ಕನ್ನಡ ಸುದ್ದಿ  /  ರಾಶಿ ಭವಿಷ್ಯ  /  ಮೋಕ್ಷಕ್ಕೆ ದಾರಿ ಮಾಡಿಕೊಡುವ ಕಾಶಿಯಿಂದ ಪವಿತ್ರ ಗಂಗಾಜಲವನ್ನು ಮನೆಗೆ ಏಕೆ ತರಬಾರದು? ಹರಿದ್ವಾರದಿಂದಲೇ ಏಕೆ ತರಬೇಕು?

ಮೋಕ್ಷಕ್ಕೆ ದಾರಿ ಮಾಡಿಕೊಡುವ ಕಾಶಿಯಿಂದ ಪವಿತ್ರ ಗಂಗಾಜಲವನ್ನು ಮನೆಗೆ ಏಕೆ ತರಬಾರದು? ಹರಿದ್ವಾರದಿಂದಲೇ ಏಕೆ ತರಬೇಕು?

ವಾರಣಾಸಿಯನ್ನು ಕಾಶಿ, ಬನಾರಸ್‌ ಎಂದು ಕರೆಯುತ್ತಾರೆ. ಒಮ್ಮೆ ಇಲ್ಲಿ ಹೋಗಿ ವಿಶ್ವನಾಥನ ದರ್ಶನ ಮಾಡಿದರೆ ಎಲ್ಲಾ ಪಾಪಗಳು ನಿವಾರಣೆ ಆಗುತ್ತದೆ ಎಂಬ ನಂಬಿಕೆ ಇದೆ. ಆದರೆ ಕಾಶಿಯಿಂದ ಗಂಗಾಜಲವನ್ನು ಮನೆಗೆ ತರಬಾರದು ಎಂಬ ನಿಯಮವಿದೆ. ಇದಕ್ಕೆ ಕಾರಣವೇನು? ಹರಿದ್ವಾರದಿಂದ ಏಕೆ ಗಂಗಾಜಲ ತರಬೇಕು? ಇಲ್ಲಿದ ಮಾಹಿತಿ.

ಮೋಕ್ಷಕ್ಕೆ ದಾರಿ ಮಾಡಿಕೊಡುವ ಕಾಶಿಯಿಂದ ಪವಿತ್ರ ಗಂಗಾಜಲವನ್ನು ಮನೆಗೆ ಏಕೆ ತರಬಾರದು? ಹರಿದ್ವಾರದಿಂದಲೇ ಏಕೆ ತರಬೇಕು?
ಮೋಕ್ಷಕ್ಕೆ ದಾರಿ ಮಾಡಿಕೊಡುವ ಕಾಶಿಯಿಂದ ಪವಿತ್ರ ಗಂಗಾಜಲವನ್ನು ಮನೆಗೆ ಏಕೆ ತರಬಾರದು? ಹರಿದ್ವಾರದಿಂದಲೇ ಏಕೆ ತರಬೇಕು? (PC: Sonal Goel IAS 🇮🇳 @sonalgoelias)

ಹಿಂದೂ ಧರ್ಮದಲ್ಲಿ ನದಿಗಳನ್ನು ದೇವತೆಗಳೆಂದು ಪರಿಗಣಿಸಲಾಗುತ್ತದೆ. ಒಂದೊಂದು ನದಿಯನ್ನೂ ದೇವರಂತೆ ಪೂಜಿಸಲಾಗುತ್ತದೆ. ಅದರಲ್ಲೂ ಗಂಗೆಯನ್ನು ಬಹಳ ಪವಿತ್ರ ಎಂದು ಪರಿಗಣಿಸಲಾಗಿದೆ. ಆದ್ದರಿಂದಲೇ ಗಂಗಾ ನದಿಯಲ್ಲಿ ಸ್ನಾನ ಮಾಡಿದರೆ ಎಲ್ಲಾ ಪಾಪಗಳು ತೊಳೆದು ನಾವು ಪವಿತ್ರರಾಗುತ್ತೇವೆ ಎಂಬ ನಂಬಿಕೆ ಇದೆ. ಗಂಗಾಜಲವು ಪಾಪಗಳನ್ನು ತೊಳೆದು ಆತ್ಮವನ್ನು ಶುದ್ಧೀಕರಿಸುವ ಸಾಮರ್ಥ್ಯವನ್ನು ಹೊಂದಿದೆ ಎಂದು ನಂಬಲಾಗಿದೆ.

