ಹಿಮ್ಮಡಿ ಶಸ್ತ್ರಚಿಕಿತ್ಸೆಗೆ ಒಳಗಾದ ಮೊಹಮ್ಮದ್ ಶಮಿ, ಚೇತರಿಕೆಗೆ ಬೇಕು ಸಮಯ; ಐಪಿಎಲ್‌, ವಿಶ್ವಕಪ್‌ ಆಡೋದು ಡೌಟ್
ಕನ್ನಡ ಸುದ್ದಿ  /  ಕ್ರಿಕೆಟ್  /  ಹಿಮ್ಮಡಿ ಶಸ್ತ್ರಚಿಕಿತ್ಸೆಗೆ ಒಳಗಾದ ಮೊಹಮ್ಮದ್ ಶಮಿ, ಚೇತರಿಕೆಗೆ ಬೇಕು ಸಮಯ; ಐಪಿಎಲ್‌, ವಿಶ್ವಕಪ್‌ ಆಡೋದು ಡೌಟ್

ಹಿಮ್ಮಡಿ ಶಸ್ತ್ರಚಿಕಿತ್ಸೆಗೆ ಒಳಗಾದ ಮೊಹಮ್ಮದ್ ಶಮಿ, ಚೇತರಿಕೆಗೆ ಬೇಕು ಸಮಯ; ಐಪಿಎಲ್‌, ವಿಶ್ವಕಪ್‌ ಆಡೋದು ಡೌಟ್

ಮೊಹಮ್ಮದ್ ಶಮಿ ಹಿಮ್ಮಡಿ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದಾರೆ. ಈ ಕುರಿತು ಅವರು ಎಕ್ಸ್‌ನಲ್ಲಿ ಹೇಳಿಕೊಂಡಿದ್ದಾರೆ. ಗುಜರಾತ್‌ ಜೈಂಟ್ಸ್‌ ವೇಗಿ ಚೇತರಿಕೆಗೆ ಇನ್ನೂ ಸಮಯ ಬೇಕಾಗಿದ್ದು, ಐಪಿಎಲ್‌ 2024ರ ಆವೃತ್ತಿಯಲ್ಲಿ ಆಡುವುದು ಅನುಮಾನವಾಗಿದೆ. ಆ ಬಳಿಕ ನಡೆಯುವ ಟಿ20 ವಿಶ್ವಕಪ್‌ ವೇಳೆಯೂ ಚೇತರಿಸುವ ಸಾಧ್ಯತೆ ಕಡಿಮೆ.

ಹಿಮ್ಮಡಿ ಶಸ್ತ್ರಚಿಕಿತ್ಸೆಗೆ ಒಳಗಾದ ಮೊಹಮ್ಮದ್ ಶಮಿ
ಹಿಮ್ಮಡಿ ಶಸ್ತ್ರಚಿಕಿತ್ಸೆಗೆ ಒಳಗಾದ ಮೊಹಮ್ಮದ್ ಶಮಿ

ವಿಶ್ವಕಪ್‌ ಹೀರೋ, ಭಾರತದ ಸ್ಟಾರ್ ವೇಗಿ ಮೊಹಮ್ಮದ್ ಶಮಿ (Mohammed Shami) ಹಿಮ್ಮಡಿ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದಾರೆ. ಹಿಮ್ಮಡಿ ಸ್ನಾಯುವಿನ ಶಸ್ತ್ರಚಿಕಿತ್ಸೆ ಯಶಸ್ವಿಯಾಗಿದೆ ಎಂದು ಶಮಿ ಸೋಷಿಯಲ್‌ ಮೀಡಿಯಾದಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ.

“ಹಿಮ್ಮಡಿ ಶಸ್ತ್ರಚಿಕಿತ್ಸೆ ಯಶಸ್ವಿಯಾಗಿದೆ. ಚೇತರಿಸಿಕೊಳ್ಳಲು ಸ್ವಲ್ಪ ಸಮಯ ತೆಗೆದುಕೊಳ್ಳುತ್ತದೆ. ನಾನು ನನ್ನ ಕಾಲುಗಳ ಮೇಲೆ ನಿಲ್ಲಲು ಎದುರು ನೋಡುತ್ತಿದ್ದೇನೆ,” ಎಂದು ಶಮಿ ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದಾರೆ.

