ಕನ್ನಡ ಸುದ್ದಿ  /  Lifestyle  /  International Womens Day 2024 Career Restart Journey Of A Journalist After Covid 19 Guide To Women Re Entering Job Mgb

Women's Day Special:ಬಾಣಂತನ ಮುಗಿಸುವಷ್ಟರಲ್ಲಿ ಜಗತ್ತಿಗೆ ಕಾಲಿಟ್ಟಿತ್ತು ಕೊರೊನಾ; ಕೆರಿಯರ್​ ರಿಸ್ಟಾರ್ಟ್​ ಮಾಡಲು ಪರದಾಟ-ಪೂರ್ಣಿಮಾ ಹೆಗಡೆ

International Women's Day 2024: ಮದುವೆ, ಮಕ್ಕಳು, ಕುಟುಂಬಕ್ಕಾಗಿ ವೃತ್ತಿ ಬದುಕು ತ್ಯಾಗ ಮಾಡುವ ಮಹಿಳೆಯರ ಸಂಖ್ಯೆ ದೊಡ್ಡದು. ಇವರಲ್ಲಿ ಹಲವರು ಮತ್ತೆ ಕೆರಿಯರ್ ರಿಸ್ಟಾರ್ಟ್​ ಮಾಡುವ ಉತ್ಸಾಹ ತೋರುತ್ತಾರೆ. ತಮ್ಮ ವೃತ್ತಿ ಬದುಕನ್ನು ಮತ್ತೆ ಆರಂಭಿಸಿದ ಕಥೆಯನ್ನು ಬೆಂಗಳೂರಿನ ಪೂರ್ಣಿಮಾ ಹೆಗಡೆ ಅವರು 'ಎಚ್​​ಟಿ ಕನ್ನಡ'ದೊಂದಿಗೆ ಹಂಚಿಕೊಂಡಿದ್ದಾರೆ.

ಪೂರ್ಣಿಮಾ ಹೆಗಡೆ (ಎಡಚಿತ್ರ)
ಪೂರ್ಣಿಮಾ ಹೆಗಡೆ (ಎಡಚಿತ್ರ)

2008ರಲ್ಲಿ ಶಿರಸಿಯಲ್ಲಿ ಪತ್ರಿಕೋದ್ಯಮ ಪದವಿ ಪಡೆದು, ಪದವಿ ಮುಗಿದ ಎರಡೇ ತಿಂಗಳಿಗೆ ಸಂಯುಕ್ತ ಕರ್ನಾಟಕ ಟ್ರೇನಿ ರಿಪೋರ್ಟರ್ ಆಗಿ ವೃತ್ತಿಬದುಕಿಗೆ ಕಾಲಿಟ್ಟ ನಾನು ಸತತ 11 ವರ್ಷಗಳ ಕಾಲ ಪತ್ರಿಕೋದ್ಯಮದಲ್ಲೇ ಮುಂದುವರಿದಿದ್ದೆ. ಪತ್ರಿಕೆಯಿಂದ ಆರಂಭಿಸಿದ ವೃತ್ತಿಬದುಕು ಟಿವಿಯ ಅಂಗಳಕ್ಕೆ ಬಂದು ನಿಂತಿತ್ತು. ಏಕಾಂಗಿಯಾಗಿದ್ದ ಬದುಕು ಮದುವೆಯ ಬಂಧನದೊಂದಿಗೆ ಜಂಟಿ ಹಾಡಿನ ಹಾದಿ ಹಿಡಿದಿತ್ತು. ಮದುವೆಯಾದ ಮೇಲೆ ಕೆಲಸ‌ ಬಿಡೋದು, ಬದಲಾಯಿಸೋದು ಅಂತಹ ಯೋಚನೆಗಳು ನನ್ನ ಮುಂದಿರಲಿಲ್ಲ. ಏಕೆಂದರೆ‌ ಪತ್ರಿಕೋದ್ಯಮ ನಾನು ನೂರಾರು ಅಡೆತಡೆಗಳನ್ನು ದಾಟಿ ಆಯ್ದುಕೊಂಡ‌ ನನ್ನ ಪ್ರೀತಿಯ ಕ್ಷೇತ್ರವಾಗಿತ್ತು. ಆದರೆ ಮುಂದೊಂದು ದಿನ ಇದೇ ವೃತ್ತಿಬದುಕಿನಿಂದ ಬಿಡುವು ಪಡೆದು ಮತ್ತೆ‌ ಕೆಲಸಕ್ಕೆ‌‌ ಮರಳಲು ಪರದಾಡಬೇಕಾಗುತ್ತದೆ ಎಂಬ ಅರಿವು ನನಗಿರಲಿಲ್ಲ.

