logo
ಕನ್ನಡ ಸುದ್ದಿ  /  ಜೀವನಶೈಲಿ  /  ಕರಡಿ ಕುಣಿತಕ್ಕೆ ನಲುಗಿದೆ ಷೇರುಪೇಟೆ; ಸೆನ್ಸೆಕ್ಸ್‌ 350, ನಿಫ್ಟಿ 100ಕ್ಕೂ ಹೆಚ್ಚು ಅಂಶ ಕುಸಿತ, ಮುಂದುವರಿದ ರಕ್ತಪಾತ

ಕರಡಿ ಕುಣಿತಕ್ಕೆ ನಲುಗಿದೆ ಷೇರುಪೇಟೆ; ಸೆನ್ಸೆಕ್ಸ್‌ 350, ನಿಫ್ಟಿ 100ಕ್ಕೂ ಹೆಚ್ಚು ಅಂಶ ಕುಸಿತ, ಮುಂದುವರಿದ ರಕ್ತಪಾತ

Umesh Kumar S HT Kannada

Oct 04, 2024 10:22 AM IST

google News

ಸೆನ್ಸೆಕ್ಸ್‌ 350, ನಿಫ್ಟಿ 100ಕ್ಕೂ ಹೆಚ್ಚು ಅಂಶ ಕುಸಿತ ಕಂಡಿದೆ. ರಕ್ತಪಾತ ಮುಂದುವರಿದಿದ್ದು ಕರಡಿ ಕುಣಿತಕ್ಕೆ ಷೇರುಪೇಟೆ ನಲುಗಿದೆ. (ಸಾಂಕೇತಿಕ ಚಿತ್ರ)

  • ಭಾರತದ ಷೇರುಪೇಟೆಯಲ್ಲಿ ಕರಡಿ ಕುಣಿತ ಜೋರಾಗಿದ್ದು, ಷೇರುಪೇಟೆ ನಲುಗಿದೆ. ಶುಕ್ರವಾರ (ಅಕ್ಟೋಬರ್ 4) ವಹಿವಾಟು ಶುರುವಾಗುತ್ತಿದ್ದಂತೆ ಸೆನ್ಸೆಕ್ಸ್ 350 ಅಂಶ ಕುಸಿದಿದೆ. ನಿಫ್ಟಿ 100ಕ್ಕೂ ಹೆಚ್ಚು ಅಂಶ ಕುಸಿದಿದೆ. ಹೀಗೆ ರಕ್ತಪಾತ ಮುಂದುವರಿದಿದ್ದು, ಅದರ ವಿವರ ಇಲ್ಲಿದೆ.

ಸೆನ್ಸೆಕ್ಸ್‌ 350, ನಿಫ್ಟಿ 100ಕ್ಕೂ ಹೆಚ್ಚು ಅಂಶ ಕುಸಿತ ಕಂಡಿದೆ. ರಕ್ತಪಾತ ಮುಂದುವರಿದಿದ್ದು ಕರಡಿ ಕುಣಿತಕ್ಕೆ ಷೇರುಪೇಟೆ ನಲುಗಿದೆ. (ಸಾಂಕೇತಿಕ ಚಿತ್ರ)
ಸೆನ್ಸೆಕ್ಸ್‌ 350, ನಿಫ್ಟಿ 100ಕ್ಕೂ ಹೆಚ್ಚು ಅಂಶ ಕುಸಿತ ಕಂಡಿದೆ. ರಕ್ತಪಾತ ಮುಂದುವರಿದಿದ್ದು ಕರಡಿ ಕುಣಿತಕ್ಕೆ ಷೇರುಪೇಟೆ ನಲುಗಿದೆ. (ಸಾಂಕೇತಿಕ ಚಿತ್ರ) (Pixabay)

