Shiggaon Election Counting: ಶಿಗ್ಗಾಂವಿ ಕ್ಷೇತ್ರದಲ್ಲಿ ಮತ್ತೆ ಕಮಲ ಅರಳುವುದೇ, ಕೈ ಬಲಗೊಂಡಿದೆಯಾ: ಇಂದೇ ಸಿಗಲಿದೆ ಉತ್ತರ
Nov 23, 2024 07:30 AM IST
ಶಿಗ್ಗಾಂವಿಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಯಾಸಿರ್ ಅಹಮದ್ ಇಲ್ಲವೇ ಬಿಜೆಪಿಯ ಭರತ್ ಬೊಮ್ಮಾಯಿಗೆ ಗೆಲುವೋ ಎನ್ನುವುದನ್ನೇ ಇಂದೇ ಸಿಗಲಿದೆ ಉತ್ತರ.
- Shiggaon Assembly Election Results: ಶಿಗ್ಗಾಂವಿ ವಿಧಾನಸಭೆ ಕ್ಷೇತ್ರಕ್ಕೆ ನಡೆದ ಚುನಾವಣೆಯ ಮತ ಎಣಿಕೆ ಶನಿವಾರ. ಈ ಕದನದಲ್ಲಿ ಮತ್ತೆ ಕಮಲ ಅರಳುವುದೇ, ಕೈ ಬಲಗೊಳ್ಳುವುದೇ ಎನ್ನುವುದನ್ನು ಕಾದುನೋಡಬೇಕು.
Shiggaon Assembly Election Results: ಉತ್ತರ ಕರ್ನಾಟಕದ ಪ್ರಮುಖ ವಹಿವಾಟು ಪಟ್ಟಣ ಶಿಗ್ಗಾಂವಿಯಲ್ಲಿ ಈ ಬಾರಿ ಚುನಾವಣೆ ಅಖಾಡವೂ ಜೋರಾಗಿಯೇ ಇತ್ತು. ಒಂದು ಕಾಲಕ್ಕೆ ಕಾಂಗ್ರೆಸ್ ಭದ್ರಕೋಟೆಯಾಗಿ ನಂತರ ಬಿಜೆಪಿ ತೆಕ್ಕೆಗೆ ವಾಲಿರುವ ಹಾವೇರಿ ಜಿಲ್ಲೆಯ ಶಿಗ್ಗಾಂವಿ ಮತ ಕ್ಷೇತ್ರದಲ್ಲಿ ನಡೆದಿರುವ ಮತದಾನದ ಫಲಿತಾಂಶ ಶನಿವಾರ ಹೊರ ಬೀಳಲಿದೆ. ಈಗಾಗಲೇ ತಂದೆಯ ನಂತರ ಮಗ ಸಚಿವ, ಸಿಎಂ ಆಗಿ ಈಗ ಲೋಕಸಭೆಯನ್ನು ಪ್ರವೇಶಿಸಿರುವ ಬಸವರಾಜಬೊಮ್ಮಾಯಿ ಅವರಿಗೆ ತಮ್ಮ ಪುತ್ರವನ್ನು ರಾಜಕೀಯ ಅಖಾಡಕ್ಕೆ ಪರಿಚಯಿಸುವ ಸಮಯ. ಅದನ್ನು ಸಮರ್ಥವಾಗಿಯೇ ಬಳಸಿಕೊಂಡು ಬಿಜೆಪಿ ಇಲ್ಲಿ ಗೆಲುವಿನ ನಿರೀಕ್ಷೆ ಇಟ್ಟುಕೊಂಡಿದೆ. ಅಭ್ಯರ್ಥಿ ಆಯ್ಕೆ ಗೊಂದಲದ ನಂತರ ಅದನ್ನು ಸರಿಪಡಿಸಿಕೊಂಡು ಕಾಂಗ್ರೆಸ್ ಇಲ್ಲಿ ಚೇತರಿಸಿಕೊಂಡರೂ ಗೆಲುವಿನ ದಡ ದಾಟುವುದೇ, ಮೂರು ದಶಕದಿಂದಲೂ ಸತತವಾಗಿ ಸೋಲುತ್ತಲೇ ಬರುತ್ತಿರುವ ಕಾಂಗ್ರೆಸ್ ಇಲ್ಲಿ ಗೆಲ್ಲುವುದೇ ಎನ್ನುವ ಪ್ರಶ್ನೆಗಳಿಗೆ ಉತ್ತರ ಶನಿವಾರ ಸಿಗಲಿದೆ
