logo
ಕನ್ನಡ ಸುದ್ದಿ  /  ಕರ್ನಾಟಕ  /  Forest Tales: ನಾಗರಹೊಳೆಯಲ್ಲಿ ಹಸಿರು ಉಕ್ಕಿಸಿದ ಹಿರೀ ಜೀವ; ಕಾಡನ್ನು ಎದೆಯಲ್ಲಿಟ್ಟು ಜೋಪಾನ ಮಾಡಿದ ಕೆಎಂ ಚಿಣ್ಣಪ್ಪ ಅವರಿಗಿದೋ ನುಡಿ ನಮನ

Forest Tales: ನಾಗರಹೊಳೆಯಲ್ಲಿ ಹಸಿರು ಉಕ್ಕಿಸಿದ ಹಿರೀ ಜೀವ; ಕಾಡನ್ನು ಎದೆಯಲ್ಲಿಟ್ಟು ಜೋಪಾನ ಮಾಡಿದ ಕೆಎಂ ಚಿಣ್ಣಪ್ಪ ಅವರಿಗಿದೋ ನುಡಿ ನಮನ

Umesha Bhatta P H HT Kannada

Feb 27, 2024 06:43 PM IST

google News

ಅರಣ್ಯಸೇನಾನಿ ಕೆ.ಎಂ.ಚಿಣ್ಣಪ್ಪರನ್ನು ನೆನೆದು..

    • Kodagu Green Hero ಕೊಡಗಿನ ಕೆ.ಎಂ.ಚಿಣ್ಣಪ್ಪ ನಿಜ ಹಸಿರು ಪಥಿಕ. ಕಾಡಿನ ಪ್ರದೇಶದಲ್ಲಿ ಹುಟ್ಟಿ, ಅಲ್ಲಿಯೇ ಇದ್ದುಕೊಂಡು ಅರ್ಧ ಶತಮಾನಕ್ಕೂ ಮುಗಿಲಾಗಿ ಅದಕ್ಕಾಗಿ ಕೆಲಸ ಮಾಡುವುದು ಸುಲಭದ ಮಾತಲ್ಲ. ಈ ಕಾರಣಕ್ಕೆ ಚಿಣ್ಣಪ್ಪರದ್ದು ಅರಣ್ಯ, ಪರಿಸರ ವಿಚಾರದಲ್ಲಿ ನೆನಪಿನಲ್ಲಿ ಉಳಿವ ದಿಟ್ಟ ವ್ಯಕ್ತಿತ್ವ.
ಅರಣ್ಯಸೇನಾನಿ ಕೆ.ಎಂ.ಚಿಣ್ಣಪ್ಪರನ್ನು ನೆನೆದು..
ಅರಣ್ಯಸೇನಾನಿ ಕೆ.ಎಂ.ಚಿಣ್ಣಪ್ಪರನ್ನು ನೆನೆದು..

ಅದು 80ರ ದಶಕ. ಚಿಕ್ಕಮಗಳೂರು ಭಾಗದ ಪೊಲೀಸ್‌ ಅಧಿಕಾರಿಯೊಬ್ಬರು ನಾಗರಹೊಳೆಯಲ್ಲಿ ಉಳಿಯಲು ಎರಡು ದಿನ ಬರುವ ಕರೆಯನ್ನು ಮಾಡಿದ್ದರು. ಆಯಿತು ಬನ್ನಿ ಎನ್ನುವ ಉತ್ತರ. ಅಲ್ಲಿ ಉಳಿವಾಗ ನಮಗೆ ನಾಗರಹೊಳೆಯ ಊಟವೇ ಬೇಕು. ಆಗಲಿ ಮಾಡಿಸೋಣ ಎನ್ನುವ ಉತ್ತರ ಇತ್ತ ಕಡೆಯಿಂದ. ನಾಗರಹೊಳೆ ಊಟ ಎಂದರೆ ಗೊತ್ತಲ್ಲ ಎನ್ನುವ ಮತ್ತೊಂದು ಪ್ರಶ್ನೆ ಪೊಲೀಸ್‌ ಅಧಿಕಾರಿಯಿಂದ. ಎಲ್ಲರಿಗೂ ಮಾಡುವ ಊಟ ಎಂದಾಗ ಅಲ್ಲಲ್ಲ ಜಿಂಕೆ ಮಾಂಸದ ಊಟ ಎನ್ನುವ ಬೇಡಿಕೆ. ಇದನ್ನೆಲ್ಲಾ ಕೇಳಿಸಿಕೊಳ್ಳುತ್ತಿದ್ದವರಿಗೆ ಬಂದ ಸಿಟ್ಟು ಅಷ್ಟಿಷ್ಟಲ್ಲ. ನೀವು ನಾಗರಹೊಳೆಗೆ ಉಳಿಯಲು ಬಂದರೆ ನಾನೇ ನಿಮ್ಮನ್ನು ಗುಂಡು ಹೊಡೆದು ಸಾಯಿಸುತ್ತೇನೆ ಎಂಬ ಅಬ್ಬರ. ಗುಂಡುಹೊಡೆದಂತ ಮಾತು ಕೇಳಿಸಿಕೊಂಡ ಪೊಲೀಸ್‌ ಅಧಿಕಾರಿ ಫೋನು ಇಟ್ಟರು. ಅಷ್ಟೇ ಅಲ್ಲ ಇತ್ತ ಕಡೆ ಬರಲು ಮನಸು ಮಾಡಲಿಲ್ಲ.

