500 ರೂಪಾಯಿ ಜೇಬಲ್ಲಿ ಇಟ್ಕೊಂಡು ಮುಂಬಯಿಗೆ ಬಂದ ವ್ಯಕ್ತಿ 5,000 ಕೋಟಿ ರೂ ಕಂಪನಿ ಕಟ್ಟಿದ- ಬದುಕಲ್ಲಿ ಇದಕ್ಕಿಂತ ಪ್ರೇರಣೆ ಬೇಕಾ
Oct 07, 2024 07:38 AM IST
500 ರೂಪಾಯಿ ಜೇಬಲ್ಲಿ ಇಟ್ಕೊಂಡು ಮುಂಬಯಿಗೆ ಬಂದು 5,000 ಕೋಟಿ ರೂ ಕಂಪನಿ ಕಟ್ಟಿದ ಡಾ ಎ ವೇಲುಮಣಿ ಅವರ ಬದುಕು ಪ್ರೇರಣಾದಾಯಿ.
ಬದುಕಿಗೂ, ಬದುಕಿನಲ್ಲಿ ಗೆಲ್ಲುವುದಕ್ಕೂ ಪ್ರೇರಣೆ ಬೇಕು. ಕೆಲವೊಮ್ಮೆ ಅದು ನಮ್ಮ ಓದುವಿಕೆ ಮೂಲಕ, ಕೆಲವೊಮ್ಮೆ ಇನ್ನೊಬ್ಬರ ಬದುಕಿನ ಯಶೋಗಾಥೆಯಿಂದಲೂ ಸಿಗಬಹುದು. ಅಂತಹ ಒಂದು ನಿದರ್ಶನ ಇದು. 500 ರೂಪಾಯಿ ಜೇಬಲ್ಲಿ ಇಟ್ಕೊಂಡು ಮುಂಬಯಿಗೆ ಬಂದ ವ್ಯಕ್ತಿ 5,000 ಕೋಟಿ ರೂ ಕಂಪನಿ ಕಟ್ಟಿದ ಸಾಹಸ. ಬದುಕಲ್ಲಿ ಗೆಲ್ಲೋದಕ್ಕೆ ಇದಕ್ಕಿಂತ ಪ್ರೇರಣೆ ಬೇಕಾ- ಓದಿ ನೋಡಿ..
ನಿಮಗೆ ನಿರ್ಧಾರವನ್ನು ತೆಗೆದುಕೊಳ್ಳುವ ಶಕ್ತಿಯನ್ನು ನೀಡುವುದೇ ಬಡತನ (ಪವರ್ಟಿ ಗಿವ್ಸ್ ಯು ದ ಪವರ್ ಆಫ್ ಟೇಕಿಂಗ್ ಡಿಸಿಷನ್ಸ್) - ಹೀಗೆ ಹೇಳುತ್ತಲೇ ಲಕ್ಷಾಂತರ ಜನರ ಬದುಕಿಗೆ ಪ್ರೇರಣೆ ನೀಡುತ್ತಿರುವ ಡಾಕ್ಟರ್ ಆರೋಕಿಯಸ್ವಾಮಿ ವೇಲುಮಣಿ ಎಂದು ಬಹುತೇಕರಿಗೆ ಸೋಷಿಯಲ್ ಮೀಡಿಯಾ ಮೂಲಕ ಚಿರಪರಿಚಿತರು. ಇನ್‌ಸ್ಟಾಗ್ರಾಂ ಪುಟ ತೆರೆದು ನೋಡಿದರೆ ಅವರ ಜೀವನಾನುಭವದ ಹತ್ತಾರು ವಿಷಯಗಳ ವಿಡಿಯೋಗಳು ಅಲ್ಲಿವೆ. ಬಡತನದ ಪಾಠ ಬಾಲ್ಯದಲ್ಲೇ ಸಿಕ್ಕಿಬಿಡಬೇಕು ಎನ್ನುವ ಅವರ ಪ್ರತಿ ಮಾತಿನಲ್ಲೂ ವಿಶ್ವಾಸ ತುಂಬಿ ತುಳುಕುತ್ತಿರುವುದನ್ನು ಕಾಣಬಹುದು. 50 ರೂಪಾಯಿಗೆ ಒದ್ದಾಡುತ್ತಿದ್ದ ಕುಟುಂಬದಿಂದ ಬಂದವರು ಅವರು. ಮೋಟಿವೇಷನಲ್ ಸ್ಪೀಕರ್ ಡಾ. ವಿವೇಕ್ ಬಿಂದ್ರಾ ಅವರ ಯೂಟ್ಯೂಬ್ ಚಾನೆಲ್‌ನಲ್ಲಿ ಡಾ.ಆರೋಕಿಯಸ್ವಾಮಿ ವೇಲುಮಣಿ (ಎ ವೇಲುಮಣಿ) ಅವರ ಪ್ರೇರಣಾದಾಯಿ ಮಾತುಗಳ ವಿಡಿಯೋ ಕಾಣಸಿಕ್ಕಿತು. ಅದರಲ್ಲಿ ಎ ವೇಲುಮಣಿ ಅವರು ತಮ್ಮನ್ನು ಸಭಿಕರಿಗೆ ಪರಿಚಯಿಸಿದ ರೀತಿ ಅದ್ಭುತವಾಗಿದೆ. ಅದನ್ನು ಅವರದ್ದೇ ಮಾತುಗಳಲ್ಲಿ ಉಲ್ಲೇಖಿಸುತ್ತೇನೆ.