ಮುಂಬಯಿ: ಭಾರತದ ಷೇರುಪೇಟೆಯಲ್ಲಿ ಕರಡಿ ಕುಣಿತ ಭೀಕರವಾಗಿದೆ. ವಾರದ ಕೊನೆಯ ವಹಿವಾಟಿನ ದಿನವಾದ ಶುಕ್ರವಾರವೂ ಕರಡಿ ಕುಣಿತ ಮುಂದುವರಿದಿದ್ದು ಬಾಂಬೆ ಸ್ಟಾಕ್ ಎಕ್ಸ್‌ಚೇಂಜ್‌ (ಬಿಎಸ್‌ಇ) ನ ಸೂಚ್ಯಂಕ ಸೆನ್ಸೆಕ್ಸ್ 350 ಅಂಶದಷ್ಟು ಕುಸಿದ 82,150 ರಲ್ಲಿ ವಹಿವಾಟು ಶುರುಮಾಡಿದೆ. ಇನ್ನೊಂದೆಡೆ, ನ್ಯಾಷನಲ್ ಸ್ಟಾಕ್ ಎಕ್ಸ್‌ಚೇಂಜ್ (ಎನ್‌ಎಸ್‌ಇ) ಸೂಚ್ಯಂಕ ನಿಫ್ಟಿ 50 ಕೂಡ 100 ಅಂಶಗಳಷ್ಟು ಕುಸಿದು 25,100 ರಲ್ಲಿ ದಿನದ ವಹಿವಾಟು ಶುರುಮಾಡಿದೆ. ಕೆಟ್ಟ ಆರಂಭದ ನಂತರ, ಮಾರುಕಟ್ಟೆಯಲ್ಲಿ ಕುಸಿತವು ಮತ್ತಷ್ಟು ಹೆಚ್ಚಾಗಿದೆ. ಸೆನ್ಸೆಕ್ಸ್ 400 ಅಂಕಗಳಿಗಿಂತ ಹೆಚ್ಚು ಕುಸಿದು 82051 ಮಟ್ಟಕ್ಕೆ ತಲುಪಿದೆ. ಇದರಲ್ಲಿ, ಬಜಾಜ್ ಫೈನಾನ್ಸ್‌ ಷೇರು ಶೇಕಡ 3 ಕ್ಕಿಂತ ಹೆಚ್ಚು ಕುಸಿತ ಕಂಡಿದೆ. ಏಷ್ಯನ್ ಪೇಂಟ್ಸ್ 1.88% ಮತ್ತು ಬಜಾಜ್ ಫಿನ್‌ಸರ್ವ್ 1.40% ರಷ್ಟು ಇಳಿದಿದೆ. ಏರಿಕೆಯಾಗುತ್ತಿರುವ ಷೇರುಗಳಲ್ಲಿ ಎಚ್‌ಸಿಎಲ್ ಟೆಕ್, ಟಿಸಿಎಸ್, ಇಂಡಸ್‌ಇಂಡ್ ಬ್ಯಾಂಕ್, ಇನ್ಫೋಸಿಸ್, ಆಕ್ಸಿಸ್ ಬ್ಯಾಂಕ್, ಸನ್ ಫಾರ್ಮಾ ಸೇರಿವೆ.

ಗುರುವಾರ ದೊಡ್ಡ ಪ್ರಮಾಣದ ಕುಸಿತ ಕಂಡಿತ್ತು ಷೇರುಪೇಟೆ

ಇರಾನ್ ಮತ್ತು ಇಸ್ರೇಲ್ ನಡುವಿನ ಯುದ್ಧದ ಭೀತಿಯ ನಡುವೆ ಗುರುವಾರ ಭಾರತೀಯ ಷೇರು ಮಾರುಕಟ್ಟೆ ತಲ್ಲಣಗೊಂಡಿತ್ತು. ಬೆಂಚ್‌ಮಾರ್ಕ್ ಸೂಚ್ಯಂಕಗಳಾದ ಸೆನ್ಸೆಕ್ಸ್-ನಿಫ್ಟಿ ಎರಡು ತಿಂಗಳ ಅವಧಿಯಲ್ಲೇ ಅತ್ಯಂತ ಕೆಟ್ಟ ಕುಸಿತವನ್ನು ದಾಖಲಿಸಿದವು. ನಿನ್ನೆ (ಅಕ್ಟೋಬರ್ 3) ಎರಡೂ ಇಕ್ವಿಟಿ ಸೂಚ್ಯಂಕಗಳು ಶೇಕಡಾ 2 ಕ್ಕಿಂತ ಹೆಚ್ಚು ತೀವ್ರ ಕುಸಿತವನ್ನು ಕಂಡವು. ಸೆನ್ಸೆಕ್ಸ್ 1,769.19 ಪಾಯಿಂಟ್ ಅಥವಾ 2.10 ರಷ್ಟು ಇಳಿಕೆಯಾಗಿ 82,497.10 ಕ್ಕೆ ಕೊನೆಗೊಂಡರೆ, ನಿಫ್ಟಿ 50 546.80 ಪಾಯಿಂಟ್ ಅಥವಾ 2.12 ರಷ್ಟು ಕುಸಿದು 25,250.10 ಕ್ಕೆ ಕೊನೆಗೊಂಡಿತು. ಸ್ಟಾಕ್ ಮಾರುಕಟ್ಟೆಗಳಲ್ಲಿ ಲಭ್ಯವಿರುವ ತಾತ್ಕಾಲಿಕ ಮಾಹಿತಿಯ ಪ್ರಕಾರ, ವಿದೇಶಿ ಸಾಂಸ್ಥಿಕ ಹೂಡಿಕೆ ಸಂಸ್ಥೆಗಳು ಗುರುವಾರ ನಿವ್ವಳ 15,243.27 ಕೋಟಿ ರೂ ಮೌಲ್ಯದ ಷೇರುಗಳನ್ನು ಮಾರಾಟ ಮಾಡಿದರೆ, ದೇಶೀಯ ಸಾಂಸ್ಥಿಕ ಹೂಡಿಕೆದಾರರು (ಡಿಐಐಗಳು) 12,913.96 ಕೋಟಿ ರೂಪಾಯಿ ಮೌಲ್ಯದ ಷೇರುಗಳನ್ನು ಖರೀದಿಸಿದ್ದಾರೆ.