ಸರಿಯಾಗಿ 12 ವರ್ಷದ ಹಿಂದೆ ಇದೇ ಅವಧಿಯಲ್ಲಿ ನಾಗರಹೊಳೆಯಲ್ಲಿ ಭಾರೀ ಬೆಂಕಿ ಬಿದ್ದಿತ್ತು. ಅಧಿಕಾರಿಗಳು, ಸಿಬ್ಬಂದಿಗಳ ತಿಕ್ಕಾಟದಲ್ಲಿ ನಾಗರಹೊಳೆಯ ಮುಖ್ಯ ಭಾಗಕ್ಕೆ ಬೆಂಕಿ ಕೊಡಲಾಗಿತ್ತು. ನಾಗರಹೊಳೆ ಸಾವಿರಾರು ಎಕರೆ ಲೆಕ್ಕದಲ್ಲಿ ಹೊತ್ತಿ ಉರಿದು ಹೋಯಿತು. ನೂರಾರು ವರ್ಷಗಳಿಂದ ಬೆಳೆದ, ತಮ್ಮ ಜೀವವನ್ನೇ ಮುಡಿಪಾಗಿಟ್ಟು ಜತನದಿಂದಲೇ ಕಾಪಾಡಿಕೊಂಡು ಬಂದ ಅದೆಷ್ಟೋ ಜೀವಗಳಿಗೆ ತಮ್ಮ ಹೃದಯಕ್ಕೆ ಬೆಂಕಿ ಬಿದ್ದಷ್ಟು ಆಕ್ರೋಶ. ಅರಣ್ಯ ಸಚಿವರಿಂದ ಹಿಡಿದು ಹಿರಿಯ ಅಧಿಕಾರಿಗಳು ಸಾಲುಗಟ್ಟಿ ಬಂದರು. ಬೆಂಕಿ ಬಿದ್ದ ಸ್ಥಳ ನೋಡಿಕೊಂಡು ಹೋದರು. ಆದರೆ ಅದೇ ಸ್ಥಳಕ್ಕೆ ಹೋಗಿ ಕಣ್ಣೀರು ಹಾಕಿ ಬಂದವರು ಆ ನಿವೃತ್ತ ಅಧಿಕಾರಿ. ಆನಂತರ ಇಳಿ ವಯಸ್ಸಿನಲ್ಲೂ ಮತ್ತೆ ಆ ಜಾಗ ಚಿಗುರೊಡೆದು ಬೆಳೆಯಲು ಗಟ್ಟಿಯಾಗಿ ನಿಂತವರು ಅವರೇ.

ಖಡಕ್‌ ನಿಲುವು ಹಸಿರು ಹೃದಯೀ

ಈ ಎರಡೂ ಭಿನ್ನ ಘಟನೆಗಳಲ್ಲಿ ಇದ್ದವರು ಕೆ.ಎಂ.ಚಿಣ್ಣಪ್ಪ ಎಂಬ ಎತ್ತರದ ವ್ಯಕ್ತಿತ್ವದ ಹಿರಿಯ ಜೀವ. ಅವರ ದೇಹಕ್ಕೆ ವಯಸ್ಸಾಗಿದ್ದರೂ ಮನಸಿಗಲ್ಲ. ಕಾಡಿನ ಮೇಲಿನ ಪ್ರೀತಿ, ಸಂರಕ್ಷಣೆ ಮೋಹ ಒಂದು ಚೂರು ಕಡಿಮೆಯಾಗಿರಲಿಲ್ಲ. ಅದೆಷ್ಟೋ ಕಾಡಿನ ಕಥೆಗಳನ್ನು ತಮ್ಮೊಳಗೆ ಇಟ್ಟುಕೊಂಡವರು. ಕಾಡು ನೋಡಲು ಬಂದವರಿಗೆ. ಕರೆ ಮಾಡಿ ಮಾತನಾಡಿಸಿದವರಿಗೆ ಅಷ್ಟೇ ಪ್ರೀತಿಯಿಂದ ಉಣಬಡಿಸುತ್ತಿದ್ದವರು ಕೆ.ಎಂ.ಚಿಣ್ಣಪ್ಪ.

