logo
ಕನ್ನಡ ಸುದ್ದಿ  /  ಜೀವನಶೈಲಿ  /  ಮೇಕಪ್ ವಿಚಾರದಲ್ಲಿ ಈ 6 ತಪ್ಪುಗಳನ್ನು ಮಾಡದಿರಿ; ತ್ವಚೆ ವಯಸ್ಸಾದಂತೆ ಕಾಣಬಾರದು ಅಂದ್ರೆ ಇದುವೇ ಮುಖ್ಯ

ಮೇಕಪ್ ವಿಚಾರದಲ್ಲಿ ಈ 6 ತಪ್ಪುಗಳನ್ನು ಮಾಡದಿರಿ; ತ್ವಚೆ ವಯಸ್ಸಾದಂತೆ ಕಾಣಬಾರದು ಅಂದ್ರೆ ಇದುವೇ ಮುಖ್ಯ

Jayaraj HT Kannada

Oct 28, 2024 05:09 PM IST

google News

ಮೇಕಪ್ ವಿಚಾರದಲ್ಲಿ ಈ ತಪ್ಪುಗಳನ್ನು ಮಾಡದಿರಿ; ತ್ವಚೆ ವಯಸ್ಸಾದಂತೆ ಕಾಣಲ್ಲ

    • ನಿಮ್ಮ ತ್ವಚೆ ವಯಸ್ಸಾದಂತೆ ಕಾಣಿಸಬಾರದು ಅಂದ್ರೆ ಮೇಕಪ್‌ ಮಾಡುವಾಗ ಎಚ್ಚರಿಕೆ ವಹಿಸಬೇಕು. ಇದೇ ವೇಳೆ ಮೇಕಪ್‌ ಮಾಡುವ ಮೊದಲು ಹಾಗೂ ಮೇಕಪ್‌ ರಿಮೂವ್‌ ಮಾಡುವ ಬಗ್ಗೆಯೂ ಎಚ್ಚರ ವಹಿಸಬೇಕು. ಈ ಕುರಿತು ನಿಮಗೆ ಅಗತ್ಯ ಸಲಹೆ ಇಲ್ಲಿದೆ.
ಮೇಕಪ್ ವಿಚಾರದಲ್ಲಿ ಈ ತಪ್ಪುಗಳನ್ನು ಮಾಡದಿರಿ; ತ್ವಚೆ ವಯಸ್ಸಾದಂತೆ ಕಾಣಲ್ಲ
ಮೇಕಪ್ ವಿಚಾರದಲ್ಲಿ ಈ ತಪ್ಪುಗಳನ್ನು ಮಾಡದಿರಿ; ತ್ವಚೆ ವಯಸ್ಸಾದಂತೆ ಕಾಣಲ್ಲ (Shutterstock)

ಸೌಂದರ್ಯ ಪ್ರಜ್ಞೆ ಇರುವವರಿಗೆ ಮೇಕಪ್‌ ಜೀವನದ ಅವಿಭಾಜ್ಯ ಅಂಗ. ಹೊರಗಡೆ ಓಡಾಡುವಾಗ ಸುಂದರವಾಗಿ ಕಾಣಲು ಮತ್ತು ಆತ್ಮವಿಶ್ವಾಸ ಹೆಚ್ಚಿಸಲು ಮೇಕಪ್‌ ಬೇಕು. ಹಾಗಂತಾ ಮೇಕಪ್‌ ಮಾಡುವ ಬಗ್ಗೆ ಸರಿಯಾದ ಮಾಹಿತಿ ಇರಬೇಕು. ಹೇಗೇಗೋ ಮೇಕಪ್ ಮಾಡಿದರೆ ಅಥವಾ ತಪ್ಪಾಗಿ ಅಪ್ಲೈ ಮಾಡಿದರೆ ತ್ವಚೆಯ ಮೇಲೆ ಗಂಭೀರ ಪರಿಣಾಮ ಬೀರುತ್ತದೆ. ಮೇಕಪ್‌ ಕುರಿತ ಕೆಲವೊಂದು ತಪ್ಪಾದ ಅಭ್ಯಾಸಗಳು ಬೇಗನೆ ವಯಸ್ಸಾದಂತೆ ಕಾಣುವಂತೆ ಮಾಡಬಹುದು. ತ್ವಚೆಯು ದಣಿದಂತೆ ಅಥವಾ ಕಾಂತಿ ಕಳೆದುಕೊಂಡಂತೆ ಕಾಣಿಸಬಾರದು ಎಂದರೆ, ಮೇಕಪ್‌ ವಿಚಾರವಾಗಿ ಎಚ್ಚರ ವಹಿಸಬೇಕು.

