Basavaraj Bommai Profile: ರಾಧಾಕೃಷ್ಣ ಗಲ್ಲಿಯಿಂದ ಸಿಎಂ ಪದವಿವರೆಗೆ; ಶಿಗ್ಗಾಂವಿ ಕ್ಷೇತ್ರದ ಅಭ್ಯರ್ಥಿ ಬಸವರಾಜ ಬೊಮ್ಮಾಯಿ ಪ್ರೊಫೈಲ್‌
ಕನ್ನಡ ಸುದ್ದಿ  /  ಕರ್ನಾಟಕ  /  Basavaraj Bommai Profile: ರಾಧಾಕೃಷ್ಣ ಗಲ್ಲಿಯಿಂದ ಸಿಎಂ ಪದವಿವರೆಗೆ; ಶಿಗ್ಗಾಂವಿ ಕ್ಷೇತ್ರದ ಅಭ್ಯರ್ಥಿ ಬಸವರಾಜ ಬೊಮ್ಮಾಯಿ ಪ್ರೊಫೈಲ್‌

Basavaraj Bommai Profile: ರಾಧಾಕೃಷ್ಣ ಗಲ್ಲಿಯಿಂದ ಸಿಎಂ ಪದವಿವರೆಗೆ; ಶಿಗ್ಗಾಂವಿ ಕ್ಷೇತ್ರದ ಅಭ್ಯರ್ಥಿ ಬಸವರಾಜ ಬೊಮ್ಮಾಯಿ ಪ್ರೊಫೈಲ್‌

ಕುಟುಂಬದಲ್ಲಿ ರಾಜಕೀಯ ವಾತಾವರಣ ಇದ್ದಿದ್ದರಿಂದ ಬಸವರಾಜ ಬೊಮ್ಮಾಯಿ ಕೂಡಾ ರಾಜಕೀಯ ಸೇರುವ ನಿರ್ಧಾರ ಮಾಡಿದರು. 1994 ರಲ್ಲಿ ಹುಬ್ಬಳ್ಳಿ ಗ್ರಾಮೀಣ ಕ್ಷೇತ್ರದ ಅಭ್ಯರ್ಥಿಯಾಗಿ ಜನತಾದಳ ಪಕ್ಷದಿಂದ ಬಸವರಾಜ ಬೊಮ್ಮಾಯಿ ರಾಜಕೀಯಕ್ಕೆ ಎಂಟ್ರಿ ಕೊಟ್ಟರು.

ಸಿಎಂ ಬಸವರಾಜ ಬೊಮ್ಮಾಯಿ ಪ್ರೊಫೈಲ್‌
ಸಿಎಂ ಬಸವರಾಜ ಬೊಮ್ಮಾಯಿ ಪ್ರೊಫೈಲ್‌

ಸದ್ಯಕ್ಕೆ ರಾಜ್ಯ ವಿಧಾನಸಭೆ ಚುನಾವಣೆಯಲ್ಲಿ ಕೆಲವೊಂದು ಕ್ಷೇತ್ರಗಳು ಹಾಗೂ ಕೆಲವು ಅಭ್ಯರ್ಥಿಗಳು ಭಾರೀ ಗಮನ ಸೆಳೆಯುತ್ತಿದ್ದಾರೆ. ಅವರಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಕೂಡಾ ಒಬ್ಬರು. ಬೊಮ್ಮಾಯಿ ಹಾವೇರಿ ಜಿಲ್ಲೆಯ ಶಿಗ್ಗಾಂವಿ ಕ್ಷೇತ್ರದಿಂದ ವಿಧಾನಸಭೆ ಚುನಾವಣೆಗೆ ಸ್ಪರ್ಧಿಸುತ್ತಿದ್ದಾರೆ. ಬೊಮ್ಮಾಯಿ ಅವರ ಬಾಲ್ಯ, ವೈಯಕ್ತಿಕ ಜೀವನ, ರಾಜಕೀಯ ಎಂಟ್ರಿ ಹಾಗೂ ಇನ್ನಿತರ ವಿಚಾರಗಳ ಬಗ್ಗೆ ಇಲ್ಲದೆ ಒಂದಿಷ್ಟು ಮಾಹಿತಿ.