500 ರೂಪಾಯಿ ಜೇಬಲ್ಲಿ ಇಟ್ಟುಕೊಂಡು ಮುಂಬಯಿಗೆ ಬಂದ ಮದರಾಸಿ
"ಆಗ 19 ವರ್ಷ ವಯಸ್ಸು. ಗ್ರಾಜುವೇಟ್ ಆಗಿದ್ದೆ. ಎಲ್ಲ ಹುಚ್ಚು ಜನರು ಕೇಳಿದ್ದು -ನಿನಗೆ ಅನುಭವ ಇದೆಯಾ?. ಮೇ ತಿಂಗಳಲ್ಲಿ ಎಕ್ಸಾಂ ಮುಗಿದಿದೆ. ಜೂನ್ ತಿಂಗಳಲ್ಲಿ ಕೆಲಸದ ಅನುಭವ ಎಲ್ಲಿಂದ ಸಿಗುತ್ತೆ! 1978ರಲ್ಲಿ ನಾನೊಂದು ನಿರ್ಧಾರಕ್ಕೆ ಬಂದೆ. ನನ್ನ ಕಂಪನಿ ಏನಾದರೂ ಆಯಿತೆಂದರೆ ಆಗ ಅಲ್ಲಿ ಫ್ರೆಶರ್ಸ್ ಅನ್ನು ಮಾತ್ರವೇ ಕೆಲಸಕ್ಕೆ ತಗೊಳ್ಳುವೆ. ಎಕ್ಸ್‌ಪೀರಿಯನ್ಸ್ ಆದವರು ಬೇಡವೇ ಬೇಡ ಎಂಬ ನಿರ್ಧಾರಕ್ಕೆ ಬಂದಿದ್ದೆ. ಅದೃಷ್ಟವಶಾತ್ ಬಡವರ ಮನೆಯಲ್ಲಿ ಹುಟ್ಟಿದ್ದೆ. ಅದೃಷ್ಟವಶಾತ್ ಕೊಯಮತ್ತೂರಲ್ಲಿ ಕೆಲಸ ಸಿಗಲಿಲ್ಲ. 1982 ಆಗಸ್ಟ್ 18 ರಂದು ಜನತಾ ಎಕ್ಸ್‌ಪ್ರೆಸ್ ರೈಲು ಹತ್ತಿದೆ. ಮುಂಬಯಿಗೆ ಬಂದೆ. ಮೂರು ರಾತ್ರಿ ರೈಲ್ವೆ ನಿಲ್ದಾಣದಲ್ಲೇ ಮಲಗಿದ್ದೆ. ನನ್ನನ್ನು ಬರಮಾಡಿಕೊಳ್ಳಲು ಅಲ್ಲಿ ನನ್ನ ಗೆಳೆಯರು ಇರಲಿಲ್ಲ. ಲಾಡ್ಜ್‌ಗೆ ಹೋಗಿ ಉಳಿದುಕೊಳ್ಳುವುದಕ್ಕೆ ನನ್ನ ಬಳಿ ಕ್ರೆಡಿಟ್ ಕಾರ್ಡೂ ಇರಲಿಲ್ಲ. ಅದನ್ನು ಇಟ್ಟುಕೊಳ್ಳಲು ಪರ್ಸ್ ಕೂಡ ಇರಲಿಲ್ಲ. ನನ್ನ ಬಳಿ ಇದ್ದದ್ದು 100 ರೂಪಾಯಿಯ 5 ನೋಟುಗಳು. ಕೇವಲ 500 ರೂಪಾಯಿ. ಪಕ್ಕಾ ಮದರಾಸಿ ಬುದ್ದಿ. ಆ ನೋಟುಗಳನ್ನು ಒಂದೊಂದು ಜೇಬಿನಲ್ಲಿ ಇಟ್ಟುಕೊಂಡಿದ್ದೆ.
