Kodagu News: ಅರಣ್ಯಸೇನಾನಿ, ಕೊಡಗಿನ ನಿವೃತ್ತ ಅಧಿಕಾರಿ ಕೆಎಂ ಚಿಣ್ಣಪ್ಪ ನಿಧನ
Forest crusader ಅರಣ್ಯದೊಂದಿಗೆ ಬದುಕುತ್ತಲೇ ಕಾಡಿನ ರಕ್ಷಣೆಗೆ ಜೀವನ ಮುಡುಪಾಗಿಟ್ಟಿದ್ದ ಕೊಡಗಿನ ಕೊಟ್ರಂಗಡ ಮೇದಪ್ಪ ಚಿಣ್ಣಪ್ಪ( KM Chinnappa) ಸೋಮವಾರ ನಿಧನರಾದರು.
ಮಡಿಕೇರಿ: ಕಾಡಿಗೋಸ್ಕರವೇ ಕೊನೆವರೆಗೂ ಹೋರಾಟ ನಡೆಸಿದ ನಿವೃತ್ತ ಅರಣ್ಯಾಧಿಕಾರಿ ಹಾಗೂ ಕಾಡಿನ ತಜ್ಞ ಕೆ.ಎಂ.ಚಿಣ್ಣಪ್ಪ ಸೋಮವಾರ ನಿಧನರಾದರು. ಅವರಿಗೆ 84 ವರ್ಷ ವಯಸ್ಸಾಗಿತ್ತು. ಕೆಲ ದಿನಗಳಿಂದ ತೀವ್ರ ಅನಾರೋಗ್ಯಕ್ಕೆ ಒಳಗಾಗಿದ್ದ ಚಿಣ್ಣಪ್ಪ ಅವರು ಹಾಸಿಗೆ ಹಿಡಿದಿದ್ದರು. ಮಾತನಾಡಲು ಆಗುತ್ತಿರಲಿಲ್ಲ. ಚಿಕಿತ್ಸೆ ಮುಂದುವರೆದಿತ್ತು. ಸೋಮವಾರ ಮಧ್ಯಾಹ್ನ ಚಿಣ್ಣಪ್ಪ ಅವರು ಕೊನೆಯುಸಿರೆಳೆದರು.ಚಿಣ್ಣಪ್ಪ ಅವರ ಅಂತ್ಯಕ್ರಿಯೆ ಮಂಗಳವಾರ ಪೊನ್ನಂಪೇಟೆ ತಾಲ್ಲೂಕಿನ ಕಾಕೂರು ಗ್ರಾಮದ ತೋಟದಲ್ಲಿ ನೆರವೇರಲಿದೆ. ಎಂದು ಅವರ ಕುಟುಂಬದ ಸದಸ್ಯರು ತಿಳಿಸಿದ್ದಾರೆ.
ಕೊಡಗಿನಲ್ಲಿ ಜನನ
ದಕ್ಷಿಣ ಕೊಡಗಿನ, ಈಗಿನ ಪೊನ್ನಂಪೇಟೆ ತಾಲ್ಲೂಕು ಕಾಕೂರು ಗ್ರಾಮದಲ್ಲಿ ಜನಿಸಿದ ಕೊಟ್ರಂಗಡ ಮೇದಪ್ಪ ಚಿಣ್ಣಪ್ಪ ಅವರು ಕೊಡಗಿನಲ್ಲಿಯೇ ಶಿಕ್ಷಣ ಪಡೆದಿದ್ದರು.
ಮನೆಯ ಅಕ್ಕಪಕ್ಕದ ಪ್ರದೇಶವೇ ದಟ್ಟ ಕಾಡು. ಇತ್ತ ಕಡೆ ನಾಗರಹೊಳೆ, ಅತ್ತ ಕಡೆ ಕೇರಳದ ವಯನಾಡು, ಮತ್ತೊಂದು ಕಡೆ ಕೊಡಗಿನ ದಟ್ಟಾರಣ್ಯ. ಈ ಪರಿಸರದಲ್ಲಿ ಬೆಳೆದ ಅವರಿಗೆ ಕಾಡಿನ ಬಗ್ಗೆ ಅಪಾರ ಅಭಿಮಾನ, ಇದೇ ಕಾರಣದಿಂದಲೇ ಶಿಕ್ಷಣ ಮುಗಿಸುತ್ತಲೇ ಅವರು ಅರಣ್ಯ ಇಲಾಖೆಯನ್ನು ಸೇರಿಕೊಂಡರು.