ಅರಣ್ಯವನ್ನು ಮೋಜಿಗಾಗಿ ನೋಡಲು ಬರುತ್ತೇವೆ ಎನ್ನುವವರಿಗೆ ಮುಲಾಜಿಲ್ಲದೇ ನೀರಿಳಿಸುತ್ತಿದ್ದವರು ಚಿಣ್ಣಪ್ಪ. ಇಂತಹ ಅದೆಷ್ಟೋ ಪ್ರಸಂಗಗಳು ಇವೆ. ಅದೇ ಅರಣ್ಯವನ್ನು ನೆಮ್ಮದಿ ಅರಸಿ ಬರುವ ತಾಣವೇ, ಪರಿಸರ ಮಾತೆಯ ರೂಪದಲ್ಲಿ ನೋಡುವವರಿಗೆ ಇವರ ಬಳಿ ಗೌರವ. ಹಾಗೆ ಚಿಣ್ಣಪ್ಪರೊಂದಿಗೆ ಬೆರೆತು, ಕಲಿತು ಹೋದ ಅದೆಷ್ಟೋ ದೃಷ್ಟಾಂತಗಳೂ ಇವೆ.

ಅದೇ ಕಾಡಿಗೆ ಬೆಂಕಿ ಬಿದ್ದು ಅನಾಹುತ ಆದಾಗ, ಬೇಟೆಯಂತಹ ಘಟನೆಗಳು ನಡೆದಾಗ ಮಮ್ಮಲ ಮರುಗಿದವರಲ್ಲಿ ಚಿಣ್ಣಪ್ಪರೇ ಮೊದಲಿಗರು. ಬೆಂಕಿ ಬಿದ್ದ ಪ್ರಸಂಗದಲ್ಲಿ ಅವರನ್ನು ಹತ್ತಿರದಿಂದ ಕಂಡವರಿಗೆ, ಆಗ ಮಾತನಾಡಿಸಿದವರಿಗೆ ಬೇಸರದ ನಿಟ್ಟುಸಿರು ಅವರ ಮಾತುಗಳಲ್ಲಿ ವ್ಯಕ್ತವಾಗುತ್ತಿದ್ದುದನ್ನು ಕಂಡಿದ್ದೇವೆ.

ಅರಣ್ಯ ಸೇವೆಗೆ ಸೇರ್ಪಡೆ

ಕೊಡಗಿನಲ್ಲಿ ಕಾಯಕ ಎಂದರೆ ಅದು ಸೇನೆಯಲ್ಲಿಯೇ ಎನ್ನುವ ವಾತಾವರಣವಿತ್ತು. ಅದು ಚಿಣ್ಣಪ್ಪ ಅವರನ್ನು ಬಿಟ್ಟಿರಲಿಲ್ಲ. ನಾಗರಹೊಳೆಗೆ ಹೊಂದಿಕೊಂಡಿರುವ ಪುಟ್ಟ ಗ್ರಾಮ ಶ್ರೀಮಂಗಲ ಸಮೀಪದ ಕುಮಟೂರಿನಲ್ಲಿ ಜನಿಸಿದ ಚಿಣ್ಣಪ್ಪ ಅವರು ಒಪ್ಪಿದ್ದರೆ ದೇಶ ಸೇವೆಗೆ ಹೋಗಬೇಕಿತ್ತು. ಅವರು ಆಯ್ದುಕೊಂಡಿದ್ದು ಹಸಿರು ಮಾತೆ ಸೇವೆ. ಕಾಡಿನ ಕಡೆ ಮುಖ ಮಾಡಿದವರು ಹಿಂದೆ ನೋಡಲೇ ಇಲ್ಲ. ಇಲಾಖೆಯಲ್ಲೂ ಎರಡೂವರೆ ದಶಕದ ನೇರ ಸೇವೆ, ಆನಂತರ ಮೂರು ದಶಕ ಸೇರಿ ಅರಣ್ಯಕ್ಕಾಗಿ ಆರು ದಶಕದ ಅವಧಿಯನ್ನು ಸವೆಸಿದವರು ಚಿಣ್ಣಪ್ಪ.

