logo
ಕನ್ನಡ ಸುದ್ದಿ  /  ಕರ್ನಾಟಕ  /  Tumkur News: ತುಮಕೂರು ಸಿದ್ದಗಂಗಾ ಮಠದಲ್ಲಿ ದನಗಳ ಜಾತ್ರೆ ವೈಭವ, ಲಕ್ಷ ಬೆಲೆಯ ರಾಸುಗಳಿಗೆ ಭಾರೀ ಬೇಡಿಕೆ

Tumkur News: ತುಮಕೂರು ಸಿದ್ದಗಂಗಾ ಮಠದಲ್ಲಿ ದನಗಳ ಜಾತ್ರೆ ವೈಭವ, ಲಕ್ಷ ಬೆಲೆಯ ರಾಸುಗಳಿಗೆ ಭಾರೀ ಬೇಡಿಕೆ

Umesha Bhatta P H HT Kannada

Mar 01, 2024 08:00 AM IST

google News

ತುಮಕೂರಿನ ರಾಸುಗಳ ಜಾತ್ರೆ ಕಳೆಗಟ್ಟಿದೆ.

    • ತುಮಕೂರಿನ ಸಿದ್ದಗಂಗಾ ಮಠ ಆಯೋಜಿಸಿರುವ ಶಿವರಾತ್ರಿ ರಾಸುಗಳ ಪ್ರದರ್ಶನ ಹಾಗೂ ಮಾರಾಟ ಮೇಳಕ್ಕೆ ಬನ್ನಿ. ಬಗೆಬಗೆಯ ರಾಸುಗಳನ್ನು ನೋಡಿ ಆನಂದಿಸಿ.
    • (ವರದಿ: ಈಶ್ವರ್‌ ತುಮಕೂರು)
ತುಮಕೂರಿನ ರಾಸುಗಳ ಜಾತ್ರೆ ಕಳೆಗಟ್ಟಿದೆ.
ತುಮಕೂರಿನ ರಾಸುಗಳ ಜಾತ್ರೆ ಕಳೆಗಟ್ಟಿದೆ.

ತುಮಕೂರು: ತುಮಕೂರಿನ ಸಿದ್ದಗಂಗಾ ಮಠ ಅನ್ನದಾಸೋಹ ಹಾಗೂ ಅಕ್ಷರ ದಾಸೋಹ ಮಾತ್ರ ಜನಪ್ರಿಯವಾಗಿಲ್ಲ. ಇಲ್ಲಿನ ಹತ್ತಾರು ಚಟುವಟಿಕೆಗಳಿಂದಲೂ ಮಠ ಜನರಿಗೆ ಹತ್ತಿರವಾಗಿದೆ. ಇದರಲ್ಲಿ ರಾಸುಗಳ ಜಾತ್ರೆಯೂ ಒಂದು. ತುಮಕೂರು ಸಿದ್ದಗಂಗಾಮಠದ ರಾಸುಗಳ ಜಾತ್ರೆಗೆ ಕರ್ನಾಟಕ ಮಾತ್ರವಲ್ಲದೇ ಹೊರ ರಾಜ್ಯಗಳಿಂದಲೂ ರಾಸುಗಳು ಬರುತ್ತವೆ. ನೋಡಲು ಸುಂದರವಾದ ರಾಸು ಜೋಡಿಗಳಿಗೆ ಲಕ್ಷ ಲಕ್ಷ ಕೊಟ್ಟು ಖರೀದಿಸುವವರೂ ಇದ್ದಾರೆ. ಇಲ್ಲಿಗೆ ಮಾರಾಟ ಮಾಡಲು ಬರುವವರು ಅದೆಷ್ಟೋ ರೈತರು. ಅದೇ ರೀತಿ ಖರೀದಿ ಮಾಡಲು ಕೂಡ ಜನ ನಾನಾ ಭಾಗಗಳಿಂದ ಆಗಮಿಸುವುದು ಇಲ್ಲಿನ ವಿಶೇಷ.

