ಬಿಬಿಎಂಪಿಗೆ 10 ವರ್ಷದ ಹಿಂದೆ ಸೇರ್ಪಡೆಯಾದ 110 ಗ್ರಾಮಗಳಿಗೆ ಕಾವೇರಿ 5 ನೇ ಹಂತದಲ್ಲಿ ನೀರಿನ ಸಂಪರ್ಕ, ಅಧಿಕಾರಿಗಳಿಗೆ ಜಲಮಂಡಳಿ ಸೂಚನೆ
ಬಿಬಿಎಂಪಿಗೆ 10 ವರ್ಷದ ಹಿಂದೆ ಸೇರ್ಪಡೆಯಾದ 110 ಗ್ರಾಮಗಳಿಗೆ ಕಾವೇರಿ ನೀರಿನ ಭಾಗ್ಯ ಲಭ್ಯವಾಗುತ್ತಿದೆ. ಕಾವೇರಿ 5 ನೇ ಹಂತದಲ್ಲಿ ಸಂಪರ್ಕ ಕಲ್ಪಿಸಲು ಅಧಿಕಾರಿಗಳಿಗೆ ಜಲಮಂಡಳಿ ಸೂಚನೆ ನೀಡಿದೆ. ಇದಕ್ಕೆ ಸಂಬಂಧಿಸಿದ ನೋಂದಣಿ ಶುರುವಾಗಿದೆ. (ವರದಿ- ಎಚ್. ಮಾರುತಿ, ಬೆಂಗಳೂರು)
ಬೆಂಗಳೂರು: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಗೆ ಸೇರ್ಪಡೆಯಾಗಿ 15 ವರ್ಷಗಳಿಂದ ಅತಂತ್ರ ಸ್ಥಿತಿಯಲ್ಲಿದ್ದ 110 ಗ್ರಾಮಗಳಿಗೆ ಕಾವೇರಿ ನೀರಿನ ಭಾಗ್ಯ ಕೂಡಿ ಬಂದಿದೆ. ಕಾವೇರಿ 5 ನೇ ಹಂತದ ಕಾಮಗಾರಿ ಪೂರ್ಣಗೊಳ್ಳುವ ಅಂತಿಮ ಹಂತದಲ್ಲಿದ್ದು, ಈ 110 ಗ್ರಾಮಗಳಿಗೆ ಕಾವೇರಿ ಸಂಪರ್ಕ ನೀಡಲು ಜನರ ಮನೆಬಾಗಿಲಿಗೆ ಜಲಮಂಡಳಿ ತೆರಳಲು ನಿರ್ಧರಿಸಿದೆ.
ಈ ಗ್ರಾಮಗಳಿಗೆ ಜಲಮಂಡಳಿ ನೀರು ಸರಬರಾಜು ಮಾಡಲು ಜಲಮಂಡಳಿ ಅಂತಿಮ ಹಂತದ ಸಿದ್ದತೆ ನಡೆಸಿದೆ. ಈ 110 ಗ್ರಾಮಗಳಲ್ಲಿ ಕಾವೇರಿ ಸಂಪರ್ಕ ನೀಡಲು ಜನರ ಮನೆಬಾಗಿಲಿಗೆ ಜಲಮಂಡಳಿ ತೆರಳಲಿದೆ ಎಂದು ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯ ಅಧ್ಯಕ್ಷರಾದ ಡಾ. ರಾಮ್ ಪ್ರಸಾತ್ ಮನೋಹರ್ ತಿಳಿಸಿದರು.