2012 ರಲ್ಲಿ ಮದುವೆಯಾಗಿ ನೆಮ್ಮದಿಯ ಬದುಕು ಕಟ್ಟಿದ್ದ ನಮಗೆ ಬರೋಬ್ಬರಿ 7 ವರ್ಷಗಳ ಬಳಿಕ 2019 ರಲ್ಲಿ ಪುಟ್ಟ ಅತಿಥಿಯ ಆಗಮನದ ಸೂಚನೆ ಸಿಕ್ಕಿತ್ತು. ಅದೇನೋ ಹೊಸ ಸಂಭ್ರಮ, ಕನಸು, ಕನವರಿಕೆ. ಆದರೆ ಅದರ ಜೊತೆ ಜೊತೆಗೆ ನಾನು ಇಷ್ಟಪಟ್ಟ ವೃತ್ತಿಯನ್ನು ಮುಂದುವರೆಸಲು ಸಾಧ್ಯವೇ ಎಂಬ ಆತಂಕ. 2019 ರಲ್ಲಿ ತಾಯ್ತನದ ಜೊತೆಗೆ ವೈದ್ಯರು ತುಂಬಿದ ಆತ್ಮವಿಶ್ವಾಸ ಹಾಗೂ ಕುಟುಂಬದವರ ಪ್ರೋತ್ಸಾಹದಿಂದ ವೃತ್ತಿಯಲ್ಲಿ ಮುಂದುವರೆದೆ.

ಆಗ ನಾನು ಬಿಟಿವಿ ‌ನ್ಯೂಸ್ ಡಿಜಿಟಲ್ ವಿಭಾಗದಲ್ಲಿದ್ದೆ. ಅಷ್ಟೆನೂ ಒತ್ತಡವಿಲ್ಲದ ಕೆಲಸ ಎನ್ನಿಸಿತ್ತು.‌ ಹೀಗಾಗಿ ಡೆಲಿವರಿಗೆ ಎರಡು ದಿನಗಳಿರುವರೆಗೂ ಸುದ್ದಿ ಬರವಣಿಗೆ ಹಾಗೂ ಎಡಿಟಿಂಗ್ ಮಾಡಿಕೊಂಡು ಎಂಜಾಯ್ ಮಾಡ್ತಿದ್ದೆ. ಡಿಸೆಂಬರ್ 4 ರಂದು‌ ಮುದ್ದಾದ ಮಗಳು ಈ ಜಗತ್ತಿಗೆ ಬಂದಳು. ಅವಳ‌ ಮುಖ ನೋಡಿ ಬೇರೆನೂ ಬೇಕೆನಿಸಲಿಲ್ಲ. ಆದರೆ ನಾರ್ಮಲ್ ಡೆಲಿವರಿ, ಬಾಣಂತನ ಮುಗಿಸುವಷ್ಟರಲ್ಲಿ ಜಗತ್ತಿಗೆ ಕೊರೊನಾ ಎಂಬ ಮಹಾಮಾರಿ ಕಾಲಿಟ್ಟಿತ್ತು. ಊರಿನಿಂದ ಪುಟ್ಟ ಮಗಳನ್ನು ಎತ್ತಿಕೊಂಡು ಬೆಂಗಳೂರಿಗೆ ಬಂದಾಗ ಕೊರೊನಾದ ಎಫೆಕ್ಟ್ ನಮ್ಮ ಕುಟುಂಬವನ್ನು ಕಾಡಿತ್ತು. ದೇವರ ದಯೆಯಿಂದ ಕೊರೊನಾ ಬರದಿದ್ದರೂ ಉದ್ಯೋಗ ನಷ್ಟ, ಕಾರಿನ ಇಎಂಐ ನಮ್ಮನ್ನು ಕಂಗೆಡಿಸಿತ್ತು.

