ಮಹಾರಾಷ್ಟ್ರದ ಸೊಲ್ಲಾಪುರ ತೊಗರಿ ಖರೀದಿ ಬೆಲೆಯಲ್ಲಿ ಭಾರೀ ಕುಸಿತ; ವಿಜಯಪುರ, ಕಲಬುರಗಿ ಭಾಗದ ರೈತರಲ್ಲಿ ಆತಂಕ, ದರ ಎಷ್ಟಿದೆ
Dec 18, 2024 08:00 AM IST
ವಿಜಯಪುರ ಭಾಗದಿಂದ ಸೋಲಾಪುರಕ್ಕೆ ತೊಗರಿ ಸರಬರಾಜು ಆಗುತ್ತಿದ್ದು, ಏಕಾಏಕಿ ದರ ಕುಸಿತ ಕಂಡು ಬಂದಿದೆ.
- ಕಲಬುರಗಿ ಹಾಗೂ ವಿಜಯಪುರ ರೈತರು ಕಷ್ಟದಲ್ಲಿಯೇ ತೊಗರಿ ಬೆಳೆದು ಇಳುವರಿ ಪಡೆದರೂ ದರವೂ ಸರಿಯಾಗಿ ಸಿಗದೇ ತೊಂದರೆಗೆ ಸಿಲುಕಿದ್ದಾರೆ. ಮಹಾರಾಷ್ಟ್ರದ ಸೋಲಾಪುರ ಮಾರುಕಟ್ಟೆಯಲ್ಲಿ ತೊಗರಿ ಖರೀದಿ ಬೆಲೆ ಕುಸಿದಿದೆ.
ಉತ್ತರ ಕರ್ನಾಟಕದ ಕಲಬುರಗಿ, ವಿಜಯಪುರ, ಯಾದಗಿರಿ ಸಹಿತ ನಾಲ್ಕೈದು ಜಿಲ್ಲೆಗಳಲ್ಲಿ ತೊಗರಿ ಬೆಳೆದರೂ ನೆಟೆರೋಗದಿಂದ ಕಡಿಮೆ ಇಳುವರಿ ಪಡೆದಿದ್ದ ರೈತರಿಗೆ ಈಗ ಬೆಲೆಯನ್ನೂ ಕುಸಿತ ಕಂಡು ಭಾರೀ ಹೊಡೆ ಬಿದ್ದಿದೆ. ಈ ಭಾಗದ ಜನ ತೊಗರಿ ಬೆಳೆದರೂ ಮಾರುಕಟ್ಟೆ ನಂಬಿಕೊಂಡಿರುವುದು ಮಹಾರಾಷ್ಟ್ರದ ಸೊಲ್ಲಾಪುರ ನಗರವನ್ನೇ.ವಿಜಯಪುರ ಹಾಗೂ ಕಲಬುರಗಿ ಜಿಲ್ಲೆ ಗಡಿಗೆ ಹೊಂದಿಕೊಂಡಿರುವ ಮಹಾರಾಷ್ಟ್ರದ ಸೊಲ್ಲಾಪುರದಲ್ಲಿರುವ ಬೃಹತ್ ತೊಗರಿ ಮಾರುಕಟ್ಟೆಯಲ್ಲಿ ಪಿಂಕ್ ತೊಗರಿ ಬೆಲೆ ಕ್ವಿಂಟಾಲ್‌ಗೆ 500 ರಿಂದ 1400 (ಸರಾಸರಿ 1200 ರೂ) ರೂವರೆಗೆ, ಮಾರುತಿ (ಗುಳ್ಯಾಳ) ತೊಗರಿ ಕ್ವಿಂಟಾಲ್‌ಗೆ 500 ರಿಂದ 900 (ಸರಾಸರಿ 600 ರೂ) ರೂವರೆಗೆ ದರ ಕುಸಿತ ಕಂಡಿದೆ. ಇದರಿಂದಾಗಿ ಬೆಳೆಹಾನಿಯ ನಡುವೆಯೂ ಕೈಗೆ ಬಂದಷ್ಟು ತೊಗರಿಯನ್ನು ಉತ್ತಮ ಬೆಲೆಗೆ ಮಾರಾಟ ಮಾಡಬೇಕೆನ್ನುವ ರೈತರಿಗೆ ಬಲವಾದ ಏಟು ಬಿದ್ದಂತಾಗಿದೆ.
