ಕನ್ನಡ ಸುದ್ದಿ  /  ಕರ್ನಾಟಕ  /  Bidar News: ಮುಂದಿನ ವರ್ಷದಿಂದಲೇ ಕರ್ನಾಟಕದಲ್ಲಿ ವಚನ ವಿಶ್ವವಿದ್ಯಾನಿಲಯ ಆರಂಭ

Bidar News: ಮುಂದಿನ ವರ್ಷದಿಂದಲೇ ಕರ್ನಾಟಕದಲ್ಲಿ ವಚನ ವಿಶ್ವವಿದ್ಯಾನಿಲಯ ಆರಂಭ

Umesha Bhatta P H HT Kannada

Mar 07, 2024 04:48 PM IST

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಬಸವಕಲ್ಯಾಣದಲ್ಲಿ ಗುರುವಾರ ಆತ್ಮೀಯವಾಗಿ ಸನ್ಮಾನಿಸಲಾಯಿತು.

    • ಮುಖ್ಯಮಂತ್ರಿ ಸಿದ್ದರಾಮಯ್ಯ ಬಸವಕಲ್ಯಾಣದಲ್ಲಿ ಅಪ್ಪಟ ಶರಣರಾಗಿದ್ದರು. ಹಣೆಗೆ ವಿಭೂತಿ ಬಳಿದುಕೊಂಡು ಖುಷಿಯಿಂದಲೇ ಕಾರ್ಯಕ್ರಮದಲ್ಲಿ ಭಾಗಿ ಆತ್ಮೀಯ ಸನ್ಮಾನವನ್ನೂ ಸ್ವೀಕರಿಸಿದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಬಸವಕಲ್ಯಾಣದಲ್ಲಿ ಗುರುವಾರ ಆತ್ಮೀಯವಾಗಿ ಸನ್ಮಾನಿಸಲಾಯಿತು.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಬಸವಕಲ್ಯಾಣದಲ್ಲಿ ಗುರುವಾರ ಆತ್ಮೀಯವಾಗಿ ಸನ್ಮಾನಿಸಲಾಯಿತು.

ಬೀದರ್‌: 12ನೇ ಶತಮಾನದಲ್ಲಿಯೇ ವಚನ ಸಾಹಿತ್ಯಕ್ಕೆ ಒತ್ತು ನೀಡಿ ಆಗಲೇ ಸಮಾಜ ಪರಿವರ್ತನೆಗೆ ಪ್ರಯತ್ನಿಸಿದ್ದ ಕ್ರಾಂತಿಯೋಗಿ ಬಸವಣ್ಣನವರು ಹಾಗೂ ವಚನದ ಮಹತ್ವವನ್ನು ಅರಿಯುವ ನಿಟ್ಟಿನಲ್ಲಿ ಕರ್ನಾಟಕದಲ್ಲಿ ಮುಂದಿನ ವರ್ಷದಿಂದಲೇ ವಚನ ವಿಶ್ವವಿದ್ಯಾಲಯ ಸ್ಥಾಪನೆ ಮಾಡಲಾಗುವುದು. ಈ ಮೂಲಕ ಬಸವಣ್ಣ ಹಾಗೂ ವಚನಗಳನ್ನು ರಚಿಸಿ ಸಮಾಜಕ್ಕೆ ದುಡಿದ ಎಲ್ಲ ದಾರ್ಶನಿಕ ಆಶಯವನ್ನು ಮುಂದಿನ ಪೀಳಿಗೆಗೆ ವರ್ಗಾಯಿಸುವ ಕೆಲಸವನ್ನು ಮಾಡಲಾಗುವುದು. ಇದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬೀದರ್‌ ಜಿಲ್ಲೆಯ ಬಸವಕಲ್ಯಾಣದಲ್ಲಿ ಹೇಳಿದ ಮಾತು.

ಟ್ರೆಂಡಿಂಗ್​ ಸುದ್ದಿ

ಕರ್ನಾಟಕ ಹವಾಮಾನ ಮೇ 13: ಬೆಂಗಳೂರಿನಲ್ಲಿ ರಾತ್ರಿ ಗುಡುಗು ಮಿಂಚು ಸಹಿತ ಭಾರಿ ಮಳೆ; ಕರಾವಳಿ ಸೇರಿ ಈ ಜಿಲ್ಲೆಗಳಿಗೆ ಇಂದು ವರುಣನ ಕೃಪೆ ಸಾಧ್ಯತೆ