ಅಳಿದುಳಿದ ಸೇವಿಂಗ್ಸ್ ಡೆಲಿವರಿ, ಬಾಣಂತನ, ನಾಮಕರಣ ಹೀಗೆ ನಾನಾ ಕಾರಣಕ್ಕೆ ಖಾಲಿಯಾಗಿತ್ತು. ಆಗಲೇ ವೃತ್ತಿ ಬದುಕನ್ನು ಮುಂದುವರೆಸಲೇಬೇಕೆಂಬ ಸ್ಥಿತಿ ನಿರ್ಮಾಣವಾಗಿತ್ತು. ಪುಟ್ಟ ಕಂದನನ್ನು ಬಿಟ್ಟು ಕೆಲಸಕ್ಕೆ ಹೋಗಬೇಕೆಂಬುದು ನೆನಪಿಸಿಕೊಂಡೇ ಕಣ್ಣೀರಾಗುತ್ತಿದ್ದೆ. ನನ್ನ ಭಾವನಾತ್ಮಕ ಸಂಘರ್ಷ ನೋಡಿದ ಪತಿ ಮಗಳೊಂದಿಗೆ ಮನೆಯಲ್ಲಿರು ನಾನೆಲ್ಲ ನೋಡಿಕೊಳ್ತೇನೆ ಎಂಬ ಭರವಸೆ ನೀಡಿದರು. ಆದರೂ ಅವರೊಬ್ಬರ ಹೋರಾಟ ನನ್ನನ್ನು ಸುಮ್ಮನೇ ಕೂರಲು ಬಿಡಲಿಲ್ಲ. ಅಷ್ಟರಲ್ಲಾಗಲೇ ಮಗಳಿಗೆ ಒಂದೂವರೆ ವರ್ಷ ತುಂಬಿತ್ತು. ಅವಳ ತೊದಲು ಮಾತು, ಮೊದಲ ಹೆಜ್ಜೆ, ಹಾಡು, ಡ್ಯಾನ್ಸ್, ಅಮ್ಮನನ್ನು ಅರಸುವ ಪರಿ, ಬಾಲ್ಯದ ಎಲ್ಲ ತುಂಟಾಟಗಳು ನನ್ನನ್ನು ಕಟ್ಟಿಹಾಕುತ್ತಿತ್ತು.

