ಮುಂದುವರಿದ ಕರಡಿ ಕುಣಿತದ ಪ್ರಭಾವ; ಇಂಟ್ರಾ ಡೇಯಲ್ಲಿ 950 ಪಾಯಿಂಟ್ ಕುಸಿದಿದ್ದ ಸೆನ್ಸೆಕ್ಸ್, ಕೆಂಬಣ್ಣದಲ್ಲೇ ವಹಿವಾಟು ಕೊನೆ
Oct 07, 2024 04:04 PM IST
ಭಾರತದ ಷೇರುಪೇಟೆ ವಹಿವಾಟಿನ ಇಂಟ್ರಾ ಡೇಯಲ್ಲಿ 950 ಪಾಯಿಂಟ್ ಕುಸಿದಿದ್ದ ಸೆನ್ಸೆಕ್ಸ್, ಕೆಂಬಣ್ಣದಲ್ಲೇ ವಹಿವಾಟು ಕೊನೆಗೊಳಿಸಿದೆ. ಕರಡಿ ಕುಣಿತದ ಪ್ರಭಾವ ಮುಂದುವರಿದಿದೆ. (ಸಾಂಕೇತಿಕ ಚಿತ್ರ)
ಭಾರತದ ಷೇರುಪೇಟೆ ಮೇಲೆ ಕರಡಿ ಕುಣಿತದ ಪ್ರಭಾವ ಕಡಿಮೆಯಾಗಿಲ್ಲ. ಸೋಮವಾರ ವಹಿವಾಟು ಆರಂಭದ ವೇಳೆ ಆ ಪ್ರಭಾವದಿಂದ ಹೊರಬರಲು ಪೇಟೆ ಪ್ರಯತ್ನಿಸಿದರೂ ಅದು ಸಾಧ್ಯವಾಗಲಿಲ್ಲ. ಮುಂದುವರಿದ ಕರಡಿ ಕುಣಿತದ ಪ್ರಭಾವದ ಕಾರಣ, ಇಂಟ್ರಾ ಡೇಯಲ್ಲಿ 950 ಪಾಯಿಂಟ್ ಕುಸಿದಿದ್ದ ಸೆನ್ಸೆಕ್ಸ್, ಕೆಂಬಣ್ಣದಲ್ಲೇ ವಹಿವಾಟು ಕೊನೆಗೊಳಿಸಿದೆ.
ಮುಂಬಯಿ: ಭಾರತದ ಷೇರುಪೇಟೆಯಲ್ಲಿ ಸೋಮವಾರದ ವಹಿವಾಟು ಏರಿಕೆಯೊಂದಿಗೆ ಶುರುವಾಯಿತಾದರೂ ಇಂಟ್ರಾಡೇ ವಹಿವಾಟು ತ್ರಾಸದಾಯಕವಾಗಿತ್ತು. ಸತತ ಒಂದು ವಾರದ ಅವಧಿಗೆ ಕರಡಿ ಕುಣಿತದ ಪ್ರಭಾವ ಭಾರತದ ಷೇರುಪೇಟೆಯನ್ನು ಕಾಡಿದೆ. ಸೋಮವಾರ ಅದರಿಂದ ಹೊರಬರಲು ಪೇಟೆ ಪ್ರಯತ್ನಿಸಿತಾದರೂ, ಇಂಟ್ರಾಡೇ ವಹಿವಾಟಿನಲ್ಲಿ ಅದು ಸಾಧ್ಯವಾಗಲಿಲ್ಲ. ದಿನದ ಕೊನೆಗೆ ಬಿಎಸ್‌ಇ ಸೆನ್ಸೆಕ್ಸ್ 638 ಅಂಶ (0.78%) ಕುಸಿದು 81,050 ಅಂಶಕ್ಕೆ ತಲುಪಿತು. ನಿಫ್ಟಿ 50 ಸೂಚ್ಯಂಕ 218 ಅಂಶ (0.87%) ಕುಸಿದು 24,795 ಅಂಶಕ್ಕೆ ತಲುಪಿತು. ಸೋಮವಾರದ ವಹಿವಾಟಿನಲ್ಲಿ ಬಿಎಸ್‌ಇ ಸೆನ್ಸೆಕ್ಸ್ 962 ಪಾಯಿಂಟ್ (ಶೇಕಡಾ 1.17) ಕುಸಿದ ಕಂಡು 80,726.06 ಮಟ್ಟಕ್ಕೆ ಇಳಿದು ವಹಿವಾಟು ನಡೆಸಿತು. ಇನ್ನೊಂದಡೆ, ಎನ್‌ಎಸ್‌ಇಯ ನಿಫ್ಟಿ 50 ಇಂಟ್ರಾಡೇ ಡೀಲ್‌ಗಳಲ್ಲಿ 244 ಪಾಯಿಂಟ್ (ಶೇಕಡಾ 0.97) ಕುಸಿದು 24,770 ಮಟ್ಟದಲ್ಲಿತ್ತು. ಆದಾಗ್ಯೂ, ಷೇರುಪೇಟೆ ಇಂದು (ಅಕ್ಟೋಬರ್ 7) ಬೆಳಗ್ಗೆ ವಹಿವಾಟು ಶುರುಮಾಡಿದಾಗ ಏರಿಕೆ ದಾಖಲಾಗಿತ್ತು. ನಂತರ ಕುಸಿದ ಸೂಚ್ಯಂಕಗಳು ಪೂರ್ತಿ ಕೆಂಪುಬಣ್ಣಕ್ಕೆ ತಿರುಗಿದ್ದವು.
ಕರಡಿ ಕುಣಿತದ ಪ್ರಭಾವ ತಗ್ಗದಿರಲು ಕಾರಣ
ಇಸ್ರೇಲ್ ಮತ್ತು ಇರಾನ್ ನಡುವಿನ ಯುದ್ಧ ಮತ್ತು ಚೀನಾ ಮತ್ತು ಹಾಂಗ್ ಕಾಂಗ್‌ನಂತಹ ಅಗ್ಗದ ಮಾರುಕಟ್ಟೆಗಳ ಮೇಲೆ ಕಣ್ಣಿಟ್ಟಿರುವ ವಿದೇಶಿ ಹೂಡಿಕೆದಾರರು ಭಾರತಷ ಷೇರುಪೇಟೆಯಲ್ಲಿ ಹೂಡಿಕೆ ಹಿಂಪಡೆಯುವ ಪ್ರಯತ್ನ ಮುಂದುವರಿಸಿದ ಕಾರಣ ಸೂಚ್ಯಂಕಗಳು ಕೆಂಪುಬಣ್ಣಕ್ಕೆ ತಿರುಗಿದವು. ನಿಫ್ಟಿ ಐಟಿ ಸೂಚ್ಯಂಕ ಒಂದೇ ಹಸಿರು ಬಣ್ಣದಲ್ಲಿತ್ತು. ಷೇರುಪೇಟೆಯ ಷೇರುಗಳ ಪೈಕಿ 3289 ಷೇರುಗಳು ನಷ್ಟ ಅನುಭವಿಸಿದರೆ, 597 ಷೇರುಗಳು ಲಾಭಗಳಿಸಿವೆ. ಇನ್ನುಳಿದ 117 ಷೇರುಗಳು ಸ್ಥಿರವಾಗಿದ್ದವು. ಟ್ರೆಂಟ್, ಎಂಆಂಡ್‌ಎಂ, ಭಾರ್ತಿ ಏರ್‌ಟೆಲ್ ಷೇರುಗಳು ಶೇಕಡ 1ಕ್ಕಿಂತ ಹೆಚ್ಚು ಲಾಭಗಳಿಸಿದವು. ಎನ್‌ಟಿಪಿಸಿ, ಅದಾನಿ ಪೋರ್ಟ್ಸ್, ಅದಾನಿ ಎಂಟರ್‌ಪ್ರೈಸೆಸ್, ಎಸ್‌ಬಿಐ, ಕೋಲ್ ಇಂಡಿಯಾ, ನಷ್ಟ ಅನುಭವಿಸಿವೆ.
