Bengaluru News: ಬೆಂಗಳೂರು ಸಹಿತ ಹಲವೆಡೆ ಟೊಮೆಟೊ ಬೆಲೆ ಭಾರೀ ಕುಸಿತ: ಕೆಜಿಗೆ ಐದು ರೂ.
ಕನ್ನಡ ಸುದ್ದಿ  /  ಕರ್ನಾಟಕ  /  Bengaluru News: ಬೆಂಗಳೂರು ಸಹಿತ ಹಲವೆಡೆ ಟೊಮೆಟೊ ಬೆಲೆ ಭಾರೀ ಕುಸಿತ: ಕೆಜಿಗೆ ಐದು ರೂ.

Bengaluru News: ಬೆಂಗಳೂರು ಸಹಿತ ಹಲವೆಡೆ ಟೊಮೆಟೊ ಬೆಲೆ ಭಾರೀ ಕುಸಿತ: ಕೆಜಿಗೆ ಐದು ರೂ.

Tomato rates down ಕರ್ನಾಟಕದಲ್ಲಿ ಟೊಮೆಟೊ ಇಳುವರಿ ಪ್ರಮಾಣ ಗಣನೀಯ ಏರಿಕೆ ಕಂಡಿರುವುದರಿಂದ ಬೆಲೆಯಲ್ಲಿ ಕುಸಿತ ಕಂಡಿದೆ. ಬೆಂಗಳೂರಿನಲ್ಲಿಯೇ ಟೊಮೆಟೊ ಕೆಜಿಗೆ 5 ಮಾರಾಟವಾಗುತ್ತಿದೆ. ಕೋಲಾರ ಸೇರಿದಂತೆ ಹಲವು ಕಡೆ ಇನ್ನಷ್ಟು ಬೆಲೆ ಕುಸಿಯುವ ಆತಂಕವೂ ಇದೆ.

ಬೆಂಗಳೂರು ಸೇರಿದಂತೆ ಹಲವು ಕಡೆ ಟೊಮೆಟೊ ಬೆಲೆಯಲ್ಲಿ ಕುಸಿತ ಕಂಡಿದೆ
ಬೆಂಗಳೂರು ಸೇರಿದಂತೆ ಹಲವು ಕಡೆ ಟೊಮೆಟೊ ಬೆಲೆಯಲ್ಲಿ ಕುಸಿತ ಕಂಡಿದೆ

ಬೆಂಗಳೂರು: ತಿಂಗಳ ಹಿಂದೆಯಷ್ಟೇ 15 ಕೆಜಿ ಟೊಮೆಟೊ ಬಾಕ್ಸ್‌ಗೆ ಸಾರ್ವಕಾಲಿಕ ದಾಖಲೆ ಎನ್ನುವಂತೆ 2700 ರೂ.ಗೆ ಮಾರಾಟ. ಒಂದೇ ತಿಂಗಳ ಅಂತರದಲ್ಲಿ ಈಗ ಅದೇ ಬಾಕ್ಸ್‌ಗೆ 250 ರೂ. ಸಾಮಾನ್ಯ ಟೊಮೆಟೊ 50 ರೂ. ಅಂದರೆ ಕೆಜಿ ಬೆಲೆ 5 ರೂ.ಗೂ ಕಡಿಮೆ.