ಅದೃಷ್ಟ ದೇವತೆ ನನ್ನನ್ನು ನೋಡಿ ನಕ್ಕಳು. ಬಾಬಾ ಅಟೋಮಿಕ್ ಸೆಂಟರ್‌ನಲ್ಲಿ ಕೆಲಸ ಸಿಕ್ಕಿತು. ಸಂದರ್ಶನದಲ್ಲಿ ಥೈರಾಯ್ಡ್ ಎಲ್ಲಿದೆ ಎಂದು ಕೇಳಿದರು. ಫಿಸಿಕ್ಸ್, ಕೆಮಿಸ್ಟ್ರಿ, ಗಣಿತ ಓದಿಕೊಂಡು ಹೋದವರಿಗೆ ಥೈರಾಯ್ಡ್ ಎಲ್ಲಿದೆ ಎಂದು ಗೊತ್ತಿರಲಿಲ್ಲ. ಮೊಣಕಾಲಿನ ಕೆಳಗಿರಬಹುದು ಎಂದು ಹೇಳಿದ್ದೆ. ಆದರೆ ನಿಮಗೆ ಗೊತ್ತಿರಲಿ. ನಾನು ಮುಂದೆ 10 ವರ್ಷದಲ್ಲಿ ಥೈರಾಯ್ಡ್ ವಿಷಯದಲ್ಲೇ ಪಿಎಚ್‌ಡಿ ಮಾಡಿದೆ. ಮತ್ತೆ 10 ವರ್ಷದಲ್ಲಿ ಥೈರೋಕೇರ್ ಸಂಸ್ಥೆ ಕಟ್ಟಿ ಬೆಳೆಸಿ ನಡೆಸ್ತಾ ಇದ್ದೇನೆ..
ನಾನು ಬದುಕೋದಕ್ಕೆ ಬಂದದ್ದಾ, ಗೆಲ್ಲೋದಕ್ಕೆ ಬಂದದ್ದಾ..
ಬದುಕೋದಕ್ಕೆ ಆಗಿದ್ದರೆ ನಾನು ಕೊಯಮತ್ತೂರಿನಲ್ಲೇ ಬದುಕುತ್ತಿದ್ದೆ. ಮುಂಬಯಿಗೆ ಬಂದಿದ್ದೇನೆ ಎಂದರೆ ಇಲ್ಲಿ ನಾನು ಗೆದ್ದೇ ಗೆಲ್ಲಬೇಕು ಎಂದು ನಿರ್ಧರಿಸಿದೆ. ಬಾರ್ಕ್‌ನ ಉದ್ಯೋಗ ಬಿಡಲು ನಿರ್ಧರಿಸಿದಾಗ ಪಿಎಫ್‌ನಲ್ಲಿ 2 ಲಕ್ಷ ರೂಪಾಯಿ ಇತ್ತು. ಅದುವೇ ನನಗೆ ಆಸರೆಯಾಯಿತು. ಹೋದರೆ ಕಲ್ಲು ಬಿದ್ದರೆ ಮಾವಿನ ಹಣ್ಣು ಅಂತ ಮುಂದುವರಿದೆ. ಆ ಎರಡು ಲಕ್ಷ ರೂಪಾಯಿ ನನಗೆ ಕಲ್ಲಾಗಿತ್ತು. ಇಂದು ಮುಂಬಯಿ ಷೇರುಪೇಟೆಯಲ್ಲಿ ಕಂಪನಿಯ ಮೌಲ್ಯ 3000 ಕೋಟಿ ರೂಪಾಯಿಗೂ ಅಧಿಕ. ಥೈರೋಕೇರ್ ಕಟ್ಟಿದ ಕಥೆಯನ್ನು ಪಾರದರ್ಶಕವಾಗಿ ನಿಮಗೆ ವಿವರಿಸಬೇಕು. ಮಾರುಕಟ್ಟೆಯಲ್ಲಿ ಆಗ ಥೈರಾಯ್ಡ್ ಟೆಸ್ಟ್‌ಗೆ 500 ರೂಪಾಯಿ ಇತ್ತು. ಅದಕ್ಕೆ ಬಳಸುವ ಉತ್ಪನ್ನಕ್ಕೆ 50 ರೂಪಾಯಿ ಇತ್ತು. ಜನ 50 ರೂಪಾಯಿ ಮತ್ತು 500 ರೂಪಾಯಿ ನಡುವಿನ ವ್ಯತ್ಯಾಸ ನೋಡ್ತಾ ಇದ್ರು. ನಾನು 50 ರೂಪಾಯಿ ಒಳಗೆ ಕಚ್ಚಾ ವಸ್ತುವಿನ ಮೌಲ್ಯ ಎಷ್ಟು ಎಂದು ನೋಡ್ತಾ ಇದ್ದೆ. ಅದು ಕೇವಲ 5 ರೂಪಾಯಿ. ನನ್ನ ನೋಟ ಬದಲಾಯಿತು. ನಾನು 5 ರೂಪಾಯಿ ಮತ್ತು 500 ರೂಪಾಯಿ ಅಂತರ ಗಮನಿಸಿದೆ. ಥೈರಾಯ್ಡ್ ಟೆಸ್ಟ್ ರೇಟ್ ಅನ್ನು 40 ರೂಪಾಯಿ ಇಟ್ಟೆ. ಮೂರ್ನಾಲ್ಕು ವರ್ಷ ಸ್ಪರ್ಧಿಗಳು ನನ್ನ ವಿರುದ್ಧ ಇಲ್ಲ ಸಲ್ಲದ ಆರೋಪಗಳನ್ನು ಮಾಡಿದ್ರು. 40 ರೂಪಾಯಿಗೆ ಥೈರಾಯ್ಡ್ ಟೆಸ್ಟ್ ಸಾಧ್ಯವೇ ಇಲ್ಲ ಅಂತ ಹೇಳಿದ್ರು. ಅಷ್ಟರೊಳಗೆ ನನ್ನ ಕಂಪನಿಗೆ ಮಾರುಕಟ್ಟೆ ಸಿಕ್ಕಿಬಿಟ್ಟಿತು.
ಆರೋಕಿಯಸ್ವಾಮಿ ವೇಲುಮಣಿ ಯಾರು: ಥಯೋಕೇರ್‌ನ ಸಂಸ್ಥಾಪಕರಾಗಿ ವಿವಿಧ ಹೊಣೆಗಾರಿಕೆಗಳನ್ನು ನಿಭಾಯಿಸುತ್ತ 1995ರಿಂದ 2021ರ ತನಕ ಅಲ್ಲೇ ಕೆಲಸ ಮಾಡಿದ್ದ ಎ ವೇಲುಮಣಿ ಅವರು ಈಗ ಮಾಸ್ ಮೆಂಟರ್ ಆಗಿ ಬೆಂಗಳೂರಿನಲ್ಲೇ ನೆಲೆಸಿರುವುದಾಗಿ ಅವರ ಲಿಂಕ್ಡ್‌ಇನ್ ಪ್ರೊಫೈಲ್‌ನ ಮಾಹಿತಿ ವಿವರಿಸಿದೆ. ಬಾರ್ಕ್‌ನಲ್ಲಿ ವಿಜ್ಞಾನಿಯಾಗಿ 1982ರಿಂದ 1995ರ ತನಕ ಕೆಲಸ ಮಾಡಿದ್ದರು. ಅವರನ್ನು ಇಮೇಲ್ (Focus.velu@gmail.com) ಮೂಲಕ ಸಂಪರ್ಕಿಸಬಹುದು. ಅವರ ಸೋಷಿಯಲ್ ಮೀಡಿಯಾ ಹ್ಯಾಂಡಲ್‌ಗಳಿವು - https://www.instagram.com/drvelumani/
https://x.com/velumania
- ಉಮೇಶ್ ಕುಮಾರ್ ಶಿಮ್ಲಡ್ಕ, ಸುದ್ದಿ ಸಂಪಾದಕ, ಎಚ್ಟಿ ಕನ್ನಡ
ವಿಭಾಗ