logo
ಕನ್ನಡ ಸುದ್ದಿ  /  ಕರ್ನಾಟಕ  /  ಕಾಫಿ ಎಸ್ಟೇಟ್‌ನಲ್ಲಿ ಸೂಪರ್‌ವೈಸರ್, ಮ್ಯಾನೇಜರ್ ಆಗಬೇಕು ಅಂತಿದ್ದೀರಾ, ಚಿಕ್ಕಮಗಳೂರು ಸಿಸಿಆರ್‌ಐ 2 ಕೋರ್ಸ್‌ಗಳಿಗೆ ಅರ್ಜಿ ಆಹ್ವಾನಿಸಿದೆ ನೋಡಿ

ಕಾಫಿ ಎಸ್ಟೇಟ್‌ನಲ್ಲಿ ಸೂಪರ್‌ವೈಸರ್, ಮ್ಯಾನೇಜರ್ ಆಗಬೇಕು ಅಂತಿದ್ದೀರಾ, ಚಿಕ್ಕಮಗಳೂರು ಸಿಸಿಆರ್‌ಐ 2 ಕೋರ್ಸ್‌ಗಳಿಗೆ ಅರ್ಜಿ ಆಹ್ವಾನಿಸಿದೆ ನೋಡಿ

Umesh Kumar S HT Kannada

Dec 20, 2024 05:08 PM IST

google News

ಕಾಫಿ ಎಸ್ಟೇಟ್‌ನಲ್ಲಿ ಸೂಪರ್‌ವೈಸರ್, ಮ್ಯಾನೇಜರ್ ಆಗಬೇಕು ಅಂತಿದ್ದೀರಾ, ಚಿಕ್ಕಮಗಳೂರು ಕೇಂದ್ರೀಯ ಕಾಫಿ ಸಂಶೋಧನಾ ಸಂಸ್ಥೆ (ಸಿಸಿಆರ್‌ಐ) 2 ಕೋರ್ಸ್‌ಗಳಿಗೆ ಅರ್ಜಿ ಆಹ್ವಾನಿಸಿದೆ. (ಕಡತ ಚಿತ್ರ)

  • Education: ಕಾಫಿ ಎಸ್ಟೇಟ್‌ನಲ್ಲಿ ಸೂಪರ್‌ವೈಸರ್, ಮ್ಯಾನೇಜರ್ ಆಗಬೇಕು ಅಂತಿದ್ದೀರಾ, ಹಾಗಾದರೆ ಚಿಂತೆ ಮಾಡಬೇಡಿ. ಚಿಕ್ಕಮಗಳೂರು ಸಿಸಿಆರ್‌ಐ 2 ಕೋರ್ಸ್‌ಗಳಿಗೆ ಅರ್ಜಿ ಆಹ್ವಾನಿಸಿದೆ. ಅದರ ವಿವರ ಇಲ್ಲಿದೆ. 

ಕಾಫಿ ಎಸ್ಟೇಟ್‌ನಲ್ಲಿ ಸೂಪರ್‌ವೈಸರ್, ಮ್ಯಾನೇಜರ್ ಆಗಬೇಕು ಅಂತಿದ್ದೀರಾ, ಚಿಕ್ಕಮಗಳೂರು 
ಕೇಂದ್ರೀಯ ಕಾಫಿ ಸಂಶೋಧನಾ ಸಂಸ್ಥೆ (ಸಿಸಿಆರ್‌ಐ) 2 ಕೋರ್ಸ್‌ಗಳಿಗೆ ಅರ್ಜಿ ಆಹ್ವಾನಿಸಿದೆ. (ಕಡತ ಚಿತ್ರ)
ಕಾಫಿ ಎಸ್ಟೇಟ್‌ನಲ್ಲಿ ಸೂಪರ್‌ವೈಸರ್, ಮ್ಯಾನೇಜರ್ ಆಗಬೇಕು ಅಂತಿದ್ದೀರಾ, ಚಿಕ್ಕಮಗಳೂರು ಕೇಂದ್ರೀಯ ಕಾಫಿ ಸಂಶೋಧನಾ ಸಂಸ್ಥೆ (ಸಿಸಿಆರ್‌ಐ) 2 ಕೋರ್ಸ್‌ಗಳಿಗೆ ಅರ್ಜಿ ಆಹ್ವಾನಿಸಿದೆ. (ಕಡತ ಚಿತ್ರ) (CCRI)

