logo
ಕನ್ನಡ ಸುದ್ದಿ  /  ಜೀವನಶೈಲಿ  /  ಮಕ್ಕಳ ದಿನಾಚರಣೆಗೆ ಛದ್ಮವೇಷ ಸ್ಪರ್ಧೆ; ನಿಮ್ಮ ಮಕ್ಕಳಿಗಾಗಿ ಇಲ್ಲಿವೆ ಬೆಸ್ಟ್‌ ಫ್ಯಾನ್ಸಿ ಡ್ರೆಸ್ ಐಡಿಯಾಗಳು

ಮಕ್ಕಳ ದಿನಾಚರಣೆಗೆ ಛದ್ಮವೇಷ ಸ್ಪರ್ಧೆ; ನಿಮ್ಮ ಮಕ್ಕಳಿಗಾಗಿ ಇಲ್ಲಿವೆ ಬೆಸ್ಟ್‌ ಫ್ಯಾನ್ಸಿ ಡ್ರೆಸ್ ಐಡಿಯಾಗಳು

Priyanka Gowda HT Kannada

Nov 06, 2024 10:33 AM IST

google News

ಮಕ್ಕಳ ದಿನಾಚರಣೆಗೆ ಛದ್ಮವೇಷ ಸ್ಪರ್ಧೆ; ನಿಮ್ಮ ಮಕ್ಕಳಿಗಾಗಿ ಇಲ್ಲಿವೆ ಬೆಸ್ಟ್‌ ಫ್ಯಾನ್ಸಿ ಡ್ರೆಸ್ ಐಡಿಯಾಗಳು

  • ಮಕ್ಕಳಿಗೆ ವೇಷಭೂಷಣ ತೊಡಿಸುವುದು ಒಂದು ರೋಮಾಂಚಕ ಅನುಭವ. ನಿಮ್ಮ ಮಕ್ಕಳೂ ಕೂಡ ಛದ್ಮವೇಷ ಸ್ಪರ್ಧೆಯಲ್ಲಿ ಭಾಗವಹಿಸುತ್ತಿದ್ದಾರಾ? ಮಕ್ಕಳಿಗೆ ಯಾವ ರೀತಿಯ ವೇಷಭೂಷಣ ತೊಡಿಸುವುದು ಎಂದು ಯೋಚಿಸುತ್ತಿದ್ದರೆ ಇಲ್ಲಿ ಕೆಲವು ಐಡಿಯಾಗಳನ್ನು ನೀಡಲಾಗಿದೆ. 

ಮಕ್ಕಳ ದಿನಾಚರಣೆಗೆ ಛದ್ಮವೇಷ ಸ್ಪರ್ಧೆ; ನಿಮ್ಮ ಮಕ್ಕಳಿಗಾಗಿ ಇಲ್ಲಿವೆ ಬೆಸ್ಟ್‌ ಫ್ಯಾನ್ಸಿ ಡ್ರೆಸ್ ಐಡಿಯಾಗಳು
ಮಕ್ಕಳ ದಿನಾಚರಣೆಗೆ ಛದ್ಮವೇಷ ಸ್ಪರ್ಧೆ; ನಿಮ್ಮ ಮಕ್ಕಳಿಗಾಗಿ ಇಲ್ಲಿವೆ ಬೆಸ್ಟ್‌ ಫ್ಯಾನ್ಸಿ ಡ್ರೆಸ್ ಐಡಿಯಾಗಳು (PC: Canva)

ಮಕ್ಕಳ ದಿನಾಚರಣೆ ಹತ್ತಿರದಲ್ಲಿದೆ. ಮಕ್ಕಳ ದಿನಾಚರಣೆಯಂದು ಶಾಲೆಗಳಲ್ಲಿ ಫ್ಯಾನ್ಸಿ ಡ್ರೆಸ್ ಸ್ಪರ್ಧೆ ಇಡುವುದು ಸಾಮಾನ್ಯ. ಈ ರೀತಿಯ ಸ್ಪರ್ಧೆಯನ್ನು ಆಯೋಜಿಸುವುದರಿಂದ ಮಕ್ಕಳಲ್ಲಿ ಸೃಜನಶೀಲತೆ ಹಾಗೂ ಜ್ಞಾನ ಹೆಚ್ಚಲು ಒಂದು ಅವಕಾಶವಾಗಿದೆ. ಮಕ್ಕಳಿಗೆ ವೇಷಭೂಷಣ ತೊಡಿಸುವುದು ಒಂದು ರೋಮಾಂಚಕ ಅನುಭವ. ನಿಮ್ಮ ಮಕ್ಕಳೂ ಕೂಡ ಸ್ಪರ್ಧೆಯಲ್ಲಿ ಭಾಗವಹಿಸುತ್ತಿದ್ದಾರಾ? ಮಕ್ಕಳಿಗೆ ಯಾವ ರೀತಿಯ ವೇಷಭೂಷಣ ತೊಡಿಸುವುದು ಎಂದು ಯೋಚಿಸುತ್ತಿದ್ದರೆ ಇಲ್ಲಿ ಕೆಲವು ಐಡಿಯಾಗಳನ್ನು ನೀಡಲಾಗಿದೆ.