ಅರಣ್ಯಾಧಿಕಾರಿಯಾಗಿ ನಾಗರಹೊಳೆ, ಬಂಡೀಪುರ, ವೀರಾಜಪೇಟೆ, ಮಡಿಕೇರಿ, ಹುಣಸೂರು ಸೇರಿದಂತೆ ಹಲವು ಕಡೆ ಕೆಲಸ ಮಾಡಿದ್ದರು. ಎತ್ತರದ ನಿಲುವಿನ ಗಟ್ಟಿ ದನಿಯ ಚಿಣ್ಣಪ್ಪ ಅವರದ್ದು ಬರೀ ದೈಹಿಕವಾಗಿ ಮಾತ್ರವಲ್ಲ ಭೌತಿಕವಾಗಿಯೂ ಎತ್ತರದ ವ್ಯಕ್ತಿತ್ವ.
ಅಪಾರ ಗೌರವ
ವಿಶೇಷವಾಗಿ ನಾಗರಹೊಳೆ ಭಾಗದಲ್ಲಿ ಚಿಣ್ಣಪ್ಪಣ್ಣ ಇದ್ಧಾರೆ ಎಂದರೆ ಒಂದು ರೀತಿಯ ಅವ್ಯಕ್ತ ಭಯ. ಅವರ ಮಾತಿಗೂ ಅಷ್ಟೇ ಗೌರವ. ನಾಗರಹೊಳೆ ಅರಣ್ಯ ಈಗಲೂ ಗಟ್ಟಿಯಾಗಿ ಉಳಿದಿರುವ ಹಿಂದೆ ಚಿಣ್ಣಪ್ಪ ಅವರ ಪಾತ್ರವೂ ಇದೆ. ಏಕೆಂದರೆ ಅರಣ್ಯ, ವನ್ಯಜೀವಿಗಳ ರಕ್ಷಣೆ, ಜನರೊಂದಿಗೆ ಒಡನಾಡುತ್ತಲೇ ಕಾಡಿನ ಮೇಲೆ ಒತ್ತಡ ತಗ್ಗಿಸುವುದು, ಕಾಡಿನ ಬೆಂಕಿ, ಬೇಟೆ ಸಹಿತ ಹತ್ತಾರು ಚಟುವಟಿಕೆಗಳ ಮೇಲೆ ಸದಾ ನಿಗಾ ಇಡುತ್ತಲೇ ಕೆಲಸ ಮಾಡಿದವರು ಚಿಣ್ಣಪ್ಪ.
ನಾಗರಹೊಳೆ ರಕ್ಷಣೆಗೆ ತಮ್ಮನ್ನೇ ಮುಡುಪಾಗಿಸಿಟ್ಟುಕೊಂಡಿದ್ದರು. ನಾಗರಹೊಳೆ ಮಾತ್ರವಲ್ಲದೇ ದೇಶದ ಯಾವುದೇ ಅರಣ್ಯ, ವನ್ಯಜೀವಿಗಳು, ಪರಿಸರದ ಕುರಿತು ನಿಖರವಾಗಿ ಮಾತನಾಡಬಲ್ಲ ಜ್ಞಾನ ಅವರಲ್ಲಿತ್ತು. ಆಡಳಿತ ನಡೆಸುವವರು, ಇಲಾಖೆ ಹೆಸರಲ್ಲಿ ಮೋಜು ಮಾಡುವವರು, ದುಡ್ಡು ಮಾಡುವ ಅಧಿಕಾರಿಗಳು, ದಬ್ಬಾಳಿಕೆ ಮಾಡುವ ಸಂಸ್ಕೃತಿ ವಿರುದ್ದ ಅವರನ್ನು ಸದಾ ಎತ್ತರದ ಧ್ವನಿ. ಕಟು ಮಾತುಗಳಲ್ಲಿಯೇ ಅರಣ್ಯ ವಿರೋಧಿ ನೀತಿಗಳನ್ನು ಖಂಡಿಸುತ್ತಿದ್ದರು.
ಸೇವೆಯಲ್ಲಿದಾಗಲೇ ರಾಜೀನಾಮೆ
ನಾಗರಹೊಳೆ ಅರಣ್ಯಾಧಿಕಾರಿಯಾಗಿದ್ದಾಗ ಕೆಲವು ಅರಣ್ಯ ರಕ್ಷಣೆ ವಿಚಾರದಲ್ಲಿ ಹಿರಿಯ ಅಧಿಕಾರಿಗಳೊಂದಿಗೆ ಭಿನ್ನಾಭಿಪ್ರಾಯ ಏರ್ಪಟ್ಟು ಇನ್ನೂ ಸೇವೆ ಇದ್ದಾಗಲೇ 1992ರಲ್ಲಿ ಇಲಾಖೆಗೆ ರಾಜೀನಾಮೆ ನೀಡಿದ್ದರು. ಹಾಗೆಂದು ಇಲಾಖೆ ಮೇಲಿನ ಅಭಿಮಾನ, ಕಾಡು ರಕ್ಷಣೆಯ ಧ್ಯೇಯ ಕಡಿಮೆಯಾಗಿರಲಿಲ್ಲ.