110 ಗ್ರಾಮಗಳಲ್ಲಿ ಜನರ ಮನೆಬಾಗಲಿಗೆ ತೆರಳಿ ಕಾವೇರಿ ನೀರಿನ ಸಂಪರ್ಕ ಪಡೆಯಲು ಪ್ರೋತ್ಸಾಹಿಸಿ
ಕಾವೇರಿ 5 ನೇ ಹಂತದ ಅಂತಿಮ ಹಂತದ ಕಾಮಗಾರಿಗಳು ಭರದಿಂದ ಸಾಗುತ್ತಿವೆ. ಕೆಲವೇ ವಾರಗಳಲ್ಲಿ ಈ ಕಾಮಗಾರಿಗಳು ಪೂರ್ಣಗೊಳ್ಳಲಿದ್ದು ನೀರು ಸರಬರಾಜು ಪ್ರಾರಂಭವಾಗಲಿದೆ. ಅದಕ್ಕೂ ಮುನ್ನ ನೀರು ಸರಬರಾಜು ಮಾಡಲು ವ್ಯವಸ್ಥೆ ಕಲ್ಪಿಸಬೇಕಾಗಿದೆ. ಎರಡನೆಯದಾಗಿ ಹೊಸ ಸಂಪರ್ಕಗಳ ನೋಂದಣಿ ಪ್ರಕ್ರಿಯೆ ನಡೆಸಲು ಸಿದ್ಧತೆಗಳು ನಡೆದಿವೆ ಎಂದು ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯ ಅಧ್ಯಕ್ಷರಾದ ಡಾ. ರಾಮ್ ಪ್ರಸಾತ್ ಮನೋಹರ್ ತಿಳಿಸಿದ್ದಾರೆ.
ಕಾವೇರಿ 5 ನೇ ಹಂತದ ಯೋಜನೆಯಿಂದ ಬೆಂಗಳೂರು ನಗರಕ್ಕೆ 750 ಎಂ.ಎಲ್.ಡಿ ಯಷ್ಟು ಹೆಚ್ಚುವರಿ ನೀರು ಲಭ್ಯವಾಗಲಿದೆ. ಈ ನೀರನ್ನು ಸಮರ್ಪಕವಾಗಿ ಬಳಕೆ ಮಾಡುವ ನಿಟ್ಟಿನಲ್ಲಿ ಈ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ಕಾವೇರಿ ನೀರಿನ ಸಂಪರ್ಕ ಪಡೆಯುವಂತೆ 110 ಗ್ರಾಮಗಳಲ್ಲಿ ಅಭಿಯಾನ ನಡೆಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
ಅನಧಿಕೃತ ಸಂಪರ್ಕಗಳನ್ನು ಸಕ್ರಮಗೊಳಿಸಲು ಸೂಚನೆ
110 ಗ್ರಾಮಗಳಲ್ಲಿ ಕೆಲವು ಕಡೆ ಅನಧಿಕೃತವಾಗಿ ಸಂಪರ್ಕಗಳನ್ನು ಪಡೆದುಕೊಂಡಿರುವ ದೂರುಗಳು ಬಂದಿವೆ. ಅಕ್ರಮ ಸಂಪರ್ಕಗಳನ್ನು ಪತ್ತೆ ಹಚ್ಚಿ ಸಕ್ರಮಗೊಳಿಸಲು ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು. ಇದರಿಂದ ಜಲಮಂಡಳಿಗೆ ಆದಾಯ ಬರಲಿದೆ ಎಂದು ಹೇಳಿದ್ದಾರೆ. 110 ಗ್ರಾಮಗಳ ಎಲ್ಲ ಮನೆಗಳೂ ಅಧಿಕೃತವಾಗಿ ಕಾವೇರಿ ಸಂಪರ್ಕಗಳನ್ನು ಪಡೆದುಕೊಂಡರೆ ನೀರಿನ ಸದ್ಬಳಕೆಯಾಗುತ್ತದೆ ಮತ್ತು ಜಲಮಂಡಳಿ ಆದಾಯದಲ್ಲೂ ಹೆಚ್ಚಳವಾಗಲಿದೆ ಎಂದು ಅಧ್ಯಕ್ಷರು ತಿಳಿಸಿದ್ದಾರೆ.
