logo
ಕನ್ನಡ ಸುದ್ದಿ  /  ಜೀವನಶೈಲಿ  /  ಅಯ್ಯೋ ದೇವರೇ.. 10 ಲಕ್ಷ ಕೋಟಿ ರೂ ಹೋಯ್ತಲ್ಲಪ್ಪ, ಷೇರುಪೇಟೆ ಸೂಚ್ಯಂಕ ಸೆನ್ಸೆಕ್ಸ್, ನಿಫ್ಟಿಗಳನ್ನು ಪಾತಾಳಕ್ಕೆಳೆದ 10 ಷೇರುಗಳು

ಅಯ್ಯೋ ದೇವರೇ.. 10 ಲಕ್ಷ ಕೋಟಿ ರೂ ಹೋಯ್ತಲ್ಲಪ್ಪ, ಷೇರುಪೇಟೆ ಸೂಚ್ಯಂಕ ಸೆನ್ಸೆಕ್ಸ್, ನಿಫ್ಟಿಗಳನ್ನು ಪಾತಾಳಕ್ಕೆಳೆದ 10 ಷೇರುಗಳು

Umesh Kumar S HT Kannada

Oct 03, 2024 07:33 PM IST

google News

ಭಾರತದ ಷೇರುಪೇಟೆಯಲ್ಲಿ ಗುರುವಾರ ಸೆನ್ಸೆಕ್ಸ್ ಮತ್ತು ನಿಫ್ಟಿ ಭಾರಿ ಕುಸಿತ ಕಂಡಿದೆ. ದಿನದ ವಹಿವಾಟಿನಲ್ಲಿ ಹೂಡಿಕೆದಾರರಿಗೆ 10 ಲಕ್ಷ ಕೋಟಿ ರೂಪಾಯಿಗೂ ಅಧಿಕ ನಷ್ಟವಾಗಿದೆ. (ಸಾಂಕೇತಿಕ ಚಿತ್ರ)

  • ಇಸ್ರೇಲ್ ಮತ್ತು ಇರಾನ್ ಯುದ್ಧ, ಮಧ್ಯಪ್ರಾಚ್ಯ ಬಿಕ್ಕಟ್ಟು ಭಾರತದ ಷೇರುಪೇಟೆ ವಹಿವಾಟಿನ ಮೇಲೆ ನೇರ ಪರಿಣಾಮ ಬೀರಿದ್ದು, ಗುರುವಾರ ಒಂದೇ ದಿನ ಸೆನ್ಸೆಕ್ಸ್, ನಿಫ್ಟಿ ಭಾರಿ ಕುಸಿತ ದಾಖಲಿಸಿವೆ. ಹೂಡಿಕೆದಾರರು 10 ಲಕ್ಷ ಕೋಟಿ ರೂಪಾಯಿಗೂ ಅಧಿಕ ನಷ್ಟ ಅನುಭವಿಸಿದರು. 10 ಷೇರುಗಳು ಕುಸಿತದಲ್ಲಿ ಹೆಚ್ಚಿನ ನಷ್ಟಕ್ಕೆ ಕಾರಣವಾದವು.

ಭಾರತದ ಷೇರುಪೇಟೆಯಲ್ಲಿ ಗುರುವಾರ ಸೆನ್ಸೆಕ್ಸ್ ಮತ್ತು ನಿಫ್ಟಿ ಭಾರಿ ಕುಸಿತ ಕಂಡಿದೆ. ದಿನದ ವಹಿವಾಟಿನಲ್ಲಿ ಹೂಡಿಕೆದಾರರಿಗೆ 10 ಲಕ್ಷ ಕೋಟಿ ರೂಪಾಯಿಗೂ ಅಧಿಕ ನಷ್ಟವಾಗಿದೆ. (ಸಾಂಕೇತಿಕ ಚಿತ್ರ)
ಭಾರತದ ಷೇರುಪೇಟೆಯಲ್ಲಿ ಗುರುವಾರ ಸೆನ್ಸೆಕ್ಸ್ ಮತ್ತು ನಿಫ್ಟಿ ಭಾರಿ ಕುಸಿತ ಕಂಡಿದೆ. ದಿನದ ವಹಿವಾಟಿನಲ್ಲಿ ಹೂಡಿಕೆದಾರರಿಗೆ 10 ಲಕ್ಷ ಕೋಟಿ ರೂಪಾಯಿಗೂ ಅಧಿಕ ನಷ್ಟವಾಗಿದೆ. (ಸಾಂಕೇತಿಕ ಚಿತ್ರ) (LM)