Chikkamagaluru News: ಚಿಕ್ಕಮಗಳೂರಿನಲ್ಲಿ ಭಾರೀ ಗಾತ್ರದ ಸಲಗ ವಿದ್ಯುತ್‌ ಶಾಕ್‌ ಗೆ ಬಲಿ

Bangalore News: ಅಜಾಗರೂಕತೆಯಿಂದ ಕಾರು ಚಾಲನೆ, ಬೆಂಗಳೂರಲ್ಲಿ ಬಾಲಕ ಸಾವು, ಮುಗಿಲು ಮುಟ್ಟಿದ ಪೋಷಕರ ಆಕ್ರಂದನ

Hassan Scandal: ತಿರುವು ಪಡೆದುಕೊಳ್ಳುತ್ತಿರುವ ಪ್ರಜ್ವಲ್‌ ರೇವಣ್ಣ ಪ್ರಕರಣ, ಜೆಡಿಎಸ್‌ ಶಾಸಕನ ವಿರುದ್ದವೇ ಆರೋಪ, ಮತ್ತಿಬ್ಬರ ಬಂಧನ

ಕರ್ನಾಟಕದಲ್ಲಿ ಕಾಂಗ್ರೆಸ್‌ ಸರ್ಕಾರ ರಚನೆಯಾದ ಬಳಿಕ ಬಸವಣ್ಣನವರ ಚಿಂತನೆಗಳಿಗೆ ಹೆಚ್ಚಿನ ಒತ್ತು ದೊರೆತಿದೆ. ಅದರಲ್ಲೂ ಬಸವಣ್ಣ ಅವರನ್ನು ಸಾಂಸ್ಕೃತಿಕ ನಾಯಕ ಎಂದು ಘೋಷಣೆ ಮಾಡಲಾಗಿದೆ. ಕರ್ನಾಟಕದ ಎಲ್ಲಾ ಸರ್ಕಾರಿ ಕಚೇರಿಗಳು, ಶಾಲಾ ಕಾಲೇಜುಗಳಲ್ಲಿ ಕಡ್ಡಾಯವಾಗಿ ಬಸವಣ್ಣನವರ ಫೋಟೋ ಅಳವಡಿಸುವಂತೆಯೂ ಆದೇಶ ಹೊರಡಿಸಲಾಗಿದೆ. ಇದರ ಮುಂದುವರೆದ ಭಾಗವಾಗಿಯೇ ವಚನ ವಿಶ್ವವಿದ್ಯಾನಿಲಯವೂ ರಚನೆಯಾಗಲಿದೆ.

ವಿಶ್ವ ಬಸವ ಧರ್ಮ ಟ್ರಸ್ಟ್, ಅನುಭವ ಮಂಟಪ - ಬಸವಕಲ್ಯಾಣ, ಅಖಿಲ ಭಾರತ ವೀರಶೈವ-ಲಿಂಗಾಯತ ಮಹಾಸಭಾ ಹಾಗೂ ಲಿಂಗಾಯತ ಮಠಾಧಿಪತಿಗಳ ಒಕ್ಕೂಟದ ವತಿಯಿಂದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಗುರುವಾರ ಆತ್ಮೀಯವಾಗಿ ಸನ್ಮಾನಿಸಲಾಯಿತು.

ಬಸವಣ್ಣನವರನ್ನು ಕರ್ನಾಟಕದ ಸಾಂಸ್ಕೃತಿಕ ನಾಯಕನೆಂದು ಘೋಷಿಸಿದ ಚಾರಿತ್ರಿಕ ಸಂಗತಿಗಾಗಿ 160 ಮಂದಿ ಶರಣ ಸ್ವಾಮೀಜಿಗಳು, ಗುರುಗಳು ಹಾಗೂ ವೀರಶೈವ- ಲಿಂಗಾಯತ ಮಠಾಧೀಶ ಸಮುದಾಯದಿಂದ ಅಭೂತಪೂರ್ವ ಸನ್ಮಾನ ಸ್ವೀಕರಿಸಿ ಮಾತನಾಡಿದರು.

ಬಸವಾದಿ ಶರಣರು ನುಡಿದಂತೆ ನಡೆದರು. ನಡೆದಂತೆ ನುಡಿದರು. ಇದೇ ನಮ್ಮ ಸರ್ಕಾರಕ್ಕೆ ಮಾದರಿ. ನಾವು ಚುನಾವಣೆ ವೇಳೆಯಲ್ಲಿ ಕೊಟ್ಟ ಆಶ್ವಾಸನೆಗಳನ್ನು ಅಧಿಕಾರಕ್ಕೆ ಬಂದ ಎಂಟು ತಿಂಗಳಲ್ಲಿ ಈಡೇರಿಸಿ, ನಿಮ್ಮ ಮತಕ್ಕೆ ಗೌರವ ನೀಡಿ ಮತ್ತೆ ನಿಮ್ಮ ಮುಂದೆ ಬಂದು ನಿಂತಿದ್ದೇವೆ ಎಂದರು.