ಚರ್ಮ ಅಥವಾ ತ್ವಚೆಯು ವಯಸ್ಸಾದಂತೆ ಕಾಣಬಾರದು ಎಂದರೆ ಮೇಕಪ್‌ ಮಾಡುವಾಗ ತುಸು ಎಚ್ಚರಿಕೆ ವಹಿಸಬೇಕು. ಅಲ್ಲದೆ ಮೇಕಪ್‌ ಮಾಡುವ ಮುನ್ನ ಹಾಗೂ ಮೇಕಪ್‌ ರಿಮೂವ್‌ ಮಾಡುವ ವಿಚಾರವಾಗಿಯೂ ಎಚ್ಚರ ವಹಿಸಬೇಕು. ಆ ಮೂಲಕ ನಿಮ್ಮ ವಯಸ್ಸು ಹೆಚ್ಚಾದರೂ ಚಿರಯವ್ವನ ನಿಮ್ಮ ಮುಖದಲ್ಲಿ ಕಾಣಿಸುತ್ತದೆ. ನೀವು ಮಾಡುವ ಸಾಮಾನ್ಯ ಮೇಕ್ಅಪ್ ತಪ್ಪುಗಳು ಯಾವುವು, ಮತ್ತು ಅವುಗಳನ್ನು ಹೇಗೆ ತಪ್ಪಿಸಬಹುದು ಎಂಬುದನ್ನು ನೋಡೋಣ.

ಮೇಕಪ್‌ಗೂ ಮುನ್ನ ತ್ವಚೆಯನ್ನು ಸರಿಯಾಗಿ ಸಿದ್ಧಪಡಿಸಿಕೊಳ್ಳಿ

ಶುಷ್ಕ ಮತ್ತು ಸ್ವಲ್ಪವೂ ತೇವಾಂಶವಿಲ್ಲದ ಒಣ ಚರ್ಮದ ಮೇಲೆ ಮೇಕ್ಅಪ್ ಮಾಡುವುದು ಕೂಡಾ ಸರಿಯಾದ ಕ್ರಮವಲ್ಲ. ಈ ತಪ್ಪು ಮಾಡಿದರೆ ತ್ವಚೆಗೆ‌ ಬೇಗನೆ ವಯಸ್ಸಾಗುತ್ತದೆ. ಮೇಕಪ್‌ ತ್ವಚೆಗೆ ಹೆವೀ ಆಗದಿರಲು ಮೇಕ್ಅಪ್ ಮಾಡುವ ಮೊದಲು ಚರ್ಮವನ್ನು ಸ್ವಚ್ಛಗೊಳಿಸಿ. ಹಿಂದಿನ ದಿನವೇ ಮಾಯಿಶ್ಚರೈಸರ್‌ ಹಚ್ಚಿ ತ್ವಚೆಯನ್ನು ಸಾಫ್ಟ್‌ ಮಾಡಿ. ಹೈಡ್ರೇಟಿಂಗ್ ಪ್ರೈಮರ್ ಬಳಸುವುದರಿಂದ ಮೃದುವಾದ ಮೇಲ್ಮೈ ರಚಿಸಬಹುದು.

ಸನ್‌ಸ್ಕ್ರೀನ್ ಬಳಕೆ ಬಿಟ್ಟುಬಿಡಬೇಡಿ

ಮೇಕ್ಅಪ್ ಹಚ್ಚುವುದಕ್ಕಿಂತ ಮೊದಲು ಸನ್‌ಸ್ಕ್ರೀನ್ ಹಚ್ಚುವುದನ್ನು ಬಿಡುವುದು ಕೂಡಾ ಒಂದು ತಪ್ಪು. ತ್ವಚೆಯನ್ನು ಸೂರ್ಯನಿಗೆ ಒಡ್ಡಿಕೊಳ್ಳುವುದರಿಂದ ಬೇಗನೆ ವಯಸ್ಸಾದವರಂತೆ ಕಾಣುತ್ತಾರೆ. ಮುಖದಲ್ಲಿ ಸಣ್ಣ ಸಣ್ಣ ರೇಖೆಗಳು, ಸುಕ್ಕುಗಳು ಕಾಣಿಸುತ್ತವೆ. ನಿಮ್ಮ ಮೇಕ್ಅಪ್‌ನಲ್ಲಿ SPF ಇದ್ದರೂ ಸಹ, ದಿನವಿಡೀ ನಿಮ್ಮ ತ್ವಚೆಗೆ ಸಾಕಷ್ಟು ರಕ್ಷಣೆ ನೀಡದಿರಬಹುದು. ಹೀಗಾಗಿ ಫೌಂಡೇಶನ್ ಅಥವಾ ಪ್ರೈಮರ್‌ ಹಚ್ಚುವ ಮೊದಲು ಕನಿಷ್ಟ SPF 30 ಇರುವ ಸನ್‌ಸ್ಕ್ರೀನ್ ಹಚ್ಚಿ. ಯಾವುದೇ ಹವಾಮಾನವಿದ್ದರೂ, ಸನ್‌ಸ್ಕ್ರೀನ್ ನಿತ್ಯ ಬಳಸಬಹುದು.