ಭಾರತದ ಆತಿಥ್ಯದಲ್ಲಿ ನಡೆದ ಏಕದಿನ ವಿಶ್ವಕಪ್‌ ಪಂದ್ಯಾವಳಿಯಲ್ಲಿ ಅಮೋಘ ಪ್ರದರ್ಶನ ನೀಡಿದ್ದ ಶಮಿ, ಆ ಬಳಿಕ ಮೈದಾನಕ್ಕೆ ಇಳಿದಿಲ್ಲ. ಐಸಿಸಿ ಟೂರ್ನಿಯ ನಂತರ ಅವರು ಆಸ್ಟ್ರೇಲಿಯಾ ವಿರುದ್ಧ ತವರಿನಲ್ಲಿ ನಡೆದ ಟಿ20 ಸರಣಿಯಿಂದ ಹೊರಗುಳಿದರು. ಅದರ ಬೆನ್ನಲ್ಲೇ ದಕ್ಷಿಣ ಆಫ್ರಿಕಾ ಪ್ರವಾಸದಿಂದ ಸಂಪೂರ್ಣವಾಗಿ ಹೊರಗುಳಿದಿದ್ದರು. ಆ ನಂತರ ಅಫ್ಘಾನಿಸ್ತಾನ ಸರಣಿ ಹಾಗೂ ಪ್ರಸ್ತುತ ನಡೆಯುತ್ತಿರುವ ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಯಲ್ಲಿಯೂ ಮಾರಕ ವೇಗಿ ಆಡುತ್ತಿಲ್ಲ.

ಇದನ್ನೂ ಓದಿ | ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಕಿವೀಸ್‌ ವೇಗಿ ನೀಲ್ ವ್ಯಾಗ್ನರ್ ವಿದಾಯ; ಆಸೀಸ್ ವಿರುದ್ಧದ ಟೆಸ್ಟ್‌ ಸರಣಿಗೆ ಆಲಭ್ಯ

33 ವರ್ಷದ ವೇಗಿಯು, ಕಳೆದ ವರ್ಷದ ನವೆಂಬರ್‌ ತಿಂಗಳಲ್ಲಿ ಅಂತ್ಯಗೊಂಡ ಏಕದಿನ ವಿಶ್ವಕಪ್ ಫೈನಲ್‌ ಪಂದ್ಯದಲ್ಲಿ ಆಸ್ಟ್ರೇಲಿಯಾ ವಿರುದ್ಧ ಕೊನೆಯ ಬಾರಿಗೆ ಭಾರತ ತಂಡವನ್ನು ಪ್ರತಿನಿಧಿಸಿದ್ದರು. ಹಿರಿಯ ವೇಗಿ ಪಂದ್ಯಾವಳಿಯಲ್ಲಿ ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್ ಆಗಿ ಹೊರಹೊಮ್ಮಿದರು. ಆಡಿದ್ದು ಕೇವಲ 7 ಪಂದ್ಯಗಳಾದರೂ, ಎರಡು ಬಾರಿ 5 ವಿಕೆಟ್‌ ಗೊಂಚಲಿನೊಂದಿಗೆ 24 ವಿಕೆಟ್‌ ಕಬಳಿಸಿದರು.

ನೋವಿನಲ್ಲೂ ಯಶಸ್ವಿ ಬೌಲಿಂಗ್‌ ಪ್ರದರ್ಶನ ನೀಡಿದ ಶಮಿ

ಭಾರತದ ಯಶಸ್ವಿ ವಿಶ್ವಕಪ್ ಅಭಿಯಾನದಲ್ಲಿ 24 ವಿಕೆಟ್‌ಗಳನ್ನು ಪಡೆದ ಶಮಿ, ಪಂದ್ಯಾವಳಿಯುದ್ದಕ್ಕೂ ನೋವಿನಿಂದಲೇ ಆಡಿದ್ದರು. ಹಿಮ್ಮಡಿ ನೋವಿದ್ದರೂ, ಸಿಕ್ಕಿದ ಅವಕಾಶಗಳನ್ನು ಸದ್ಬಳಕೆ ಮಾಡಿಕೊಂಡು ಮಿಂಚಿದರು. ಪೇನ್‌ ಕಿಲ್ಲರ್‌ ಔಷಧ ಸೇವಿಸಿ, ನೋವಿನಿಂದ ತಾತ್ಕಾಲಿಕ ಪರಿಹಾರ ಪಡೆದ ಅವರು ಪ್ರದರ್ಶನಕ್ಕೆ ಅಡ್ಡಿಯಾಗಲು ಅವಕಾಶ ನೀಡಲಿಲ್ಲ. ಹೀಗಾಗಿ ಶಮಿ ಆಟ ಅಭಿಮಾನಿಗಳ ಮೆಚ್ಚುಗೆಗೆ ಕಾರಣವಾಯ್ತು.