ಮುಂಬಯಿ: ಭಾರತದ ಷೇರುಪೇಟೆಯ ಏರಿಳಿತ ಬಹಳ ಗಾಬರಿ ಹುಟ್ಟಿಸುವಂತೆ ಸಾಗಿದೆ. 1000 ಅಂಶಗಳ ಮೈಲಿಗಲ್ಲನ್ನು ಬಹುಬೇಗ ಏರಿದರೂ, ಕೆಲವೇ ದಿನಗಳ ಅಂತರದಲ್ಲಿ 1000ಕ್ಕೂ ಹೆಚ್ಚು ಅಂಶ ಕುಸಿತ ಕಾಣುತ್ತಿರುವ ವಿದ್ಯಮಾನ ಹೂಡಿಕೆದಾರರಲ್ಲಿ ಕಳವಳ ಹುಟ್ಟುಹಾಕಿದೆ. ಮುಂಬಯಿ ಷೇರುಪೇಟೆಯಲ್ಲಿ ಗುರುವಾರ (ಅಕ್ಟೋಬರ್ 3) ದಿನವಿಡೀ ರಕ್ತಪಾತವೇ ಆಗಿತ್ತು. ಕರಡಿ ಕುಣಿತ ಜೋರಾಗಿದ್ದ ಕಾರಣ ಒಂದೇ ದಿನ ಸೆನ್ಸೆಕ್ಸ್ 1700ಕ್ಕೂ ಹೆಚ್ಚು ಮತ್ತು ನಿಫ್ಟಿ 500ಕ್ಕೂ ಹೆಚ್ಚು ಅಂಕ ಕುಸಿಯಿತು. ಇದರಿಂದಾಗಿ ಹೂಡಿಕೆದಾರರು ಒಂದೇ ದಿನ 10 ಲಕ್ಷ ಕೋಟಿ ರೂಪಾಯಿಗೂ ಅಧಿಕ ನಷ್ಟ ಅನುಭವಿಸಿದರು. ಇತ್ತೀಚಿನ ಎರಡು ತಿಂಗಳ ಅವಧಿಯಲ್ಲಿ ಇದು ದೊಡ್ಡ ಮಟ್ಟದ ಕುಸಿತವಾಗಿ ಗೋಚರಿಸಿದೆ. ಇಂದಿನ ವಹಿವಾಟಿನಲ್ಲಿ 10 ಷೇರುಗಳು ಷೇರುಪೇಟೆ ಸೂಚ್ಯಂಕವನ್ನು ಪಾತಾಳಕ್ಕೆಳೆದುದು ಕಂಡುಬಂತು. ಇದರಲ್ಲಿ ದೇಶದ ಮುಂಚೂಣಿ ಕಂಪನಿ ರಿಲಯನ್ಸ್‌, ಟಾಟಾ ಗ್ರೂಪ್‌ ಕೂಡ ಸೇರಿಕೊಂಡಿದೆ.