ಸತ್ತವರ ಅಸ್ಥಿಯನ್ನು ಗಂಗಾಜಲದಲ್ಲಿ ಬೆರೆಸಿದರೆ ಆತ್ಮಕ್ಕೆ ಮೋಕ್ಷ ಸಿಗುತ್ತದೆ. ಮನೆಯ ಸುತ್ತಲೂ ಗಂಗಾಜಲವನ್ನು ಚಿಮುಕಿಸುವುದರಿಂದ ಯಾವುದೇ ದುಷ್ಟಶಕ್ತಿಗಳು ಮನೆಗೆ ಪ್ರವೇಶಿಸುವುದಿಲ್ಲ ಎಂದು ನಂಬಲಾಗಿದೆ. ಆದ್ದರಿಂದ ಗಂಗಾಜಲವನ್ನು ಹಲವು ವಿಧಗಳಲ್ಲಿ ಬಳಸಲಾಗುತ್ತದೆ. ಪ್ರತಿದಿನ ಪೂಜೆಗೂ ಮುನ್ನ ಕೆಲವರು ಮನೆಯನ್ನು ಶುದ್ಧೀಕರಿಸಲು ಗಂಗಾಜಲವನ್ನು ಪ್ರೋಕ್ಷಣೆ ಮಾಡುತ್ತಾರೆ. ಜೊತೆಗೆ ಕೆಲವು ಹನಿ ಗಂಗಾಗಜಲವನ್ನು ತಮ್ಮ ಸ್ನಾನದ ನೀರಿಗೆ ಸೇರಿಸುತ್ತಾರೆ. ಪೂಜಾ ಕೊಠಡಿಯಲ್ಲಿ ದೇವತೆಗಳಿಗೆ ಗಂಗಾಜಲದಿಂದ ಅಭಿಷೇಕ ಮಾಡಲಾಗುತ್ತದೆ.

ಹರಿದ್ವಾರದಿಂದ ಗಂಗಾಜಲ ಏಕೆ ತರಬೇಕು?

ಗಂಗಾಜಲವನ್ನು ಜನನ, ಮದುವೆ ಮತ್ತು ಮರಣದ ಆಚರಣೆಗಳಲ್ಲಿ ಬಳಸಲಾಗುತ್ತದೆ. ನಿಧನರಾದವರ ಬಾಯಿಗೆ ಗಂಗಾಜಲವನ್ನು ಸುರಿಯುವುದರಿಂದ ಆತ್ಮವು ಸ್ವರ್ಗವನ್ನು ತಲುಪುತ್ತದೆ ಎಂದು ನಂಬಲಾಗಿದೆ. ಇದೇ ಕಾರಣಕ್ಕೆ ಗಂಗಾಜಲವನ್ನು ಮನೆಗೆ ತಂದು ಸಂಗ್ರಹಿಸಲಾಗುತ್ತದೆ. ಆದರೆ ಹೆಚ್ಚಾಗಿ ಗಂಗಾಜಲವನ್ನು ಉತ್ತರಾಖಂಡದ ಹರಿದ್ವಾರದಿಂದ ತರಲಾಗುತ್ತದೆ. ಹರಿದ್ವಾರವು ಹಿಂದೂ ಧರ್ಮದ ಏಳು ಪವಿತ್ರ ಸ್ಥಳಗಳಲ್ಲಿ ಒಂದಾಗಿದೆ.

ಹರಿದ್ವಾರದಲ್ಲಿ ಗಂಗಾಜಲದ ಬಗ್ಗೆ ಸಾಕಷ್ಟು ಸಂಶೋಧನೆಗಳು ನಡೆದಿವೆ. ಈ ನೀರಿಗೆ ರೋಗ ರುಜಿನಗಳನ್ನು ಗುಣಪಡಿಸುವ ಶಕ್ತಿ ಇದೆ ಎಂದೂ ಹೇಳಲಾಗುತ್ತದೆ. ಭಗವಾನ್ ವಿಷ್ಣುವು ತನ್ನ ಪಾದದ ಗುರುತುಗಳು ಇಲ್ಲಿದ್ದು ಭಕ್ತರು ಹರಿದ್ವಾರಕ್ಕೆ ಹೋದಾಗ ಇಲ್ಲಿಂದ ಗಂಗಾಜಲ ತೆಗೆದುಕೊಂಡು ಹೋಗುತ್ತಾರೆ. ಭಕ್ತರು ತಮ್ಮ ಕುಟುಂಬ ಮತ್ತು ಸ್ನೇಹಿತರಿಗಾಗಿ ಗಂಗಾಜಲವನ್ನು ಮನೆಗೆ ತರುತ್ತಾರೆ. ಆದರೆ ಕಾಶಿಯಿಂದ ಗಂಗಾಜಲವನ್ನು ಮನೆಗೆ ಒಯ್ಯುವುದಿಲ್ಲ.