ಕರ್ನಾಟಕದಲ್ಲಿ ತಿಂಗಳ ಅವಧಿಯೊಳಗೆ ಟೊಮೆಟೊಗೆ ಇದ್ದ ರಾಜವೈಭೋಗವೇ ಇಲ್ಲದಾಗಿದೆ. ಟೊಮೆಟೊ ಖರೀದಿ ಎಂದರೆ ಜನ ಹೆದರುವ ಸ್ಥಿತಿಯಿತ್ತು. ಟೊಮೆಟೊವನ್ನು ಬಾಯಿಯಿಂದ ದೂರವೇ ಇಟ್ಟಿದ್ದರು. ಈಗ ಪರಿಸ್ಥಿತಿ ಸಂಪೂರ್ಣ ಉಲ್ಟಾಪಲ್ಟಾ. ಟೊಮೆಟೊ ಬೆಲೆ ಭಾರೀ ಕುಸಿತ ಕಂಡಿದೆ. ಈಗ ಮಾರುಕಟ್ಟೆಗೆ ಬರುತ್ತಿರುವ ಇಳುವರಿ ಪ್ರಮಾಣವೂ ಏರುತ್ತಿರುವುದರಿಂದ ವಾರದೊಳಗೆ ಇನ್ನಷ್ಟು ದರ ಕುಸಿತವಾಗುವ ಆತಂಕ ಎದುರಾಗಿದೆ.

ಉತ್ತಮ ದರ್ಜೆಯ ಟೊಮೆಟೊ ಕೆಜಿ ಗೆ10 ರೂ.ಗೆ ಮಾರಾಟವಾಗುತ್ತಿದ್ದರೆ ಸಾಮಾನ್ಯ ಟೊಮೆಟೊ ದರ 5 ರೂ. ಗೂ ಸಿಗುತ್ತಿದೆ. ಬೆಂಗಳೂರು ಮಾರುಕಟ್ಟೆಯಲ್ಲಿಯೇ ಟೊಮೆಟೊವನ್ನು 5 ರೂ.ಗೆ ಮಾರಾಟ ಮಾಡಲಾಗಿದೆ.

ಹೆಚ್ಚಿದ ಆವಕ

ಕರ್ನಾಟಕದಲ್ಲಿ ಅತಿ ಹೆಚ್ಚು ಟೊಮೆಟೋ ಆವಕವಾಗುವ ಮಾರುಕಟ್ಟೆ ಕೋಲಾರ. ಇಲ್ಲಿನ ಎಪಿಎಂಸಿ ಮಾರುಕಟ್ಟೆಗೆ ಟನ್‌ಗಟ್ಟಲೇ ಟೊಮೆಟೊ ಬರುತ್ತದೆ. ಎರಡು ತಿಂಗಳಿನಿಂದ ಕೋಲಾರ ಮಾರುಕಟ್ಟೆಗೆ ಬಂದ ಟೊಮೆಟೊ ದಾಖಲೆ ಬೆಲೆಗೆ ಮಾರಾಟವಾಗಿದೆ. ಅದರಲ್ಲೂ ಉತ್ತರ ಭಾರತದವರು, ದಕ್ಷಿಣ ಕರ್ನಾಟಕದ ಹಲವು ರಾಜ್ಯದವರು ಹೆಚ್ಚು ಬೆಲೆ ಕೊಟ್ಟು ಖರೀದಿಸಿದ್ದರು. ಉತ್ತರ ಭಾರತದಲ್ಲಿ ಎರಡು ತಿಂಗಳ ಹಿಂದೆ ಭಾರೀ ಮಳೆಯಿಂದ ಬೆಳೆಯಿಲ್ಲದೇ ಇಲ್ಲಿನ ಟೊಮೆಟೊಗೆ ಬೇಡಿಕೆ ಬಂದಿದ್ದರಿಂದ ಬೆಲೆ ಕೆಜಿಗೆ 200 ರೂ. ದಾಟಿತ್ತು. ಕೋಲಾರದಲ್ಲಿಯೇ 15 ಕೆಜಿ ಟೊಮೆಟೊ ಬಾಕ್ಸ್‌ಗೆ 2700 ರೂ.ಗೆ ಮಾರಾಟ ಮಾಡಲಾಗಿತ್ತು. ರೈತರು ಹಾಗೂ ವ್ಯಾಪಾರಸ್ಥರು ಟೊಮೆಟೊ ಮಾರಾಟದಿಂದ ಲಕ್ಷ ಲಕ್ಷ ಗಳಿಸಿದ್ದರು. ಕೆಲವರು ರೈತರಂತೂ ಕೋಟಿಗಟ್ಟಲೇ ಆದಾಯ ಗಳಿಸಿದ್ದು ಇದೆ.