ಕೆಎಂ ಚಿಣ್ಣಪ್ಪ ಅವರು ಅರಣ್ಯ ಇಲಾಖೆಯನ್ನು ಉಪ ಅರಣ್ಯಾಧಿಕಾರಿಯಾಗಿ ಸೇರಿದ್ದು 1967ರಲ್ಲಿ. ಆಗ ವನ್ಯಜೀವಿ ಸಂರಕ್ಷಣೆಯ ಯಾವುದೇ ಗಟ್ಟಿ ಕಾಯಿದೆಗಳೂ ಇರಲಿಲ್ಲ. ಬೇಟೆ ಮುಕ್ತವಾಗಿತ್ತು, ಕಾಡಿಗೆ ಬರುವುದೇ ಮೋಜಿಗಾಗಿ ಎನ್ನುವ ಭಾವನೆ ದಟ್ಟವಾಗಿತ್ತು. ಅತಿಥಿಗಳಾಗಿ ಬಂದು ಬೇಟೆಯಾಡುವೂದು ಸಾಮಾನ್ಯವಾಗಿತ್ತು. ಆದರೂ ಇದಕ್ಕೆಲ್ಲಾ ಅವಕಾಶ ನೀಡದೇ ಆಗಲೇ ವನ್ಯಜೀವಿ ರಕ್ಷಣೆಗೆ ಪಣ ತೊಟ್ಟಿದ್ದವರು ಚಿಣ್ಣಪ್ಪ.

ಮಿತಿ ಮೀರಿದ ಬೇಟೆಗಾರರು, ಮರ ಸಾಗಣೆದಾರರು, ಪ್ರಾಣಿ ಕೊಲ್ಲುವವರ ವಿರುದ್ದ ಸಮರವನ್ನೇ ಸಾರಿದ್ದರು. ಎಷ್ಟೋ ವರ್ಷ ಒಬ್ಬಂಟಿಯಾಗಿ ಹೋರಾಡಿದವರು ಅವರು. ಅದೊಂದು ರೀತಿ ಒನ್‌ ಮ್ಯಾನ್‌ ಆರ್ಮಿಯಲ್ಲೇ ಅವರ ಹೋರಾಟ ಕೆಚ್ಚದೆಯಿಂದಲೇ ಸಾಗಿತ್ತು. ನಮ್ಮ ಅರಣ್ಯ, ನಮ್ಮ ವನ್ಯಜೀವಿಗಳನ್ನು ಉಳಿಸಿಕೊಳ್ಳಬೇಕು. ನಾಗರಹೊಳೆ ಕಾಡು ಉಳಿಯಬೇಕು ಎನ್ನುವುದು ಅವರ ಮನಸಿನಲ್ಲಿದ್ದ ಒಂದೇ ಧ್ಯೇಯ. ಕಷ್ಟದ ದಿನಗಳನ್ನು ತಪಸ್ಸಿನಂತೆಯೇ ಎದುರಿಸಿ ಗೆದ್ದವರು ಚಿಣ್ಣಪ್ಪ. ಆಗಲೇ ನಾಗರಹೊಳೆಯಲ್ಲಿ ಅರಣ್ಯ ಸಿಬ್ಬಂದಿಗೆ ಗಸ್ತು ವ್ಯವಸ್ಥೆಯನ್ನು ಹಿರಿಯ ಅಧಿಕಾರಿಗಳ ಮಾರ್ಗದರ್ಶನದಲ್ಲಿ ಜಾರಿಗೊಳಿಸಿದ್ದರು.

