Flash flood; ಪಶ್ಚಿಮಘಟ್ಟದ ತಪ್ಪಲಲ್ಲಿ ದಿಢೀರ್ ಪ್ರವಾಹ, ಉಕ್ಕಿ ಹರಿದ ನೇತ್ರಾವತಿ, ಮೃತ್ಯುಂಜಯ ನದಿಗಳು, 2019ರ ಘಟನೆ ನೆನಪಿಸಿಕೊಂಡ ಜನ
Aug 19, 2024 08:32 PM IST
ನೇತ್ರಾವತಿ ಮತ್ತು ಮೃತ್ಯುಂಜಯ ನದಿಗಳಲ್ಲಿ ಇಂದು (ಆಗಸ್ಟ್ 19) ಮಧ್ಯಾಹ್ನ ನಂತರ ದಿಢೀರ್ ಪ್ರವಾಹ ಉಂಟಾಯಿತು.
Netravati River Flood; ಪಶ್ಚಿಮ ಘಟ್ಟ ತಪ್ಪಲಲ್ಲಿ ವಿವಿಧೆಡೆ ಮಳೆಯಾಗಿದ್ದು, ಕೆಲವು ನದಿಗಳಲ್ಲಿ ದಿಢೀರ್ ಪ್ರವಾಹ ಉಂಟಾಗಿದೆ. ಬೆಳ್ತಂಗಡಿ ತಾಲೂಕಿನಲ್ಲಿ ನೇತ್ರಾವತಿ ಮತ್ತು ಮೃತ್ಯುಂಜಯ ನದಿಗಳು ಉಕ್ಕಿ ಹರಿದಿವೆ. ಇದು 2019ರ ದುರಂತಗಳನ್ನು ನೆನಪಾಗುವಂತೆ ಮಾಡಿದೆ. (ವರದಿ- ಹರೀಶ ಮಾಂಬಾಡಿ, ಮಂಗಳೂರು)
ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸೋಮವಾರ ಮಳೆ ಕಡಿಮೆಯಾಗಿತ್ತು. ನದಿ ಶಾಂತವಾಗಿ ಸಂಜೆಯವರೆಗೆ ಹರಿಯುತ್ತಿತ್ತು. ಆದರೆ ಒಮ್ಮಿಂದೊಮ್ಮೆಲೇ ಪಶ್ಚಿಮ ಘಟ್ಟ ಸಮೀಪದ ಬೆಳ್ತಂಗಡಿ ತಾಲೂಕಿನ ಭಾಗಗಳಲ್ಲಿ ಮೌನವಾಗಿದ್ದ ನೇತ್ರಾವತಿ ಮತ್ತು ಮೃತ್ಯುಂಜಯ ನದಿಗಳು ಒಮ್ಮಿಂದೊಮ್ಮೆಲೇ ಉಕ್ಕಿ ಹರಿಯಲಾರಂಭಿಸಿವೆ. ಧರ್ಮಸ್ಥಳ ಸ್ನಾನಘಟ್ಟದ ಸಮೀಪದವರೆಗೂ ನೀರು ಜಾಸ್ತಿಯಾಗಿತ್ತು. ಆದರೆ ಎಲ್ಲೆಲ್ಲಿ ನದಿ ಪ್ರವಾಹ ಬಂದಿತ್ತೋ ಅಲ್ಲಿ ಭಾರಿ ಮಳೆಯಾಗಿದೆ.
ಘಟ್ಟ ಪ್ರದೇಶ ತಪ್ಪಲಿನ ಪ್ರದೇಶಗಳಲ್ಲಿ ದಿಢೀರ್ ಮಳೆಯಾಗಿದ್ದು ಇದಕ್ಕೆ ಕಾರಣ ಎನ್ನಲಾಗಿದೆ. 2019ರಲ್ಲಿ ಈ ಭಾಗಗಳಲ್ಲಿ ನಡೆದ ಘಟನೆಯಂಥ ಸನ್ನಿವೇಶ ನೆನಪಿಸುವಂಥ ಘಟನೆ ಉಂಟಾಗಿದೆ. ಮಧ್ಯಾಹ್ನ 1ರವರೆಗೆ ಬಿಸಿಲಿತ್ತು, ಸಂಜೆಯಾಗುತ್ತಿದ್ದಂತೆ ಗುಡ್ಡ ಕುಸಿತದಂಥ ಘಟನೆ ನಡೆದು, ದಿಢೀರ್ ಪ್ರವಾಹ ಉಂಟಾಗಿ, ಮಣ್ಣುಮಿಶ್ರಿತ ಪ್ರವಾಹ ಉಂಟಾಗಿದೆ.
