logo
ಕನ್ನಡ ಸುದ್ದಿ  /  ಜೀವನಶೈಲಿ  /  ಕಾಶಿಯಾತ್ರೆಗೆ ಹೋಗಿ ಬಂದ್ರಾ; ಕರ್ನಾಟಕ ಸರ್ಕಾರದ ಸಹಾಯಧನಕ್ಕೆ ಅರ್ಜಿ ಸಲ್ಲಿಸಿ, ಹೇಗಂತೀರಾ ಇಲ್ಲಿದೆ ಆ ವಿವರ

ಕಾಶಿಯಾತ್ರೆಗೆ ಹೋಗಿ ಬಂದ್ರಾ; ಕರ್ನಾಟಕ ಸರ್ಕಾರದ ಸಹಾಯಧನಕ್ಕೆ ಅರ್ಜಿ ಸಲ್ಲಿಸಿ, ಹೇಗಂತೀರಾ ಇಲ್ಲಿದೆ ಆ ವಿವರ

Umesh Kumar S HT Kannada

Oct 03, 2024 05:49 PM IST

google News

ಕಾಶಿಯಾತ್ರೆಗೆ ಹೋಗಿ ಬಂದ್ರಾ; ಕರ್ನಾಟಕ ಸರ್ಕಾರದ ಸಹಾಯಧನಕ್ಕೆ ಅರ್ಜಿ ಸಲ್ಲಿಸುವಂತೆ ಯಾತ್ರಾರ್ಥಿಗಳಿಗೆ ದತ್ತಿ ಇಲಾಖೆ ಸೂಚನೆ ತಿಳಿಸಿದೆ.

  • ಕಾಶಿ ಯಾತ್ರೆ ಮುಗಿಸಿ ಬಂದವರ ಗಮನಕ್ಕೆ. ಕರ್ನಾಟಕ ಸರ್ಕಾರ ಕಾಶಿಯಾತ್ರೆ ಸಹಾಯಧನ ನೀಡುವುದಕ್ಕಾಗಿ ಅರ್ಹ ಯಾತ್ರಾರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. ಇದಕ್ಕೆ ಅರ್ಜಿ ಸಲ್ಲಿಸುವ ವಿಧಾನ, ಅಗತ್ಯ ದಾಖಲೆಗಳ ವಿವರ ಇಲ್ಲಿದೆ.

ಕಾಶಿಯಾತ್ರೆಗೆ ಹೋಗಿ ಬಂದ್ರಾ; ಕರ್ನಾಟಕ ಸರ್ಕಾರದ ಸಹಾಯಧನಕ್ಕೆ ಅರ್ಜಿ ಸಲ್ಲಿಸುವಂತೆ ಯಾತ್ರಾರ್ಥಿಗಳಿಗೆ ದತ್ತಿ ಇಲಾಖೆ ಸೂಚನೆ ತಿಳಿಸಿದೆ.
ಕಾಶಿಯಾತ್ರೆಗೆ ಹೋಗಿ ಬಂದ್ರಾ; ಕರ್ನಾಟಕ ಸರ್ಕಾರದ ಸಹಾಯಧನಕ್ಕೆ ಅರ್ಜಿ ಸಲ್ಲಿಸುವಂತೆ ಯಾತ್ರಾರ್ಥಿಗಳಿಗೆ ದತ್ತಿ ಇಲಾಖೆ ಸೂಚನೆ ತಿಳಿಸಿದೆ.

ಬೆಂಗಳೂರು: ಹಿಂದೂಗಳ ತೀರ್ಥಯಾತ್ರೆ ಪಟ್ಟಿಯಲ್ಲಿ ಇನ್ನೊಂದು ಪ್ರಮುಖ ಕ್ಷೇತ್ರ ಕಾಶಿ. ಹೌದು.. ಜೀವಮಾನದಲ್ಲೊಮ್ಮೆ ಕಾಶಿಗೆ ಹೋಗಿ ಬರಬೇಕು ಎಂದು ಬಯಸುವವರು ಅನೇಕ. ಹಾಗಾಗಿ, ಪ್ರತಿ ವರ್ಷವೂ ಕಾಶಿಯಾತ್ರೆಗೆ ಹೋಗುವವರ ಸಂಖ್ಯೆ ಕಡಿಮೆ ಏನಲ್ಲ. ಕರ್ನಾಟಕ ಸರ್ಕಾರವೂ ಕಳೆದ ಕೆಲವು ವರ್ಷಗಳಿಂದ ಕಾಶಿಯಾತ್ರೆಗೆ ಹೋಗುವವರಿಗೆ ಸಹಾಯಧನ ವಿತರಿಸುತ್ತಿದೆ. ಈ ವರ್ಷದ ಕಾಶಿಯಾತ್ರೆ ಸಹಾಯಧನಕ್ಕೆ ಇಂದಿನಿಂದ (ಅಕ್ಟೋಬರ್ 3) ಅರ್ಜಿ ಸಲ್ಲಿಕೆ ಶುರುವಾಗಿದೆ. ಕೈಲಾಸ ಮಾನಸ ಸರೋವರ ಮತ್ತು ಚಾರ್ ಧಾಮ್ ಯಾತ್ರೆಯ ಸಹಾಯಧನಕ್ಕೆ ಹೋಲಿಸಿದರೆ ಕಾಶಿ ಯಾತ್ರೆಯ ಸಹಾಯಧನ ಸ್ವಲ್ಪ ಕಡಿಮೆ. ಫಲಾನುಭವಿಗಳ ಸಂಖ್ಯೆಗೂ ಮಿತಿ ಇದೆ. ಕರ್ನಾಟಕ ರಾಜ್ಯ ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮಾದಾಯ ದತ್ತಿ ಇಲಾಖೆ ಈ ಸಂಬಂಧ ಪ್ರಕಟಣೆ ನೀಡಿದೆ.