ಒಂಟಿ ಹೋರಾಟಗಾರ

ಅವರ ಪ್ರಯತ್ನದಿಂದಾಗಿಯೇ ಸಾಕಷ್ಟು ವನ್ಯಜೀವಿಗಳ ಬೇಟೆ, ಹತ್ಯೆ, ಸಾಗಣೆಯಂತಹ ಪ್ರಮಾಣ ಕೊಂಚ ಕಡಿಮೆಯೂ ಆಗಿತ್ತು. ನಾಗರಹೊಳೆ ವ್ಯಾಪ್ತಿ ವಿಸ್ತರಣೆ ಹಿಂದೆ ಚಿಣ್ಣಪ್ಪ ಅವರ ಪಾತ್ರವೂ ಇದೆ. ಅವರು ಇಲಾಖೆ ಸೇರಿದ ಅವಧಿಯಲ್ಲಿ ಇಡೀ ನಾಗರಹೊಳೆ ಪ್ರದೇಶ 250 ಚದರ ಕಿ.ಮಿ.ನಷ್ಟಿತ್ತು. ನಿವೃತ್ತಿ ಪಡೆಯುವ ಹೊತ್ತಿಗೆ ಅದು 640 ಚದರ ಕಿ.ಮಿ.ಗೆ ವಿಸ್ತರಣೆಗೊಂಡಿತ್ತು.ಅಂದರೆ 25 ವರ್ಷದಲ್ಲಿ ನಾಗರಹೊಳೆ ಪ್ರದೇಶ ಬಹುಪಾಲು ಮೂರು ಪಟ್ಟು ಹೆಚ್ಚಿತ್ತು. ಅಂದರೆ ಕೊಡಗು, ಮೈಸೂರು ಜಿಲ್ಲೆಯಲ್ಲಿ ಹಂಚಿರುವ ನಾಗರಹೊಳೆ ಪ್ರದೇಶವನ್ನು ವಿಸ್ತರಿಸುತ್ತಾ ಕಾಡು ಪ್ರಾಣಿಗಳ ಜೀವಕ್ಕೆ ಗಟ್ಟಿ ನೆಲೆಯನ್ನೇ ತಂದು ಕೊಟ್ಟವರು ಚಿಣ್ಣಪ್ಪ. ಈಗ ನಾಗರಹೊಳೆಯಲ್ಲಿ ಇಷ್ಟು ಹುಲಿ, ಆನೆ ಸಹಿತ ಪ್ರಮುಖ ವನ್ಯಜೀವಿಗಳು, ಸಂರಕ್ಷಣಾ ಚಟುವಟಿಕೆ ಇರುವ ಹಿಂದಿನ ದೊಡ್ಡ ಶ್ರಮ ಇರುವುದು ಚಿಣ್ಣಪ್ಪ ಅವರಲ್ಲಿ. ಸ್ಥಳೀಯರು ಎನ್ನುವ ಭಾವನೆ ಒಂದು ಕಡೆ, ಮುಲಾಜಿಲ್ಲದೇ ಹೇಳುತ್ತಿದ್ದ ರೀತಿ, ಉನ್ನತ ಅಧಿಕಾರಿಗಳನ್ನು ಮನ ಒಲಿಸಿ ಅದಕ್ಕೊಂದು ರೂಪ ನೀಡುತ್ತಿದ್ದ ಪರಿ. ಸಿಟ್ಟು ಬಂದ ಕೆಲವೇ ಕ್ಷಣದಲ್ಲಿ ಸಂತಸದ ಹೊನಲನ್ನು ಹರಿಸುತ್ತದ್ದ ಚಿಣ್ಣಪ್ಪ ಅವರ ಬಗ್ಗೆ ಅಷ್ಟೇ ಅಭಿಮಾನ ಉಂಟಾಗುತ್ತಿತ್ತು. ಇದರಿಂದಲೇ ಅವರು ನಾಗರಹೊಳೆ ವಿಚಾರ ಬಂದಾಗ ಒಂದು ದಂತ ಕಥೆಯ ರೂಪದಲ್ಲಿಯೇ ನಿಲ್ಲುತ್ತಾರೆ.

ಆರು ದಶಕದಲ್ಲಿ ಅವರು ಅರಣ್ಯ ಸಂರಕ್ಷಣೆಗಾಗಿ ತಮ್ಮನ್ನು ತಾವು ಮುಡುಪಾಡಿಟ್ಟುಕೊಂಡಿದ್ದರು. ಒಂದೂವರೆ ಲಕ್ಷಕ್ಕೂ ಅಧಿಕ ಮಕ್ಕಳು. ಪರಿಸರ ಪ್ರಿಯರು, ಗ್ರಾಮೀಣ ಪ್ರದೇಶದವರು, ರೈತರಿಗೆ ಅರಣ್ಯ ಮಹತ್ವ ಸಾರುವ ಪ್ರಯತ್ನ ಮಾಡಿದ್ದಾರೆ. 2500ಕ್ಕೂ ಅಧಿಕ ಸಿಬ್ಬಂದಿಗೆ ಅರಣ್ಯ ಪಾಠವನ್ನು ಹೇಳಿಕೊಟ್ಟಿದ್ದಾರೆ. ಅದೆಷ್ಟೋ ವಿಚಾರಸಂಕಿರಣ, ಜಾಥಾ, ಹೋರಾಟ, ಸಂಭ್ರಮದ ಕ್ಷಣದಲ್ಲೂ ಭಾಗಿಯಾಗಿದ್ದಾರೆ.

