ದೀರ್ಘಾಯುಷ್ಯದ ಗುಟ್ಟು ಕಾಫಿಯಲ್ಲಿದೆ ಎಂದು ಹೇಳುತ್ತಿದೆ ಅಧ್ಯಯನ: ದಿನಕ್ಕೆ ಒಂದು ಕಪ್ ಕಾಫಿ ಕುಡಿದರೆ ಸಿಗುತ್ತೆ ಇಷ್ಟೆಲ್ಲಾ ಪ್ರಯೋಜನ
Dec 18, 2024 11:57 AM IST
ದಿನಕ್ಕೆ ಒಂದು ಕಪ್ ಕಾಫಿ ಕುಡಿದರೆ ಸಿಗುತ್ತೆ ಇಷ್ಟೆಲ್ಲಾ ಪ್ರಯೋಜನ
ಪ್ರತಿದಿನ ಕಾಫಿ ಕುಡಿಯುವುದು ಆರೋಗ್ಯಕ್ಕೆ ತುಂಬಾ ಪ್ರಯೋಜನವಿದೆ ಎಂದು ಅಧ್ಯಯನವೊಂದು ಹೇಳುತ್ತಿದೆ. ಕಾಫಿ ಮನುಷ್ಯನ ಆಯುಷ್ಯವನ್ನು ಹೆಚ್ಚಿಸಬಹುದು ಎಂದು ಹೊಸ ಅಧ್ಯಯನವೊಂದು ಹೇಳಿದೆ. ಆದರೆ, ದಿನಕ್ಕೆ ಎಷ್ಟು ಕಾಫಿ ಕುಡಿಯಬೇಕು ಮತ್ತು ಅದರ ಪ್ರಯೋಜನವೇನು ಎಂಬ ಈ ಗೊಂದಲಕ್ಕೆ ಇಲ್ಲಿದೆ ಉತ್ತರ.
ನಮ್ಮಲ್ಲಿ ಬಹಳಷ್ಟು ಜನರಿಗೆ ಬೆಡ್ ಕಾಫಿ, ಬೆಡ್ ಟೀ ಇಲ್ಲದೆ ಬೆಳಗಾಗುವುದೇ ಇಲ್ಲ. ಅದರಲ್ಲೂ ಚಳಿಗಾಲದ ತಂಪು ಹವಾಮಾನಕ್ಕೆ ಹಬೆಯಾಡುವ ಬಿಸಿ ಬಿಸಿ ಟೀ, ಕಾಫಿಗಳೆಂದರೆ ಬಹಳಷ್ಟು ಜನರು ಇಷ್ಟಪಡುತ್ತಾರೆ. ನಮ್ಮಲ್ಲಿ ಹಲವರಿಗೆ ಕಾಫಿಗಿಂತ ಚಹಾ ಹೆಚ್ಚು ಪ್ರಿಯವಾದ ಪಾನೀಯವಾಗಿದೆ. ಆದರೆ ಚಹಾಕ್ಕಿಂತ ಕಾಫಿ ಕುಡಿಯುವುದರಿಂದ ಹೆಚ್ಚಿನ ಪ್ರಯೋಜನಗಳಿವೆ ಎಂದು ಅಧ್ಯಯನವು ಹೇಳುತ್ತದೆ. ದಿನಕ್ಕೆ ಒಂದು ಕಪ್ ಕಾಫಿ ಕುಡಿಯುವುದರಿಂದ ನಿಮ್ಮ ಜೀವಿತಾವಧಿಯನ್ನು ಹೆಚ್ಚಿಸಬಹುದು ಎಂದು ಹೊಸ ಅಧ್ಯಯನವು ಕಂಡುಹಿಡಿದಿದೆ. ಆರೋಗ್ಯಕರ ಮತ್ತು ದೀರ್ಘಾಯುಷ್ಯವನ್ನು ಹೊಂದಲು ದಿನಕ್ಕೆ ಒಂದು ಕಪ್ ಕಾಫಿ ಸಾಕು ಎಂದು ಅಧ್ಯಯನವು ಹೇಳುತ್ತಿದೆ. ಪೋರ್ಚುಗಲ್‌ನ ಕೊಯಿಂಬ್ರಾ ವಿಶ್ವವಿದ್ಯಾನಿಲಯದ ತಂಡವೊಂದು ನಡೆಸಿದ ಇತ್ತೀಚಿನ ಅಧ್ಯಯನವು ಇದನ್ನು ತೋರಿಸಿದೆ.
