ಬೆಂಗಳೂರಿನಿಂದ ಮಂಗಳೂರಿಗೆ 1 ಫುಲ್ ಚಾರ್ಜ್‌ನಲ್ಲಿ ಹೋಗಲು ಬೆಸ್ಟ್ ಎಲೆಕ್ಟ್ರಿಕ್ ಕಾರು ಯಾವುದು? ಇಲ್ಲಿದೆ ರೇಂಜ್ ಲೆಕ್ಕಾಚಾರ
Sep 11, 2024 06:53 PM IST
ಬೆಂಗಳೂರಿನಿಂದ ಮಂಗಳೂರಿಗೆ 1 ಫುಲ್ ಚಾರ್ಜ್‌ನಲ್ಲಿ ಹೋಗಲು ಬೆಸ್ಟ್ ಎಲೆಕ್ಟ್ರಿಕ್ ಕಾರು
- Highest Range Electric Cars: ಬೆಂಗಳೂರಿನಿಂದ ಮಂಗಳೂರಿಗೆ ಒಂದು ಫುಲ್ ಚಾರ್ಜ್‌ನಲ್ಲಿ ಸಾಗಲು ಅತ್ಯುತ್ತಮ ಎಲೆಕ್ಟ್ರಿಕ್ ಕಾರು ಯಾವುದು? ಆಗುಂಬೆ, ಧರ್ಮಸ್ಥಳ, ಹಂಪಿ, ಹೊಸಪೇಟೆ, ಕಾರ್ಕಳ, ಕುದುರೆಮುಖ, ಮಣಿಪಾಲ, ಮೂಡಬಿದಿರೆ, ತುಂಗಾಭದ್ರಾ ಡ್ಯಾಮ್, ಉಡುಪಿ ಸೇರಿದಂತೆ ಸುಮಾರು 400 ಕಿ.ಮೀ. ದೂರ ಸಾಗಲು ಇವಿ ಹುಡುಕುವವರಿಗೆ ಇಲ್ಲೊಂದು ಲೆಕ್ಕಾಚಾರವಿದೆ.
Highest Range Electric Cars: ಬೆಂಗಳೂರಿನಿಂದ ಮಂಗಳೂರಿಗೆ ಸುಮಾರು 350 ಕಿ.ಮೀ. ಇದೆ. ಮಡಿಕೇರಿ ರಸ್ತೆಯಲ್ಲಿ ಹೋದ್ರೆ 390 ಕಿ.ಮೀ. ಆಗಬಹುದು. ಆದರೆ, ಘಟ್ಟ ರಸ್ತೆಗಳು ತಪ್ಪಬಹುದು. ಬೆಂಗಳೂರಿನಿಂದ ಆಗುಂಬೆ, ಧರ್ಮಸ್ಥಳ, ಹಂಪಿ, ಹೊಸಪೇಟೆ, ಕಾರ್ಕಳ, ಕುದುರೆಮುಖ, ಮಣಿಪಾಲ, ಮೂಡಬಿದಿರೆ, ತುಂಗಾಭದ್ರಾ ಡ್ಯಾಮ್, ಉಲ್ಲಾಲ, ಉಡುಪಿ ಸೇರಿದಂತೆ ಅನೇಕ ಊರುಗಳಿಗೆ ಬೆಂಗಳೂರಿನಿಂದ ದೂರ ಸುಮಾರು 400 ಕಿ.ಮೀ.ಯೊಳಗೆ ಇದೆ. 400 ಕಿ.