ಕಾಶಿಯಾತ್ರೆಯ ಸಹಾಯಧನಕ್ಕಾಗಿ ಅರ್ಜಿ ಸಲ್ಲಿಸುವುದು ಹೇಗೆ

ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮಾದಾಯ ದತ್ತಿ ಇಲಾಖೆಯು, 2024-25ನೇ ಸಾಲಿನಲ್ಲಿ ಕರ್ನಾಟಕ ರಾಜ್ಯದಿಂದ ಕಾಶಿ ಯಾತ್ರೆ ಕೈಗೊಂಡ 30000 ಯಾತ್ರಾರ್ಥಿಗಳಿಗೆ ತಲಾ 5000 ರೂಪಾಯಿ ಸರ್ಕಾರದ ಸಹಾಯಧನ ವಿತರಿಸುವುದಕ್ಕಾಗಿ ಅರ್ಹ ಫಲಾನುಭವಿಗಳಿಂದ ಅರ್ಜಿಯನ್ನು ಆಹ್ವಾನಿಸಿದೆ.

ಕಾಶಿಯಾತ್ರೆಯ ಸಹಾಯಧನಕ್ಕಾಗಿ ಅರ್ಜಿ ಸಲ್ಲಿಸುವ ಯಾತ್ರಾರ್ಥಿಗಳು ಕರ್ನಾಟಕದ ಖಾಯಂ ನಿವಾಸಿಗಳಾಗಿರಬೇಕು. 18 ವರ್ಷ ಮೇಲ್ಪಟ್ಟ ಯಾತ್ರಾರ್ಥಿಗಳು ಮಾತ್ರ ಅರ್ಜಿ ಸಲ್ಲಿಸಬಹುದು.

ಕಾಶಿಯಾತ್ರೆಯ ಸಹಾಯಧನಕ್ಕಾಗಿ ಅರ್ಜಿ ಸಲ್ಲಿಸಲು ಬೇಕಾದ ದಾಖಲೆಗಳು

1) ಕಾಶಿಯಾತ್ರೆಯ ಸಹಾಯಧನಕ್ಕಾಗಿ ಅರ್ಜಿ ಸಲ್ಲಿಸುವ ಯಾತ್ರಾರ್ಥಿಗಳು ತಮ್ಮ ಆಧಾರ್ ಕಾರ್ಡನ ಎರಡೂ ಕಡೆಯ ಚಿತ್ರಗಳನ್ನು ತಪ್ಪದೇ ಅಪ್‌ಲೋಡ್ ಮಾಡಬೇಕು.

2) ಚುನಾವಣಾ ಗುರುತಿನ ಚೀಟಿ/ರೇಷನ್ ಕಾರ್ಡ್

3) ಯಾತ್ರಾರ್ಥಿಗಳು ಕಾಶಿಗೆ ಪ್ರಯಾಣಿಸಿದ ಕುರಿತು ಟಿಕೆಟ್ ಅಪ್‌ಲೋಡ್ ಮಾಡತಕ್ಕದ್ದು.

4) ಅರ್ಹ ಯಾತ್ರಾರ್ಥಿಗಳು ತಮ್ಮ ಅರ್ಜಿಯನ್ನು ಆನ್‌ಲೈನ್‌ ಮೂಲಕ ಸೇವಾಸಿಂಧು ವೆಬ್‌ಸೈಟ್‌ (https://sevasindhuservices.karnataka.gov.in) ಮೂಲಕ 2025ರ ಜನವರಿ 15ರ ಸಂಜೆ 4 ಗಂಟೆ ಒಳಗೆ ಅರ್ಜಿ ಸಲ್ಲಿಸಬಹುದು.

