ಪಿಡಿಐ ಚೆಕ್‌ಲಿಸ್ಟ್: ವಾಹನ ಡೆಲಿವರಿಗೆ ಮುನ್ನ ಪರಿಶೀಲನೆ ಹೀಗಿರಲಿ; ಹೊಸ ಕಾರು ಖರೀದಿದಾರರಿಗೆ ಮಾರ್ಗದರ್ಶಿ
Oct 09, 2024 03:33 PM IST
ಪಿಡಿಐ ಚೆಕ್‌ಲಿಸ್ಟ್: ವಾಹನ ಡೆಲಿವರಿಗೆ ಮುನ್ನ ಪರಿಶೀಲನೆ ಹೀಗಿರಲಿ; ಹೊಸ ಕಾರು ಖರೀದಿದಾರರಿಗೆ ಮಾರ್ಗದರ್ಶಿ
- Pre delivery inspection checklist: ಹೊಸ ಕಾರು ಅಥವಾ ಯಾವುದೇ ವಾಹನವನ್ನು ಶೋರೂಂನಲ್ಲಿ ಡೆಲಿವರಿ ಪಡೆಯುವ ಮೊದಲು ಅಮೂಲಾಗ್ರವಾಗಿ ಪರಿಶೀಲನೆ ಮಾಡುವುದು ಅಗತ್ಯವಾಗಿದೆ. ಪಿಡಿಐ ಚೆಕ್‌ಲಿಸ್ಟ್ ಇಲ್ಲಿದೆ.
ಕಾರು ನೊಂದಣಿಗೆ ಮೊದಲು ಡೀಲರ್‌ಶಿಪ್‌ಗೆ ಹೋಗಿ ಪರಿಶೀಲನೆ ನಡೆಸಿ. ನೋಂದಣಿಗೆ ಮೊದಲೇ ಕಾರು ಹೇಗಿದೆ ಎಂದು ನೋಡುವುದು ಉತ್ತಮ. ಪ್ರಿಡೆಲಿವರಿ ಇನ್‌ಸ್ಪೆಕ್ಷನ್ ಸೇವೆ ನೀಡುವ ಕಂಪನಿಗಳೂ ಇವೆ. ಇವುಗಳ ಸಹಾಯವನ್ನೂ ಪಡೆಯಬಹುದು. ನಿಮಗೆ ಕಾರುಗಳ ಕುರಿತು ಸರಿಯಾದ ಜ್ಞಾನ ಇಲ್ಲದೆ ಇದ್ದರೆ ಈ ಕುರಿತು ಮಾಹಿತಿ ಇರುವವರನ್ನು ಜತೆಗೆ ಕರೆದುಕೊಂಡು ಹೋಗುವುದು ಉತ್ತಮ. ಹೊಸ ಕಾರು ಖರೀದಿ ತುಂಬಾ ಉತ್ಸಾಹ ತರುವ ಸಂದರ್ಭವಾಗಿದೆ. ಈ ಸಮಯದಲ್ಲಿ ಮೋಸ ಹೋಗದಂತೆ ಎಚ್ಚರವಹಿಸಬೇಕು.
ಕಾರು ಡೆಲಿವರಿಗೆ ಮೊದಲು ತಪಾಸಣೆ ಚೆಕ್‌ಲಿಸ್ಟ್ (ಪಿಡಿಐ)
- ಕಾರು ತಯಾರಿಕಾ ತಿಂಗಳು ಮತ್ತು ವರ್ಷದ ಪರಿಶೀಲನೆ ನಡೆಸಿ. ವರ್ಷದ ಮೊದಲ ತ್ರೈಮಾಸಿಕದಲ್ಲಿ ವಾಹನ ಖರೀದಿಸುವಾಗ ಎಚ್ಚರವಿರಲಿ. ಹತ್ತು ಹದಿನೆಂಟು ತಿಂಗಳು ಹಿಂದೆ ತಯಾರಾದ ವಾಹನ ಡೆಲಿವರಿ ಮಾಡಬಹುದು. ಹೀಗಾಗಿ, ವಾಹನ ತಯಾರಿಕಾ ವರ್ಷದ ಕುರಿತು ಶೋರೂಂನವರಲ್ಲಿ ಮೊದಲೇ ಸ್ಪಷ್ಟವಾಗಿ ಸಂವಹನ ನಡೆಸಿ. ಇದಕ್ಕಾಗಿ ವಾಹನ ಕಂಪನಿಯು ನೀಡುವ ನಮೂನೆ 12 ಪ್ರಮಾಣಪತ್ರ ("Form 22" certificate)ವನ್ನು ಡೀಲರ್ ಬಳಿ ಕೇಳಿಪಡೆಯಿರಿ.