ಮೀ. ರೇಂಜ್ ಅನ್ನು ಗಮನದಲ್ಲಿಟ್ಟುಕೊಂಡು ಒಂದು ಫುಲ್ ಚಾರ್ಜ್‌ನಲ್ಲಿ ಬೆಂಗಳೂರಿನಿಂದ ಈ ಸ್ಥಳಕ್ಕೆ ತಲುಪಲು ಸೂಕ್ತವಾದ ಎಲೆಕ್ಟ್ರಿಕ್ ಕಾರು ಯಾವುದೆಲ್ಲ ಇದೆ ಎಂದು ತಿಳಿದುಕೊಳ್ಳೋಣ. ಗಮನಿಸಿ, ಹೋಗಿ ಬರುವ ರೇಂಜ್ ಅನ್ನು ಇಲ್ಲಿ ಲೆಕಕ್ಕೆ ಇಟ್ಟಿಲ್ಲ. ಹೋಗಿ ಬರಲು 800 ಕಿ.ಮೀ. ರೇಂಜ್‌ನ ಎಲೆಕ್ಟ್ರಿಕ್ ವಾಹನಕ್ಕೆ ಕಾಯಬೇಕಾಗಬಹುದು. ಈ ರೀತಿ ಪ್ರಯಾಣಿಸುವ ಸಂದರ್ಭದಲ್ಲಿ ಎಲ್ಲಾದರೂ ಚಾರ್ಜಿಂಗ್ ಸ್ಟೇಷನ್‌ಗಳು ಇದ್ದರೆ ಕ್ವಿಕ್ ಚಾರ್ಜ್ ಮಾಡಿಕೊಂಡು ಪ್ರಯಾಣ ಮುಂದುವರೆಸಬಹುದು. ಸದ್ಯದ ಪರಿಸ್ಥಿತಿಯಲ್ಲಿ ಬೆಂಗಳೂರಿನಿಂದ ಮಂಗಳೂರಿನ ನಡುವೆ ಯಾವುದೇ ಎಲೆಕ್ಟ್ರಿಕ್ ವಾಹನ ಚಾರ್ಜಿಂಗ್ ಪಾಯಿಂಟ್ ಇಲ್ಲ ಎಂದುಕೊಳ್ಳೋಣ. ಬೆಂಗಳೂರಿನಿಂದ ಮಂಗಳೂರಿಗೆ ಒಂದು ಫುಲ್ ಚಾರ್ಜ್‌ನಲ್ಲಿ ಪ್ರಯಾಣಿಸಲು ಈ ಮುಂದಿನ ಎಲೆಕ್ಟ್ರಿಕ್ ವಾಹನಗಳು ಸೂಕ್ತವಾಗಿವೆ. ನೆನಪಿಡಿ, ಒಂದಿಷ್ಟು ತಿರುವುಗಳು, ಘಾಟ್ ರಸ್ತೆಗಳು ಈ ರಸ್ತೆಯಲ್ಲಿ ದೊರಕುವುದರಿಂದ ಒಂದಿಷ್ಟು ಹೆಚ್ಚು ರೇಂಜ್ ಇರುವ ಕಾರು ಆಯ್ಕೆ ಮಾಡಿಕೊಳ್ಳುವುದು ಸೂಕ್ತ. ಬರುವಾಗ ಬೆಂಗಳೂರು ಟ್ರಾಫಿಕ್‌ನಲ್ಲಿ ಸಿಕ್ಕಿಹಾಕಿಕೊಂಡರೂ ಚಾರ್ಜ್ ತುಸು ಬೇಗ ಮುಗಿಯಬಹುದು.
- ಟಾಟಾ ಕರ್ವ್ ಇವಿ: ಇತ್ತೀಚೆಗೆ ಬಿಡುಗಡೆಯಾದ ಟಾಟಾ ಕರ್ವ್ ಇವಿಯು 502-585 ಕಿ.ಮೀ. ರೇಂಜ್ ಹೊಂದಿದೆ. ಬೆಂಗಳೂರಿನಿಂದ ಮಂಗಳೂರು ಮಾತ್ರವಲ್ಲದೆ ಈ ಕಾರು ಫುಲ್ ಚಾರ್ಜ್ ಮಾಡಿದ್ರೆ ಉಡುಪಿ, ಮಣಿಪಾಲ, ಕುಂದಾಪುರ ತನಕವೂ ಹೋಗಬಹುದು.
