ಸ್ಕೂಟರ್ ಬೇಕಿದ್ದರೆ ಸ್ವಲ್ಪ ದಿನ ಕಾಯಿರಿ: ಬರುತ್ತಿದೆ ಬಹುನಿರೀಕ್ಷಿತ ಹೋಂಡಾ ಕಂಪನಿಯ ಮೊದಲ ಎಲೆಕ್ಟ್ರಿಕ್ ದ್ವಿಚಕ್ರ ವಾಹನ
Sep 21, 2024 01:26 PM IST
ಸುಧಾರಿತ ತಂತ್ರಜ್ಞಾನಗಳೊಂದಿಗೆ ಹೋಂಡಾ ಇವಿ ಸ್ಕೂಟರ್ ಉತ್ಪನ್ನಗಳನ್ನು ಬಿಡುಗಡೆ ಮಾಡಲು ಸಜ್ಜಾಗಿದೆ.
ಇವಿಗಳಿಗೆ ಅಗತ್ಯವಿರುವ ಚಾರ್ಜಿಂಗ್ ಸೌಲಭ್ಯದ ಕೊರತೆ ಮತ್ತು ಇವಿ ತಂತ್ರಜ್ಞಾನದಲ್ಲಿ ಎದುರಿಸುತ್ತಿರುವ ಹೊಸ ಸವಾಲುಗಳನ್ನು ಸೂಕ್ಷ್ಮವಾಗಿ ಗಮನಿಸುತ್ತಿರುವ ಹೋಂಡಾ ಹಲವಾರು ಸುಧಾರಿತ ತಂತ್ರಜ್ಞಾನಗಳೊಂದಿಗೆ ತನ್ನ ಇವಿ ಸ್ಕೂಟರ್ ಉತ್ಪನ್ನಗಳನ್ನು ಬಿಡುಗಡೆ ಮಾಡಲು ಸಜ್ಜಾಗಿದೆ. (ಬರಹ: ವಿನಯ್ ಭಟ್)
ದೇಶೀಯ ಮಾರುಕಟ್ಟೆಯಲ್ಲಿ, ಅನೇಕ ದ್ವಿಚಕ್ರ ವಾಹನ ಕಂಪನಿಗಳು ಈಗಾಗಲೇ ತಮ್ಮ ನವೀನ ಎಲೆಕ್ಟ್ರಿಕ್ ವಾಹನಗಳೊಂದಿಗೆ ಜನರ ಬೇಡಿಕೆಯನ್ನು ಪೂರೈಸುತ್ತಿವೆ. ಆದರೆ, ಹೋಂಡಾ ಮಾತ್ರ ಈವರೆಗೆ ಇವಿ ಸ್ಕೂಟರ್ ಪರಿಚಯಿಸಿಲ್ಲ. ಹೀಗಾಗಿ ಈ ವಿಚಾರದಲ್ಲಿ ಹೋಂಡಾ ಮೇಲೆ ಸ್ವಲ್ಪ ಒತ್ತಡವಿದೆ. ಆದರೀಗ ಮಾರುಕಟ್ಟೆಯಲ್ಲಿನ ಬೇಡಿಕೆಯ ಹೊರತಾಗಿಯೂ ತನ್ನ ಮೊಟ್ಟ ಮೊದಲ ಎಲೆಕ್ಟ್ರಿಕ್ ಸ್ಕೂಟರ್ ಅನ್ನು ಬಿಡುಗಡೆ ಮಾಡಲು ಹೋಂಡಾ ಸಮಯವನ್ನು ನಿಗದಿಪಡಿಸಿದೆ.
ಇವಿಗಳಿಗೆ ಅಗತ್ಯವಿರುವ ಚಾರ್ಜಿಂಗ್ ಸೌಲಭ್ಯದ ಕೊರತೆ ಮತ್ತು ಇವಿ ತಂತ್ರಜ್ಞಾನದಲ್ಲಿ ಎದುರಿಸುತ್ತಿರುವ ಹೊಸ ಸವಾಲುಗಳನ್ನು ಸೂಕ್ಷ್ಮವಾಗಿ ಗಮನಿಸುತ್ತಿರುವ ಹೋಂಡಾ ಹಲವಾರು ಸುಧಾರಿತ ತಂತ್ರಜ್ಞಾನಗಳೊಂದಿಗೆ ತನ್ನ ಇವಿ ಸ್ಕೂಟರ್ ಉತ್ಪನ್ನಗಳನ್ನು ಬಿಡುಗಡೆ ಮಾಡಲು ಸಜ್ಜಾಗಿದೆ. ಆದಷ್ಟು ಬೇಗ ಭಾರತೀಯ ಮಾರುಕಟ್ಟೆಯಲ್ಲಿ ತನ್ನ ಮೊದಲ ಎಲೆಕ್ಟ್ರಿಕ್ ಸ್ಕೂಟರ್ ಅನ್ನು ಬಿಡುಗಡೆ ಮಾಡುವುದಾಗಿ ಹೋಂಡಾ ದೃಢಪಡಿಸಿದೆ.