ಉಲ್ಲಾಸ ಕಾರಂತ್‌ ಸಾಥ್‌

ಚಿಣ್ಣಪ್ಪ ಅವರಿಗೆ ನಾಗರಹೊಳೆಯ ಹಾದಿಯಲ್ಲಿ ಸಿಕ್ಕವರು ವನ್ಯಜೀವಿ ತಜ್ಞ ಡಾ.ಉಲ್ಲಾಸ ಕಾರಂತ್‌. 1969ರಲ್ಲಿ ಚಿಣ್ಣಪ್ಪ ನಾಗರಹೊಳೆಯಲ್ಲಿ ಅರಣ್ಯಾಧಿಕಾರಿಯಾಗಿ ಕೆಲಸ ಮಾಡುವ ಸಮಯ. ಅಲ್ಲಿಗೆ ಸಂಶೋಧನೆಗೆ ಬಂದ ಯುವಕ ಉಲ್ಲಾಸ್‌ ಕಾರಂತ್‌ ಜತೆಗೆ ಒಡನಾಟ ಬೆಳೆಯಿತು.

ಚಿಣ್ಣಪ್ಪ ಅವರೊಬ್ಬ ಅರಣ್ಯ ಸೇನಾನಿ. ಅಕ್ಷರಶಃ ಅರಣ್ಯಕ್ಕಾಗಿಯೇ ತಮ್ಮ ಬದುಕನ್ನು ಮೀಸಲಾಗಿಟ್ಟವರು. ಅರಣ್ಯಕ್ಕೋಸ್ಕರು ಅವರು ತೋರಿದ ಧೈರ್ಯ, ಶೌರ್ಯ ನಿಜಕ್ಕೂ ಅನುಕರಣೀಯ. ವನ್ಯಜೀವಿಗಳ ಬಗ್ಗೆ ಅವರಿದ್ದ ಜ್ಞಾನ ಅಪಾರವಾದದ್ದು ಎಂದು ಉಲ್ಲಾಸ್‌ ಕಾರಂತ್‌ ತಮ್ಮ ಅನುಗಾಲದ ಗೆಳೆಯನನ್ನು ನೆನಪಿಸಿಕೊಳ್ಳುತ್ತಾರೆ.

ಕಾಡಿನೊಳಗೊಂದು ಜೀವ

ಚಿಣ್ಣಪ್ಪ ಅವರ ಆತ್ಮಕಥನ ಕಾಡಿನೊಳಗೊಂದು ಜೀವ ಪುಸ್ತಕ ರೂಪದಲ್ಲಿ ಐದು ವರ್ಷ ಹಿಂದೆಯೇ ಬಂದಿದೆ. ಲೇಖಕ ಟಿ.ಎಸ್‌.ಗೋಪಾಲ್‌ ಅವರ ನಿರೂಪಣೆಯಲ್ಲಿ ಆರು ದಶಕದ ದಟ್ಟಾನುಭವವನ್ನು ಕಟ್ಟಿಕೊಡುತ್ತದೆ.