ಆದರೆ ಬದುಕಿನ ಅನಿವಾರ್ಯತೆ ಹಾಗೂ ಪತಿಯ ಏಕಾಂಗಿ ಹೋರಾಟವೂ ಅಷ್ಟೇ ಕಾಡುತ್ತಿತ್ತು. ಹೀಗಾಗಿ ನನ್ನ ವಿದ್ಯೆ ಮತ್ತು ಅನುಭವ ವ್ಯರ್ಥವಾಗಬಾರದು. ತಾಯಿಯ ಪ್ರತಿಯೊಂದು ನಡೆಯೂ ಮಗುವಿಗೆ ಪ್ರೇರಣೆಯೇ. ಹೀಗಾಗಿ ಸ್ವಾವಲಂಬಿ ಹಾಗೂ ಉದ್ಯೋಗಸ್ಥ ಮಹಿಳೆಯ ಪಾತ್ರ ಪೋಷಣೆಗೆ ನಾನು ಸಿದ್ಧವಾದೆ. ಆದರೆ ಮಗಳನ್ನು ಬಿಟ್ಟು ಹೋಗುವುದು ಹೇಗೆ? ಎಲ್ಲಿ ಬಿಡೋದು? ಯಾರು ನೋಡಿಕೊಳ್ಳುತ್ತಾರೆ? ಈ ಪ್ರಶ್ನೆಗಳಿಗೆ ಉತ್ತರವಿರಲಿಲ್ಲ. ಸ್ವತಃ ಕ್ರೈಂ ವರದಿಗಾರ್ತಿಯಾಗಿ ಬೆಂಗಳೂರು ಕ್ರೈಂನ ನಾನಾ ಮುಖಗಳನ್ನು ಹತ್ತಿರದಿಂದ‌ ನೋಡಿದ ನಾನು ಡೇ ಕೇರ್, ಕೆಲಸದವರು ಇಂಥಹದ್ದನ್ನೆಲ್ಲ ನಂಬುವ ಸ್ಥಿತಿಯಲ್ಲಿರಲಿಲ್ಲ. ಮದುವೆಯಾದ ಒಂದಿಷ್ಟು ವರ್ಷಗಳ ಬಳಿಕ ಹುಟ್ಟಿದ ಮಗಳನ್ನು ಹಾಗೇ ಬಿಟ್ಟುಹೋಗಲು ಕುಟುಂಬದ ಅನುಮತಿಯೂ ಇರಲಿಲ್ಲ.

ಇಂಥ‌‌ ಸಂದಿಗ್ಧದ ಹೊತ್ತಿನಲ್ಲಿ ನನ್ನ ಕುಟುಂಬ ನನ್ನ ಬೆಂಬಲಕ್ಕೆ ನಿಂತಿತು. ನನ್ನ ಅಕ್ಕ ನಾನು ಮಗು ನೋಡಿಕೊಳ್ಳುತ್ತೇನೆ.‌ ನೀನು ಕೆಲಸಕ್ಕೆ ಸೇರಿಕೋ ಎಂದಳು. ತಾನು ಕಷ್ಟಪಟ್ಟು ವಿದ್ಯಾಭ್ಯಾಸ ಮಾಡಿಯೂ ಉದ್ಯೋಗ ಮಾಡಲಾಗದೇ ಹೋಗಿದ್ದಕ್ಕೆ ನೊಂದುಕೊಳ್ಳುವ ಅಕ್ಕ ನನ್ನ ಪರಿಸ್ಥಿತಿ ನೋಡಿ ಸಹಾಯಕ್ಕೆ ಬಂದಿದ್ದಳು. ಉದ್ಯೋಗದಲ್ಲಿರೋ ಇಬ್ಬರು ಅತ್ತಿಗೆಯರು, ಅಣ್ಣ, ಅಪ್ಪ, ಬಾವ, ನಮ್ಮ ಮನೆಯ ಪುಟ್ಟ ಮಕ್ಕಳು ಎಲ್ಲರೂ ನನ್ನ ಬೆಂಬಲಕ್ಕೆ ನಿಂತು ನೀನು ಮತ್ತೆ ಕೆಲಸ ಆರಂಭಿಸು ಎಂದು ಹಾರೈಸಿದರು.