ವಹಿವಾಟಿನ ಕೊನೆಯ ಅವಧಿಯಲ್ಲಿ ತೀವ್ರ ಕುಸಿತ

ಇರಾನ್ ಮತ್ತು ಇಸ್ರೇಲ್ ನಡುವಿನ ಯುದ್ಧ, ಮಧ್ಯಪ್ರಾಚ್ಯದ ಉದ್ವಿಗ್ನತೆ, ಸೆಬಿಯು ಫ್ಯೂಚರ್ಸ್ ಆಂಡ್‌ ಆಪ್ಶನ್ಸ್ ನಿಯಮ ಬಿಗಿಗೊಳಿಸಿದ್ದು, ಚೀನಾದ ಬೆಳವಣಿಗೆ ಹೀಗೆ ನಾಲ್ಕು ಅಂಶಗಳು ಬೀರಿದ ಪರಿಣಾಮವು ಗುರುವಾರ ಭಾರತದ ಷೇರು ಪೇಟೆಯಲ್ಲಿ ಸ್ಪಷ್ಟವಾಗಿ ಗೋಚರಿಸಿತು. ಬಿಎಸ್‌ಇ ಸೆನ್ಸೆಕ್ಸ್ 83,270 ಮಟ್ಟದಲ್ಲಿ ವಹಿವಾಟು ಆರಂಭಿಸಿತು. ಅದರ ಹಿಂದಿನ ಮುಕ್ತಾಯದ 84,266 ಕ್ಕೆ ಹೋಲಿಸಿದರೆ 995 ಪಾಯಿಂಟ್‌ಗಳ ಕುಸಿತ ದಾಖಲಾಯಿತು. ನಂತರ ಮಾರುಕಟ್ಟೆ ಮುಚ್ಚುವವರೆಗೂ ಕುಸಿಯುತ್ತಲೇ ಇತ್ತು. ಅಂತಿಮವಾಗಿ, ಸೆನ್ಸೆಕ್ಸ್ 1769.19 ಪಾಯಿಂಟ್ ಅಥವಾ 2.10 ಶೇಕಡಾ ಕುಸಿತದೊಂದಿಗೆ 82,497.10 ಮಟ್ಟದಲ್ಲಿ ದಿನದ ವಹಿವಾಟು ಕೊನೆಗೊಳಿಸಿದೆ. ಸೆನ್ಸೆಕ್ಸ್‌ ಕುಸಿತದ ಪರಿಣಾಮವು ಬಿಎಸ್‌ಇಯ ಮಾರುಕಟ್ಟೆ ಬಂಡವಾಳದಲ್ಲೂ ಗೋಚರಿಸಿತು. ಅದು 10 ಲಕ್ಷ ಕೋಟಿ ರೂಪಾಯಿಗಿಂತ ಹೆಚ್ಚು ಕುಸಿಯಿತು.

ಒಂದೆಡೆ, ಸೆನ್ಸೆಕ್ಸ್ ದೊಡ್ಡ ಕುಸಿತದೊಂದಿಗೆ ಹೂಡಿಕೆದಾರರ ಕಷ್ಟಪಟ್ಟು ಸಂಪಾದಿಸಿದ ಹಣವನ್ನು ಕಳೆದುಹಾಕಿತು. ಮತ್ತೊಂದೆಡೆ, ನಿಫ್ಟಿ ಕೂಡ ಹೂಡಿಕೆದಾರರಿಗೆ ಆಘಾತವನ್ನು ಉಂಟುಮಾಡಿತು. ನಿಫ್ಟಿ 25,527 ರಲ್ಲಿ ವಹಿವಾಟು ಆರಂಭಿಸಿದ ನಿಫ್ಟಿ ಸೂಚ್ಯಂಕವು ತನ್ನ ಹಿಂದಿನ ಮುಕ್ತಾಯದ 25,796.90 ಗೆ ಹೋಲಿಸಿದರೆ 270 ಪಾಯಿಂಟ್‌ಗಳ ಕುಸಿತ ದಾಖಲಿಸಿತು. ಒಟ್ಟಾರೆ ದಿನದ ವಹಿವಾಟಿನ ಕೊನೆಗೆ 546.56 ಪಾಯಿಂಟ್‌ಗಳು ಅಥವಾ 2.12 ರಷ್ಟು ಕುಸಿದು 25,250 ಮಟ್ಟಕ್ಕಿಳಿಯಿತು.