ಸಮಸ್ತ ಕನ್ನಡಿಗರು, ಸಮಸ್ತ ಭಾರತೀಯರ ಅಭಿಮಾನದ ಸಂಕೇತವಾಗಿ ಬಸವಣ್ಣನವರನ್ನು ನಾಡಿನ ಸಾಂಸ್ಕೃತಿಕ ನಾಯಕನನ್ನಾಗಿ ಘೋಷಿಸಿದೆವು. ಬಸವಣ್ಣ ಈ ಮಣ್ಣಿನ ಸಾಂಸ್ಕೃತಿಕ ಸ್ಫೂರ್ತಿ ಆಗಿರುವುದರಿಂದ ಸರ್ಕಾರಿ ಕಚೇರಿ ಮತ್ತು ಶಾಲಾ ಕಾಲೇಜುಗಳಲ್ಲಿ ಬಸವಣ್ಣರ ಭಾವಚಿತ್ರ ಕಡ್ಡಾಯಗೊಳಿಸಿದೆ.ಲಕ್ಷಾಂತರ ಕನ್ನಡಿಗರ ಸಾಕ್ಷಿಯಾಗಿ ನಾನು ಬಸವ ಜಯಂತಿಯಂದೇ ಮೊದಲ ಬಾರಿ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದೆ ಎಂದರು.

ಜಾತಿ, ವರ್ಗ, ಅಸಮಾನತೆ ಇಲ್ಲದ ಮನುಷ್ಯತ್ವದ ಸಮಾಜ ನಿರ್ಮಾಣ ಬಸವಣ್ಣರ ಗುರಿಯಾಗಿತ್ತು. ಹೀಗಾಗಿ ಬುದ್ದ, ಬಸವ, ಅಂಬೇಡ್ಕರ್ ನನಗೆ ಮಾರ್ಗದರ್ಶಕರು. ಇವರ ವಿಚಾರಗಳು ಇಂದು, ನಾಳೆ ಮಾತ್ರವಲ್ಲ ಯಾವತ್ತೂ ಶಾಶ್ವತ. ಇಡೀ ಜಗತ್ತಿಗೆ ಅನುಭವ ಮಂಟಪದ ಮೂಲಕ ಪ್ರಜಾಪ್ರಭುತ್ವವನ್ನು ಪರಿಚಯಿಸಿದ್ದು ಬಸವಾದಿ ಶರಣರು. ಅಂಬೇಡ್ಕರ್ ಅವರ ಸಂವಿಧಾನದಲ್ಲಿ ಇರುವ ಮೌಲ್ಯಗಳಲ್ಲೆವೂ ಬಸವಾದಿ ಶರಣರ ಆಶಯಗಳಲ್ಲಿವೆ.ಕಾಯಕ, ಉತ್ಪಾದನೆ, ದಾಸೋಹ ಬಸವಾದಿ ಶರಣರ ಆಶಯ. ಈ ಮೂಲಕ ಸಮಬಾಳು, ಸಮಪಾಲು ಎನ್ನುವುದನ್ನು 12 ನೇ ಶತಮಾನದಲ್ಲೇ ಸಾರಿದ್ದಾರೆ ಎಂದು ಸಿಎಂ ವಿವರಿಸಿದರು.

ಬಸವಾದಿ ಶರಣರ ತತ್ವಗಳಿಗೆ ವಿರುದ್ಧವಾಗಿ ಇವತ್ತಿನ ವಿದ್ಯಾವಂತರು ಕಂದಾಚಾರಗಳನ್ನು ಆಚರಿಸುತ್ತಿದ್ದಾರೆ. ಆತ್ಮಸಾಕ್ಷಿ ವಿರುದ್ಧವಾಗಿ ನಡೆದುಕೊಳ್ಳಬಾರದು ಎನ್ನುವುದು ವಚನಗಳ ಆಶಯ. ಎಲವೋ ಎಂದರೆ ನರಕ. ಅಯ್ಯಾ ಎಂದರೆ ಸ್ವರ್ಗ ಎಂದು ಶರಣರು ಹೇಳಿದ್ದಾರೆ. ದಯೆಯೆ ಇಲ್ಲದ ಧರ್ಮ ಯಾವುದಯ್ಯ ಎನ್ನುವ ಮೂಲಕ ನಿಜವಾದ ಧರ್ಮ ಎಂದರೆ ಏನು ಎನ್ನುವುದನ್ನು ತಿಳಿಸಿದ್ದಾರೆ. ಶರಣರು ಸಂಸ್ಕೃತವನ್ನು ಸಾರಾಸಗಟಾಗಿ ತಿರಸ್ಕರಿಸಿ ಮೊದಲ ಬಾರಿಗೆ ಜನರ ಭಾಷೆಯಲ್ಲಿ, ಜನರಾಡುವ ಭಾಷೆಯಲ್ಲಿ ಧರ್ಮದ ಮೌಲ್ಯಗಳನ್ನು ಸಾರಿದರು. ದಯೆಯೆ ಧರ್ಮದ ಮೂಲ ಎನ್ನುವ ಮಾತು ಎಷ್ಟು ಸರಳವಾಗಿದೆ. ಇದೇ ಜನರ ಭಾಷೆ ಎಂದರು.