ಇದೆಲ್ಲದರ ಜೊತೆಗೆ ಎರಡು ವರ್ಷಗಳ ಬ್ರೇಕ್ ಬಳಿಕ ಪತ್ರಿಕೋದ್ಯಮಕ್ಕೆ ಮರಳಿದ ನನಗೆ CNN News18 ಇನ್ ಪುಟ್ ಕೋ ಆರ್ಡಿನೇಟರ್ ಜಾಬ್ ಜೊತೆ ಸ್ವಾಗತವನ್ನು ಕೋರಿತು. ಆಫೀಸ್​​ನಲ್ಲೂ ನನ್ನ ತಾಯಿ ಸ್ಥಾನದ ಜವಾಬ್ದಾರಿಗಳಿಗೆ ಸ್ಪಂದನೆ ಸಿಕ್ಕಿತು. ನನ್ನ ಕಚೇರಿಯ ಹಿರಿಯರು ನನಗೆ ಅಗತ್ಯ ಶಿಫ್ಟ್ , ರಜೆ ಸೇರಿದಂತೆ ಎಲ್ಲ ಅಗತ್ಯ ಸಹಾಯ ನೀಡಿ ಕೆಲಸ ಮುಂದುವರೆಸಲು ನೆರವಾದರು. ಹೀಗಾಗಿ ಈಗ‌ ಮತ್ತೆ ನನ್ನಿಷ್ಟದ‌ ಪತ್ರಿಕೋದ್ಯಮ ಜರ್ನಿ ಮುಂದುವರೆಸಿದ್ದೇನೆ.

ಈಗ ಮಗಳಿಗೆ ಐದನೇ ವರ್ಷ. ನರ್ಸರಿಯಲ್ಲಿ ಓದುತ್ತ, ಮನೆಯಲ್ಲಿ ಆಡುತ್ತ, ಕುಟುಂಬದ ಎಲ್ಲರೊಂದಿಗೆ‌ ಬೆರೆಯುತ್ತ ಪ್ರತಿನಿತ್ಯವೂ ಬದುಕಿಗೆ ಹೊಸ ಬೆರಗು ತುಂಬುತ್ತಿದ್ದಾಳೆ. ಸೆಕೆಂಡ್ ಶಿಫ್ಟ್ ಮುಗಿಸಿ ನಾನು ಮನೆಗೆ ಬರುವಾಗ ರಾತ್ರಿ 12 ಗಂಟೆಯಾಗುತ್ತದೆ. ಆಗಲೂ ನಿದ್ದೆ ಮಾಡದೇ ನನ್ನನ್ನೆ ಕಾಯ್ದುಕೊಂಡಿದ್ದು ಕತೆ ಹೇಳು ಎಂದು ಪೀಡಿಸುತ್ತಾಳೆ. 12.30 ಕ್ಕೆ‌ಮಲಗಿ ಬೆಳಗ್ಗೆ 7ಕ್ಕೆ ಎದ್ದರೂ ಆರು ತಾಸಿನ ಆಸುಪಾಸು ನಿದ್ದೆ, ಮಗಳ ಸ್ಕೂಲ್, ಹೋಂ ವರ್ಕ್, ಮನೆಕೆಲಸ, ಆಫೀಸ್ ಇದರ ಮಧ್ಯೆ ಅರ್ಧ ಗಂಟೆಯ ಬಿಡುವು ಸಿಗೋದು ಕಷ್ಟವೇ. ಆದರೂ ನಮ್ಮ ಕುಟುಂಬಕ್ಕಾಗಿ ನಾವು ದುಡಿಯುವುದರಲ್ಲಿಯೂ ನೆಮ್ಮದಿಯಿದೆ.

ಒಮ್ಮೊಮ್ಮೆ ಮಗಳ ಬಾಲ್ಯದ ಎಲ್ಲ‌ ಗಳಿಗೆಗಳಲ್ಲೂ ಜೊತೆ‌ ನಿಲ್ಲಲಾಗದ ಗಿಲ್ಟ್ ಕಾಡಿದರೂ, ಮತ್ತೊಮ್ಮೆ ಮಕ್ಕಳ ,ಕುಟುಂಬದ ಒಳಿತಿಗಾಗಿ ಮತ್ತು ನಮ್ಮ ವ್ಯಕ್ತಿತ್ವ, ವೃತ್ತಿಬದುಕಿಗಾಗಿ ಹೆಣ್ಣುಮಕ್ಕಳು ಇಷ್ಟಾದರೂ ಮಾಡಲೇ ಬೇಕು. ಕೇವಲ ದುಡ್ಡು ಮಾತ್ರವಲ್ಲ ನಮ್ಮ ವಿದ್ಯೆ, ಪ್ರತಿಭೆ ಹಾಗೂ ಆತ್ಮ ಸಂತೋಷಕ್ಕಾದರೂ ನಾವು ಕೆಲವೊಂದು ಕಷ್ಟದ ನಿರ್ಧಾರಗಳನ್ನು ಕೈಗೊಳ್ಳಲೇಬೇಕೆಂದು ಸಮಾಧಾನಿಸಿಕೊಳ್ಳುತ್ತೇನೆ.