ಬಾಲ್ಯ ಹಾಗೂ ವಿದ್ಯಾಭ್ಯಾಸ

ಬಸವರಾಜ ಸೋಮಪ್ಪ ಬೊಮ್ಮಾಯಿ, ಲಿಂಗಾಯತ ಸಮುದಾಯಕ್ಕೆ ಸೇರಿದ ಮಾಜಿ ಮುಖ್ಯಮಂತ್ರಿ ಎಸ್‌.ಆರ್.‌ ಬೊಮ್ಮಾಯಿ ಹಾಗೂ ಗಂಗಮ್ಮ ಬೊಮ್ಮಾಯಿ ದಂಪತಿಯ ಮಗನಾಗಿ 28 ಜನವರಿ 1960ರಲ್ಲಿ ಹುಬ್ಬಳ್ಳಿಯಲ್ಲಿ ಜನಿಸಿದರು. ರೋಟರಿ ಶಾಲೆಯಲ್ಲಿ ಶಾಲಾ ಶಿಕ್ಷಣ ಪೂರೈಸಿದ ಅವರು ಕೆಎಲ್‌ಇ ಟೆಕ್ನಲಾಜಿಕಲ್‌ ವಿಶ್ವವಿದ್ಯಾಲಯದಿಂದ ಮೆಕಾನಿಕಲ್‌ ಎಂಜಿನಿಯರಿಂಗ್‌ ಪದವಿ ಪಡೆದರು. ನಂತರ ಮಹಾರಾಷ್ಟ್ರದ ಪುಣೆಯ ಟಾಟಾ ಮೋಟಾರ್ಸ್‌ನಲ್ಲಿ ಕೆಲಸಕ್ಕೆ ಸೇರಿದರು. ಸುಮಾರು 2 ವರ್ಷಗಳ ಕಾಲ ಬೊಮ್ಮಾಯಿ ಪುಣೆಯಲ್ಲಿ ಕೆಲಸ ಮಾಡಿದರು. ತಾವೊಬ್ಬ ಸಿಎಂ ಮಗ ಎಂಬ ಯಾವುದೇ ಅಹಂ ಇಲ್ಲದೆ ಎಲ್ಲರೊಂದಿಗೆ ಸ್ನೇಹದಿಂದ ಬೆರೆಯುವ ವ್ಯಕ್ತಿತ್ವ ಬೊಮ್ಮಾಯಿ ಅವರದ್ದು.

ರಾಜಕೀಯ ಎಂಟ್ರಿ

ಬೊಮ್ಮಾಯಿ ಅವರ ತಂದೆ ಎಸ್‌ ಆರ್‌ ಬೊಮ್ಮಾಯಿ ಆಗಸ್ಟ್‌ 1988 ರಿಂದ ಏಪ್ರಿಲ್‌ 1989 ಅವಧಿಯಲ್ಲಿ ರಾಜ್ಯದ ಮುಖ್ಯಮಂತ್ರಿ ಆಗಿದ್ದರು. ಕುಟುಂಬದಲ್ಲಿ ರಾಜಕೀಯ ವಾತಾವರಣ ಇದ್ದಿದ್ದರಿಂದ ಬಸವರಾಜ ಬೊಮ್ಮಾಯಿ ಕೂಡಾ ರಾಜಕೀಯ ಸೇರುವ ನಿರ್ಧಾರ ಮಾಡಿದರು. 1994 ರಲ್ಲಿ ಹುಬ್ಬಳ್ಳಿ ಗ್ರಾಮೀಣ ಕ್ಷೇತ್ರದ ಅಭ್ಯರ್ಥಿಯಾಗಿ ಜನತಾದಳ ಪಕ್ಷದಿಂದ ಬಸವರಾಜ ಬೊಮ್ಮಾಯಿ ರಾಜಕೀಯಕ್ಕೆ ಎಂಟ್ರಿ ಕೊಟ್ಟರು. ಮೊದಲ ಚುನಾವಣೆಯಲ್ಲಿ ಬಿಜೆಪಿಯ ಜಗದೀಶ್‌ ಶೆಟ್ಟರ್‌ ವಿರುದ್ಧ ಸೋಲು ಅನುಭವಿಸಿದರು. 1998 ಹಾಗೂ 2004 ರಲ್ಲಿ ಎರಡು ಬಾರಿ ಧಾರವಾಡದ ಸ್ಥಳೀಯ ಸಂಸ್ಥೆಗಳಿಂದ ಎರಡು ಬಾರಿ ಕರ್ನಾಟಕ ವಿಧಾನ ಪರಿಷತ್‌ ಸದಸ್ಯರಾಗಿ ಆಯ್ಕೆಯಾದರು.

