Children's Day Speech: ಮಕ್ಕಳ ದಿನಾಚರಣೆಗೆ ಶಾಲಾ ವಿದ್ಯಾರ್ಥಿಗಳಿಗಾಗಿ ಇಲ್ಲಿದೆ ಸರಳ ಭಾಷಣ
ಕನ್ನಡ ಸುದ್ದಿ  /  ಜೀವನಶೈಲಿ  /  Children's Day Speech: ಮಕ್ಕಳ ದಿನಾಚರಣೆಗೆ ಶಾಲಾ ವಿದ್ಯಾರ್ಥಿಗಳಿಗಾಗಿ ಇಲ್ಲಿದೆ ಸರಳ ಭಾಷಣ

Children's Day Speech: ಮಕ್ಕಳ ದಿನಾಚರಣೆಗೆ ಶಾಲಾ ವಿದ್ಯಾರ್ಥಿಗಳಿಗಾಗಿ ಇಲ್ಲಿದೆ ಸರಳ ಭಾಷಣ

Children's day speech in kannada: ಮಕ್ಕಳ ದಿನಾಚರಣೆ ಅಂಗವಾಗಿ ಶಾಲೆಗಳಲ್ಲಿ ವೇಷಭೂಷಣ, ಭಾಷಣ, ಪ್ರಬಂಧ, ಚಿತ್ರಕಲೆ, ಗಾಯನ, ನೃತ್ಯ ಸೇರಿದಂತೆ ವಿವಿಧ ವಿಶೇಷ ಸ್ಪರ್ಧೆಗಳನ್ನು ಆಯೋಜಿಸಲಾಗುತ್ತದೆ. ವಿಜೇತ ಮಕ್ಕಳಿಗೆ ಬಹುಮಾನಗಳನ್ನು ನೀಡಲಾಗುತ್ತದೆ. ನಾವಿಲ್ಲಿ ಮಕ್ಕಳಿಗಾಗಿ ಸರಳ ಭಾಷಣವೊಂದನ್ನು ಸಿದ್ಧಪಡಿಸಿದ್ದೇವೆ. ಮಕ್ಕಳು ಇದರ ಸದುಪಯೋಗ ಪಡೆಯಬಹುದು.

 ಮಕ್ಕಳ ದಿನಾಚರಣೆ
ಮಕ್ಕಳ ದಿನಾಚರಣೆ

ಭಾರತದಲ್ಲಿ ಪ್ರತಿ ವರ್ಷ ನವೆಂಬರ್ 14ರಂದು ಮಕ್ಕಳ ದಿನಾಚರಣೆಯನ್ನಾಗಿ ಆಚರಿಸಲಾಗುತ್ತದೆ. ಇದು ಭಾರತದ ಮೊದಲ ಪ್ರಧಾನಿ ಪಂಡಿತ್ ಜವಾಹರಲಾಲ್ ನೆಹರು ಹುಟ್ಟಿದ ದಿನ. ಆದರೆ ಈ ದಿನವನ್ನು ಅವರು ಮಕ್ಕಳಿಗಾಗಿಯೇ ಸಮರ್ಪಿಸಿಟ್ಟಿದ್ದು, ಅವರ ಜನ್ಮದಿನವನ್ನು ಮಕ್ಕಳ ದಿನವನ್ನಾಗಿ ಆಚರಿಸುತ್ತಾ ಬರಲಾಗಿದೆ.

ಈ ದಿನದಂದು ಶಾಲೆಗಳಲ್ಲಿ ಮಕ್ಕಳಿಗಾಗಿ ವೇಷಭೂಷಣ, ಭಾಷಣ, ಪ್ರಬಂಧ, ಚಿತ್ರಕಲೆ, ಗಾಯನ, ನೃತ್ಯ ಸೇರಿದಂತೆ ವಿವಿಧ ವಿಶೇಷ ಸ್ಪರ್ಧೆಗಳನ್ನು ಆಯೋಜಿಸಲಾಗುತ್ತದೆ. ವಿಜೇತ ಮಕ್ಕಳಿಗೆ ಬಹುಮಾನಗಳನ್ನು ನೀಡಲಾಗುತ್ತದೆ. ನಾವಿಲ್ಲಿ ಮಕ್ಕಳಿಗಾಗಿ ಸರಳ ಭಾಷಣವೊಂದನ್ನು ಸಿದ್ಧಪಡಿಸಿದ್ದೇವೆ. ಮಕ್ಕಳು ಇದರ ಸದುಪಯೋಗ ಪಡೆಯಬಹುದು.

ಹೀಗಿದೆ ಭಾಷಣ..

"ವೇದಿಕೆಯ ಮೇಲಿರುವ ಗಣ್ಯರೇ, ಶಿಕ್ಷಕರೇ, ಬೋಧಕೇತರ ಸಿಬ್ಬಂದಿ ವರ್ಗದವರೇ ಹಾಗೂ ನನ್ನ ಆತ್ಮೀಯ ಸ್ನೇಹಿತರೇ. ನಿಮ್ಮೆಲ್ಲರಿಗೂ ಮಕ್ಕಳ ದಿನಾಚರಣೆಯ ಶುಭಾಶಯಗಳು..

ಇಂದು ಸ್ವತಂತ್ರ ಭಾರತದ ಮೊದಲ ಪ್ರಧಾನಿ ಪಂಡಿತ್ ಜವಾಹರಲಾಲ್ ನೆಹರು ಅವರ 133ನೇ ಜನ್ಮದಿನ. ಇವರಿಗೆ ಮಕ್ಕಳೆಂದರೆ ತುಂಬಾ ಪ್ರೀತಿ. ಮಕ್ಕಳು ಕೂಡ ಇವರನ್ನು ಚಾಚಾ ನೆಹರೂ ಎಂದು ಪ್ರೀತಿಯಿಂದ ಕರೆಯುತ್ತಿದ್ದರು. ನೆಹರೂ ಅವರು 1889ರ ನವೆಂಬರ್‌ 14ರಂದು ಉತ್ತರ ಪ್ರದೇಶದ ಅಲಹಾಬಾದ್‌ನಲ್ಲಿ ಜನಿಸಿದರು.