Education: ಕಾಫಿ ಎಸ್ಟೇಟ್ ಸೂಪರ್‌ವೈಸರ್ ಆಗಬೇಕು ಅಂತಿದ್ದೀರಾ, ಎಂಟನೇ ತರಗತಿ ಉತ್ತೀರ್ಣರಾಗಿದ್ದೀರಾ, 10 ಪಾಸಾಗದೇ ಇದ್ದರೂ ಚಿಂತೆ ಇಲ್ಲ. ಈ ಕೋರ್ಸ್‌ಗೆ ಸೇರಿದರೆ ಕಾಫಿ ಎಸ್ಟೇಟ್ ನಿರ್ವಹಣೆಯ ಪರಿಣತಿ ನಿಮ್ಮದಾಗುತ್ತದೆ ಎಂದು ಚಿಕ್ಕಮಗಳೂರಿನ ಕೇಂದ್ರ ಕಾಫಿ ಸಂಶೋಧನಾ ಸಂಸ್ಥೆ ಹೇಳಿದೆ. ಕಾಫಿ ತೋಟಗಳಲ್ಲಿ ಪರಿಣತಿ ಹೊಂದಿ ಸೂಪರ್‌ವೈಸರ್‌ಗಳ, ಮ್ಯಾನೇಜರ್‌ಗಳ ಕೊರತೆ ಇದೆ. ಅದೇ ರೀತಿ ಕಾಫಿ ಎಸ್ಟೇಟ್ ನಿರ್ವಹಣೆಯ ಡಿಪ್ಲೋಮಾ ಕೋರ್ಸ್ ಕೂಡ ಇದೆ. ಆದರೆ, ಇದಕ್ಕೆ 12ನೇ ತರಗತಿ ಉತ್ತೀರ್ಣರಾಗಬೇಕು. ಚಿಕ್ಕಮಗಳೂರಿನ ಕೇಂದ್ರ ಕಾಫಿ ಸಂಶೋಧನಾ ಸಂಸ್ಥೆ ಕಾಫಿ ಎಸ್ಟೇಟ್ ಸೂಪರ್ವೈಸರ್ ಸರ್ಟಿಫಿಕೇಟ್ ಕೋರ್ಸ್ ಮತ್ತು ಮ್ಯಾನೇಜ್‌ಮೆಂಟ್‌ ಡಿಪ್ಲೊಮಾ ಕೋರ್ಸ್‍ಗಳಿಗೆ ಅರ್ಜಿಗಳನ್ನು ಆಹ್ವಾನಿಸಿದೆ.

ಕಾಫಿ ಎಸ್ಟೇಟ್ ಸೂಪರ್‌ವೈಸರ್ ಸರ್ಟಿಫಿಕೇಟ್ ಕೋರ್ಸ್

ಕಾಫಿ ಎಸ್ಟೇಟ್ ಸೂಪರ್‌ವೈಸರ್ ಸರ್ಟಿಫಿಕೇಟ್ ಕೋರ್ಸ್ ಒಂದು ವರ್ಷದ ಸಮಗ್ರ ತರಬೇತಿ ಯೋಜನೆ. ಕಾಫಿ ತೋಟಗಳಿಗೆ ಪರಿಣತಿ ಹೊಂದಿದ ಸೂಪರ್‌ವೈಸರ್‌ಗಳನ್ನು ಒದಗಿಸುವುದು ಈ ಕೋರ್ಸ್‌ನ ಉದ್ದೇಶ. ಇದಕ್ಕೆ ಸೇರಿದವರಿಗೆ, ಕ್ಷೇತ್ರ ಕಾರ್ಯ ಮತ್ತು ಪ್ರಾಯೋಗಿಕ ಅನುಭವ ಸಿಗಲಿದೆ. ಒಂದು ವರ್ಷದ ಕೋರ್ಸ್‌ ಹೊರತಾಗಿ ಇನ್ನೊಂದು ವರ್ಷ ಇಂಟರ್ನ್‌ಶಿಪ್‌ ಇರಲಿದೆ.