ಅದೇ ಕೋಲಾರ ಮಾರುಕಟ್ಟೆಗೆ ಟೊಮೆಟೊ ಬರುವ ಪ್ರಮಾಣ ನಾಲ್ಕು ಪಟ್ಟು ಅಧಿಕವಾಗಿದೆ. ಶನಿವಾರವೇ 30 ಟನ್‌ನಷ್ಟು ಟೊಮೆಟೊ ಮಾರುಕಟ್ಟೆಗೆ ಬಂದಿದೆ. ಅಂದರೆ 30 ಸಾವಿರ ಬಾಕ್ಸ್‌ಗಳು ಮಾರುಕಟ್ಟೆಗೆ ಬಂದಿದ್ದು, ಹೆಚ್ಚಿನ ಭಾಗದಲ್ಲಿ ಮಾರಾಟವಾಗಿಲ್ಲ. ಇದರಿಂದ ದರ ಬಹುಪಾಲು ಕುಸಿದು ಹೋಗಿದೆ.

ರಫ್ತು ಮಾಡುವ ಅತ್ಯುತ್ತಮ ದರ್ಜೆಯ 15 ಕೆಜಿ ಟೊಮೆಟೊ ಬಾಕ್ಸ್‌ಗೆ 250 ಮಾತ್ರ ದೊರೆತಿದೆ. ಅಂದರೆ ಕೆಜಿಗೆ 16ರಿಂದ 17 ರೂ. ಮಾತ್ರ ದೊರೆಕಿದೆ. ಅದೇ ಸಾಮಾನ್ಯ ದರ್ಜೆಯ 15 ಕೆಜಿ ಟೊಮೆಟೊ ಬಾಕ್ಸ್‌ಗೆ 50 ರೂ. ನೀಡಿ ಮಾರಾಟ ಮಾಡಲಾಗಿದೆ. ಇದು ಕೆಜಿಗೆ 3ರಿಂದ 4 ರೂ. ಮಾತ್ರ ಇದ್ದು, ಅಂಗಡಿಗಳಲ್ಲಿ ಐದು ರೂ.ಗೆ ಮಾರಾಟ ಮಾಡಲಾಗುತ್ತಿದೆ.

ಇತರೆ ಮಾರುಕಟ್ಟೆಗಳಲ್ಲಿ

ಉಳಿದಂತೆ ಬಾಗೆಪಲ್ಲಿಗೆ ಎರಡು ಟನ್‌, ಚಿಂತಾಮಣಿಗೆ ಎಳು ಟನ್‌, ಮುಖಬಾಗಲಿಗೆ ಎರಡು ಟನ್‌ ಟೊಮೆಟೊ ಬಂದಿದೆ. ಉಳಿದಂತೆ ಇತರೆ ಮಾರುಕಟ್ಟೆಗಳಿಗೆ ಈ ಪ್ರಮಾಣ ಕಡಿಮೆಯೇ.