ನನ್ನ ಅನುಭದಲ್ಲಿ ನಾನು ವೃತ್ತಿ‌ ಮತ್ತು ಕುಟುಂಬದ ಮಧ್ಯೆ ಸಿಲುಕಿ ಭಾವನಾತ್ಮಕವಾಗಿ ನಲುಗುವ ಪ್ರತಿ‌ ಹೆಣ್ಣುಮಕ್ಕಳಿಗೂ ಹೇಳುವ‌ ಮಾತೊಂದೇ, ನಿಮ್ಮ ಬದುಕನ್ನು ಯಾರೊಂದಿಗೂ ಹೋಲಿಸಿಕೊಳ್ಳಬೇಡಿ. ನಿಮಗೆ ಕುಟುಂಬ, ಮಗು‌ ಮತ್ತು ವೃತ್ತಿ ಇದರ ನಡುವಿನ ಅಗತ್ಯ, ಅನಿವಾರ್ಯತೆ ಮತ್ತು ಸಾರ್ಥಕತೆ ಎಷ್ಟಿದೆ ಎಂಬುದನ್ನು ಅರಿತುಕೊಳ್ಳಿ. ಕೆಲಸ‌‌ ಮಾಡುವುದರಿಂದ ನಿಮಗೆ ಖುಷಿಯಾಗುತ್ತಾ ಕೆಲಸಕ್ಕೆ ‌ಸೇರಿ.‌ ಮನೆಯಲ್ಲಿ ಮಗುವಿನೊಂದಿಗೆ ಇರೋದ್ರಲ್ಲೇ ಹೆಚ್ಚು ಖುಷಿಯಿದ್ಯಾ ಅದನ್ನೇ ಆಯ್ದುಕೊಳ್ಳಿ. ಆರ್ಥಿಕ ಸಂಕಷ್ಟಕ್ಕೆ‌ ಕೆಲಸದ ಅಗತ್ಯವಿದ್ಯಾ ಹಾಗಿದ್ದಾಗ ಮಗುವನ್ನು ನೋಡಿಕೊಳ್ಳಲು ಸೂಕ್ತ ವ್ಯವಸ್ಥೆ ಮಾಡಿ. ಕುಟುಂಬದ, ಆಪ್ತರ ಸಹಾಯ ಪಡೆದು ಕೆಲಸಕ್ಕೆ‌ ಸೇರಿ. ಆದರೆ ಆಯ್ಕೆ‌ ಯಾವುದಾದರೂ ನಿಮಗೆ ಸಮಾಧಾನ ತರುವಂತಿರಬೇಕು. ನಿಮಗೇನು ಬೇಕು ಅದನ್ನು ಆಯ್ಕೆ ಮಾಡಿಕೊಂಡರೆ‌‌ ಮುಂದಿನ ಸವಾಲುಗಳನ್ನು ಎದುರಿಸಲು ನಿಮಗೆ ಉತ್ಸಾಹ ಮೂಡುತ್ತದೆ. ಹಾದಿಯೂ ತಂತಾನೇ ತೆರೆದುಕೊಳ್ಳುತ್ತದೆ. ಇಷ್ಟಕ್ಕೂ ಹೆಣ್ಣಿಗೆ ಅಸಾಧ್ಯವಾದ ಸವಾಲು ಯಾವುದಿದೇ ಹೇಳಿ?

ಬರಹ: ಪೂರ್ಣಿಮಾ ಹೆಗಡೆ, ಬೆಂಗಳೂರು