ಮಕ್ಕಳಿಗಾಗಿ ಫ್ಯಾನ್ಸಿ ಡ್ರೆಸ್ ಐಡಿಯಾಗಳು

ಕೃಷ್ಣ, ಹನುಮಂತ ದೇವರ ವೇಷಭೂಷಣ: ಮಕ್ಕಳಿಗೆ ಶ್ರೀ ಕೃಷ್ಣ ಎಂದರೆ ಬಹಳ ಅಚ್ಚುಮೆಚ್ಚು. ಹೀಗಾಗಿ ಮಕ್ಕಳಿಗೆ ಶ್ರೀಕೃಷ್ಣನ ವೇಷಭೂಷಣವನ್ನು ತೊಡಿಸಬಹುದು. ಅಲ್ಲದೆ, ಹನುಮಂತ, ಶ್ರೀರಾಮಚಂದ್ರ, ಸೀತೆ, ಲಕ್ಷ್ಮೀದೇವಿ, ಶಿವ ಇತ್ಯಾದಿ ದೇವರ ವೇಷಭೂಷಣವನ್ನು ತೊಡಿಸಬಹುದು.

ರೈತ: ದೇಶದ ಬೆನ್ನೆಲುಬು ನಮ್ಮ ಅನ್ನದಾತರು. ನಾವು ಊಟ ಮಾಡುವ ಪ್ರತಿ ಅಗಳಿನಲ್ಲೂ ರೈತರ ಶ್ರಮವಿದೆ. ಹಗಲು-ರಾತ್ರಿಯೆನ್ನದೆ ಬೆವರು ಸುರಿಸಿ ಅನ್ನ ನೀಡುವ ರೈತನ ವೇಷಭೂಷಣವನ್ನು ತೊಡಬಹುದು. ಇದರಿಂದ ಮಕ್ಕಳಿಗೆ ಊಟದ ಬಗ್ಗೆ ರೈತರ ಬಗ್ಗೆ ತಿಳುವಳಿಕೆ ಉಂಟಾಗುತ್ತದೆ.

ಏಂಜೆಲ್ (ದೇವತೆ): ಹೆಣ್ಣುಮಕ್ಕಳಿಗೆ ಈ ವೇಷಭೂಷಣವನ್ನು ತೊಡಿಸಬಹುದು. ಬಿಳಿ ಬಣ್ಣದ ಉಡುಪು ಧರಿಸಿ ಅದಕ್ಕೆ ಹಿಂದೆ ರೆಕ್ಕೆಗಳನ್ನು ಜೋಡಿಸಲಾಗಿರುವ ವೇಷಭೂಷಣವನ್ನು ತೊಟ್ಟು, ಕೈಯಲ್ಲಿ ಮಾಂತ್ರಿಕ ದಂಡವನ್ನು ಹಿಡಿದು ನಿಂತರೆ ನಿಮ್ಮ ಮಗು ಸುಂದರವಾದ ಏಂಜೆಲ್ ಆಗಿ ಕಂಗೊಳಿಸುತ್ತಾಳೆ.

ಸ್ವಾತಂತ್ರ್ಯ ಹೋರಾಟಗಾರರ ವೇಷಭೂಷಣ: ಸ್ವಾತಂತ್ರ್ಯ ಹೋರಾಟಗಾರರಂತೆ ವೇಷಭೂಷಣ ತೊಡಿಸುವುದರಿಂದ ಮಕ್ಕಳಿಗೆ ಸ್ವಾತಂತ್ರ್ಯ ಹೋರಾಟಗಾರರ ಬಗ್ಗೆ ಮತ್ತು ಸ್ವಾತಂತ್ರ್ಯದ ಮಹತ್ವದ ಬಗ್ಗೆ ತಿಳಿಯಬಹುದಾಗಿದೆ. ಮಹಾತ್ಮ ಗಾಂಧಿ, ರಾಣಿ ಲಕ್ಷ್ಮೀಬಾಯಿ, ಭಗತ್ ಸಿಂಗ್, ಸುಭಾಷ್ ಚಂದ್ರ ಬೋಸ್ ಸೇರಿದಂತೆ ಯಾವುದೇ ಸ್ವಾತಂತ್ರ್ಯ ಹೋರಾಟಗಾರರ ವೇಷಭೂಷಣವನ್ನು ತೊಡಬಹುದು.