ಬಸವಕಲ್ಯಾಣ ಅನುಭವ ಮಂಟಪದ ವಿಶ್ವ ಬಸವ ಧರ್ಮ ಟ್ರಸ್ಟ್‍ನ ಅಧ್ಯಕ್ಷರಾದ ಶ್ರೀ ನಾಡೋಜ ಡಾ. ಬಸವಲಿಂಗ ಪಟ್ಟದೇವರು, ಜನಪದ ವಿದ್ವಾಂಸ ಗೊ.ರು.ಚನ್ನಬಸಪ್ಪ ಮಾತನಾಡಿದರು.

ಹುಬ್ಬಳ್ಳಿಯ ಮೂರುಸಾವಿರ ಮಠದ ಶ್ರೀ ಜಗದ್ಗುರು ಗುರುಸಿದ್ದರಾಜಯೋಗೀಂದ್ರ ಮಹಾಸ್ವಾಮೀಜಿ , ಶ್ರೀ ಬಸವಜಯಮೃತ್ಯುಂಜಯ ಮಹಾಸ್ವಾಮಿಗಳು, ಡಾ.ಮಾತೆ ಗಂಗಾದೇವಿ, ಸಿದ್ದರಾಮೇಶ್ವರ ಮಹಾಸ್ವಾಮಿಗಳು, ಶ್ರೀ ರಾಜೇಶ್ವರ ಶಿವಾಚಾರ್ಯ ಮಹಾಸ್ವಾಮಿಗಳು ಸೇರಿ 160 ಮಂದಿ ಶರಣ ಗುರುಗಳು ಕಾರ್ಯಕ್ರಮದಲ್ಲಿದ್ದರು.

ಕಾರ್ಯಕ್ರಮವನ್ನು ಅಖಿಲ ಭಾರತ ವೀರಶೈವ ಮಹಾಸಭಾದ ಅಧ್ಯಕ್ಷರು ಹಾಗೂ ಶಾಸಕರಾದ ಡಾ. ಶಾಮನೂರು ಶಿವಶಂಕರಪ್ಪ ಉದ್ಘಾಟಿಸಿದರು. ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಹಾಗೂ ಬೀದರ್ ಜಿಲ್ಲಾ ಉಸ್ತುವಾರಿ ಸಚಿವರು ಮತ್ತು ಅಖಿಲ ಭಾರತ ವೀರಶೈವ ಮಹಾಸಭಾದ ಮಹಾಪ್ರಧಾನ ಕಾರ್ಯದರ್ಶಿಗಳಾದ ಈಶ್ವರ್ ಖಂಡ್ರೆ ಅಧ್ಯಕ್ಷತೆಯನ್ನು ವಹಿಸಿದ್ದರು. ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಬಿ.ಆರ್.ಪಾಟೀಲ್, ಬಸವ ಸಮಿತಿಯ ಅಧ್ಯಕ್ಷರಾದ ಡಾ. ಅರವಿಂದ ಜತ್ತಿ , ಬೃಹತ್ ಕೈಗಾರಿಕಾ ಸಚಿವರಾದ ಎಂ.ಬಿ.ಪಾಟೀಲ್, ಪೌರಾಡಳಿತ, ಹಜ್ ಸಚಿವರಾದ ರಹೀಂಖಾನ್, ಮಾಜಿ ಸಚಿವ ರಾಜಶೇಖರ ಪಾಟೀಲ, ವಿಧಾನ ಪರಿಷತ್ ಸದಸ್ಯ ಭೀಮರಾವ ಪಾಟೀಲ್, ವಿಜಯ್ ಸಿಂಗ್, ಶಾಸಕ ಚನ್ನಾರೆಡ್ಡಿ ಸೇರಿ ಹಲವು ಪ್ರಮುಖರು ಉಪಸ್ಥಿತರಿದ್ದರು.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