ಕಾಶಿಯಿಂದ ಏಕೆ ಗಂಗಾಜಲವನ್ನು ಮನೆಗೆ ತರಬಾರದು?

ಪವಿತ್ರ ನಗರವಾದ ಕಾಶಿಯನ್ನು ವಿಶ್ವದ ಅತ್ಯಂತ ಹಳೆಯ ನಗರಗಳಲ್ಲಿ ಒಂದೆಂದು ಪರಿಗಣಿಸಲಾಗಿದೆ. ಈ ನಗರವು ಗಂಗಾನದಿಯ ದಡದಲ್ಲಿದೆ. ಆದರೆ ಜನರು ಕಾಶಿಯಿಂದ ಗಂಗಾಜಲವನ್ನು ಮನೆಗೆ ಒಯ್ಯುವುದಿಲ್ಲ. ಏಕೆಂದರೆ ಕಾಶಿಯಲ್ಲಿ ಹರಿಶ್ಚಂದ್ರ ಘಾಟ್‌ ಹಾಗೂ ಮಣಿಕರ್ಣಿಕಾ ಘಾಟ್‌ಗೆ ಶವ ಸಂಸ್ಕಾರಕ್ಕಾಗಿ ದೂರದ ಊರುಗಳಿಂದ ಶವಗಳನ್ನು ತರಲಾಗುತ್ತದೆ. ಇಲ್ಲಿ ದಿನದ 24 ಗಂಟೆಯೂ ಶವಸಂಸ್ಕಾರ ನಡೆಯುತ್ತದೆ. ಏಕೆಂದರೆ ಇಲ್ಲಿ ಹೋಮ ಮಾಡಿದವರಿಗೆ ಮೋಕ್ಷ ಸಿಗುತ್ತದೆ ಎಂಬ ನಂಬಿಕೆ ಇದೆ . ಆದರೆ ನಿರಂತರ ದಹನ ಚಟುವಟಿಕೆಗಳಿಂದಾಗಿ ಗಂಗಾ ನದಿಯು ಬೂದಿ ಮತ್ತು ಇತರ ಅವಶೇಷಗಳಿಂದ ತುಂಬಿದೆ. ಇದು ನೀರನ್ನು ಕಲುಷಿತಗೊಳಿಸುತ್ತದೆ. ಆದ್ದರಿಂದ ಕಾಶಿಯಿಂದ ಗಂಗಾಜಲವನ್ನು ಮನೆಗೆ ತೆಗೆದುಕೊಂಡು ಹೋಗುವುದಿಲ್ಲ.

ಮಣಿಕರ್ಣಿಕಾ ಘಾಟ್ ಹಾಗೂ ಹತ್ತಿರದ ಇತರ ಘಾಟ್‌ಗಳಿಂದ ಗಂಗಾಜಲವನ್ನು ಮನೆಗೆ ತೆಗೆದುಕೊಂಡು ಹೋಗುವುದಿಲ್ಲ. ಏಕೆಂದರೆ ಸತ್ತವರ ಅಸ್ಥಿ ಗಂಗಾ ನದಿಯಲ್ಲಿ ಬೆರೆತು ಒಂದು ಕಡೆಯಿಂದ ಇನ್ನೊಂದು ಕಡೆಗೆ ಹರಿಯುತ್ತದೆ. ಬೂದಿಯು ನೀರಿನಲ್ಲಿ ಬೆರೆಯುತ್ತದೆ. ಆದ್ದರಿಂದ ಅವರನ್ನು ಮನೆಗೆ ಕರೆದುಕೊಂಡು ಹೋಗದಿರುವುದು ಉತ್ತಮ ಎಂದು ಪರಿಗಣಿಸಲಾಗಿದೆ. ಮೋಕ್ಷವನ್ನು ಪಡೆಯಲು ಪ್ರತಿ ಹಿಂದುವೂ ಒಮ್ಮೆ ಜೀವನದಲ್ಲಿ ಕಾಶಿಗೆ ಹೋಗಬೇಕೆಂದು ಎಲ್ಲರೂ ಬಯಸುತ್ತಾರೆ. ಕೆಲವೊಮ್ಮೆ ಸತ್ತವರ ಅಸ್ಥಿಯನ್ನು ಇಲ್ಲಿಂದ ಕೊಂಡೊಯ್ದು ಕಾಶಿಯಲ್ಲಿ ಗಂಗಾನದಿಯ ನೀರಿನಲ್ಲಿ ಬಿಡಲಾಗುತ್ತದೆ.