ಶಿವರಾತ್ರಿ ಹಬ್ಬ ಬಂತು ಅಂದ್ರೆ ಸಾಕು ನಗರದ ಸಿದ್ದಗಂಗಾ ಮಠದಲ್ಲಿ ಸಂಭ್ರಮ ಮನೆ ಮಾಡಿರುತ್ತೆ, ಇಲ್ಲಿ ನಡೆಯುವ ಜಾತ್ರೆ, ರಥೋತ್ಸವ, ಕೃಷಿ ಮತ್ತು ಕೈಗಾರಿಕಾ ವಸ್ತು ಪ್ರದರ್ಶನ ರಾಜ್ಯದ ನಾನಾ ಮೂಲೆಗಳಿಂದ ಭಕ್ತರು, ಪ್ರವಾಸಿಗರನ್ನು ಆಕರ್ಷಿಸುತ್ತದೆ, ಇದಿಷ್ಟೇ ಅಲ್ಲದೆ ಇಲ್ಲಿ ನಡೆಯುವ ದನಗಳ ಜಾತ್ರೆ ವೈಭವ ಕಣ್ಣು ತುಂಬಿಕೊಳ್ಳೋದೆ ಆನಂದ.

ಪ್ರತಿ ವರ್ಷ ಶಿವರಾತ್ರಿ ಹಬ್ಬಕ್ಕೆ ಇಲ್ಲಿ ನಡೆಯುವ ಸಿದ್ದಲಿಂಗೇಶ್ವರ ಸ್ವಾಮಿ ರಥೋತ್ಸವ ನೋಡಲು ಎಷ್ಟು ಚೆಂದವೋ ದನಗಳ ಜಾತ್ರೆಗೆ ಆಗಮಿಸುವ ರಾಸುಗಳನ್ನು ನೋಡುವುದೇ ಒಂದು ಸಂಭ್ರಮ. ಈ ಬಾರಿಯೂ ಇಂತಹ ವಾತಾವರಣ ಈಗಾಗಲೇ ಶುರುವಾಗಿದೆ.

ರಾಜ್ಯದ ಮೂಲೆ ಮೂಲೆಗಳಿಂದ ರಾಸುಗಳ ಆಗಮನ

ಸಿದ್ದಗಂಗೆಯಲ್ಲಿ ನಡೆಯುವ ದನಗಳ ಜಾತ್ರೆ ಅಂದ್ರೆ ರಾಜ್ಯದಲ್ಲೇ ಜನಪ್ರಿಯ, ಇಲ್ಲಿನ ಜಾತ್ರೆಗೆ ಉತ್ತರ ಕರ್ನಾಟಕ ಸೇರಿದಂತೆ ರಾಜ್ಯದ ನಾನಾ ಮೂಲೆಗಳಿಂದ ರೈತರು ತಮ್ಮ ಜಾನುವಾರುಗಳನ್ನು ಸಿದ್ದಗಂಗಾ ಮಠಕ್ಕೆ ಕರೆ ತರುತ್ತಾರೆ, ಇಲ್ಲಿಗೆ ಆಗಮಿಸುವ ರಾಸುಗಳು ಒಂದಕ್ಕಿಂತ ಒಂದು ಮೀರಿಸುವಂತಿರುತ್ತವೆ, ಮಾರಾಟ ಮಾಡುವವರು, ಕೊಳ್ಳುವವರು ಇಲ್ಲಿಗೆ ಆಗಮಿಸಿ ತಮಗೆ ಇಷ್ಟವಾದ ರಾಸುಗಳನ್ನು ಕೊಂಡೊಯ್ಯುತ್ತಾರೆ.