- ಡೀಲರ್‌ಶಿಪ್ ಸರಕುಪಟ್ಟಿ ಅಥವಾ ಇನ್ವಾಯ್ಸ್‌ನಲ್ಲಿ ಟ್ಯಾಕ್ಸ್ ಲೆಕ್ಕಾಚಾರ ಮಾಡಿನೋಡಿ. ಆರ್‌ಟಿಒ ಮತ್ತು ಇತರೆ ತೆರಿಗ ನಡಿ. ಸರಕಾರ ನಿಗದಿಪಡಿಸಿದ್ದಷ್ಟೇ ತೆರಿಗೆ ಪಾವತಿಸಿ. ಹೆಚ್ಚು ಪಾವತಿಸಬೇಡಿ. ಸಾಕಷ್ಟು ವಾಹನ ಡೀಲರ್‌ಶಿಪ್‌ಗಳಲ್ಲಿ ತೆರಿಗೆ ಲೆಕ್ಕದಲ್ಲೂ ಮೋಸ ಮಾಡುತ್ತಾರೆ.
- ನಿಮಗೆ ಡೆಲಿವರಿ ಮಾಡಲಿರುವ ವಾಹನವನ್ನು ಎಚ್ಚರಿಕೆಯಿಂದ ಪರಿಶೀಲನೆ ನಡೆಸಿ. ಏನಾದರೂ ಡ್ಯಾಮೇಜ್ ಇರುವುದೇ ನೋಡಿ. ಟೆಸ್ಟ್ ಡ್ರೈವ್ ಮಾಡಲು ಈ ಕಾರನ್ನು ಯಾರೂ ಬಳಸದೆ ಇರುವುದನ್ನು ಖಚಿತಪಡಿಸಿಕೊಳ್ಳಿ. ಓಡೋಮೀಟರ್ ಪರಿಶೀಲನೆ ನಡೆಸಿ.
ವಾಹನ ಡೆಲಿವರಿ ಸಮಯ
- ಯಾವಾಗ ನಿಮಗೆ ಕಾರು ಡೆಲಿವರಿ ಮಾಡುತ್ತಾರೆ ಎಂದು ತಿಳಿಯಿರಿ. ದಿನಾಂಕ ಖಚಿತಪಡಿಸಿಕೊಳ್ಳಿ. ಕೆಲವೊಮ್ಮೆ ವಿಶೇಷ ದಿನಗಳಂದು ಕಾರು ಡೆಲಿವರಿ ಬೇಕಾಗುತ್ತದೆ. ಅಂದರೆ, ಒಳ್ಳೆಯ ದಿನದಂದು ಮನೆಗೆ ಕಾರು ತರುವ ಯೋಜನೆ ಇರುತ್ತದೆ. ಈ ರೀತಿ ಇದ್ದರೆ ಮೊದಲೇ ಶೋರೂಂನವರಿಗೆ ತಿಳಿಸಿ.
- ರಾತ್ರಿಗಿಂತ ಹಗಲು ವಾಹನ ಡೆಲಿವರಿ ಪಡೆಯುವುದು ಒಳ್ಳೆಯದು. ಕತ್ತಲಲ್ಲಿ ಮೋಸ ನಡೆಯುವುದು ಹೆಚ್ಚು. ಬೆಳಕು ಉತ್ತಮವಾಗಿರುವ ಹಗಲು ಹೊತ್ತು ವಾಹನ ಡೆಲಿವರಿಗೆ ಸೂಕ್ತವಾಗಿದೆ. ಕೆಲವೊಮ್ಮೆ ಸಂಜೆಯ ವೇಳೆ ಶೋರೂಂ ಸಿಬ್ಬಂದಿಗಳು ಒಮ್ಮೆ ಮನೆಗೆ ಹೋದ್ರೆ ಸಾಕಪ್ಪ ಎಂಬ ಧಾವಂತದಲ್ಲಿ ಇರುತ್ತದೆ. ಅವಸರದ ಡೆಲಿವರಿ ಅಪಾಯ. ಬೆಳಗ್ಗೆಯೇ ಶೋರೂಂಗೆ ಹೋಗುವುದು ಉತ್ತಮ.