ಅದೇ ರೀತಿ, ಬಿಎಸ್‌ಇಯಲ್ಲಿ, ಅದಾನಿ ಪೋರ್ಟ್ಸ್, ಎನ್‌ಟಿಪಿಸಿ, ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ, ಮತ್ತು ಪವರ್ ಗ್ರಿಡ್ ಕಾರ್ಪೊರೇಷನ್ ನಷ್ಟಕ್ಕೆ ಜಾರಿದ್ದು, ಸೆನ್ಸೆಕ್ಸ್‌ನಲ್ಲಿನ 30 ಷೇರುಗಳಲ್ಲಿ 23 ಕೆಂಪು ಬಣ್ಣದಲ್ಲಿ ವಹಿವಾಟು ಕೊನೆಗೊಳಿಸಿವೆ. ಆದಾಗ್ಯೂ, ಐಟಿಸಿ, ಭಾರ್ತಿ ಏರ್‌ಟೆಲ್, ಮಹೀಂದ್ರಾ ಮಹೀಂದ್ರಾ, ಬಜಾಜ್ ಫೈನಾನ್ಸ್, ಇನ್ಫೋಸಿಸ್, ಟಿಸಿಎಸ್ ಮತ್ತು ಟೆಕ್ ಮಹೀಂದ್ರಾ ಹಸಿರು ಬಣ್ಣದಲ್ಲಿ ವಹಿವಾಟು ಮುಗಿಸುವಲ್ಲಿ ಯಶಸ್ವಿಯಾಗಿವೆ.
ಶುಕ್ರವಾರದ ವಹಿವಾಟು ಮತ್ತು ಜಾಗತಿಕ ವಿದ್ಯಮಾನ
ಅಮೆರಿಕ ಉದ್ಯೋಗಗಳ ದತ್ತಾಂಶದ ನಂತರ ಯುಎಸ್ ಫೆಡರಲ್ ರಿಸರ್ವ್ ನವೆಂಬರ್‌ನಲ್ಲಿ 50 ಬಿಪಿಎಸ್ ಬದಲಿಗೆ ಕೇವಲ 25 ಬಿಪಿಎಸ್ ಮೂಲಕ ದರಗಳನ್ನು ಕಡಿತಗೊಳಿಸಲು ಮಾರುಕಟ್ಟೆಯ ನಿರೀಕ್ಷೆಗಳು ಉತ್ತುಂಗಕ್ಕೇರಿವೆ. ಫೆಡ್‌ವಾಚ್ ಟೂಲ್ ಪ್ರಕಾರ, ಕಳೆದ ವಾರದ ಮಧ್ಯದಲ್ಲಿ 65 ಪ್ರತಿಶತದಿಂದ ಕ್ವಾರ್ಟರ್-ಪಾಯಿಂಟ್ ದರ ಕಡಿತದ 95 ಪ್ರತಿಶತದಷ್ಟು ಮತ್ತು ಕಡಿತದ 5 ಪ್ರತಿಶತದಷ್ಟು ಅವಕಾಶವನ್ನು ವ್ಯಾಪಾರಿಗಳು ಈಗ ನಿರೀಕ್ಷಿಸುತ್ತಿದ್ದಾರೆ ಎಂದು ರಾಯಿಟರ್ಸ್ ವರದಿ ಮಾಡಿದೆ.
ಶುಕ್ರವಾರದ ವಹಿವಾಟಿನ ಆರಂಭದಲ್ಲಿ, ಭಾರತೀಯ ಷೇರು ಮಾರುಕಟ್ಟೆ ಸೂಚ್ಯಂಕಗಳು ಸುಮಾರು ಒಂದು ಪ್ರತಿಶತದಷ್ಟು ಕುಸಿದವು, ಸತತ ಐದನೇ ಅವಧಿಗೆ ನಷ್ಟವನ್ನುಂಟುಮಾಡಿದವು. ಸೆನ್ಸೆಕ್ಸ್ 808.65 ಪಾಯಿಂಟ್ ಅಥವಾ 0.98 ರಷ್ಟು ಇಳಿಕೆಯಾಗಿ 81,688.45 ಕ್ಕೆ ಕೊನೆಗೊಂಡರೆ, ನಿಫ್ಟಿ 50 ಸೂಚ್ಯಂಕ 235.50 ಪಾಯಿಂಟ್ ಅಥವಾ 0.93 ರಷ್ಟು ಕುಸಿದು 25,014.60 ಕ್ಕೆ ಕೊನೆಗೊಂಡಿತು.