ಸದ್ಯ, ಶಮಿ ಚೇತರಿಕೆಗೆ ಇನ್ನಿಷ್ಟು ದಿನಗಳು ಬೇಕು. ಹೀಗಾಗಿ ಅವರು ಮುಂಬರುವ ಐಪಿಎಲ್ ಪಂದ್ಯಾವಳಿಯಲ್ಲಿ ಆಡುತ್ತಿಲ್ಲ ಎಂದು ವರದಿಯಾಗಿದೆ. ಗುಜರಾತ್ ಟೈಟಾನ್ಸ್ ತಂಡದ ಪ್ರಮುಖ ವೇಗದ ಬೌಲರ್‌ ಆಗಿರುವ ಶಮಿ, ತಂಡಕ್ಕೆ ಗಮನಾರ್ಹ ಕೊಡುಗೆ ನೀಡುತ್ತಿದ್ದರು. ಈ ಬಾರಿ ಅವರ ಅಲಭ್ಯತೆಯು ಫ್ರಾಂಚೈಸಿಗೆ ನಷ್ಟವಾಗಲಿದೆ.

ಗುಜರಾತ್‌ ಪರ ಆಡಿದ ಎರಡೂ ಆವೃತ್ತಿಗಳಲ್ಲಿ ತಂಡದ ಯಶಸ್ಸಿನಲ್ಲಿ ಶಮಿ ಗಮನಾರ್ಹ ಕೊಡುಗೆ ನೀಡಿದರು. 33 ವರ್ಷದ ವೇಗಿ 2022ರಲ್ಲಿ 20 ವಿಕೆಟ್‌ ಪಡೆದರು. ಐಪಿಎಲ್ 2023ರಲ್ಲಿ 18.64ರ ಸರಾಸರಿಯಲ್ಲಿ 28 ವಿಕೆಟ್‌ಗಳನ್ನು ಕಬಳಿಸಿದರು. ಹೊಸ ಚೆಂಡಿನೊಂದಿಗೆ ಆಕ್ರಮಣಕಾರಿ ಆಟವಾಡಿದರು. ಅಲ್ಲದೆ ತಂಡವು ಫೈನಲ್‌ಗೇರುವಲ್ಲಿ ವೇಗಿಯ ಕೊಡುಗೆ ಪ್ರಮುಖ ಪಾತ್ರ ವಹಿಸಿತು.

ಇದನ್ನೂ ಓದಿ | ಗುಜರಾತ್ ಟೈಟಾನ್ಸ್​​ಗೆ ಬಹುದೊಡ್ಡ ಆಘಾತ; ಐಪಿಎಲ್​ನಿಂದ ಮೊಹಮ್ಮದ್ ಶಮಿ ಔಟ್, ಟಿ20 ವಿಶ್ವಕಪ್​ಗೆ ಡೌಟ್

ಗುಜರಾತ್ ಟೈಟಾನ್ಸ್ ಈ ಬಾರಿ ನೂತನ ನಾಯಕನೊಂದಿಗೆ ಕಣಕ್ಕಿಳಿಯಲಿದೆ. ಹಾರ್ದಿಕ್ ಪಾಂಡ್ಯ ಮುಂಬೈ ಇಂಡಿಯನ್ಸ್ ಸೇರಿರುವ ಪರಿಣಾಮ, ಆರಂಭಿಕ ಆಟಗಾರ ಶುಭ್ಮನ್ ಗಿಲ್ ತಂಡವನ್ನು ಮುನ್ನಡೆಸಲಿದ್ದಾರೆ. ಈ ನಡುವೆ ಶಮಿ ಅಲಭ್ಯಯು ಗುಜರಾತ್​ಗೆ ದೊಡ್ಡ ಹೊಡೆತ ನೀಡಲಿದೆ. 2022ರಲ್ಲಿ ಐಪಿಎಲ್​ಗೆ ಹೊಸದಾಗಿ ಪ್ರವೇಶಿಸಿದ ಗುಜರಾತ್ ಟೈಟಾನ್ಸ್ ತಂಡವನ್ನು ಹಾರ್ದಿಕ್ ಪಾಂಡ್ಯ ಮುನ್ನಡೆಸಿದ್ದರು. ತಂಡದ ಚೊಚ್ಚಲ ಐಪಿಎಲ್​​ನಲ್ಲೇ ಟ್ರೋಫಿಗೆ ಮುತ್ತಿಕ್ಕಿತು. 2023ರ ಆವೃತ್ತಿಯಲ್ಲೂ ಪಾಂಡ್ಯ ಕ್ಯಾಪ್ಟನ್ಸಿಯಲ್ಲೇ ಗುಜರಾತ್ ಫೈನಲ್ ಪ್ರವೇಶಿಸಿ ರನ್ನರ್​ಅಪ್ ಆಗಿತ್ತು. ಇದೀಗ ಮೂರನೇ ಬಾರಿ ಯಶಸ್ಸು ಪಡೆಯಲು ತಂಡ ಮುಂದಾಗಿದೆ.

Whats_app_banner