Deepavali 2023: ಧನ್ ತೆರೆಸ್ ಎಂದರೇನು, ಈ ದಿನ ಚಿನ್ನ ಬೆಳ್ಳಿ ಖರೀದಿಸುವುದೇಕೆ, ಪೂಜೆಗೆ ಶುಭ ಮುಹೂರ್ತ ಯಾವುದು? ಇಲ್ಲಿದೆ ಮಾಹಿತಿ
Nov 09, 2023 05:45 AM IST
ದೀಪಾವಳಿ ಹಬ್ಬದ ಮೊದಲ ದಿನ ಧನ್ ತೆರೆಸ್ ಆಚರಣೆ
Deepavali 2023: ಧನ್ ಎಂದರೆ ಸಂಪತ್ತು, ತೆರೆಸ್ ಎಂದರೆ ಕೃಷ್ಣಪಕ್ಷದ 13ನೇ ದಿನ ಎಂದರ್ಥ. ಚಿನ್ನ, ಚಿನ್ನದ ಆಭರಣಗಳು, ಬೆಳ್ಳಿ, ಹೊಸ ಪಾತ್ರೆಗಳು ಸೇರಿದಂತೆ ಮನೆಗೆ ಅವಶ್ಯವಿರುವ ವಸ್ತುಗಳನ್ನು ಖರೀದಿಸಲು ಉತ್ತಮ ದಿನ. ಈ ದಿನ ಶಾಪಿಂಗ್ ಮಾಡಿದರೆ ಮನೆಗೆ ಇನ್ನಷ್ಟು ಸಂಪತ್ತು, ಸುಖ, ಸಮೃದ್ಧಿ ಹರಿದು ಬರಲಿದೆ ಎಂದು ನಂಬಲಾಗಿದೆ.
Deepavali 2023: ಬೆಳಕಿನ ಹಬ್ಬ ದೀಪಾವಳಿಗೆ ಇನ್ನು 2 ದಿನಗಳಷ್ಟೇ ಬಾಕಿ ಇದೆ. ಐದು ದಿನಗಳ ಈ ಹಬ್ಬವನ್ನು ದೇಶಾದ್ಯಂತ ವಿಜೃಂಭಣೆಯಿಂದ ಆಚರಿಸಲಾಗುತ್ತದೆ. ಉತ್ತರ ಭಾರತದಲ್ಲಿ ದೀಪಾವಳಿಯ ಮೊದಲ ದಿನವನ್ನು 'ಧನ್ ತೆರೆಸ್' ಹೆಸರಿನಲ್ಲಿ ಆಚರಿಸಲಾಗುತ್ತದೆ. ಈ ವರ್ಷ ನವೆಂಬರ್ 10 ರಂದು ಧನ್ ತೆರೆಸ್ ಆಚರಿಸಲಾಗುತ್ತದೆ.
ಸಾಮಾನ್ಯವಾಗಿ ಅಕ್ಷಯ ತೃತೀಯದಂದು ಚಿನ್ನ ಖರೀದಿಸಿದರೆ ಮನೆಗೆ ಒಳ್ಳೆಯದು ಎಂಬ ನಂಬಿಕೆ. ಇದೆ ದೀಪಾವಳಿಯಂದು ಕೂಡಾ ಚಿನ್ನ ಖರೀದಿಸಲಾಗುತ್ತದೆ. ಈ ಬಾರಿಯ ಧನ್ ತೆರೆಸ್ ಶುಭ ಮುಹೂರ್ತ, ಪೂಜಾ ವಿಧಿ, ಸಮಯ, ಶಾಪಿಂಗ್‌ಗೆ ಶುಭ ಮುಹೂರ್ತ ಯಾವುದು ಎಂಬುದರ ಬಗ್ಗೆ ಇಲ್ಲಿ ಮಾಹಿತಿ ಇದೆ.