ಗಿಫ್ಟ್‌ ನಿಫ್ಟಿ 25,410 ಮಟ್ಟದಲ್ಲಿ ವಹಿವಾಟು ನಡೆಸುತ್ತಿದೆ. ನಿಫ್ಟಿ ಫ್ಯೂಚರ್ಸ್‌ನ ಹಿಂದಿನ ಮುಕ್ತಾಯದಿಂದ ಸುಮಾರು 65 ಪಾಯಿಂಟ್‌ಗಳ ನಷ್ಟವಾಗಿದೆ. ಇದು ಭಾರತೀಯ ಷೇರು ಮಾರುಕಟ್ಟೆಯ ಪ್ರಮುಖ ಸೂಚ್ಯಂಕಗಳಾದ ಸೆನ್ಸೆಕ್ಸ್-ನಿಫ್ಟಿಗೆ ಕುಸಿತದ ಆರಂಭವನ್ನು ಸೂಚಿಸಿತ್ತು.

ಶುಕ್ರವಾರದ ವಹಿವಾಟು ಕುಸಿತಕ್ಕೆ ಸಿಕ್ಕ ಸುಳಿವು

ಮಧ್ಯಪ್ರಾಚ್ಯದಲ್ಲಿನ ಉದ್ವಿಗ್ನ ಪರಿಸ್ಥಿತಿ ಕುರಿತಾದ ಕಳವಳದ ನಡುವೆ ವಾಲ್ ಸ್ಟ್ರೀಟ್ ರಾತ್ರೋರಾತ್ರಿ ಕುಸಿದ ಕಾರಣ, ಏಷ್ಯನ್ ಮಾರುಕಟ್ಟೆಗಳು ಶುಕ್ರವಾರ ಮಿಶ್ರ ರೀತಿಯಲ್ಲಿ ಪ್ರತಿಕ್ರಿಯಿಸಿವೆ. ಜಪಾನ್‌ನ ನಿಕ್ಕಿ 225 ಶೇಕಡಾ 0.34 ರಷ್ಟು ಏರಿದರೆ, ಟೋಪಿಕ್ಸ್ ಶೇಕಡಾ 0.41 ರಷ್ಟು ಏರಿತು. ದಕ್ಷಿಣ ಕೊರಿಯಾದ ಕೊಸ್ಪಿ ಶೇ.0.19ರಷ್ಟು ಏರಿದರೆ, ಕೊಸ್ಡಾಕ್ ಶೇ.0.74ರಷ್ಟು ಏರಿದೆ. ಹಾಂಗ್ ಕಾಂಗ್‌ನ ಹ್ಯಾಂಗ್ ಸೆಂಗ್ ಸೂಚ್ಯಂಕ ಭವಿಷ್ಯವು ಕಡಿಮೆ ಆರಂಭವನ್ನು ಸೂಚಿಸಿದೆ. ಚೀನಾದಲ್ಲಿ ಮಾರುಕಟ್ಟೆಗೆ ರಜೆ ಇದ್ದು, ಅಕ್ಟೋಬರ್ 8 ರಂದು ಮತ್ತೆ ತೆರೆಯಲಿದೆ.

ಬ್ರೆಂಟ್ ಕ್ರೂಡ್ ಫ್ಯೂಚರ್ಸ್ ಬ್ಯಾರೆಲ್‌ಗೆ ಶೇಕಡ 0.12 ಏರಿಕೆಯಾಗಿ 77.71 ಅಮೆರಿಕನ್ ಡಾಲರ್‌ಗೆ ತಲುಪಿದೆ. ಆದರೆ, ಯುಎಸ್ ವೆಸ್ಟ್ ಟೆಕ್ಸಾಸ್ ಇಂಟರ್ಮೀಡಿಯೇಟ್ ಕಚ್ಚಾ ಭವಿಷ್ಯವು ಬ್ಯಾರೆಲ್‌ಗೆ 0.11 ಶೇಕಡಾ ಏರಿಕೆಯಾಗಿ 73.79 ಅಮೆರಿಕನ್ ಡಾಲರ್‌ಗೆ ತಲುಪಿದೆ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