ಶೇಕಡ 5 ಕ್ಕಿಂತ ಹೆಚ್ಚು ಕುಸಿದವು 10 ಷೇರುಗಳು

ಗುರುವಾರದ ವಹಿವಾಟಿನಲ್ಲಿ ಷೇರುಪೇಟೆ ಸೂಚ್ಯಂಕಗಳನ್ನು ಪಾತಾಳಕ್ಕೆಳೆದ 10 ಷೇರುಗಳನ್ನು ಗಮನಿಸೋಣ. ಬಹುತೇಕ ಎಲ್ಲವೂ ಶೇಕಡ 5ಕ್ಕಿಂತ ಹೆಚ್ಚು ಕುಸಿತ ಕಂಡಿವೆ. ಡಾಬರ್ ಇಂಡಿಯಾ ಷೇರು ಶೇಕಡ 6.27 ಕುಸಿದು 580 ರೂಪಾಯಿ ಮಟ್ಟದಲ್ಲಿ ವಹಿವಾಟು ಮುಗಿಸಿದೆ. ಇನ್ನು ಪವರ್ ಫೈನಾನ್ಸ್‌ ಕಾರ್ಪ್ಸ್‌ ಷೇರು ಶೇಕಡ 5.37 ಕುಸಿದು 467.55 ರೂಪಾಯಿಯಲ್ಲಿ ವಹಿವಾಟು ಮುಗಿಸಿದೆ. ಡಿಎಲ್‌ಎಫ್‌ ಷೇರು ಶೇಕಡ 5.25 ಕುಸಿದು 864.85 ರೂಪಾಯಿಗೆ ತಲುಪಿತು. ಬಿಪಿಸಿಎಲ್‌ ಷೇರು ಶೇಕಡ 5.27 ಕುಸಿತ ಕಂಡು 348.85 ರೂಪಾಯಿಗೆ ಇಳಿಯಿತು. ಇದಲ್ಲದೆ ಎಚ್‌ಪಿಸಿಎಲ್‌ ಷೇರು ಶೇಕಡ 6.71, ಗೋದ್ರೆಜ್ ಪ್ರಾಪರ್ಟೀಸ್‌ ಷೇರು ಶೇಕಡ 5.57, ಸುಝ್ಲಾನ್‌ ಎನರ್ಜಿ ಷೇರು ಶೇಕಡ 5 ಕುಸಿತ ದಾಖಲಿಸಿವೆ. ಅದೇ ರೀತಿ, ಜಿಎಂಆರ್ ಏರ್‌ಪೋರ್ಟ್‌ ಷೇರು ಶೇಕಡ 5.64, ಎನ್‌ಬಿಸಿಸಿ ಇಂಡಿಯಾ ಷೇರು ಶೇಕಡ 5.34, ಸ್ಟೆರ್ಲಿಂಗ್ ಷೇರು ಶೇಕಡ 5 ಕುಸಿತ ಕಂಡವು.

ಇನ್ನೊಂದೆಡೆ, ಷೇರುಪೇಟೆ ಸೂಚ್ಯಂಕವನ್ನು ಪಾತಾಳಕ್ಕೆಳೆದ ಷೇರುಗಳ ಪೈಕಿ ದೊಡ್ಡ 5 ಕಂಪನಿಗಳ ಷೇರುಗಳೂ ಇವೆ. ರಿಲಯನ್ಸ್ ಇಂಡಸ್ಟ್ರೀಸ್‌ ಪಾಲು ದೊಡ್ಡದು. ಅದು ಒಂದು ವಾರದಲ್ಲಿ ಸತತ ಎರಡನೇ ಬಾರಿಗೆ ದೊಡ್ಡ ಮಟ್ಟದ ಕುಸಿತ ದಾಖಲಿಸಿತು. ಗುರುವಾರದ ವಹಿವಾಟಿನಲ್ಲಿ ಶೇಕಡ 3.95 ಕುಸಿದು 2813.95 ರೂಪಾಯಿಗೆ ಇಳಿಯಿತು. ಇನ್ನು ಅದಾನಿ ಗ್ರೀನ್ ಎನರ್ಜಿ ಷೇರು ಶೇಕಡ 4.09 ಕುಸಿದು 1807.80 ರೂಪಾಯಿಗೆ ತಲುಪಿತು. ಟಾಟಾ ಮೋಟಾರ್ಸ್ ಷೇರು ಶೇಕಡ 4.09 ಕುಸಿತ ಕಂಡು 925.70 ರೂಪಾಯಿಯಲ್ಲಿ ವಹಿವಾಟು ಮುಗಿಸಿತು. ಐಆರ್‌ಸಿಟಿಸಿ ಷೇರು ಶೇ.4.81ರಷ್ಟು ಕುಸಿದು 886.40 ರೂಪಾಯಿಯಲ್ಲಿ, ಐಒಸಿಎಲ್‌ ಷೇರು ಶೇ 4.32 ಕುಸಿತದೊಂದಿಗೆ 171.33 ರೂಪಾಯಿಯಲ್ಲಿ ವಹಿವಾಟು ಮುಗಿಸಿದೆ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