ಧನ್ ತೆರೆಸ್ ದಿನ ಚಿನ್ನ, ಬೆಳ್ಳಿ ಖರೀದಿಗೆ ಉತ್ತಮ ದಿನ
ಧನ್ ತೆರೆಸ್, ಧನತ್ರಯೋದಶಿ ಎಂದೂ ಕರೆಯಲಾಗುತ್ತದೆ. ಧನ್ ತರೆಸ್‌ನಿಂದ ಆರಂಭವಾಗುವ ದೀಪಾವಳಿ, ಭಾಯ್ ದೂಜ್ ಮೂಲಕ ಅಂತ್ಯವಾಗುತ್ತದೆ. ಧನ್ ಎಂದರೆ ಸಂಪತ್ತು, ತೆರೆಸ್ ಎಂದರೆ ಕೃಷ್ಣಪಕ್ಷದ 13ನೇ ದಿನ ಎಂದರ್ಥ. ಧನ್ ತೆರೆಸ್ ಚಿನ್ನ, ಚಿನ್ನದ ಆಭರಣಗಳು, ಬೆಳ್ಳಿ, ಹೊಸ ಪಾತ್ರೆಗಳು ಸೇರಿದಂತೆ ಮನೆಗೆ ಅವಶ್ಯವಿರುವ ವಸ್ತುಗಳನ್ನು ಖರೀದಿಸಲು ಉತ್ತಮ ದಿನ. ಈ ದಿನ ಶಾಪಿಂಗ್ ಮಾಡಿದರೆ ಮನೆಗೆ ಇನ್ನಷ್ಟು ಸಂಪತ್ತು, ಸುಖ, ಸಮೃದ್ಧಿ ಹರಿದು ಬರಲಿದೆ, ಲಕ್ಷ್ಮಿಯು ಧನವಂತ್ರಿ ಜೊತೆಗೆ ನಮ್ಮ ಮನೆಗೆ ಬಂದು ನೆಲೆಸುತ್ತಾಳೆ ಎಂದು ನಂಬಲಾಗಿದೆ. ಈ ವಿಶೇಷ ದಿನದಂದು ಲಕ್ಷ್ಮೀ ಹಾಗೂ ಕುಬೇರನನ್ನು ಪೂಜಿಸಲಾಗುತ್ತದೆ. ಚಿನ್ನ, ಬೆಳ್ಳಿ ಮಾತ್ರವಲ್ಲದೆ ಜನರು ತಮ್ಮ ಶಕ್ತ್ಯಾನುಸಾರ ತಾಮ್ರ, ಹಿತ್ತಾಳೆ, ಕಂಚಿನ ಪಾತ್ರೆಗಳನ್ನು ಈ ದಿನ ಖರೀದಿಸುತ್ತಾರೆ. ಇನ್ನೂ ಕೆಲವರು ವಾಹನ, ಫೋನ್, ಲ್ಯಾಪ್‌ಟಾಪ್, ರೆಫ್ರಿಜರೇಟರ್, ಮೈಕ್ರೋವೇವ್ ಅವನ್, ಪೊರಕೆ, ಹೊಸ ಬಟ್ಟೆಗಳನ್ನು ಕೂಡಾ ಶಾಪಿಂಗ್ ಮಾಡುತ್ತಾರೆ.
ಶಾಪಿಂಗ್ ಮಾಡಲು ಶುಭ ಮುಹೂರ್ತ
ಸಂಜೆ 5:46 ರಿಂದ 7:42 ಅವಧಿಯಲ್ಲಿ ನೀವು ಶಾಪಿಂಗ್ ಮಾಡಲು ಉತ್ತಮ ಸಮಯ. ಹಾಗೇ ಇದೇ ಸಮಯದಲ್ಲಿ ನೀವು ದಾನ ಮಾಡಿದರೆ ಅದೂ ಕೂಡಾ ಶ್ರೇಯಸ್ಸು.
ಧನ್ ತೆರೆಸ್ ಶುಭ ಮುಹೂರ್ತ ಹಾಗೂ ಪೂಜಾ ಸಮಯ
ದ್ರಿಕ್ ಪಂಚಾಂಗದ ಪ್ರಕಾರ ನವೆಂಬರ್ 10 ರಂದು ಸಂಜೆ 5:47 ರಿಂದ 7:43ವರೆಗೆ ಶುಭ ಮುಹೂರ್ತವಿದೆ. ಒಟ್ಟು 1 ಗಂಟೆ 56 ನಿಮಿಷದ ಅವಧಿಯಲ್ಲಿ ನೀವು ಪೂಜೆ ಮಾಡಬಹುದು.