ಮಧ್ಯಾಹ್ನದ ಬಳಿಕ ದಿಢೀರ್ ನೀರಿನ ಮಟ್ಟ ಹೆಚ್ಚಳ
ಬೆಳ್ತಂಗಡಿ ತಾಲೂಕಿನ ಕೊಲ್ಲಿ, ದಿಡುಪೆ, ಮಿತ್ತಬಾಗಿಲು, ಮಲವಂತಿಗೆ, ಕೊಳಂಬೆ ಪ್ರದೇಶಗಳಲ್ಲಿ ಭೀಕರ ಮಳೆಯಿಂದಾಗಿ ನೇತ್ರಾವತಿ ನದಿಯಲ್ಲಿ ಹಠಾತ್ ಪ್ರವಾಹ ಕಂಡುಬಂದಿದೆ. ಪಶ್ಚಿಮ ಘಟ್ಟದಲ್ಲಿ ಧಾರಾಕಾರ ಮಳೆಯಾಗುತ್ತಿದೆ. ತಗ್ಗು ಪ್ರದೇಶವಾದ ದಿಡುಪೆ, ಕೊಲ್ಲಿ, ಮಿತ್ತಬಾಗಿಲು ಪ್ರದೇಶಗಳಲ್ಲಿ ನದಿ ಉಕ್ಕಿ ಹರಿಯುತ್ತಿದೆ, ನೀರಿನ ಮಟ್ಟ ಹೆಚ್ಚಳಕ್ಕೆ ಇದು ಕಾರಣವಾಗಿದೆ ಎನ್ನಲಾಗಿದೆ.
ಇದರ ಪರಿಣಾಮ, ನದಿಗಳಲ್ಲಿ ತೇಲಿಬಂದ ಮರಗಳು ಸಿಕ್ಕಿಹಾಕಿಕೊಂಡು, ಪಕ್ಕದ ತೋಟಗಳಿಗೆ ನೀರು ನುಗ್ಗಿ ಹಾನಿಯಾಗಿದೆ. ಈ ಭೀಕರ ಮಳೆ ಕಳೆದ ನಾಲ್ಕು ವರ್ಷಗಳ ಹಿಂದೆ ತಾಲೂಕಿಗೆ ಅಪ್ಪಳಿಸಿದ ನೆರೆಯನ್ನು ನೆನಪಿಸುವಂತಿದೆ ಎಂದು ಸ್ಥಳೀಯರು ಮಾಹಿತಿ ನೀಡಿದ್ದಾರೆ.
ನದಿಯಾಗಿ ಹರಿಯುತ್ತಿರುವ ತೊರೆ
ನೀರು ಪ್ರವಾಹೋಪಾದಿಯಲ್ಲಿ ಹರಿದು ಬರುತ್ತಿದೆ ಎಂದು ಸ್ಥಳೀಯರು ಮಾಹಿತಿ ನೀಡಿದ್ದಾರೆ. ಕೊಲ್ಲಿ ಸಮೀಪದ ಸೇತುವೆಯ ಸಮೀಪದ ತೊರೆ ನದಿಯಂತಾಗಿದೆ. ಗದ್ದೆ ಕ್ಷಣಾರ್ಧದಲ್ಲಿ ಮುಳುಗಿದೆ. ಕೆಲ ಅಡಿಕೆ ಮರಗಳೂ ನಾಶವಾಗಿದೆ. ಎರ್ಮಾಳ್ ಪಲ್ಕೆ ಸೇತುವೆ ಸಮೀಪ ನೀರು ಜಾಸ್ತಿಯಾಗಿದೆ. ಇಲ್ಲಿ ಸಮೀಪ ಗುಡ್ಡಕುಸಿತ ಸಂಭವಿಸಿದ್ದು, ಇದರಲ್ಲಿ ಮಣ್ಣು ನೀರುಪಾಲಾಗಿದ್ದು, ಪ್ರವಾಹದ ರೀತಿಯಲ್ಲಿ ಬರುತ್ತಿದೆ. ದಿಡುಪೆ ಗ್ರಾಮದಲ್ಲಿ ಹೆಚ್ಚಿನ ಹಾನಿಯಾಗುತ್ತಿದೆ. ಕೊಲ್ಲಿ ದೇವಸ್ಥಾನ ಸಮೀಪ ಬೊಳ್ಳಾಜೆ ಎಂಬಲ್ಲಿ ಸಣ್ಣ ಸೇತುವೆ ಮುರಿದುಬಿದ್ದಿದ್ದು, ಜನರು ಸಂಪರ್ಕ ಕಳೆದುಕೊಂಡಿದ್ದಾರೆ ಎನ್ನಲಾಗಿದೆ.