ಕಾಫಿ ಎಸ್ಟೇಟ್ ಸೂಪರ್‌ವೈಸರ್ ಸರ್ಟಿಫಿಕೇಟ್ ಕೋರ್ಸ್‍ಗೆ ಸೇರಲು ಕನಿಷ್ಠ 8ನೇ ತರಗತಿ ಉತ್ತೀರ್ಣರಾಗಿಬೇಕು ಅಥವಾ 10 ನೇ ತರಗತಿ ಅನುತ್ತೀರ್ಣರಾದರೂ ಅಡ್ಡಿ ಇಲ್ಲ. ವಯೋಮಿತಿ 18 ರಿಂದ 35 ವರ್ಷ. ಎಸ್.ಸಿ/ಎಸ್.ಟಿ ಅಭ್ಯರ್ಥಿಗಳಿಗೆ ವಯೋಮಿತಿಯಲ್ಲಿ 5 ವರ್ಷಗಳ ಸಡಿಲಿಕೆ ಇದೆ. ಕೋರ್ಸ್‍ನ ಅವಧಿಯು ಒಂದು ವರ್ಷ. ಪ್ರಾದೇಶಿಕ ಭಾಷೆಗಳಾದ ಕನ್ನಡ, ತಮಿಳು, ತೆಲುಗು, ಮಲಯಾಳಂ ಭಾಷೆಗಳಲ್ಲಿ ಬೋಧನೆ ಇರಲಿದೆ. ಕೋರ್ಸ್‍ನ ಶುಲ್ಕವು ಪ್ರತಿ ಅಭ್ಯರ್ಥಿಗಳಿಗೆ 6,000 ರೂಪಾಯಿ. ಇನ್ನು, ಎಸ್ಸಿ/ಎಸ್ಟಿ ಅಭ್ಯರ್ಥಿಗಳಿಗೆ 3,000 ರೂಪಾಯಿ. ಮೊದಲ ವರ್ಷದ ತರಬೇತಿ ಅವಧಿಯಲ್ಲಿ 5,000 ರೂಪಾಯಿ ತಿಂಗಳ ಭತ್ಯೆ ಹಾಗೂ ಇಂಟರ್ನ್‍ಶಿಪ್ ಅವಧಿಯಲ್ಲಿ 6,000 ರೂಪಾಯಿ ತಿಂಗಳ ಭತ್ಯೆ ಅಭ್ಯರ್ಥಿಗಳಿಗೆ ಸಿಗಲಿದೆ.

ಕಾಫಿ ಎಸ್ಟೇಟ್ ನಿರ್ವಹಣೆಯ ಡಿಪ್ಲೋಮಾ ಕೋರ್ಸ್‌

ಕಾಫಿ ಎಸ್ಟೇಟ್ ನಿರ್ವಹಣೆಯ ಡಿಪ್ಲೋಮಾ ಕೋರ್ಸ್‍ಗೆ ಸೇರಲು ಕನಿಷ್ಠ 12ನೇ ತರಗತಿ ಉತ್ತೀರ್ಣರಾಗಿರಬೇಕು, ವಯೋಮಿತಿಯು 18 ರಿಂದ 35 ವರ್ಷ. ಎಸ್ಸಿ/ಎಸ್ಟಿ ಅಭ್ಯರ್ಥಿಗಳಿಗೆ 5 ವರ್ಷಗಳ ವಯೋಮಿತಿ ಸಡಿಲಿಕೆ ಇರುತ್ತದೆ. ಕೋರ್ಸ್‍ನ ಅವಧಿ ಎರಡು ವರ್ಷ. ಇಂಗ್ಲೀಷ್ ಮಾಧ್ಯಮದಲ್ಲಿ ಬೋಧನೆ ಇರಲಿದೆ. ಕೋರ್ಸ್‍ನ ಶುಲ್ಕವು ಪ್ರತಿ ಸಾಮಾನ್ಯ ಅಭ್ಯರ್ಥಿಗಳಿಗೆ 10,000 ರೂಪಾಯಿ. ಎಸ್ಸಿ/ಎಸ್ಟಿ ಅಭ್ಯರ್ಥಿಗಳಿಗೆ 5,000 ರೂಪಾಯಿ. ಈ ಶುಲ್ಕವನ್ನು ಎರಡು ಕಂತುಗಳಲ್ಲಿ ಪಾವತಿಸಬಹುದು. ಆರ್ಥಿಕವಾಗಿ ಹಿಂದುಳಿದ ವರ್ಗದ ಅಭ್ಯರ್ಥಿಗಳು (ಭಾರತ ಸರ್ಕಾರದ ಮಾರ್ಗಸೂಚಿಗಳ ಪ್ರಕಾರ) ಮತ್ತು ಎಸ್ಸಿ/ಎಸ್ಟಿ ಅಭ್ಯರ್ಥಿಗಳಿಗೆ ಮೊದಲ ವರ್ಷ 6,000 ರೂಪಾಯಿ ತಿಂಗಳ ಭತ್ಯೆ, ಎರಡನೇ ವರ್ಷ ಎಲ್ಲ ಅಭ್ಯರ್ಥಿಗಳಿಗೆ 10,000 ರೂಪಾಯಿ ತಿಂಗಳ ಭತ್ಯೆ ಸಿಗಲಿದೆ. ಕಾಫಿ ಎಸ್ಟೇಟ್ ನಿರ್ವಹಣೆಯ ಡಿಪ್ಲೋಮಾ ಕೋರ್ಸ್‍ಗೆ ಕೇವಲ 10 ಅಭ್ಯರ್ಥಿಗಳಿಗೆ ಪ್ರವೇಶ ಸಿಗಲಿದೆ.