ಅಧ್ಯಯನ ಏನು ಹೇಳುತ್ತದೆ?
ಸಂಶೋಧಕರು ಯುರೋಪ್, ಅಮೆರಿಕ, ಆಸ್ಟ್ರೇಲಿಯಾ, ಮತ್ತು ಏಷ್ಯಾದ ಜನರ ಮೇಲೆ ನಡೆದ ಈ ಹಿಂದಿನ 85 ಅಧ್ಯಯನಗಳನ್ನು ಪರಿಶೀಲಿಸಿದ್ದಾರೆ. ದಿನವೊಂದಕ್ಕೆ ಮೂರು ಕಪ್ ಕಾಫಿ ಸೇವಿಸುವ ಜನರು 1.84 ವರ್ಷ ಅಧಿಕ ಜೀವಿಸುತ್ತಾರೆ ಎಂದು ಅಧ್ಯಯನವು ಕಂಡುಹಿಡಿದಿದೆ. ಅಧ್ಯಯನದಲ್ಲಿ ಪಾಲ್ಗೊಂಡವರು ಸೇವಿಸಿದ ವಿವಿಧ ಪ್ರಕಾರದ ಕಾಫಿಯ ಮೇಲೆ ಫಲಿತಾಂಶಗಳನ್ನು ಕಂಡುಕೊಳ್ಳಲಾಗಿದೆ. ಆದ್ದರಿಂದ ಪ್ರಯೋಜನಗಳು ಕೇವಲ ಕಾಫಿ ಕುಡಿಯುವುದಕ್ಕೆ ಸೀಮಿತವಾಗಿಲ್ಲ. ಆದರೆ, ವಿಸ್ತ್ರತವಾದ ಅಧ್ಯಯನವು ಕಾಫಿ ಕುಡಿಯುವುದರ ಪ್ರಯೋಜನವನ್ನು ಹೇಳಿದೆ. ಇದರಲ್ಲಿ ಉರಿಯೂತ ಮತ್ತು ಚಯಾಪಚಯ ಕ್ರಿಯೆಯಂತಹ ಆರೋಗ್ಯ ಸೂಚ್ಯಂಕಗಳ ಬಗ್ಗೆಯೂ ಅದರಲ್ಲಿ ವಿಶ್ಲೇಷಿಸಲಾಗಿದೆ. ಕಾಫಿಯಿಂದ ಸಿಗುವ ಪ್ರಯೋಜನಗಳನ್ನು ನಿರ್ಧರಿಸಲು ಧೂಮಪಾನ ಮತ್ತು ಮದ್ಯಪಾನ ಸೇವನೆಯನ್ನು ಸಹ ಗಣನೆಗೆ ತೆಗೆದುಕೊಳ್ಳಲಾಗಿದೆ.
ಕಾಫಿ ಕುಡಿಯುವುದರಿಂದ ಸಿಗುವ ಪ್ರಯೋಜನಗಳು
ಸಂಶೋಧಕರು ತಮ್ಮ ಅಧ್ಯಯನವನ್ನು ಹೆಲ್ತ್ ಜರ್ನಲ್‌ನಲ್ಲಿ ಪ್ರಕಟಿಸಿದ್ದಾರೆ. ಕಾಫಿಯ ನಿಯಮಿತ ಸೇವನೆಯಿಂದ ಸ್ನಾಯು, ಹೃದಯ, ಮಾನಸಿಕ ಮತ್ತು ಪ್ರತಿರಕ್ಷಣಾ ವ್ಯವಸ್ಥೆಯ ಕಾರ್ಯವನ್ನು ಸುಧಾರಿಸುತ್ತದೆ ಎಂದು ಕಂಡುಬಂದಿದೆ. ಹೃದ್ರೋಗ, ಉಸಿರಾಟದ ಕಾಯಿಲೆ, ಪಾರ್ಶ್ವವಾಯು, ಕೆಲವು ವಿಧದ ಕ್ಯಾನ್ಸರ್, ಮಧುಮೇಹ, ಬುದ್ಧಿಮಾಂದ್ಯತೆ, ಖಿನ್ನತೆ ಮತ್ತು ಸ್ನಾಯು ದೌರ್ಬಲ್ಯಗಳ ಅಪಾಯ ಮುಂತಾದವುಗಳು ಹೆಚ್ಚಿನ ಪ್ರಮಾಣದಲ್ಲಿ ಕಡಿಮೆಯಾಗುತ್ತದೆ.