ಲಕ್ಷ ಲಕ್ಷ ಬೆಲೆಯ ರಾಸುಗಳು

ಇಲ್ಲಿಗೆ ಆಗಮಿಸುವ ರಾಸುಗಳ ಬೆಲೆ ಕೇಳಿದ್ರೆ ಒಮ್ಮೆ ತಲೆ ತಿರುಗುವುದು ಉಂಟು, ಸಾವಿರಾರು ರೂಪಾಯಿ ಬೆಲೆ ಬಾಳುವ ರಾಸುಗಳಿಂದ ಹಿಂಡಿದು ಲಕ್ಷ ಲಕ್ಷ ಬೆಲೆ ಬಾಳುವ ರಾಸುಗಳು ಇಲ್ಲಿಗೆ ಬಂದಿವೆ, ಈ ದುಬಾರಿ ರಾಸುಗಳ ಸೊಬಗೇ ಚೆಂದ, ಮಾಲೀಕರು ಈ ದುಬಾರಿ ರಾಸುಗಳನ್ನು ಬಹಳ ಮುತುವರ್ಜಿ ವಹಿಸಿ ಸಲಹುತ್ತಾರೆ, ಇಲ್ಲಿ ಕೊನೆಯ ದಿನ ನಡೆಯುವ ಉತ್ತಮ ಪ್ರದರ್ಶನದಲ್ಲೂ ಉತ್ತಮ ರಾಸುಗಳು ಪ್ರಶಸ್ತಿ ಹಾಗೂ ಬಹುಮಾನ ನೀಡುವುದು ವಿಶೇಷ. ಈ ಬಾರಿಯೂ ಇಂತ ರಾಸುಗಳು ಇಲ್ಲಿಗೆ ಬಂದಿವೆ.

ಒಂದು ಲಕ್ಷ ರೂ. ನಿಂದ ಹಿಡಿದು 20 ಲಕ್ಷ ರೂ.ವರೆಗೂ ರಾಸುಗಳು ಬಂದಿವೆ. ಇವುಗಳನ್ನು ಖರೀದಿಸಲು ಜನರೂ ಕೂಡ ಆಗಮಿಸುತ್ತಿದ್ದಾರೆ. ರಾಸುಗಳ ಹಲ್ಲುಗಳನ್ನು ಗಮನಿಸಿ ಅವುಗಳಿಗೆ ದರ ನಿಗದಿ ಮಾಡುತ್ತಾರೆ.

ಸಕಲ ವ್ಯವಸ್ಥೆ

ಸಿದ್ದಗಂಗಾ ಮಠದ ದನಗಳ ಜಾತ್ರೆಗೆ ಬರುವ ರಾಸುಗಳಿಗೆ ಶ್ರೀಮಠದ ವತಿಯಿಂದ ಮೇವು, ನೀರು ನೆರಳಿನ ವ್ಯವಸ್ಥೆ ಮಾಡಲಾಗುತ್ತದೆ, ಹತ್ತು ದಿನಗಳ ಕಾಲ ನಡೆಸುವ ಈ ಜಾತ್ರೆಗೆ ಬರುವ ರಾಸುಗಳ ಮಾಲೀಕರಿಗೂ ಊಟ, ವಸತಿ ವ್ಯವಸ್ಥೆ ಮಾಡಲಾಗುತ್ತದೆ, ಯಾವುದೇ ಸಮಸ್ಯೆ ಆಗದಂತೆ ದನಗಳ ಜಾತ್ರೆ ವಿಜೃಂಭಣೆಯಿಂದ ನಡೆಯುವುದು ಇಲ್ಲಿನ ವಿಶೇಷ.

ದನದ ಜಾತ್ರೆಗೆ ಆಗಮಿಸಿರುವ ಬಗೆ ಬಗೆಯ ರಾಸುಗಳನ್ನು ಕಣ್ತುಂಬಿಸಿಕೊಳ್ಳಲು ಮತ್ತು ಮಠದಲ್ಲಿ ನಡೆಯುವ ಜಾತ್ರೆ, ರಥೋತ್ಸವ, ಬೆಳ್ಳಿ ಪಲ್ಲಕ್ಕಿ ಉತ್ಸವ ನೋಡಿ ಸಂಭ್ರಮಿಸಲು ಒಮ್ಮ ಬಂದು ಹೋಗಿ ಎಂಬುದು ಸಿದ್ದಗಂಗಾ ಮಠದ ಆಶಯ.

(ವರದಿ: ಈಶ್ವರ್‌ ತುಮಕೂರು)

ವಿಭಾಗ

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