ಪ್ರದೋಷ ಕಾಲ: ಸಂಜೆ 5:30 ರಿಂದ 8:08 ವರೆಗೆ, ಈ ಸಮಯದಲ್ಲಿ ಲಕ್ಷ್ಮೀ ಪೂಜೆ ಮಾಡಲು ಶುಭ ಮುಹೂರ್ತವಿದೆ.
ವೃಷಭ ಕಾಲ: ಸಂಜೆ 5:47 ರಿಂದ 7:43
ನವೆಂಬರ್ 10 ಮಧ್ಯಾಹ್ನ 12:35ಕ್ಕೆ ತ್ರಯೋದಶಿ ತಿಥಿ ಆರಂಭವಾಗಿ ನವೆಂಬರ್ 11 ರಂದು ಮಧ್ಯಾಹ್ನ 1:57 ಕ್ಕೆ ಕೊನೆಯಾಗಲಿದೆ.
ಪ್ರಮುಖ ನಗರಗಳಲ್ಲಿ ಧನ್ ತೆರೆಸ್ ಶುಭ ಮುಹೂರ್ತದ ಸಮಯ ಹೀಗಿದೆ
ಬೆಂಗಳೂರು - ಸಂಜೆ 6:10 ರಿಂದ 8:13
ಹೈದರಾಬಾದ್ - ಸಂಜೆ 6:00 ರಿಂದ 8:01
ಚೆನ್ನೈ - ಸಂಜೆ 6:00 ರಿಂದ 8:02
ನವ ದೆಹಲಿ - ಸಂಜೆ 5:47 ರಿಂದ 7:43
ಮುಂಬೈ - ಸಂಜೆ 6:20 ರಿಂದ 8:20
ಧನ್ ತೆರೆಸ್ ಪೂಜಾ ವಿಧಿ
ಧನ್ ತೆರೆಸ್ ವಿಶೇಷ ದಿನದಂದು ಪ್ರದೋಶ ಉಪವಾಸ ಮಾಡಬೇಕು. ಈ ದಿನ ಚಿನ್ನ, ಬೆಳ್ಳಿ ಮಾತ್ರವಲ್ಲದೆ ಅನೇಕರು ತಾಮ್ರ, ಕಂಚು ಪದಾರ್ಥಗಳನ್ನು ಕೂಡಾ ಖರೀದಿಸುತ್ತಾರೆ. ಅದರಲ್ಲಿ ನೀರು ಅಥವಾ ಆಹಾರವನ್ನು ತುಂಬಿಸಿ ಮನೆ ಒಳಗೆ ಹೋಗುತ್ತಾರೆ. ಜೊತೆಗೆ ಮಣ್ಣಿನ ಲಕ್ಷ್ಮಿ ಹಾಗೂ ಗಣೇಶ ಮೂರ್ತಿಯನ್ನು ಖರೀದಿಸಿದರೆ ಶುಭ ಎಂದು ನಂಬಲಾಗಿದೆ. ಈ ದಿನ ಮನೆ ಮುಂಭಾಗ 4 ಮಣ್ಣಿನ ಹಣತೆಯನ್ನು ಬೆಳಗಲಾಗುತ್ತದೆ. ದೀಪಗಳನ್ನು ದಾನ ಮಾಡುವುದು ಕೂಡಾ ಸಂಪ್ರದಾಯದ ಭಾಗವಾಗಿದೆ. ಗಣೇಶ ಹಾಗೂ ಲಕ್ಷ್ಮಿಯನ್ನು ದೂಪ, ದೀಪ, ನೈವೇದ್ಯ, ವಿವಿಧ ರೀತಿಯ ಹೂಗಳಿಂದ ಪೂಜಿಸಿ, ಬಡವರಿಗೆ ಸಹಾಯ ಮಾಡಿದರೆ ಲಕ್ಷ್ಮೀ ನಿಮ್ಮ ಮನೆಯಲ್ಲಿ ಶಾಶ್ವತವಾಗಿ ನೆಲೆಸಿರುತ್ತಾಳೆ.