ಶರಣರು: 12ನೇ ಶತಮಾನದಲ್ಲಿ ಸಾಮಾಜಿಕ ಸಮಾನತೆಗಾಗಿ ಹೋರಾಡಿದ ಶರಣರ ವೇಷಭೂಷಣವನ್ನು ತೊಡಬಹುದು. ಅಲ್ಲಮ ಪ್ರಭು, ಬಸವಣ್ಣ, ಅಂಬಿಗರ ಚೌಡಯ್ಯ, ಅಕ್ಕಮಹಾದೇವಿ ಸೇರಿ ಪ್ರಮುಖ ಶರಣರ ವೇಷಭೂಷಣಗಳನ್ನು ತೊಡಬಹುದು.

ಪ್ರಾಣಿ-ಪಕ್ಷಿಗಳು, ಪ್ರಕೃತಿ: ಮಕ್ಕಳಿಗೆ ತಮ್ಮ ನೆಚ್ಚಿನ ಪ್ರಾಣಿಗಳ ವೇಷಭೂಷಣಗಳನ್ನು ತೊಡಿಸಬಹುದು. ಅದು ಘರ್ಜಿಸುವ ಸಿಂಹವಾಗಿರಲಿ, ಕರಡಿ, ಹುಲಿ, ಮುದ್ದಾದ ಮೊಲ, ಆನೆ, ನಾಯಿ, ಬೆಕ್ಕು, ಚಿಟ್ಟೆ, ನವಿಲು ಸೇರಿದಂತೆ ಯಾವುದೇ ಪ್ರಾಣಿ-ಪಕ್ಷಿಗಳ ವೇಷಭೂಷಣ ತೊಡಬಹುದು. ಪ್ರಕೃತಿ ವಿಚಾರಕ್ಕೆ ಬಂದರೆ ಹೂವುಗಳು ಅಥವಾ ಮರಗಳಂತಹ ವೇಷಭೂಷಣಗಳನ್ನು ತೊಡಬಹುದು.

ಯೋಗ ತರಬೇತುದಾರ: ಈ ವೇಷಭೂಷಣ ತೊಡಿಸುವುದು ತುಂಬಾನೇ ಸರಳ. ಬಿಳಿ ಬಣ್ಣದ ಟೀ ಶರ್ಟ್ ಹಾಗೂ ಕಪ್ಪು ಬಣ್ಣದ ಪ್ಯಾಂಟ್ ತೊಟ್ಟರೆ ಸಾಕು. ಜತೆಗೆ ಯೋಗ ಮ್ಯಾಟ್ ತೆಗೆದುಕೊಂಡು ಹೋಗಬಹುದು.

ಸೈನಿಕ: ನಾವಿಂದು ನೆಮ್ಮದಿಯ ನಿದ್ದೆ ಮಾಡುತ್ತಿದ್ದೇವೆ ಎಂದರೆ ಅದಕ್ಕೆ ಕಾರಣ ನಮ್ಮ ಯೋಧರು. ಹೀಗಾಗಿ ಮಕ್ಕಳಿಗೆ ನಮ್ಮ ಹೆಮ್ಮೆಯ ಯೋಧರ ಬಗ್ಗೆ ತಿಳಿಸುವ ಸಲುವಾಗಿ ಸೈನಿಕರ ವೇಷಭೂಷಣವನ್ನು ತೊಡಿಸಬಹುದು.

ಅಜ್ಜ-ಅಜ್ಜಿ: ಒಂದು ಕುಟುಂಬ ವಿಚಾರಕ್ಕೆ ಬಂದಾಗ ಅಪ್ಪ-ಅಮ್ಮ ಮಾತ್ರವಲ್ಲದೆ ಅಜ್ಜ-ಅಜ್ಜಿಯೂ ತುಂಬಾನೇ ಮುಖ್ಯ. ಮೊಮ್ಮಕ್ಕಳನ್ನು ಮುದ್ದಾಗಿ ನೋಡುವ ಅಜ್ಜ-ಅಜ್ಜಿಯಂದಿರ ವೇಷಭೂಷಣ ತೊಡಬಹುದು. ಅಜ್ಜನ ಪಾತ್ರಧಾರಿಯಾಗಿದ್ದರೆ ಒಂದು ಹಳೆ ಶರ್ಟ್ ಅಥವಾ ಶರ್ಟ್ ಇಲ್ಲದಿದ್ದರೂ ಸರಿ. ಒಂದು ಸಣ್ಣ ತುಂಡು ಟವೆಲ್ ಸುತ್ತಿಕೊಳ್ಳಬಹುದು. ಮೇಮೇಲೆ, ತಲೆಗೂದಲು, ಹುಬ್ಬ ಎಲ್ಲವನ್ನೂ ಬಿಳಿ ಬಣ್ಣದಲ್ಲಿ ಮರೆಮಾಡಬೇಕು. ಕೈಯಲ್ಲೊಂದು ಕೋಲು ಹಿಡಿದು ನಡೆದುಕೊಂಡು ಬರಬಹುದು. ಅಜ್ಜಿಯ ಪಾತ್ರಧಾರಿಯಾದರೆ ಸೀರೆಯನ್ನುಟ್ಟು, ಕೋಲು ಹಿಡಿದುಕೊಂಡು ವೀಳ್ಯದೆಲೆ, ಅಡಿಕೆ ಜಜ್ಜುವ ಪಾತ್ರವನ್ನು ಮಾಡಬಹುದು.