- ಟಾಟಾ ನೆಕ್ಸನ್ ಇವಿ ಮ್ಯಾಕ್ಸ್: ಈ ಸಣ್ಣ ಎಸ್‌ಯುವಿಯು ಸುಮಾರು 453 ಕಿ.ಮೀ. ರೇಂಜ್ ನೀಡುತ್ತದೆ. ಹೀಗಾಗಿ, ಬೆಂಗಳೂರಿನಿಂದ ಮಂಗಳೂರಿಗೆ ಧೈರ್ಯವಾಗಿ ಒಂದು ಚಾರ್ಜ್‌ನಲ್ಲಿ ಸಾಗಬಹುದು.
- ಮಹೀಂದ್ರ ಎಕ್ಸ್‌ಯುವಿ5ಒಒ ಇಎಲ್: ಇದು ಕೂಡ 456 ಕಿ.ಮೀ. ರೇಂಜ್ ನೀಡುತ್ತದೆ.
- ಎಂಜಿ ಝಡ್‌ಎಸ್ ಇವಿ: ಒಂದು ಫುಲ್ ಚಾರ್ಜ್‌ಗೆ 461 ಕಿ.ಮೀ. ದೂರ ಸಾಗುತ್ತದೆ.
- ಟಾಟಾ ಟಿಯಾಗೋ ಇವಿ: ಟಿಯಾಗೋ ಸಣ್ಣ ಹ್ಯಾಚ್‌ಬ್ಯಾಕ್ ಎಲೆಕ್ಟ್ರಿಕ್ ಕಾರು. 315 ಕಿ.ಮೀ. ರೇಂಜ್ ಹೊಂದಿದೆ. ದರ 10 ಲಕ್ಷ ರೂ. ಆಸುಪಾಸಿನಲ್ಲಿದೆ. ಈ ಕಾರಲ್ಲಿ ಪೂರ್ತಿ ಚಾರ್ಜ್‌ನಲ್ಲಿ ಬೆಂಗಳೂರಿನಿಂದ ಮಂಗಳೂರಿಗೆ ಹೋಗುವುದು ಕಷ್ಟ. ನಡುವೆ ಅವಕಾಶ ಸಿಕ್ಕರೆ ಎಲ್ಲಾದರೂ ಒಮ್ಮೆ ಕ್ವಿಕ್ ಚಾರ್ಜ್ ಮಾಡಿಕೊಳ್ಳಬೇಕಾಗಬಹುದು.
- ಮರ್ಸಿಡಿಸ್ ಬೆಂಝ್ ಇಕ್ಯುಎಸ್: ಈ ಲಕ್ಷುರಿ ಸೆಡಾನ್ ಕಾರು 857 ಕಿ.ಮೀ. ರೇಂಜ್ ಹೊಂದಿದೆ. ಒಂದು ಫುಲ್ ಚಾರ್ಜ್‌ನಲ್ಲಿ ಬೆಂಗಳೂರಿನಿಂದ ಮಂಗಳೂರಿಗೆ ಹೋಗಿ ವಾಪಸ್ ಬೆಂಗಳೂರಿಗೆ ಬರಬಹುದು. ಈ ಕಾರಿನ ದರ 1.55 ಕೋಟಿ ರೂನಿಂದ ಆರಂಭವಾಗುತ್ತದೆ.
- ಕಿಯಾ ಇವಿ6: ಇದು 590 ರೇಂಜ್ ಹೊಂದಿದೆ. ದರ 69.90 ಲಕ್ಷ ರೂಪಾಯಿಯಿಂದ ಆರಂಭವಾಗುತ್ತದೆ.