ಜೆ.ಹೆಚ್‌ ಪಟೇಲ್‌ ಸಿಎಂ ಆಗಿದ್ದ ಅವಧಿಯಲ್ಲಿ ಬೊಮ್ಮಾಯಿ 1996ರಲ್ಲಿ ರಾಜಕೀಯ ಕಾರ್ಯದರ್ಶಿ ಆಗಿ ಆಯ್ಕೆಯಾದರು. 2008 ರಲ್ಲಿ ಜೆಡಿಎಸ್‌ ತೊರೆದ ಸಿಎಂ ಬೊಮ್ಮಾಯಿ ನಂತರ ಬಿಜೆಪಿ ಸೇರಿದರು. ಹಾವೇರಿ ಜಿಲ್ಲೆಯ ಶಿಗ್ಗಾಂವಿ ತಾಲೂಕಿನಿಂದ ಸ್ಪರ್ಧಿಸಿ ವಿಧಾನಸಭೆ ಪ್ರವೇಶಿಸಿದರು. 2008 ರಲ್ಲಿ ಬಿಜೆಪಿ ಸರ್ಕಾರದ ಅವಧಿಯಲ್ಲಿ ಬೊಮ್ಮಾಯಿ ಜಲಸಂಪನ್ಮೂಲ ಸಚಿವರಾಗಿದ್ದರು. 2019 ರಲ್ಲಿ ಮತ್ತೆ ಬಿಜೆಪಿ ಅಧಿಕಾರ ವಹಿಸಿಕೊಂಡಾಗ ಗೃಹ ಸಚಿವರಾಗಿ ಆಯ್ಕೆ ಆದರು. 2021 ಜುಲೈನಲ್ಲಿ ರಾಜ್ಯದ 23ನೇ ಮುಖ್ಯಮಂತ್ರಿ ಆಗಿ ಅಧಿಕಾರ ವಹಿಸಿಕೊಂಡರು.

ವೈಯಕ್ತಿಕ ಜೀವನ ಹಾಗೂ ಆಸಕ್ತಿ

ಚೆನ್ನಮ್ಮ ಹಾಗೂ ಬಸವರಾಜ ಬೊಮ್ಮಾಯಿ ದಂಪತಿಗೆ ಅದಿತಿ ಎಂಬ ಮಗಳು ಹಾಗೂ ಭರತ್‌ ಎಂಬ ಮಗ ಇದ್ದಾರೆ. ರಾಜಕೀಯ ಹೊರತು ಪಡಿಸಿ ಸಿಎಂ ಬೊಮ್ಮಾಯಿ ಅವರಿಗೆ ಕೃಷಿ ಹಾಗೂ ಉದ್ಯಮದಲ್ಲಿ ಆಸಕ್ತಿ. ಅವರು ಸಿನಿಪ್ರೇಮಿ ಕೂಡಾ. ತಾವು ಸಿಎಂ ಆಗಿ ಅಧಿಕಾರ ವಹಿಸಿಕೊಂಡಾಗಿನಿಂದ ಬೊಮ್ಮಾಯಿ ಚಿತ್ರರಂಗಕ್ಕೆ ಸಂಬಂಧಿಸಿದ ಅನೇಕ ಕಾರ್ಯಕ್ರಮಗಳಲ್ಲಿ ಭಾಗವಹಿಸಿದ್ದಾರೆ. ನಟ ಸುದೀಪ್‌ ಬೊಮ್ಮಾಯಿ ಕುಟುಂಬಕ್ಕೆ ಆಪ್ತರಾಗಿರುವುದಿರಿಂದ ಕಿಚ್ಚ ಈಗ ಬೊಮ್ಮಾಯಿ ಪರ ಪ್ರಚಾರ ಮಾಡುತ್ತಿದ್ದಾರೆ.