ಮಕ್ಕಳ ಬಗ್ಗೆ ಅಪಾರವಾದ ಪ್ರೀತಿ ಮತ್ತು ವಾತ್ಸಲ್ಯವನ್ನು ಹೊಂದಿದ್ದ ನೆಹರೂ ಅವರು ಮಕ್ಕಳನ್ನು ರಾಷ್ಟ್ರದ ನಿಜವಾದ ಶಕ್ತಿ ಮತ್ತು ಸಮಾಜದ ಅಡಿಪಾಯ ಎಂದು ಪರಿಗಣಿಸಿದ್ದರು. ಭಾರತದ ಮಕ್ಕಳಿಗೆ ಅಗತ್ಯ ಶಿಕ್ಷಣ ಕೊಡಿಸಬೇಕೆಂಬುದು ಅವರ ಧ್ಯೇಯವಾಗಿತ್ತು. ಮಕ್ಕಳ ಮೇಲಿನ ಪ್ರೀತಿಗೆ ಇವರು ತಮ್ಮ ಜನ್ಮದಿನವನ್ನು ಮಕ್ಕಳ ದಿನವಾಗಿ ಆಚರಿಸಲು ಹೇಳಿದ್ದರು. ಅಂದಿನಿಂದಲೂ ಜವಾಹರಲಾಲ್ ನೆಹರು ಅವರ ಹುಟ್ಟಿದ ದಿನವನ್ನು ಮಕ್ಕಳ ದಿನವನ್ನಾಗಿ ಆಚರಿಸಿಕೊಂಡು ಬರಲಾಗಿದೆ.

ನೆಹರೂ ಅವರು ಭಾರತದ ಪ್ರಧಾನಿ ಆಗುವ ಮುನ್ನ ಭಾರತವನ್ನು ಬ್ರಿಟಿಷರಿಂದ ಮುಕ್ತಗೊಳಿಸುವ ಸ್ವಾತಂತ್ರ್ಯ ಹೋರಾಟದಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಇವರ ನಾಯಕತ್ವದ ಸಾಮರ್ಥ್ಯವನ್ನು ಗಮನದಲ್ಲಿಟ್ಟುಕೊಂಡು 1947 ರಲ್ಲಿ ದೇಶಕ್ಕೆ ಸ್ವಾತಂತ್ರ್ಯ ಬಂದ ನಂತರ ಇವರನ್ನು ಭಾರತದ ಪ್ರಧಾನಿಯಾಗಿ ಮಾಡಲಾಯಿತು.

ಇಂದಿನ ಮಕ್ಕಳು ನಾಳಿನ ಭಾರತವನ್ನು ಕಟ್ಟುತ್ತಾರೆ, ನಾವು ಮಕ್ಕಳನ್ನು ಎಷ್ಟು ಚೆನ್ನಾಗಿ ನೋಡಿಕೊಳ್ಳುತ್ತೇವೆಯೋ ಅಷ್ಟು ಉತ್ತಮ ರಾಷ್ಟ್ರ ನಿರ್ಮಾಣವಾಗುತ್ತದೆ ಎಂದು ಚಾಚಾ ನೆಹರೂ ಯಾವಾಗಲೂ ಹೇಳುತ್ತಿದ್ದರು. ಹೀಗಾಗಿ ಮಕ್ಕಳ ರಕ್ಷಣೆ ಹಾಗೂ ಮಕ್ಕಳ ಶಿಕ್ಷಣದ ಹಕ್ಕಿನ ರಕ್ಷಣೆ ನಮ್ಮೆಲ್ಲರ ಹೊಣೆಯಗಿದೆ. ಬಾಲಕಾರ್ಮಿಕ ಪದ್ಧತಿಯಿಂದ ಅವರನ್ನು ರಕ್ಷಿಸುವುದು, ಅವರಿಗೆ ಉತ್ತಮ ಶಿಕ್ಷಣ ಕೊಡಿಸುವುದು, ಮಕ್ಕಳ ಮೇಲಿನ ದೌರ್ಜನ್ಯಗಳನ್ನು ತಡೆಯುವುದು, ಎಲ್ಲಾ ವರ್ಗದ ಮಕ್ಕಳಿಗೆ ಸಮಾನ ಅವಕಾಶ ಕಲ್ಪಿಸುವುದು ಎಲ್ಲರ ಜವಾಬ್ದಾರಿಯಾಗಿದೆ.

'Tomorrow is Yours', ಅಂದರೆ 'ನಾಳೆ ನಿಮ್ಮದು' ಎಂದು ನೆಹರೂ ಅವರು ಮಕ್ಕಳಿಗೆ ಹೇಳುತ್ತಿದ್ದರು. ಹೌದು ನಾಳೆ ನಮ್ಮದೇ. ಭವಿಷ್ಯದಲ್ಲಿ ಏನಾದರೂ ಸಾಧಿಸಿ ಈ ಮಾತನ್ನು ಉಳಿಸಿಕೊಳ್ಳೋಣ ಎಂದು ಹೇಳುತ್ತಾ ನನ್ನ ಈ ಪುಟ್ಟ ಭಾಷಣ ಮುಗಿಸುತ್ತಿದ್ದೇನೆ. ಅವಕಾಶಕ್ಕಾಗಿ ಎಲ್ಲರಿಗೂ ಧನ್ಯವಾದಗಳು.."

Whats_app_banner