ಮತ ಎಣಿಕೆ ಹೇಗೆ
ಹಾವೇರಿಯ ಸರ್ಕಾರಿ ಎಂಜಿನಿಯರಿಂಗ್ ಕಾಲೇಜು ಆವರಣದಲ್ಲಿ ಮತ ಎಣಿಕೆಗೆ ಸಿದ್ದತೆ ಮಾಡಿಕೊಳ್ಳಲಾಗಿದೆ. ಈಗಾಗಲೇ ಎಲೆಕ್ಟ್ರಾನಿಕ್ಸ್ ಮತ ಯಂತ್ರಗಳು ಕಾಲೇಜು ಸ್ಟ್ರಾಂಗ್ ರೂಂನಲ್ಲಿ ಭದ್ರವಾಗಿದೆ. ಶನಿವಾರ ಬೆಳಿಗ್ಗೆಯೇ ಮತ ಯಂತ್ರಗಳನ್ನು ಹೊರ ತೆಗೆದು ಎಣಿಕೆಯನ್ನು ಆರಂಭಿಸಲಾಗುತ್ತದೆ. ಬೆಳಿಗ್ಗೆ 8ಕ್ಕೆ ಮತ ಎಣಿಕೆ ಶುರುವಾದರೆ ಮಧ್ಯಾಹ್ನದ ಹೊತ್ತಿಗೆ ಸ್ಪಷ್ಟವಾದ ಚಿತ್ರಣ ಹೊರ ಬೀಳುವ ನಿರೀಕ್ಷೆಯಿದೆ. ಹಾವೇರಿ ಜಿಲ್ಲಾಡಳಿತವು ಮತ ಎಣಿಕೆಗೆ ಟೇಬಲ್ ಗಳನ್ನು ಅಣಿಗೊಳಿಸಿ, ಸಿಬ್ಬಂದಿಗಳನ್ನು ನಿಯೋಜನೆ ಮಾಡಿದೆ. ಯಾವುದೇ ಗೊಂದಲ ಇಲ್ಲದಂತೆ ಎಣಿಕೆ ಕಾರ್ಯ ಮುಗಿಸಿ ಫಲಿತಾಂಶ ಪ್ರಕಟಿಸಲಾಗುತ್ತದೆ ಎಂದು ಹಾವೇರಿ ಡಿಸಿ ವಿಜಯಮಹಂತೇಶ್ವರ ದಾನಮ್ಮನವರ ಹೇಳುತ್ತಾರೆ.
ಕಣ ಚಿತ್ರಣ ಹೇಗಿದೆ
ಶಿಗ್ಗಾಂವಿ ಮತ ಕ್ಷೇತ್ರ ಇಬ್ಬರು ಸಿಎಂಗಳನ್ನು ನೀಡಿದೆ. ಎಸ್.ನಿಜಲಿಂಗಪ್ಪ ನಂತರ ಬಸವರಾಜ ಬೊಮ್ಮಾಯಿ ಸಿಎಂ ಸ್ಥಾನ ಅಲಂಕರಿಸಿದವರು. ಒಂದು ಕಾಲಕ್ಕೆ ಕಾಂಗ್ರೆಸ್ ಭದ್ರಕೋಟೆಯೇ ಆಗಿದ್ದ ಇದು ಮುಸ್ಲೀಂ ಬಾಹುಳ್ಯದ ಕ್ಷೇತ್ರವೂ ಹೌದು. ಇತ್ತಿಚಿನ ವರ್ಷಗಳಲ್ಲಿ ಇಲ್ಲಿನ ರಾಜಕೀಯ ಚಿತ್ರಣ ಬದಲಾಗಿದೆ. ಒಮ್ಮೆ ಜೆಡಿಎಸ್, ಮತ್ತೊಮ್ಮೆ ಪಕ್ಷೇತರ ಅಭ್ಯರ್ಥಿ ಇಲ್ಲಿಂದ ಗೆದ್ದು ಬಿಜೆಪಿ ಬೆಂಬಲಿಸಿದ್ದರು. ಆನಂತರ ಬಿಜೆಪಿಯಿಂದ ಬಸವರಾಜ ಬೊಮ್ಮಾಯಿ ನಾಲ್ಕು ಬಾರಿ ಶಾಸಕರಾಗಿದ್ದರು, ಈಗ ಲೋಕಸಭೆ ಪ್ರವೇಶಿಸಿ ತೆರವಾದ ಸ್ಥಾನಕ್ಕೆ ಮಗನನ್ನು ತರಲು ಕಸರತ್ತು ನಡೆಸಿದ್ದಾರೆ.