ಕಾಫಿಯಲ್ಲಿರುವ ಕೆಫೀನ್ ಆರೋಗ್ಯಕರ ಜೀವಿತಾವಧಿಯನ್ನು ಖಾತರಿಪಡಿಸದಿದ್ದರೂ, ಇದು ಆರೋಗ್ಯಕ್ಕೆ ಧನಾತ್ಮಕ ಪರಿಣಾಮಗಳನ್ನು ನೀಡುತ್ತದೆ. ಅಲ್ಲದೆ ಇದು ಜೀವನದ ಗುಣಮಟ್ಟವನ್ನು ಸುಧಾರಿಸುತ್ತದೆ. ಕಾಫಿ ಗಂಭೀರ ಕಾಯಿಲೆಗಳ ಅಪಾಯವನ್ನು ಕಡಿಮೆ ಮಾಡುತ್ತದೆ ಎಂದು ವಿವರಿಸಲಾಗಿದೆ.
ಕಾಫಿ ಕುಡಿಯುವ ಸರಿಯಾದ ವಿಧಾನ ಯಾವುದು?
ಕಾಫಿಯನ್ನು ಮಿತವಾಗಿ ಕುಡಿಯುವುದರಿಂದ ಅನೇಕ ಆರೋಗ್ಯ ಪ್ರಯೋಜನಗಳಿವೆ. ಇದು ಮಹಿಳೆಯರಲ್ಲಿ ಸ್ತನ ಕ್ಯಾನ್ಸರ್ ತಡೆಗಟ್ಟುವ ಶಕ್ತಿಯನ್ನು ಹೊಂದಿದೆ. ಇದು ಯಕೃತ್ತಿನ ಆರೋಗ್ಯವನ್ನು ಕಾಪಾಡಿಕೊಳ್ಳಲು ಸಹ ಸಹಾಯ ಮಾಡುತ್ತದೆ. ಮನಸ್ಸು ಸರಿ ಇಲ್ಲದಿದ್ದಾಗ ಕಾಫಿ ಕುಡಿಯುವುದರಿಂದ ಚೈತನ್ಯ ತುಂಬುತ್ತದೆ. ಆದರೆ, ಅತಿಯಾಗಿ ಕುಡಿದರೆ ಅದರಿಂದ ಆರೋಗ್ಯಕ್ಕೆ ಹಾನಿಯುಂಟಾಗುತ್ತದೆ. ಹೃದಯವು ರಕ್ತವನ್ನು ಪಂಪ್ ಮಾಡಲು ಅಸಮರ್ಥವಾದಾಗ ದಿನಕ್ಕೆ ಒಂದು ಅಥವಾ ಎರಡು ಕಪ್ ಕಾಫಿ ಕುಡಿಯುವುದು ಹೃದಯದ ಆರೋಗ್ಯವನ್ನು ಸುಧಾರಿಸುತ್ತದೆ. ಆದ್ದರಿಂದ ದಿನವೊಂದಕ್ಕೆ ಹೆಚ್ಚೆಂದರೆ ಎರಡು ಕಪ್ ಕಾಪಿ ಕುಡಿಯಬಹುದು. ಅದಕ್ಕಿಂತ ಹೆಚ್ಚು ಕುಡಿಯುವುದನ್ನು ತಪ್ಪಿಸಬೇಕು.
(ಗಮನಿಸಿ: ಅಧ್ಯಯನಗಳು ಮತ್ತು ಆರೋಗ್ಯ ನಿಯತಕಾಲಿಕಗಳಿಂದ ಸಂಗ್ರಹಿಸಿದ ಮಾಹಿತಿಯನ್ನು ಇಲ್ಲಿ ಒದಗಿಸಲಾಗಿದೆ. ಇದು ಕೇವಲ ಮಾಹಿತಿಯಾಗಿದೆ. ಇದು ಔಷಧಿ ಅಥವಾ ಚಿಕಿತ್ಸೆಗೆ ಪರ್ಯಾಯವಲ್ಲ. ಆರೋಗ್ಯದ ಬಗ್ಗೆ ಏನೇ ಅನುಮಾನವಿದ್ದರೂ ತಕ್ಷಣ ವೈದ್ಯರನ್ನು ಸಂಪರ್ಕಿಸುವುದು ಅತ್ಯಗತ್ಯ.)
ವಿಭಾಗ