ಹೋಂಡಾ ಮೋಟಾರ್‌ಸೈಕಲ್ ಮತ್ತು ಸ್ಕೂಟರ್ ಇಂಡಿಯಾದ ಅಧ್ಯಕ್ಷ ಮತ್ತು ಸಿಇಒ ಸುತ್ಸುಮು ಒಟಾನಿ ಅವರು ಸುದ್ದಿಗಾರರೊಂದಿಗೆ ಮಾತನಾಡುತ್ತಾ, ಹೊಸ ಇವಿ ಸ್ಕೂಟರ್‌ನ ಬಿಡುಗಡೆಯನ್ನು ಖಚಿತಪಡಿಸಿದ್ದಾರೆ ಮತ್ತು ಈ ವರ್ಷದ ಡಿಸೆಂಬರ್‌ನಲ್ಲಿ ಹೊಸ ಇವಿ ಸ್ಕೂಟರ್ ಅನ್ನು ಮಾರುಕಟ್ಟೆಗೆ ಪರಿಚಯಿಸುವ ಬಗ್ಗೆ ಸುಳಿವು ನೀಡಿದ್ದಾರೆ.
ಇನ್ನೊಂದು ವಿಶೇಷವೆಂದರೆ, ಹೋಂಡಾ ತನ್ನ ಇವಿ ಸ್ಕೂಟರ್ ಅನ್ನು ಕರ್ನಾಟಕದ ನರಸಾಪುರ ಘಟಕದಲ್ಲಿ ನಿರ್ಮಿಸಲಿದೆ. ಭಾರತದಲ್ಲಿ ಬಿಡುಗಡೆಯಾಗಲಿರುವ ಹೋಂಡಾದ ಹೊಸ ಎಲೆಕ್ಟ್ರಿಕ್ ಸ್ಕೂಟರ್‌ನ ತಾಂತ್ರಿಕ ವಿವರಗಳು ತಿಳಿದಿಲ್ಲವಾದರೂ, ಸಾಮಾನ್ಯ ಪೆಟ್ರೋಲ್ ದ್ವಿಚಕ್ರ ವಾಹನಗಳಿಗಾಗಿ ಕಾಯ್ದಿರಿಸಿದ ಅದೇ ಅಸೆಂಬ್ಲಿ ಲೈನ್‌ನಲ್ಲಿ ಹೊಸ ಇವಿ ಸ್ಕೂಟರ್ ಅನ್ನು ತಯಾರಿಸಲು ಇದು ಯೋಜಿಸಿದೆ.
ಇದು ವಿವಿಧ ಬ್ಯಾಟರಿ ಪ್ಯಾಕ್ ಆಯ್ಕೆಗಳೊಂದಿಗೆ ಬ್ಯಾಟರಿ-ಸ್ವಾಪಿಂಗ್ ತಂತ್ರಜ್ಞಾನವನ್ನು ಹೊಂದಿರುತ್ತದೆ. ಒಂದು ಬಾರಿ ಚಾರ್ಜ್ ಮಾಡಿದರೆ 120 ಕಿ.ಮೀ ನಿಂದ 150 ಕಿ.ಮೀ ಮೈಲೇಜ್ ನೀಡುತ್ತದೆ. ಇದರ ಎಕ್ಸ್ ಶೋ ರೂಂ ಬೆಲೆ 1 ಲಕ್ಷದಿಂದ 1.20 ಲಕ್ಷ ರೂ. ಗಳವರೆಗೆ ಇರಬಹುದೆಂದು ನಿರೀಕ್ಷಿಸಲಾಗಿದೆ.
ಈ ಮೂಲಕ ಹೊಸ ಹೋಂಡಾ ಇವಿ ಸ್ಕೂಟರ್ ಮಾದರಿಯು ಓಲಾ ಎಲೆಕ್ಟ್ರಿಕ್ ಮತ್ತು ಈಥರ್ ಎನರ್ಜಿಯಂತಹ ಸ್ಟಾರ್ಟ್-ಅಪ್‌ಗಳು ಮತ್ತು ಬಜಾಜ್ ಸೆಡಾಂಗ್ ಇವಿ, ಟಿವಿಎಸ್ ಐಕ್ಯೂಬ್, ಹೀರೋ ವಿಡಾ ವಿ 1 ನಂತಹ ಟೆಕ್ ದೈತ್ಯರಿಗೆ ಕಠಿಣ ಸವಾಲನ್ನು ಒಡ್ಡಲಿದೆ.
ತನ್ನ ಇವಿ ಯೋಜನೆಗಳ ಜೊತೆಗೆ, ಹೋಂಡಾ ತನ್ನ ಮೊದಲ ಫ್ಲೆಕ್ಸ್-ಇಂಧನ ವಾಹನವನ್ನು ಬಿಡುಗಡೆ ಮಾಡಲಿದೆ. 2024 ರ ಭಾರತ್ ಮೊಬಿಲಿಟಿ ಎಕ್ಸ್‌ಪೋದಲ್ಲಿ ಪ್ರದರ್ಶಿಸಲಾದ ಹೋಂಡಾ CB300F ಫ್ಲೆಕ್ಸ್-ಫ್ಯೂಯಲ್ ಮೋಟಾರ್‌ಸೈಕಲ್ ಶೇಕಡಾ 85 ರಷ್ಟು ಎಥೆನಾಲ್ ಮಿಶ್ರಣಗಳನ್ನು ಸಕ್ರಿಯಗೊಳಿಸುತ್ತದೆ. ಇದು 293.52cc ಸಿಂಗಲ್-ಸಿಲಿಂಡರ್ ಎಂಜಿನ್, 24.13 bhp ಮತ್ತು 25.6 Nm ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಅಲ್ಲದೆ E20 ಮತ್ತು E85 ಇಂಧನಗಳನ್ನು ಬೆಂಬಲಿಸುತ್ತದೆ ಮತ್ತು ಆರು-ಸ್ಪೀಡ್ ಗೇರ್‌ಬಾಕ್ಸ್‌ನೊಂದಿಗೆ ಬರಲಿದೆ.