- ವಾಹನ ಖರೀದಿ ಸಮಯದಲ್ಲಿ ಮೂರನೇ ವ್ಯಕ್ತಿಯೊಬ್ಬರು ನಿಮ್ಮ ಜತೆ ಇರುವುದು ಉತ್ತಮ. ವಾಹನಗಳ ಬಗ್ಗೆ ಉತ್ತಮ ಜ್ಞಾನ ಇರುವವರು, ಪರಿಚಿತ ಮೆಕ್ಯಾನಿಕ್‌ಗಳು ಇದ್ದರೆ ಇನ್ನೂ ಒಳ್ಳೆಯದು.
- ಡೆಲಿವರಿ ಪಡೆಯಲು ಹೋಗುವಾಗ ಅಗತ್ಯ ದಾಖಲೆಪತ್ರಗಳನ್ನು ತೆಗೆದುಕೊಂಡು ಹೋಗಿ. ಹಣದ ವ್ಯವಸ್ಥೆಯೂ ಸರಿಯಾಗಿರಲಿ.
ಈ ಅಂಶಗಳನ್ನೂ ಗಮನಿಸಿ
ಕಾರು ಶೋರೂಂನಲ್ಲಿ ಎಚ್ಚರಿಕೆಯಿಂದ ಇರಿ. ನೀವು ಎಕ್ಸೈಟ್‌ಮೆಂಟ್‌ನಲ್ಲಿದ್ದೀರಿ ಎಂದು ಸೇಲ್ಸ್ ಮ್ಯಾನ್‌ಗೆ ಗೊತ್ತಿರುತ್ತದೆ. ಅಲ್ಲಿನವರನ್ನು ಗೌರವದಿಂದ ಕಾಣಿ. ಅಹಂ ಪ್ರದರ್ಶನ ಬೇಡ. ಕಾರು ಖರೀದಿಸಲು ಅಲ್ಲಿಗೆ ನಿಮ್ಮಂತೆ ಪ್ರತಿದಿನ ಎಷ್ಟೋ ಜನರು ಬಂದಿರುತ್ತಾರೆ.
- ಹೊಸ ಕಾರಿನ ಡೆಮೊ ತೆಗೆದುಕೊಳ್ಳಿ.
- ಕಾರಿನ ಫೀಚರ್‌ಗಳ ಮಾಹಿತಿ ಪಡೆಯಿರಿ. ಕಾರು ಮನೆಗೆ ತೆಗೆದುಕೊಂಡು ಹೋಗುವ ಮೊದಲು ಮತ್ತೊಮ್ಮೆ ಕೂಲಂಕಷವಾಗಿ, ಅಮೂಲಾಗ್ರವಾಗಿ, ಸಮಗ್ರವಾಗಿ ಪರಿಶೀಲನೆ ಮಾಡಿ.
- ಎಲ್ಲಾ ಲೈಟುಗಳು ಸರಿಯಾಗಿ ಉರಿಯುತ್ತ ನೋಡಿ.
- ಆಕ್ಸೆಸರಿಗಳು ಸರಿಯಾಗಿವೆಯೇ ಎಂದು ಪರಿಶೀಲಿಸಿ.
- ಇಂಟೀರಿಯರ್ ಕ್ಲೀನ್ ಆಗಿರುವುದೇ ಎಂದು ನೋಡಿ.
- ಸ್ಪೇರ್ ಚಕ್ರವು ಹೊಸತು ಆಗಿರುವುದನ್ನು ಖಚಿತಪಡಿಸಿಕೊಳ್ಳಿ.
- ವೈಪರ್, ಮ್ಯಾಟ್‌ಗಳು, ಪ್ರಥಮ ಚಿಕಿತ್ಸೆ ಕಿಟ್, ಗಾಡಿ ರಿಪೇರಿ ಕಿಟ್, ಎಚ್ಚರಿಕೆಯ ಬೋರ್ಡ್ ಇತ್ಯಾದಿಗಳನ್ನೂ ಪರಿಶೀಲಿಸಿ.
ಎಲ್ಲವೂ ಸಮರ್ಪಕವಾಗಿದೆ ಎಂದು ಖಚಿತಪಡಿಸಿಕೊಂಡ ಬಳಿಕ ಮನೆಗೆ ಕಾರು ಕೊಂಡೊಯ್ಯಿರಿ. ಬೆಂಗಳೂರಿನಂತಹ ನಗರಗಳಲ್ಲಿ ಹೊಸ ಕಾರುಗಳ Pre delivery inspection ಮಾಡಲೆಂದೇ ಏಜೆನ್ಸಿಗಳು ಇರುತ್ತವೆ. ಇವುಗಳ ಸಹಾಯವನ್ನೂ ಪಡೆಯಬಹುದು.