ಯೋಗಿಯ ಶುದ್ದಶೀಲ, ನಿರ್ಲಿಪ್ತತೆಗಳನ್ನು ಕಮ್ಯುನಿಸ್ಟ್‌ ಕಾಮಿಸಾರ್‌ ಒಬ್ಬನ ನಿಷ್ಠುರ ಕಾರ್ಯದಕ್ಷತಯನ್ನು ಕೀಟಲೆ ಹುಡುಗ ನ ವಿನೋದ ಪ್ರಜ್ಞೆಯನ್ನು ಹದವಾಗಿ ಬೆರೆಸಿದ ಪಾಕದಿಂದ ಹುಟ್ಟಿದ ಕೆ.ಎಂ.ಚಿಣ್ಣಪ್ಪ ನಮ್ಮ ಸುತ್ತಲ ಕಾಡುಗಳಲ್ಲಿ ಓಡಾಡಿದ ಒಂದು ಎತ್ತರದ ಜೀವ. ನಾಗರಹೊಳೆಯಲ್ಲಿ ಕಾಲು ಶತಮಾನದ ಕಾರುಬಾರು, ಭಾರತದ ವನ್ಯಜೀವಿ ಸಂರಕ್ಷಣೆಯ ಇತಿಹಾಸ ಪರ್ವಕಾಲದ ಒಂದು ಅಪರೂಪದ ದಾಖಲೆ. ಈ ಘಟನಾವಳಿಗಳನ್ನೂ ಚಿಣ್ಣಪ್ಪನವರ ಉನ್ನತ ವ್ಯಕ್ತಿತ್ವವನ್ನು ಟಿ.ಎಸ್‌.ಗೋಪಾಲ್‌ ಅತ್ಯಂತ ಸಮರ್ಥವಾಗಿ ಪುಸ್ತಕದ ರೂಪದಲ್ಲಿ ಕನ್ನಡಿಗರ ಮುಂದೆ ಇಟ್ಟಿದ್ದಾರೆ. ಕಾಡಿನೊಳಗೊಂದು ಜೀವ ವನ್ಯಜೀವಿ ಸಂರಕ್ಷಣೆಯಲ್ಲಿ ಆಸಕ್ತಿ ಕಾರ್ಯಶೀಲರಿಗೆಲ್ಲಾ ಮುಂದಿನ ದಾರಿ ತೋರುವ ದೀವಟಿಗೆಯಾಗಿ ಬೆಳಗುವುದೆಂದು ನನ್ನ ನಂಬಿಕೆ ಎಂದು ಆತ್ಮಕಥನದ ಬಗ್ಗೆ ಉಲ್ಲಾಸ್‌ ಕಾರಂತ್‌ ಉಲ್ಲೇಖಿಸಿರುವ ಬೆನ್ನುಡಿ ಇಡೀ ಚಿಣ್ಣಪ್ಪರ ವ್ಯಕ್ತಿತ್ವವನ್ನು ಕಟ್ಟಿಕೊಡುತ್ತದೆ.

ಚಿಣ್ಣಪ್ಪರನ್ನು ಕಂಡಂತೆ

ಕೋಟ್ರಂಗಡ ಮೇದಪ್ಪ ಚಿಣ್ಣಪ್ಪ ಅರಣ್ಯ ಇಲಾಖೆ ಕಂಡ ಅತ್ಯಂತ‌ ನಿಷ್ಟಾವಂತ ಅರಣ್ಯಾಧಿಕಾರಿ ಎಂದರೆ ತಪ್ಪಾಗಲಾರದು. ಅವರ ವೃತ್ತಿ ಜೀವನದಲ್ಲಿ ನಡೆದ ಸುಮಾರು 57 ಪ್ರಮುಖ ಘಟನೆಗಳು ಈ ಪುಸ್ತಕದಲ್ಲಿದೆ. ಅಷ್ಟು ಕಥೆಗಳಲ್ಲಿ ಅವರ ಜೀವನಶೈಲಿ, ವೃತ್ತಿಧರ್ಮ, ಎಂಭತ್ತು- ತೊಂಬತ್ತನೇ ದಶಕದಲ್ಲಿ ಅರಣ್ಯ ಇಲಾಖೆ, ಕಾಡು ಪ್ರಾಣಿಗಳ ಬಗೆಗಿನ ಸ್ಥಿತಿಗತಿ ಅರಿವಿಗೆ ಬರುತ್ತದೆ. ಕಾಡು ಪ್ರಾಣಿಗಳು ಅಚಾನಕ್ಕಾಗಿ ಎದರಾದ ಘಟನೆಗಳು ಬಹಳ ರೋಚಕವಾಗಿದೆ. ಕಳ್ಳಕಾಕರನ್ನು ಎದುರು ಹಾಕಿಕೊಂಡು ಕಾಡೊಳಗೆ ಗಂಡ ಹೆಂಡತಿ ಬದುಕಿ ಕಾಡನ್ನು ಉಳಿಸಿದ್ದೇ ಒಂದು ಅತ್ಯಧ್ಬುತ ಸಾಧನೆ. ಕಾಡು, ಕಾಡುಪ್ರಾಣಿ, ಪರಿಸರ ಸಂರಕ್ಷಣೆಯ ಬಗೆಗೆ ಬೇರೆ ಬೇರೆ ರೀತಿಯ ಆಯಾಮಗಳಲ್ಲಿ ವರ್ಣಿಸಿದ್ದಾರೆ‌. ಚಿಣ್ಣಪ್ಪರು ಜೀವನದ ಕಥೆಯನ್ನು ನಮ್ಮೆದುರಿಗೆ ಕುಳಿತು ಹೇಳಿದಂತೆ ಟಿ.ಎಸ್.ಗೋಪಾಲ್ ಅವರು ಪುಸ್ತಕವನ್ನು ಬರೆದಿದ್ದಾರೆ‌. ಚಿಣ್ಣಪ್ಪ ಅವರು ತಮ್ಮ ಜೀವನ್ನವನ್ನು ಕಾಡೊಳಗೆ ಕಾಡಿಗಾಗಿ ಪ್ರಾಣವನ್ನು ಲೆಕ್ಕಿಸದೆ, ಯಾರಿಗೂ ತಲೆಬಾಗದೆ ಪರಿಸರ ಸಂರಕ್ಷಸಿರುವುದು ಸಾಧನೆಯೇ ಸರಿ. ಈ ಪುಸ್ತಕ ಓದಿದ ನಂತರ ಅವರ ಬಗ್ಗೆ ಮತ್ತಷ್ಟು ತಿಳಿಯುವ ಹಂಬಲವಾಗುವುದಂತೂ ನಿಜ ಎಂದು ಸ್ಕಂದ ಪ್ರಸಾದ್ ಪ್ರತಿಕ್ರಿಯಿಸಿರುವ ಪರಿ ಚಿಣ್ಣಪ್ಪರ ಇಡೀ ವ್ಯಕ್ತಿತ್ವವನ್ನು ಕಟ್ಟಿಕೊಡುತ್ತದೆ.