- ಬಿಎಂಡಬ್ಲ್ಯು ಐ4: ಇದು ಒಂದು ಫುಲ್ ಚಾರ್ಜ್‌ನಲ್ಲಿ 590 ಕಿ.ಮೀ. ದೂರ ಸಾಗುತ್ತದೆ. ದರ 69.90 ಲಕ್ಷ ರೂನಿಂದ ಆರಂಭವಾಗುತ್ತದೆ.
- ಔಡಿ ಇಟ್ರೋನ್ ಜಿಟಿ: ಇದು 500 ಕಿ.ಮೀ. ರೇಂಜ್ ಹೊಂದಿದೆ. ದರ 1.79 ಕೋಟಿ ರೂಪಾಯಿಯಿಂದ ಆರಂಭ.
- ಹ್ಯುಂಡೈ ಕೊನಾ ಇವಿ: 452 ಕಿ.ಮೀ. ರೇಂಜ್ ನೀಡುತ್ತದೆ. ದರ 23.84 ಲಕ್ಷ ರೂನಿಂದ ಆರಂಭ. ಬೆಂಗಳೂರಿನಿಂದ ಮಂಗಳೂರಿಗೆ ಒಂದು ಫುಲ್ ಚಾರ್ಜ್‌ಗೆ ಹೋಗಬಹುದು.
- ಹ್ಯುಂಡೈ ಲೊನಿಕ್ 5: 631 ಕಿ.ಮೀ. ರೇಂಜ್ ಹೊಂದಿದೆ.
- ಬಿವೈಡಿ ಇ6: ಸುಮಾರು 521 ಕಿ.ಮೀ. ದೂರವನ್ನು ಒಂದು ಫುಲ್ ಚಾರ್ಜ್‌ಗೆ ಕ್ರಮಿಸುತ್ತದೆ.
- ಬಿಎಂಡಬ್ಲ್ಯು ಐ7: ಒಂದು ಫುಲ್ ಚಾರ್ಜ್‌ಗೆ 625 ಕಿ.ಮೀ. ರೇಂಜ್ ನೀಡುತ್ತದೆ.
ಹೀಗೆ ಹಲವು ಎಲೆಕ್ಟ್ರಿಕ್ ಕಾರುಗಳು ಒಂದು ಫುಲ್ ಚಾರ್ಜ್‌ಗೆ 400 ಕಿ.ಮೀ. ಆಸುಪಾಸಿನಲ್ಲಿ ಸಾಗಲು ಸಾಕಾಗಬಹುದು. ಮುಂದಿನ ದಿನಗಳಲ್ಲಿ ಅಲ್ಲಲ್ಲಿ ಚಾರ್ಜಿಂಗ್ ಪಾಯಿಂಟ್‌ಗಳ ನಿರ್ಮಾಣವಾದಗ ಈ ರೀತಿ ರೇಂಜ್ ಕುರಿತು ಯೋಚನೆ ಮಾಡದೆ ಆರಾಮವಾಗಿ ಸಾಗಬಹುದು. ಇಲ್ಲಿ ಬೆಂಗಳೂರಿನಿಂದ ಮಂಗಳೂರು ಅನ್ನು ಉದಾಹರಣೆಯಾಗಿ ನೀಡಲಾಗಿದೆ. ನಿಮ್ಮ ಊರಿನಿಂದ ಇನ್ನೊಂದು ಊರಿಗೆ 400 ಕಿ.ಮೀ. ದೂರ ಇದ್ದರೆ ಇವುಗಳಲ್ಲಿ ಟಿಯಾಗೊ ಹೊರತುಪಡಿಸಿ ಬೇರೆ ಕಾರುಗಳನ್ನು ಗಮನಿಸಬಹುದು. ಸುಮಾರು 300 ಕಿ.ಮೀ.ಆಸುಪಾಸಿನ ಪ್ರಯಾಣವಾದರೆ ಟಿಯಾಗೊ ಇವಿಯನ್ನೂ ಗಮನಿಸಬಹುದು.