ದರ ಕುಸಿತ ಏಕೆ
ಡಿಸೆಂಬರ್ 13ರಂದು ಪಿಂಕ್ ತೊಗರಿ ಬೆಲೆ ಕ್ವಿಂಟಾಲ್‌ಗೆ 9000 ರಿಂದ 10400ರೂ ಇತ್ತು. ಮಂಗಳವಾರ ಮಾರುಕಟ್ಟೆಗೆ ಹೊಸ ಮಾಲು ಬರುತ್ತಿದ್ದಂತೆಯೇ ಈ ದರದಲ್ಲಿ ಸರಾಸರಿ 1200 ಕುಸಿತ ಕಂಡು 8500 ರಿಂದ 9000ರೂಗೆ ಇಳಿದಿದೆ. ಡಿ.13ರಂದು ಮಾರುತಿ ಹೆಸರಿನ ತೊಗರಿ ಬೆಲೆ ಕ್ವಿಂಟಾಲ್‌ಗೆ 9000ರಿಂದ 9700 ರೂ ಇತ್ತು. ಮಂಗಳವಾರ ಸರಾಸರಿ 600 ರೂ ಕುಸಿತ ಕಂಡು ಇದು 8500 ರಿಂದ 8900 ರೂಗೆ ಇಳಿದಿರುವುದು ರೈತರ ಸಂಕಟಕ್ಕೆ ಕಾರಣವಾಗಿದೆ. ಎ
ವಿಶೇಷವಾಗಿ ವಿಜಯಪುರ ಭಾಗದ ತೊಗರಿ ಬೆಳೆಗಾರರು, ಎಪಿಎಂಸಿ ವರ್ತಕರು ಸೊಲ್ಲಾಪುರ ಮಾರುಕಟ್ಟೆಗೆ ಇಲ್ಲಿನ ತೊಗರಿ ಕಳಿಸುತ್ತಾರೆ. ಸೊಲ್ಲಾಪುರದಲ್ಲಿ ಆಗುವ ದರ ವ್ಯತ್ಯಾಸ ಇಲ್ಲಿನ ಸ್ಥಳೀಯ ಮಾರುಕಟ್ಟೆಗಳ ಮೇಲೂ ಪರಿಣಾಮ ಬೀರುತ್ತದೆ. ಮಾರುಕಟ್ಟೆ ಹಿಡಿತದಲ್ಲಿಟ್ಟುಕೊಂಡಿರುವವರು ಈ ಪರಿಣಾಮವನ್ನು ರೈತರಿಗೆ ದಾಟಿಸುತ್ತಾರೆ. ಇಂಥ ಸಂದರ್ಭಗಳಲ್ಲಿ ಹಾನಿ ಅನುಭವಿಸುವವರು ರೈತರೇ ಹೊರತು ಏಜಂಟರಾಗಲಿ, ವರ್ತಕರಾಗಲಿ ಅಲ್ಲ. ಹೀಗಿರುವಾಗ ರೈತ ಕಂಗಾಲಾಗದೆ ಇನ್ನೇನು ಮಾಡುತ್ತಾನೆ ಎನ್ನುವ ಮಾತು ಇಲ್ಲೆಲ್ಲ ಕೇಳಿಬರತೊಡಗಿದೆ ಎನ್ನುವುದು ಬೆಳೆಗಾರರೂ ಆಗಿರುವ ಪತ್ರಕರ್ತ ರಾಜಶೇಖರ ಸಜ್ಜನ್ ಹೇಳುತ್ತಾರೆ.
ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ, ತಾಳಿಕೋಟೆ ತಾಲೂಕು ವ್ಯಾಪ್ತಿಯಲ್ಲಿ 1.50 ಲಕ್ಷ ಹೆಕ್ಟೇರ್ ಸೇರಿ ವಿಜಯಪುರ ಜಿಲ್ಲೆಯಾದ್ಯಂತ 5.46ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ರೈತರು ತೊಗರಿ (ಪಿಂಕ್ ಮತ್ತು ಮಾರುತಿ) ಬೆಳೆದಿದ್ದಾರೆ. ಕಲಬುರಗಿ ಜಿಲ್ಲೆಯಲ್ಲಿ ಈ ಪ್ರಮಾಣ ಇನ್ನೂ ಅಧಿಕ 6.06 ಹೆಕ್ಟೇರ್ ತೊಗರಿ ಬೆಳೆಯಲಾಗಿದೆ. ಈ ಬಾರಿ ಹೆಚ್ಚಿನ ಮಹತ್ವ ಸಿಕ್ಕಿರುವುದು ಪಿಂಕ್ ತೊಗರಿಗೆ ಆಗಿದ್ದರಿಂದ ಶೇ.೯೦ರಷ್ಟು ಬೆಳೆಗಾರರು ಪಿಂಕ್ ತೊಗರಿಗೆ ಆದ್ಯತೆ ನೀಡಿದ್ದಾರೆ.
ಇಳುವರಿಯೂ ಕಡಿಮೆ
ಕಳಪೆ ಬೀಜ, ಹವಾಮಾನ ವೈಪರೀತ್ಯ ಸೇರಿ ಇನ್ನಿತರ ಕಾರಣಗಳಿಂದ ಶೇ.80-90ರಷ್ಟು ಬೆಳೆ ನಾಶವಾಗಿ ಶೇ.10-20ರಷ್ಟು ಬೆಳೆ ಮಾತ್ರ ಕೈಗೆ ಬಂದಿದೆ. ಇಂಥ ಪರಿಸ್ಥಿತಿಯಲ್ಲಿ ಅಳಿದುಳಿದ ಬೆಳೆಯನ್ನು ಉಳಿಸಿಕೊಂಡು ಕೈಗೆ ಬಂದ ದರಕ್ಕೆ ಮಾರುವ ಮನೋಭಾವದಲ್ಲಿದ್ದ ರೈತರಿಗೆ ಏಕಾಏಕಿ ದರ ಕುಸಿತ ಗಾಯದ ಮೇಲೆ ಬರೆ ಎಳೆದಂತಾಗಿದೆ.
