆ. ಈ ಎರಡೂ ಯೋಜನೆಗಳಿಗೆ ಬಿಬಿಎಂಪಿ ಬರೋಬ್ಬರಿ 46,೦೦೦ ಕೋಟಿ ರೂ. ಸಾಲ ಎತ್ತುತ್ತಿದೆ. ನಗರ ಮೂಲಭೂತ ಸೌಕರ್ಯಗಳ ನಿರ್ಮಾಣಕ್ಕಾಗಿ ಬಿಬಿಎಂಪಿ ಇತ್ತೀಚಿನ ವರ್ಷಗಳಲ್ಲಿ ಇದು ಅತಿ ದೊಡ್ಡ ಸಾಲದ ಮೊತ್ತ ಎಂದು ಹೇಳಲಾಗುತ್ತಿದೆ.

ಮೂಲಭೂತ ಸೌಕರ್ಯಗಳ ನಿರ್ಮಾಣಕ್ಕೆ ಖಾಸಗಿ ಬಂಡವಾಳ ಹರಿದುಬರುತ್ತಿಲ್ಲ. ಖಾಸಗಿ ಸಂಸ್ಥೆಗಳು ಅಷ್ಟಾಗಿ ಆಸಕ್ತಿ ತೋರುತ್ತಿಲ್ಲ. ಫೆರಿಫೆರಲ್‌ ರಿಂಗ್‌ ರಸ್ತೆಗೆ ಈಗಾಗಲೇ ಎರಡು ಬಾರಿ ಜಾಗತಿಕ ಟೆಂಡರ್‌ ಆಹ್ವಾನಿಸಿದ್ದರೂ ಯಾವುದೇ ಟೆಂಡರ್‌ ಸಲ್ಲಿಕೆಯಾಗಿಲ್ಲ ಎಂದು ಪಾಲಿಕೆ ಮೂಲಗಳು ತಿಳಿಸಿವೆ. 40 ಕಿಮೀ ಉದ್ದದ ಸುರಂಗ ಮಾರ್ಗದಲ್ಲಿ ಹೆಬ್ಬಾಳ ಮೇಲ್ಸೇತುವೆಯಿಂದ ಸಿಲ್ಕ್‌ ಬೋರ್ಡ್‌ ಜಂಕ್ಷನ್‌ ವರೆಗಿನ 18 ಕಿಮೀ ಮಾರ್ಗವು ಉತ್ತರ- ದಕ್ಷಿಣ ಕಾರಿಡಾರ್‌ ಸಂಪರ್ಕಿಸಲಿದೆ. 22 ಕಿಮೀ ಉದ್ದದ ಮಾರ್ಗವು ಪೂರ್ವ ಪಶ್ಚಿಮ ಭಾಗವನ್ನು ಸಂಪರ್ಕಿಸಲಿದೆ. ಪೂರ್ವದಲ್ಲಿ ಕೆ.ಆರ್.ಪುರ ಮತ್ತು ಪಶ್ಚಿಮ ಭಾಗದಲ್ಲಿ ಮೈಸೂರು ರಸ್ತೆಯನ್ನು ಸಂಪರ್ಕಿಸಲಿದೆ.

ಸುರಂಗ ರಸ್ತೆಗೆ ಯೋಜನೆಗೆ ಖಾತ್ರಿ ನೀಡಲು ರಾಜ್ಯ ಸರ್ಕಾರ ತಾತ್ವಿಕ ಒಪ್ಪಿಗೆ ನೀಡಿದೆ. ಈ ಯೋಜನೆಗೆ ಒಪ್ಪಿಗೆ ಪಡೆದುಕೊಳ್ಳಲು ಈ ವಿಷಯ ಕುರಿತು ಶೀಘ್ರವೇ ಸಚಿವ ಸಂಪುಟದಲ್ಲಿ ಚರ್ಚೆ ನಡೆಯಲಿದೆ ಎಂದು ಗೊತ್ತಾಗಿದೆ. ಸಾಲ ಪಡೆಯಲು ಬಿಬಿಎಂಪಿ, ಸಾರ್ವಜನಿಕ ಮತ್ತು ಖಾಸಗಿ ಮೂಲಗಳ ಮೂಲಕ ಸಾಲ ಪಡೆಯಲು ಪ್ರಯತ್ನ ನಡೆಸಲಿದೆ. ಕಳೆದ ಆಗಸ್ಟ್‌ ನಲ್ಲಿಯೇ ಸಚಿವ ಸಂಪುಟ ಈ ಯೋಜನೆಗೆ ಹಸಿರು ನಿಶಾನೆ ತೋರಿಸಿದ್ದರೂ ಸಾರ್ವಜನಿಕ- ಖಾಸಗಿ ಸಹಭಾಗಿತ್ವ (ಪಿಪಿಪಿ) ಆಧಾರದಲ್ಲಿ ಸುರಂಗ ರಸ್ತೆ ಯೋಜನೆಯನ್ನು ಕೈಗೊಳ್ಳಲು ಸಾಧ್ಯವೇ ಎಂದು ಪರಿಶೀಲಿಸಲು ನಿರ್ದೇಶನ ನೀಡಿದೆ.

ಬಲ್ಲ ಮೂಲಗಳ ಪ್ರಕಾರ ಸಾಲ ಪಡೆದು ಸುರಂಗ ರಸ್ತೆಯನ್ನು ನಿರ್ಮಿಸಲು ಪಾಲಿಕೆ ಆಸಕ್ತಿ ತೋರಿಸಿದೆ. ಬಿಬಿಎಂಪಿ ಮೂಲಗಳ ಪ್ರಕಾರ ವಿಸ್ತೃತ ವರದಿ (ಡಿಪಿಆರ್)‌ ಸಿದ್ಧವಾಗಿದೆ. ಸಾಧ್ಯಾಸಾಧ್ಯತೆಗಳನ್ನು ಪರಿಶೀಲಿಸಿ ವರದಿ ನೀಡಿರುವ ಕನ್ಸಲ್ಟೆನ್ಸಿ ಸಂಸ್ಥೆ ಅವಳಿ ಟ್ಯೂಬ್‌ ಸುರಂಗ ಮಾರ್ಗಕ್ಕಿಂತ ಏಕ ಟ್ಯೂಬ್‌ ಸುರಂಗ ರಸ್ತೆಯ ವೆಚ್ಚ ಕಡಿಮೆಯಾಗಲಿದೆ ಎಂದು ವರದಿ ನೀಡಿದೆ. ಆದರೆ ಸರ್ಕಾರ ಆರು ಪಥಗಳ ಅವಳಿ ಸುರಂಗ ಮಾರ್ಗವನ್ನೇ ನಿರ್ಮಿಸಲು ಮುಂದಾಗಿದೆ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