ಕಾಫಿ ಬೆಳೆಯುವ ಪ್ರದೇಶದವರಿಗೆ ಮೊದಲ ಆದ್ಯತೆ

ಕಾಫಿ ಬೆಳೆಯುವ ಪ್ರದೇಶಗಳಿಂದ ಬಂದ ಅಭ್ಯರ್ಥಿಗಳಿಗೆ ಮೊದಲ ಆದ್ಯತೆ ನೀಡಲಾಗುತ್ತದೆ. ಕಾಫಿ ಎಸ್ಟೇಟ್ ಸೂಪರ್‌ವೈಸರ್‌ ಸರ್ಟಿಫಿಕೇಟ್ ಕೋರ್ಸ್‍ಗೆ ಸೇರಬಯಸುವವರಿಗೆ ಉಚಿತ ವಸತಿ ವ್ಯವಸ್ಥೆ ಇದೆ. ಅದೇ ರೀತಿ ಕಾಫಿ ಎಸ್ಟೇಟ್ ನಿರ್ವಹಣೆಯ ಡಿಪ್ಲೋಮಾ ಕೋರ್ಸ್‍ಗೆ ಸೇರಬಯಸುವವರಿಗೆ ಬೆಂಗಳೂರನ್ನು ಹೊರತುಪಡಿಸಿ ಉಳಿದೆಡೆ ಉಚಿತ ವಸತಿ ವ್ಯವಸ್ಥೆ ಸಿಗುತ್ತದೆ. ಎರಡೂ ಕೋರ್ಸ್‍ಗಳನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದ ಅಭ್ಯರ್ಥಿಗಳಿಗೆ ಕಾಫಿ ಮಂಡಳಿ ಪ್ರಮಾಣಪತ್ರ ನೀಡಲಿದೆ.

ಆಸಕ್ತರು ಕಾಫಿ ಮಂಡಳಿಯ ಅಧಿಕೃತ ಜಾಲತಾಣ https://coffeeboard.gov.in ನಿಂದ ಅರ್ಜಿಯನ್ನು ಡೌನ್‍ಲೋಡ್ ಮಾಡಿಕೊಂಡು ಸಮರ್ಪಕ ದಾಖಲೆಗಳೊಂದಿಗೆ ಭರ್ತಿಯಾದ ಅರ್ಜಿಯನ್ನು nodalofficertrainingccri@gmail.com ಗೆ ಸ್ಕ್ಯಾನ್ ಮಾಡಿ ಇ-ಮೇಲ್ ಮಾಡಬೇಕು. ಡಿಸೆಂಬರ್ 31 ರ ಒಳಗಾಗಿ ಮೂಲ ಅರ್ಜಿ ಪ್ರತಿ ಹಾಗೂ ಸಂಬಂಧಿತ ದಾಖಲೆಗಳನ್ನು ಕೇಂದ್ರ ಕಾಫಿ ಸಂಶೋಧನಾ ಸಂಸ್ಥೆ, ಕಾಫಿ ರಿಸರ್ಚ್ ಸ್ಟೇಷನ್, ಚಿಕ್ಕಮಗಳೂರು ಜಿಲ್ಲೆ-577117 ಈ ವಿಳಾಸಕ್ಕೆ ಕಳುಹಿಸಬೇಕು. ಅರ್ಹ ಅಭ್ಯರ್ಥಿಗಳನ್ನು ಆಯ್ಕೆ ಮಾಡಿ ಅವರಿಗೆ ಪ್ರಾಯೋಗಿಕ ಪರೀಕ್ಷೆ ನೀಡಿ, ಕೋರ್ಸ್‌ಗೆ ಆಯ್ಕೆ ಮಾಡಿಕೊಳ್ಳಲಾಗುತ್ತದೆ ಎಂದು ಚಿಕ್ಕಮಂಗಳೂರಿನ ಕೇಂದ್ರ ಕಾಫಿ ಸಂಶೋಧನಾ ಸಂಸ್ಥೆ ಸಂಶೋಧನಾ ನಿರ್ದೇಶಕರು ತಿಳಿಸಿದ್ದಾರೆ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