ಫೌಂಡೇಶನ್‌ ಹಚ್ಚುವಾಗ ಎಚ್ಚರ

ಫೌಂಡೇಶನ್‌ ಅನ್ನು ದಪ್ಪ ಪದರಗಳಲ್ಲಿ ಹಚ್ಚುವುದರಿಂದ ಚರ್ಮದ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತದೆ. ಇದರಿಂದ ಮುಖದ ಮೇಲೆ ಸಣ್ಣ ಸಣ್ಣ ರೇಖೆಗಳು ಮತ್ತು ಸುಕ್ಕು ಬೀಳಬಹುದು. ಕೆಲವೊಂದು ಫೌಂಡೇಶನ್‌ಗಳನ್ನು ದಪ್ಪನೆ ಅಪ್ಲೈ ಮಾಡುವುದರಿಂದ ಚರ್ಮದ ರಂಧ್ರಗಳನ್ನು ಮುಚ್ಚಿ ಸ್ಕಿನ್‌ ಒಣಗಿಸಬಹುದು. ಹೀಗಾಗಿ ತೆಳುವಾಗಿ ಫೌಂಡೇಶನ್‌ ಹಚ್ಚಿ.

ಮೇಕ್ಅಪ್ ತೆಗೆಯದೇ ಮಲಗುವುದು

ಮೇಕಪ್‌ ಹಚ್ಚಿ ಹೊರಹೋಗಿ ಮನೆಗೆ ಬಂದಾಗ ನೀವು ಎಷ್ಟೇ ದಣಿದಿದ್ದರೂ, ಮಲಗುವ ಮುನ್ನ ಮೇಕ್ಅಪ್ ರಿಮೂವ್‌ ಮಾಡುವುದು ಮರೆಯಬೇಡಿ. ಮೇಕಪ್ ತೆಗೆಯದೆ ಮಲಗುವುದರಿಂದ ನಿಮ್ಮ ತ್ವಚೆಗೆ ಗಂಭೀರ ಹಾನಿಯಾಗುತ್ತದೆ. ಮೇಕಪ್ ತ್ವಚೆಯ ರಂಧ್ರಗಳನ್ನು ಮುಚ್ಚಿಹಾಕುತ್ತದೆ. ನಿಮ್ಮ ಚರ್ಮ ಉಸಿರಾಡುವುದನ್ನು ತಡೆಯುತ್ತದೆ. ಇದರಿಂದ ಬೇಗನೆ ವಯಸ್ಸಾದ ಲಕ್ಷಣಗಳು ಕಾಣಿಸುತ್ತದೆ. ಚರ್ಮಕ್ಕೆ ದೀರ್ಘಾವಧಿಗೆ ಅಪಾರ ಹಾನಿಯನ್ನು ಉಂಟುಮಾಡಬಹುದು. ಹೀಗಾಗಿ ಮಲಗೋ ಮುನ್ನ ಮೇಕಪ್‌ ಸಂಪೂರ್ಣವಾಗಿ ರಿಮೂವ್‌ ಮಾಡಿ.

ಸೂಕ್ತ ಮೇಕಪ್ ರಿಮೂವರ್‌ ಬಳಸಿ

ಮೇಕ್ಅಪ್ ರಿಮೂವರ್‌ ಯಾವುದು ಎಂಬುದು ಕೂಡಾ ಮುಖ್ಯ. ಕಠಿಣ ಮೇಕಪ್ ರಿಮೂವರ್‌ಗಳನ್ನು ಬಳಸುವುದರಿಂದ ಮತ್ತು ಮುಖವನ್ನು ಆಕ್ರಮಣಕಾರಿಯಾಗಿ ಸ್ಕ್ರಬ್ ಮಾಡುವುದರಿಂದ ಚರ್ಮದ ತಡೆಗೋಡೆಗೆ ಹಾನಿಯಾಗುತ್ತದೆ. ಇದರಿಂದ ಅಕಾಲಿಕ ವಯಸ್ಸಿಗೆ ಕಾರಣವಾಗಬಹುದು. ಹೀಗಾಗಿ ಚರ್ಮಕ್ಕೆ ತೆಂಗಿನ ಎಣ್ಣೆ, ಸೌಮ್ಯವಾದ ತೈಲ ಆಧಾರಿತ ಕ್ಲೆನ್ಸರ್ ಅಥವಾ ನೀರು ಒಳ್ಳೆಯದು.

ಅವಧಿ ಮೀರಿದ ಉತ್ಪನ್ನ ಬಳಸದಿರಿ

ಪ್ರತಿಯೊಂದು ಉತ್ಪನ್ನಗಳಿಗೂ ಎಕ್ಸ್‌ಪೈರಿ ಡೇಟ್‌ ಇರುತ್ತದೆ. ಹೀಗಾಗಿ ಅವಧಿ ಮೀರಿದ ಸೌಂದರ್ಯವರ್ಧಕಗಳನ್ನು ಬಳಸುವುದರಿಂದಲೂ ತ್ವಚೆಗೆ ಹಾನಿಯಾಗುತ್ತದೆ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