ಪುನೀತ್‌ ರಾಜ್‌ಕುಮಾರ್‌ ನಿಧನರಾದಾಗ ತಾವೇ ಮುಂದೆ ನಿಂತು ಅವರ ಅಂತಿಮ ವಿದಿವಿಧಾನದ ವ್ಯವಸ್ಥೆ ಮಾಡಿದ್ದರು. ಕರ್ನಾಟಕ ರತ್ನ ಪ್ರಶಸ್ತಿ ಘೋಷಿಸಿದ್ದರು. ರಕ್ಷಿತ್‌ ಶೆಟ್ಟಿ ಅಭಿನಯದ ಚಾರ್ಲಿ 777 ಸಿನಿಮಾ ನೋಡಿ ಮೆಚ್ಚಿದ್ದರು. ಸಿಎಂ ಶ್ವಾನಪ್ರಿಯರಾಗಿದ್ದರಿಂದ ಆ ಸಿನಿಮಾ ನೋಡಿ ಭಾವುಕರಾಗಿದ್ದರು. ಅಷ್ಟೇ ಅಲ್ಲ ಆ ಚಿತ್ರಕ್ಕೆ ಟ್ಯಾಕ್ಸ್‌ ಫ್ರೀ ಘೋಷಿಸಿದ್ದರು.

ಸಿಎಂ ಆಗಿ ಬೊಮ್ಮಾಯಿ ಎದುರಿಸಿದ ಸವಾಲುಗಳು

ಮುಖ್ಯಮಂತ್ರಿ ಆಗಿ ಅಧಿಕಾರ ವಹಿಸಿಕೊಂಡಾಗಿನಿಂದ ಮಹಾರಾಷ್ಟ್ರ ಹಾಗೂ ಕರ್ನಾಟಕ ಗಡಿ ವಿವಾದ, ಮಹದಾಯಿ ವಿವಾದ, ಗ್ರಾಮ ಪಂಚಾಯಿತಿ ಚುನಾವಣೆ, ರಾಜ್ಯದ 25 ಕ್ಷೇತ್ರಗಳಿಗೆ ನಡೆದ ವಿಧಾನ ಪರಿಷತ್‌ ಚುನಾವಣೆ, ಸ್ಥಳೀಯ ಸಂಸ್ಥೆ ಚುನಾವಣೆ, ಬಿಬಿಎಂಪಿ ಚುನಾವಣೆ ಸೇರಿದಂತೆ ಬೊಮ್ಮಾಯಿ ಅನೇಕ ಸವಾಲುಗಳನ್ನು ಎದುರಿಸಿದ್ದಾರೆ. ಇದುವರೆಗೂ ಬೊಮ್ಮಾಯಿ 3 ಬಾರಿ ಶಿಗ್ಗಾಂವಿ ಕ್ಷೇತ್ರದಿಂದ ಗೆಲುವು ಸಾಧಿಸಿದ್ದಾರೆ. ಈ ಬಾರಿಯ ಫಲಿತಾಂಶ ಹೇಗಿರಲಿದೆ ಕಾದು ನೋಡಬೇಕು.

Whats_app_banner