ಕಳಪೆ ಆಹಾರ ವಿತರಣೆ; ರಾಜ್ಯ ಕ್ರಿಕೆಟ್ ಸಂಸ್ಥೆಯ ವಿರುದ್ಧ ದೂರು
ಬೆಂಗಳೂರಿನಲ್ಲಿ ನಡೆಯುತ್ತಿದ್ದ ಐಪಿಎಲ್ ಪಂದ್ಯ ವೀಕ್ಷಣೆಗೆ ಬಂದಿದ್ದಾಗ ಕಳಪೆ ಆಹಾರ ವಿತರಿಸಲಾಗಿದೆ ಎಂದು ಆರೋಪಿಸಿ ಚೈತನ್ಯ ಎಂಬುವರು ಕಬ್ಬನ್‌ಪಾರ್ಕ್ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆಯ ಆಡಳಿತ ಮಂಡಳಿ ಹಾಗೂ ಕ್ಯಾಂಟೀನ್ ವ್ಯವಸ್ಥಾಪಕರ ವಿರುದ್ಧ ಚೈತನ್ಯ ದೂರು ನೀಡಿದ್ದು ಎಫ್‌ಐಆರ್ ದಾಖಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಮೇ 12ರಂದು ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಡೆಲ್ಲಿ ಕ್ಯಾಪಿಟಲ್ಸ್ ನಡುವೆ ನಡೆದ ಕ್ರಿಕೆಟ್ ಪಂದ್ಯ ವೀಕ್ಷಿಸಲು ಚೈತನ್ಯ ಆಗಮಿಸಿದ್ದರು. ಪಂದ್ಯ ನಡೆಯುತ್ತಿರುವಾಗ ವಿರಾಮ ಸಮಯದಲ್ಲಿ ಕ್ಯಾಂಟೀನ್‌ನಲ್ಲಿ ಊಟ ಮಾಡಿದ್ದರು. ಊಟ ಮಾಡಿದ ಕೆಲವೇ ಕ್ಷಣಗಳಲ್ಲಿ ಅವರಿಗೆ ಹೊಟ್ಟೆ ನೋವು ಕಾಣಿಸಿಕೊಂಡು ಮರಳಿದ್ದರು. ಕುಸಿದು ಬಿದ್ದ ಆವರನ್ನು ಸ್ಟೇಡಿಯಂ ಸಿಬ್ಬಂದಿಯು ಅಲ್ಲಿಯೇ ಇದ್ದ ಆಂಬುಲೆನ್ಸ್ ಗೆ ಕರೆದೊಯ್ದು ಪ್ರಾಥಮಿಕ ಚಿಕಿತ್ಸೆ ಕೊಡಿಸಿ ನಂತರ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದರು. ಚೈತನ್ಯ ಅವರನ್ನು ತಪಾಸಣೆ ಮಾಡಿದ ವೈದ್ಯರು ಫುಡ್ ಪಾಯಿಸನ್ ಆಗಿದೆ ಎಂದು ಹೇಳಿದ್ದರು.
ಇದೇ ಕಾರಣದ ಅಧಾರದ ಮೇಲೆ ಚೈತನ್ಯ ಅವರು ತಮ್ಮ ಆರೋಗ್ಯ ಹದಗೆಡಲು ಕ್ಯಾಂಟೀನ್‌ನಲ್ಲಿ ವಿತರಿಸಿದ ಆಹಾರವೇ ಕಾರಣವಾಗಿದೆ. ಆದ್ದರಿಂದ ಕೆಎಸ್‌ಸಿಎ ಆಡಳಿತ ಮಂಡಳಿ ಮತ್ತು ಕ್ಯಾಂಟೀನ್ ವ್ಯವಸ್ಥಾಪಕರ ವಿರುದ್ಧ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ದೂರು ನೀಡಿದ್ದಾರೆ.
(ವರದಿ- ಎಚ್. ಮಾರುತಿ, ಬೆಂಗಳೂರು)
ಕರ್ನಾಟಕದ ಮತ್ತಷ್ಟು ತಾಜಾ ಸುದ್ದಿ, ಕ್ರೈಮ್ ಸುದ್ದಿ, ಬೆಂಗಳೂರು ನಗರ ಸುದ್ದಿ, ರಾಜಕೀಯ ವಿಶ್ಲೇಷಣೆ ಓದಿ.