ಕೋಲಾರದಲ್ಲಿ ಟೊಮೆಟೊ ಬೆಳೆಯುವವರು ಪ್ರಮಾಣ ಹೆಚ್ಚೇ ಇರುವುದರಿಂದ ದರವೂ ಕುಸಿದಿದೆ. ತಿಂಗಳ ಹಿಂದೆ ಮಾರುಕಟ್ಟೆಗೆ ಬರುತ್ತಿದ್ದ ಟೊಮೆಟೊ ಪ್ರಮಾಣ ಕಡಿಮೆ ಇದ್ದುದರಿಂದ ದರವೂ ದೊರೆತಿತ್ತು. ಈಗ ಬಹುತೇಕ ಕುಸಿದಿದೆ. ಇನ್ನೂ ಹೆಚ್ಚಿನ ಪ್ರಮಾಣದಲ್ಲಿ ಟೊಮೆಟೊ ಬಂದರೆ ಹಿಂದಿನ ವರ್ಷಗಳ ರೀತಿಯೇ ದರ ಇನ್ನಷ್ಟು ಕುಸಿತವಾಗಿ ಕೆಜಿಗೆ ಒಂದು ರೂ.ಗೂ ಮಾರಾಟವಾಗುವ ಆತಂಕವಿದೆ. ಕೊನೆಗೆ ರಸ್ತೆಗೆ ಚಲ್ಲುವ ಸನ್ನಿವೇಶವನ್ನೂ ಸದ್ಯವೇ ನೋಡುವ ಸ್ಥಿತಿ ಎಂದು ಕೋಲಾರದ ವ್ಯಾಪಾರಸ್ಥರೊಬ್ಬರು ತಿಳಿಸಿದರು.

ಬೆಂಗಳೂರಲ್ಲೇ ಕುಸಿತ

ತಿಂಗಳ ಹಿಂದೆ ಬೆಂಗಳೂರಲ್ಲೇ ಟೊಮೆಟೊ ಬೆಲೆ ಕೆಜಿಗೆ ನೂರು ರೂ. ಇತ್ತು. ಇದಕ್ಕಿಂತ ಕಡಿಮೆಗೆ ಇಳಿದಿರಲೇ ಇಲ್ಲ. ಇತ್ತೀಚಿಗೆ ಟೊಮೆಟೊ ಉತ್ಪಾದನೆ ಹಚ್ಚಳವಾಗಿರುವ ಕಾರಣಕ್ಕೆ ಬೆಲೆ ತಾನಾಗಿಯೇ ಇಳಿದಿದೆ. ಕೆ.ಜಿಗೆ ಬೆಂಗಳೂರಲ್ಲಿ 40 ರೂ. ಇತ್ತು. ಈಗಂತೂ ಇನ್ನೂ ಕುಸಿದಿದೆ. ಭಾನುವಾರ ಈ ಪ್ರಮಾಣ 5 ರೂ.ಗೆ ಇಳಿದಿದೆ.

ಟೊಮೆಟೊ ಖರೀದಿಸಲು ನಾವು ಹಿಂಜರಿಯುತ್ತಿದ್ದೆವು. ಅಷ್ಟೊಂದು ಬೆಲೆ ದುಬಾರಿಯಾಗಿತ್ತು. ಭಾನುವಾರವಂತೂ ಕೆಲವು ಕಡೆ 5 ರೂ.ಟೊಮೆಟೊ ಮಾರಾಟ ಮಾಡುತ್ತಿದ್ದಾರೆ. ಉತ್ತಮ ದರ್ಜೆಯ ಟೊಮೆಟೊ ಬೆಲೆ ಈಗಲೂ ಕೆಜಿಗೆ 20ರಿಂದ 30 ರೂ.ವರೆಗೆ ಎನ್ನುವುದು ಗೃಹಿಣಿಯೊಬ್ಬರ ವಿವರಣೆ.

ಮೈಸೂರಲ್ಲೂ ಚಿಲ್ಲರೆ ವ್ಯಾಪಾರಸ್ಥರು ಕೆಜಿಗೆ 10ರಿಂದ 20 ರೂ.ವರೆಗೂ ಮಾರಾಟ ಮಾಡುತ್ತಿದ್ದಾರೆ. ಬೆಳಗಾವಿಯಲ್ಲಿ ಮಾತ್ರ ಕೆಜಿಗೆ 30 ರೂ.ವರೆಗೂ ಮಾರಾಟವಾಗಿದೆ. ಉಳಿದ ಕಡೆಯೂ ಕೆಜಿಗೆ 20 ರಿಂದ 30 ಇದೆ. ಇದು ಇನ್ನೂ ಕುಸಿತ ಕಾಣುವ ಆತಂಕವೂ ಇದೆ.

Whats_app_banner