ದಶಕದ ಹಿಂದೆ ನಾಗರಹೊಳೆಯ ಹೃದಯ ಭಾಗದಲ್ಲಿಯೇ ಬೆಂಕಿ ಬಿದ್ದು ಅರಣ್ಯ ನಾಶವಾಗಿತ್ತು. ಇಲಾಖೆ ಅಧಿಕಾರಿಗಳು ಸ್ಥಳೀಯರನ್ನು ನಿರ್ಲಕ್ಷಿಸಿ ಅರಣ್ಯ ನೀತಿಗಳನ್ನು ರೂಪಿಸಿದರೆ ಆಗುವ ಅನಾಹುತಗಳ ಬಗ್ಗೆ ಎಚ್ಚರಿಸಿದ್ದರು. ತಾವು ಜತನದಿಂದ ಕಾಪಾಡಿದ ಅರಣ್ಯ ಕಣ್ಣ ಮುಂದೆಯೇ ಸುಟ್ಟು ಹೋಗಿದ್ದಕ್ಕೆ ಚಿಣ್ಣಪ್ಪ ನೊಂದಿದ್ದರು.
ಪ್ರಶಸ್ತಿ ಮೊತ್ತ ಅರಣ್ಯಕ್ಕೆ
ಅರಣ್ಯದಂಚಿನಲ್ಲಿಯೇ ಕಡೆಯವರೂ ಬದುಕಿದ ಚಿಣ್ಣಪ್ಪ ಅವರಿಗೆ ಹತ್ತು ಹಲವು ಪ್ರಶಸ್ತಿಗಳೂ ಬಂದಿದ್ದವು.
1985 ರಲ್ಲಿ ಕರ್ನಾಟಕ ಮುಖ್ಯಮಂತ್ರಿಗಳ ಚಿನ್ನದ ಪದಕ, ವೈಲ್ಡ್‌ಲೈಫ್ ಕನ್ಸರ್‌ವೇಷನ್ ಸೊಸೈಟಿ ಮೆಚ್ಚುಗೆ ಪ್ರಮಾಣಪತ್ರದ ಮೂಲಕ 1988 ಮತ್ತು 1996 ರಲ್ಲಿ ಟೈಗರ್ ಲಿಂಕ್ ಬಾಗ್ ಸೇವಕ್ ಪ್ರಶಸ್ತಿ ದೊರೆತಿತ್ತು. ಅನುಕ್ರಮವಾಗಿ 2000 ಮತ್ತು 2006 ರಲ್ಲಿ ಅಭಯಾರಣ್ಯದ ಜೀವಮಾನದ ಸಾಧನೆ ಪ್ರಶಸ್ತಿಗಳು ಅವರಿಗೆ ಲಭಿಸಿದ್ದವು.
2009 ಅವರಿಗೆ ಪ್ರತಿಷ್ಠಿತ ಸಿಎನ್‌ಎನ್ ಐಬಿಎನ್ ರಿಯಲ್ ಹೀರೋಸ್ ಪ್ರಶಸ್ತಿಯನ್ನು ನೀಡಲಾಯಿತು. ಈ ಪ್ರಶಸ್ತಿಯೊಂದಿಗೆ ನೀಡಿದ್ದ ಸಂಪೂರ್ಣ ಬಹುಮಾನದ ಮೊತ್ತದ 7.5 ಲಕ್ಷ ರೂ.ಗನ್ನು ಅರಣ್ಯ ರಕ್ಷಣೆಗೆ ನೀಡಿದ್ದರು. ವೈಲ್ಡ್ ಲೈಫ್ ಫಸ್ಟ್ ಸಂಸ್ಥೆಯನ್ನು ಹುಟ್ಟು ಹಾಕಿ ಅಧ್ಯಕ್ಷರೂ ಆಗಿದ್ದರು.
70 ರ ದಶಕದಲ್ಲಿ ನಾನು ಡಿಸಿಎಫ್ ಆಗಿದ್ದಾಗ ನನ್ನೊಂದಿಗೆ ಫಾರೆಸ್ಟರ್ ಆಗಿದ್ದರು. ಒಳ್ಳೆಯ ಕೆಲಸಗಾರ, ಕಟ್ಟುನಿಟ್ಟಿನ ಮನುಷ್ಯ, ಅವರ ಅರಣ್ಯ ಕಾಳಜಿ, ತುಡಿತ ನಿಜಕ್ಕೂ ಶ್ಲಾಘನೀಯ. ಇಂತವರ ಸೇವೆಯಿಂದಲೇ ಕರ್ನಾಟಕ ಅರಣ್ಯ ಇಲಾಖೆಗೆ ಗೌರವ ಬಂದಿದೆ ಎಂದು ನಿವೃತ್ತ ಅರಣ್ಯ ಕಾರ್ಯದರ್ಶಿ ಎ.ಸಿ.ಲಕ್ಷ್ಮಣ ಅವರು ಚಿಣ್ಣಪ್ಪ ಅವರೊಂದಿಗಿನ ಒಡನಾಟ ನೆನಪಿಸಿಕೊಂಡರು.
ವಿಭಾಗ