ಪುನರ್ಜನ್ಮ ಚಕ್ರಕ್ಕೆ ಅಡ್ಡಿ

ಜನರು ಮೋಕ್ಷವನ್ನು ಪಡೆಯಲು ಕಾಶಿಗೆ ಬರುತ್ತಾರೆ. ಸತ್ತವರನ್ನು ಚಿತೆಯ ಮೇಲೆ ಸುಟ್ಟು, ಅವರ ಚಿತಾಭಸ್ಮವನ್ನು ದಹಿಸಿದಾಗ ಅಥವಾ ಗಂಗೆಯಲ್ಲಿ ವಿಸರ್ಜಿಸಿದಾಗ, ಅದು ಗಂಗಾ ನದಿಗೆ ಅರ್ಪಿಸಲ್ಪಡುವ ಆತ್ಮದ ಒಂದು ಭಾಗವಾಗಿದೆ. ಆದರೆ ನೀವು ಕಾಶಿಯಿಂದ ಗಂಗಾಜಲವನ್ನು ತೆಗೆದುಕೊಂಡು ಹೋದರೆ ಮತ್ತು ಆ ನೀರಿನಲ್ಲಿ ಸತ್ತ ಆತ್ಮದ ಭಾಗಗಳು, ಬೂದಿ ಅಥವಾ ಅವಶೇಷಗಳಿದ್ದರೆ, ನೀವು ಅವರ ಮೋಕ್ಷದ ಪ್ರಯಾಣಕ್ಕೆ ಅಡ್ಡಿಯಾಗುತ್ತೀರಿ. ಕಾಶಿಯಿಂದ ಈ ನೀರನ್ನು ಸಂಗ್ರಹಿಸುವುದು ಮತ್ತು ಮನೆಗೆ ತೆಗೆದುಕೊಂಡು ಹೋಗುವುದು ಮರಣ ಮತ್ತು ಪುನರ್ಜನ್ಮದ ಚಕ್ರವನ್ನು ಅಡ್ಡಿಪಡಿಸಿದಂತೆ ಆಗುತ್ತದೆ. ಆತ್ಮವು ಸಂಪೂರ್ಣವಾಗಿ ಮೋಕ್ಷವನ್ನು ಪಡೆಯುವುದಿಲ್ಲ. ಇದು ನಿಮಗೆ ಸಮಸ್ಯೆ ಉಂಟು ಮಾಡಬಹುದು. ಆದ್ದರಿಂದ ಇದೇ ಕಾರಣಕ್ಕೆ ಕಾಶಿಯಿಂದ ಗಂಗಾಜಲವನ್ನು ಮನೆಗೆ ತರದೆ ಹರಿದ್ವಾರದಿಂದ ತಂದರೆ ಉತ್ತಮ ಎಂದು ನಂಬಲಾಗಿದೆ.

ಗಮನಿಸಿ: ಇದು ನಂಬಿಕೆ ಮತ್ತು ಶಾಸ್ತ್ರವನ್ನು ಆಧರಿಸಿದ ಬರಹ. ಇದರಲ್ಲಿರುವ ಎಲ್ಲ ಅಂಶಗಳನ್ನೂ "ಹಿಂದೂಸ್ತಾನ್ ಟೈಮ್ಸ್ ಕನ್ನಡ" ಪುಷ್ಟೀಕರಿಸುವುದಿಲ್ಲ. ನಿಮ್ಮ ಸ್ವಂತ ವಿವೇಚನೆ ಬಳಸಿ ನಿರ್ಧಾರಗಳನ್ನು ತೆಗೆದುಕೊಳ್ಳಿ.

ದೇವಾಲಯಗಳು, ಅಧ್ಯಾತ್ಮ, ದಿನ ಭವಿಷ್ಯ, ಗ್ರಹಗಳ ಸಂಚಾರ, ವಾಸ್ತು ಶಾಸ್ತ್ರ, ಪೂಜಾ ವಿಧಾನ, ವ್ರತ ವಿಧಾನ, ಹಬ್ಬ, ಸಂಸ್ಕೃತಿ, ಭಗವದ್ಗೀತೆ ಸೇರಿದಂತೆ ಜ್ಯೋತಿಷ್ಯಕ್ಕೆ ಸಂಬಂಧಿಸಿದ ಸಮಗ್ರ ಮಾಹಿತಿಗಾಗಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ರಾಶಿ ಭವಿಷ್ಯ ವಿಭಾಗ ನೋಡಿ.