ಇಲ್ಲಿ ಬಿಜೆಪಿ ಹೊರಗಿನವರಿಗೆ ಟಿಕೆಟ್ ಎಂದು ಘೋಷಿಸುತ್ತಲೇ ಕುಟುಂಬ ರಾಜಕಾರಣಕ್ಕೆ ಮಣೆ ಹಾಕಿ ಭರತ್ ಬೊಮ್ಮಾಯಿಗೆ ಅವಕಾಶ ನೀಡಿದೆ. ಭರತ್ ಗೆದ್ದರೆ ಕುಟುಂಬದ ಮೂರನೇ ಕುಡಿ ವಿಧಾನಸಭೆ ಪ್ರವೇಶಿಸದ ಹಾಗಾಗಲಿದೆ. ಸದ್ಯದ ವಾತಾವರಣ ಬಿಜೆಪಿಗೆ ಪೂರಕವಾಗಿದ್ದು, ಭಾರೀ ಅಂತರದಲ್ಲೇ ಭರತ್ ಗೆಲ್ಲುತ್ತಾರೆ ಎನ್ನುವ ನಿರೀಕ್ಷೆ ಕ್ಷೇತ್ರದ್ದು.
ಕಾಂಗ್ರೆಸ್‌ಗೆ ಸಿಗುವುದೇ ಬಲ
ಮತ್ತೊಂದು ಕಡೆಯಲ್ಲಿ ಕಾಂಗ್ರೆಸ್ ಲಿಂಗಾಯಿತರಿಗೆ ಟಿಕೆಟ್ ನೀಡಬೇಕೋ, ಮುಸ್ಲೀಮರಿಗೆ ಅವಕಾಶ ಕೊಡಬೇಕು ಎನ್ನುವ ಹೊಯ್ದಾಟದಲ್ಲಿ ಕೊನೆಗೆ ಮುಸ್ಲೀಮರಿಗೆ ಈ ಕ್ಷೇತ್ರ ಮೀಸಲು ಎಂದು ಸಾರಿತು. ಅವರಲ್ಲಿ ಯಾರು ಎನ್ನುವ ಪ್ರಶ್ನೆ ಎದುರಾಗಿ ಮಾಜಿ ಶಾಸಕ ಸೈಯದ್ ಅಜಂಪೀರ್ ಖಾದ್ರಿ, ಕಳೆದ ಬಾರಿಯೂ ಸ್ಪರ್ಧಿಸಿ ಸೋತಿದ್ದ ಯಾಸಿರ್ ಅಹಮದ್ ಪಠಾಣ್ ಅವರ ಹೆಸರಿದ್ದವು. ಕೊನೆಗೆ ಪಠಾಣೆಗೆ ಮಣೆ ಹಾಕಿ ಗೊಂದಲ ಸರಿಪಡಿಸಲಾಯಿತು. ಹೀಗಿದ್ದರೂ ಕಾಂಗ್ರೆಸ್ ಒಗ್ಗಟ್ಟಿದ್ದರಿಂದ ಹೋರಾಟ ನಡೆಸಿದ್ದರೂ ಮತ ಗಣಿತದಲ್ಲಿ ಗೆಲ್ಲುವುದಾ ಎನ್ನುವ ಪ್ರಶ್ನೆಗೆ ಶನಿವಾರ ಅಂತಿಮ ಉತ್ತರ ಸಿಗಲಿದೆ.