5) ಈ ವರ್ಷದ ಅಂದರೆ 2024ರ ಫೆಬ್ರವರಿ 15ರ ನಂತರ ಕಾಶಿಯಾತ್ರೆ ಕೈಗೊಂಡ ಯಾತ್ರಾರ್ಥಿಗಳು ಕಾಶಿ ಕ್ಷೇತ್ರಕ್ಕೆ ಭೇಟಿ ನೀಡಿದ ಬಗ್ಗೆ ದೇವಾಲಯದ ಮುಂಬದಿಯಲ್ಲಿ ಯಾತ್ರಾರ್ಥಿಗಳು ತಾವು ನಿಂತುಕೊಂಡಿರುವ ಛಾಯಾಚಿತ್ರ, ಪೂಜಾ ರಸೀದಿ ಇತ್ಯಾದಿ ದಾಖಲಾತಿಗಳನ್ನು ಅಪ್‌ಲೋಡ್ ಮಾಡಬೇಕು.

6) ಒಬ್ಬ ಯಾತ್ರಾರ್ಥಿಗೆ ಒಮ್ಮೆ ಮಾತ್ರವೇ ಸಹಾಯಧನ ನೀಡಲಾಗುತ್ತದೆ. ಆದ್ದರಿಂದ ಯಾತ್ರಾರ್ಥಿಗಳು ತಾವು ಈ ಹಿಂದೆ ಕಾಶಿ ಯಾತ್ರೆಯ ಸಹಾಯಧನ ಪಡೆದುಕೊಂಡಿಲ್ಲ ಎಂದು 50 ರೂಪಾಯಿ ಛಾಪಾ ಕಾಗದದಲ್ಲಿ ಸ್ವಯಂ ದೃಢೀಕರಿಸಿ, ನೋಟರಿ ಸೀಲ್‌ ಮತ್ತು ಸಹಿ ಹಾಕಿಸಿ ಆ ದಾಖಲೆಯನ್ನು ಕೂಡ ಸಲ್ಲಿಸಬೇಕು.

7) ಕಾಶಿಯಾತ್ರೆ ಕೈಗೊಂಡಿರುವುದನ್ನು ದೃಢೀಕರಿಸುವ ಸಲುವಾಗಿ ಕಾಶಿ ವಿಶ್ವನಾಥಸ್ವಾಮಿ ದೇವಾಲಯದ ಮುಂಬದಿಯಲ್ಲಿ ಯಾತ್ರಾರ್ಥಿಗಳ ಛಾಯಚಿತ್ರ ಜಿಪಿಎಸ್‌ ಲೊಕೇಶನ್‌ ಇರುವ ಛಾಯಾಚಿತ್ರವನ್ನು ಮೊಬೈಲ್‌ನಲ್ಲಿ ತೆಗೆದು ಇಟ್ಟುಕೊಂಡಿರಬೇಕು. ಅದನ್ನು ಆಪ್‌ಲೋಡ್ ಮಾಡತಬೇಕು.

8) ಕಾಶಿಯಾತ್ರೆಯ ಸಹಾಯಧನಕ್ಕೆ ಅರ್ಜಿ ಸಲ್ಲಿಸುವ ಯಾತ್ರಾರ್ಥಿಯು ಅರ್ಜಿ ಸಲ್ಲಿಸುವ ಮುನ್ನ ಮಾನ್ಯವಾಗಿರುವ ಬ್ಯಾಂಕ್ ಖಾತೆಯನ್ನು ಹೊಂದಿರಬೇಕು. ಅಂದರೆ ಬ್ಯಾಂಕ್ ಖಾತೆಗೆ ಆಧಾರ್ ಜೋಡಣೆಯಾಗಿರಬೇಕು. ಅದೇ ರೀತಿ, ಎನ್‌ಪಿಸಿಐ ಆಕ್ಟಿವ್ ಆಗಿರಬೇಕು. ಇದನ್ನು ಯಾತ್ರಾರ್ಥಿಗಳೇ ಮಾಡಿಸಬೇಕು.

ಕರ್ನಾಟಕ ಸರ್ಕಾರವು ಕಾಶಿಯಾತ್ರೆಯ ಸಹಾಯಧನಕ್ಕೆ ಸಂಬಂಧಿಸಿ ಮಾರ್ಗಸೂಚಿಯನ್ನು ಪ್ರಕಟಿಸಿದೆ. ಇದರ ಪ್ರಕಾರ, ಆಯಾಯ ವರ್ಷದ ಅನುದಾನವನ್ನು ಆಯಾಯ ವರ್ಷವೇ ಪಾವತಿಸಬೇಕಾಗಿದೆ. ಹೀಗಾಗಿ ಸಹಾಯಧನಕ್ಕೆ ಅರ್ಜಿ ಸಲ್ಲಿಸುವ ಮೊದಲೇ ಅಗತ್ಯ ದಾಖಲೆಗಳನ್ನು ಕ್ರೋಢೀಕರಿಸಿ ಇಟ್ಟುಕೊಂಡಿರಬೇಕು. ನಿಗದಿತ ಅವಧಿ ಮುಗಿದ ನಂತರ ಸಹಾಯಧನ ಕೋರಿ ಬರುವ ಅರ್ಜಿಗಳನ್ನು ಪರಿಗಣಿಸಲಾಗುವುದಿಲ್ಲ ಎಂದು ದತ್ತಿ ಇಲಾಖೆ ಸ್ಪಷ್ಟಪಡಿಸಿದೆ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