ಖ್ಯಾತ ವೃತ್ತಿಪರರ ವೇಷಭೂಷಣ: ಮಕ್ಕಳಲ್ಲಿ ಮುಂದೇನು ಆಗಲು ಬಯಸುವಿರಿ ಎಂದು ಕೇಳಿದಾಗ ಡಾಕ್ಟರ್, ಪೊಲೀಸ್ ಹೀಗೆ ತಾವು ಹೆಚ್ಚಾಗಿ ನೋಡುವಂಥ ವೃತ್ತಿಪರರ ಬಗ್ಗೆಯೇ ಹೇಳುತ್ತಾರೆ. ಹಾಗೆಯೇ ಅವರನ್ನು ಅನುಕರಿಸಲು ಇಷ್ಟಪಡುತ್ತಾರೆ. ವೈದ್ಯರು, ಅಗ್ನಿಶಾಮಕ ದಳ, ಪೊಲೀಸ್ ಅಧಿಕಾರಿಗಳು ಮತ್ತು ಗಗನಯಾತ್ರಿಗಳಂತಹ ವೇಷಭೂಷಣಗಳು ಮಕ್ಕಳನ್ನು ಪ್ರೇರೇಪಿಸಬಹುದು. ಈ ವೇಷಭೂಷಣಗಳು ಕೇವಲ ಮೋಜು ಮಾತ್ರವಲ್ಲದೆ ವಿವಿಧ ವೃತ್ತಿಗಳ ಬಗ್ಗೆ ಮಕ್ಕಳಿಗೆ ಕಲಿಯಲು ಪ್ರೋತ್ಸಾಹಿಸುತ್ತವೆ.

ಸಾಂತಾ ಕ್ಲಾಸ್ ವೇಷಭೂಷಣ: ಸಾಂತಾ ಕ್ಲಾಸ್ ಎಂದರೆ ನೆನಪಿಗೆ ಬರುವುದೇ ಕ್ರಿಸ್ಮಸ್. ಕ್ರಿಸ್ಮಸ್ ಹಬ್ಬದಲ್ಲಿ ಸಾಂತಾ ಕ್ಲಾಸ್ ಕೆಂಪು ಉಡುಗೆ ತೊಟ್ಟು ಮಕ್ಕಳಿಗೆ ಉಡುಗೊರೆ ನೀಡುತ್ತಿದ್ದರಂತೆ. ಇವರ ಸವಿನೆನಪಿಗಾಗಿ ಇಂದಿಗೂ ಈ ಹಬ್ಬದಂದು ಪ್ರಪಂಚದಾದ್ಯಂತ ಅನೇಕ ಜನರು ಈ ವೇಷಭೂಷಣ ತೊಡುತ್ತಾರೆ. ಮಕ್ಕಳ ದಿನಾಚರಣೆಯ ಫ್ಯಾನ್ಸಿ ಡ್ರೆಸ್ ಸ್ಪರ್ಧೆಗೆ ಸಾಂತಾ ಕ್ಲಾಸ್ ವೇಷಭೂಷಣ ತೊಟ್ಟು, ಮೋಜು ಮಾಡಬಹುದು.

ಆಹಾರ ವೇಷಭೂಷಣಗಳು: ಆಹಾರಕ್ಕೆ ಸಂಬಂಧಿಸಿದ ಉಡುಗೆಗಳನ್ನು ತೊಡಬಹುದು. ಪಿಜ್ಜಾ, ಹಣ್ಣುಗಳು, ಕೋನ್ ಐಸ್ ಕ್ರೀಂ, ಕಪ್ ಕೇಕ್, ಲಾಲಿಪಪ್, ಕುಕ್ಕೀಸ್ ಅಥವಾ ಡೋನಟ್ ಇತ್ಯಾದಿ ಆಹಾರಗಳ ಉಡುಗೆಗಳನ್ನು ತೊಡಬಹುದು.

ವಿಭಾಗ

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