ಈ ಕುರಿತು ಮಾಹಿತಿ ನೀಡಿದ ಧರ್ಮಸ್ಥಳ ಶೌರ್ಯ ವಿಪತ್ತು ಘಟಕದ ಸದಸ್ಯರೊಬ್ಬರು, ಬೊಳ್ಳಾಜೆ ಸೇತುವೆ ಬ್ಲಾಕ್ ಆಗಿದೆ. ನಾಳೆ ನಾವು ಕೆಲಸ ಮಾಡುತ್ತೇವೆ. ಕೊಪ್ಪಳಗಂಡಿ, ಕೊಲ್ಲಿ ಮತ್ತಿತರ ಕಡೆಗಳಲ್ಲೂ ಸಮಸ್ಯೆ ಉಂಟಾಗಿದೆ. ಯಾವುದೇ ರೀತಿಯಲ್ಲಿ ಗ್ರಾಮದ ಜನತೆಗೆ ತೊಂದರೆ ಆಗದ ರೀತಿಯಲ್ಲಿ ತೊಂದರೆ ಆಗದ ರೀತಿಯಲ್ಲಿ ಕೆಲಸ ಮಾಡುತ್ತೇವೆ ಎಂದು ಪಂಚಾಯಿತಿ ಅಧ್ಯಕ್ಷರು ಮಾಹಿತಿ ನೀಡಿದ್ದಾರೆ. ಕುಕ್ಕಾವು ಸೇತುವೆ ಬಳಿ ಹಲವಾರು ಮನೆಗಳು ಪ್ರವಾಹದಲ್ಲಿ ಸಿಲುಕಿಕೊಂಡಿದೆ. ಗುಡ್ಡ ಪ್ರದೇಶದಿಂದ ಮಣ್ಣು ಕುಸಿಯುತ್ತಿದೆ. ಈ ಪ್ರವಾಹ ರಾತ್ರಿಯಿಡೀ ಬಂದರೆ ಮನೆಗಳು ಕೊಚ್ಚಿಹೋಗುವ ಸಾಧ್ಯತೆ ಇದೆ ಎಂದು ಸ್ಥಳೀಯರು ಹೇಳಿದ್ದಾರೆ.
ಈ ಕುರಿತು ಮಿತ್ತಬಾಗಿಲು ಪಿಡಿಒ ಮಾಹಿತಿ ನೀಡಿ, ಮಧ್ಯಾಹ್ನ 1 ಗಂಟೆವರೆಗೆ ಬಿಸಿಲಿತ್ತು. ಈ ರೀತಿ ಮಳೆ ಬರುತ್ತದೆ ಎಂದು ಯಾರೂ ತಿಳಿದಿರಲಿಲ್ಲ. ಗುಡ್ಡೆ ಕುಸಿತದಂಥ ಘಟನೆ ನಡೆದರಷ್ಟೇ ಹೀಗೆ ಆಗುತ್ತದೆ. ಇವುಗಳನ್ನು ತೆರವುಗೊಳಿಸುವ ಕಾರ್ಯವನ್ನು ನಾವು ಮಾಡುತ್ತೇವೆ. ಜನರು ಸುರಕ್ಷಿತ ಪ್ರದೇಶಗಳಿಗೆ ಸಾಗಬೇಕು, ನದಿ ಪಾತ್ರದಲ್ಲಿರುವ ಗ್ರಾಮಸ್ಥರು ಜಾಗರೂಕರಾಗಿರಬೇಕು ಎಂದು ಅವರು ತಿಳಿಸಿದ್ದಾರೆ.
(ವರದಿ- ಹರೀಶ ಮಾಂಬಾಡಿ, ಮಂಗಳೂರು)