ಚಿಣ್ಣಪ್ಪ ಆದರ್ಶ ಚಿರಸ್ಥಾಯಿ

ವನ್ಯಜೀವಿಗಳಿಗೆ ಎಲ್ಲೂ ಯಾವ ಆತಂಕವೂ ಇಲ್ಲದಿರುವ ಆದರ್ಶ ಸ್ಥಿತಿ ಒದಗುವುದಾದರೆ ನಾನು ಅನಾಗರಿಕನಾಗಿಯೇ ಇದ್ದುಬಿಡಲು ಸರ್ವದಾ ಸಿದ್ಧ. ಇರುವೆಯಿಂದ ಆನೆಯವರೆಗೆ ಸಮಸ್ತ ಜೀವಿಗಳು ಬಾಳಿ ಆಳಿದ ಈ ನೆಲದ ಅಧಿಪತ್ಯ ಎಲ್ಲಕ್ಕಿಂತ ಕನಿಷ್ಠನೂ ಬಹುಷಃ ಕೊನೆಯವನೂ ಆದ ಮಾನವನಿಗೆ ದೊರೆತದ್ದೇ ಈ ಜಗತ್ತಿನ ಕೊನೆಯ ಅಧ್ಯಾಯವಾಗುವುದಾದರೆ ಅದನ್ನು ತಡೆಯಲು ನಾನು ಎಷ್ಟರವನು ಎಂಬ ಪ್ರಶ್ನೆಗೆ ಉತ್ತರವಂತೂ ಇಲ್ಲ.

ಇದು ಕಾಡಿಗಾಗಿಯೇ ತಮ್ಮನ್ನು ಅರ್ಪಿಸಿಕೊಂಡ ಚಿಣ್ಣಪ್ಪ ಅವರು ಕಾಡಿನೊಳಗೊಂದು ಜೀವದ ಆತ್ಮಕಥನದಲ್ಲಿ ಭಿನ್ನವಿಸಿಕೊಳ್ಳುವ ಪರಿ. ಕಾಡಿಗೆ ತಲೆಬಾಗುವೆನು ಕಾಡು ಕಡಿಯುವವರಿಗೆ ಅಲ್ಲ ಎಂದು ಸಾರಿ ಈಗಲೂ ನಾಗರಹೊಳೆ ಅಸಂಖ್ಯಾತ ಮುಗಿಲೆತ್ತರದ ಮರ, ವನ್ಯಜೀವಿಗಳ ಲೋಕದಲ್ಲಿ ನೆನಪುಗಳನ್ನು ಸಾರಿ ಹೋಗಿದ್ದಾರೆ ಚಿಣ್ಣಪ್ಪ.

-ಕುಂದೂರು ಉಮೇಶ ಭಟ್ಟ,ಮೈಸೂರು

ವಿಭಾಗ

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