ತೊಗರಿ ಬೆಳೆ ನಾಶಕ್ಕೆ ಸಮೀಕ್ಷೆ ನಡೆದು ಸೂಕ್ತ ಪರಿಹಾರ ದೊರಕುತ್ತದೆ ಎಂದರೆ ಅದೂ ಆಗುತ್ತಿಲ್ಲ. ವಿಮೆ ಕಟ್ಟಿದವರು ಅರ್ಜಿ ಸಲ್ಲಿಸಿದ್ದರೂ ಎಷ್ಟು ವಿಮೆ ಹಣ ಬರುತ್ತದೆ ಎನ್ನುವ ಖಚಿತತೆ ಯಾರಲ್ಲಿಯೂ ಇಲ್ಲ. ಹೊಲದಲ್ಲಿ ಒಣಗಿರುವ ತೊಗರಿ ಕಟಾವು ಮಾಡದೆ ಬಿಟ್ಟರೆ ಮಂಜು, ಮಳೆ ಇನ್ನಿತರ ಕಾರಣಗಳಿಂದ ಒಣಗಿದ ಬುಡ್ಡೆಗಳು ಒಡೆದು ಬೀಜ ಹೊರಚಲ್ಲಿ ನೆಲದ ಪಾಲಾಗುವ ಆತಂಕದಿಂದ ರೈತರು ಸಿಕ್ಕಷ್ಟು ಸಿಗಲಿ ಎಂದು ಶರವೇಗದಲ್ಲಿ ಕಟಾವು ಮಾಡತೊಡಗಿದ್ದಾರೆ. ಏಕಕಾಲಕ್ಕೆ ಹೆಚ್ಚಿನ ಪ್ರಮಾಣದಲ್ಲಿ ಹೊಸ ತೊಗರಿ ಮಾರುಕಟ್ಟೆಗೆ ಬಂದಿರುವುದು ಬೆಲೆ ಕುಸಿತಕ್ಕೆ ಕಾರಣ ಎಂದು ವಿಶ್ಲೇಷಿಸಲಾಗುತ್ತಿದೆ.
ಸರ್ಕಾರ ಮಧ್ಯಪ್ರವೇಶಿಸಲಿ
ಎರಡೇ ದಿನದಲ್ಲಿ ಏಕಾಏಕಿ ತೊಗರಿಗೆ ದರ ಕುಸಿದಿದೆ. ನಾನು 60 ಕ್ವಿಂಟಾಲ್ ಬೆಳೆದಿದ್ದೇನೆ. ಒಣಗಿಸಿ ಮಾರಬೇಕೆಂದರೆ ಕ್ವಿಂಟಾಲ್ ತೊಗರಿಗೆ ದಿನಕ್ಕೆ 1200 ರೂ ದರ ಕಡಿತಗೊಳ್ಳುತ್ತಿದೆ. ನಮ್ಮ ಕೈಗೆ ಬಂದ ಬೆಳೆಗೆ ಸೂಕ್ತ ಬೆಲೆ ಸಿಗುತ್ತಿಲ್ಲ ಅನ್ನೋ ಚಿಂತೆ ಕಾಡುತ್ತಿದೆ. ಅಧಿಕಾರಿಗಳು, ಸರ್ಕಾರ ಎಚ್ಚೆತ್ತುಕೊಂಡು ತೊಗರಿ ಬೆಳೆ ಹಾನಿಯ ವಾಸ್ತವ ಸಮೀಕ್ಷೆ ನಡೆಸಬೇಕು. ಹಾನಿ ಅನುಭವಿಸಿದ ರೈತರಿಗೆ ಸೂಕ್ತ ಪರಿಹಾರ ಘೋಷಿಸಿ ಸ್ಪಂದಿಸಬೇಕು. ವಾಣಿಜ್ಯ ಬೆಳೆ ಎನ್ನಿಸಿಕೊಂಡಿರುವ ತೊಗರಿಗೆ ಮಾರುಕಟ್ಟೆಯಲ್ಲಿ ಸೂಕ್ತ ಮೌಲ್ಯ ದೊರಕುವಂತೆ ಕ್ರಮವಹಿಸಬೇಕು ಎನ್ನುವುದು ವಿಜಯಪುರ ಜಿಲ್ಲೆ ಹಳ್ಳೂರದ ರೈತ ಪಿ.ಎಚ್.ಉಪ್ಪಲದಿನ್ನಿ ಆಗ್ರಹ.