logo
ಕನ್ನಡ ಸುದ್ದಿ  /  ಜೀವನಶೈಲಿ  /  ದೀಪಾವಳಿಗೆ ಇನ್ನೂ ಹಣತೆ ತರೋಕೆ ಆಗಿಲ್ಲ ಅಂತ ಟೆನ್ಷನ್ ಆಗ್ಬೇಡಿ, ಗೋಧಿಹಿಟ್ಟಿನಿಂದ ಮನೆಯಲ್ಲೇ ಚೆಂದದ ದೀಪಗಳನ್ನ ತಯಾರಿಸಬಹುದು ನೋಡಿ

ದೀಪಾವಳಿಗೆ ಇನ್ನೂ ಹಣತೆ ತರೋಕೆ ಆಗಿಲ್ಲ ಅಂತ ಟೆನ್ಷನ್ ಆಗ್ಬೇಡಿ, ಗೋಧಿಹಿಟ್ಟಿನಿಂದ ಮನೆಯಲ್ಲೇ ಚೆಂದದ ದೀಪಗಳನ್ನ ತಯಾರಿಸಬಹುದು ನೋಡಿ

Reshma HT Kannada

Oct 24, 2024 11:05 AM IST

google News

ಗೋಧಿಹಿಟ್ಟಿನಿಂದ ದೀಪ ತಯಾರಿಸುವುದು

    • ದೀಪಾವಳಿ ಹಬ್ಬ ಸಮೀಪಿಸಿದೆ, ಹಬ್ಬದ ದಿನ ಬೆಳಗಿಸಲು ಇನ್ನೂ ದೀಪ ಅಥವಾ ಹಣತೆಯನ್ನ ತಂದಿಲ್ಲ ಅಂತ ಟೆನ್ಷನ್ ಆಗಬೇಡಿ. ಅಡುಗೆಮನೆಯಲ್ಲಿ ಇರುವ ವಸ್ತುಗಳಿಂದ ಸುಂದರವಾದ ದೀಪಗಳನ್ನ ತಯಾರಿಸಬಹುದು. ಗೋಧಿಹಿಟ್ಟಿನಿಂದ ದೀಪ ಮಾಡುವ ಹಂತ ಹಂತದ ವಿವರ ಇಲ್ಲಿದೆ, ನೀವೂ ಟ್ರೈ ಮಾಡಿ.
ಗೋಧಿಹಿಟ್ಟಿನಿಂದ ದೀಪ ತಯಾರಿಸುವುದು
ಗೋಧಿಹಿಟ್ಟಿನಿಂದ ದೀಪ ತಯಾರಿಸುವುದು (PC: Canva)

ಭಾರತದಾದ್ಯಂತ ಬೆಳಕಿನ ಹಬ್ಬದ ಸಂಭ್ರಮ ಶುರುವಾಗಿದೆ. ಇಲ್ಲಿ ನೋಡಿದರೂ ಪಟಾಕಿ ಮಳಿಗೆಗಳು, ಗೂಡುದೀಪಗಳು, ಹಣತೆ, ದೀಪಗಳು ಕಣ್ಣಿಗೆ ಬೀಳುತ್ತಿವೆ. ದೀಪಾವಳಿ ಹಬ್ಬದ ಸಂಪ್ರದಾಯದ ಭಾಗವಾಗಿ ದೀಪಗಳನ್ನು ಬೆಳಗಿಸುವುದು ವಾಡಿಕೆ. ಇದು ಕತ್ತಲೆಯ ವಿರುದ್ಧ ಬೆಳಕಿನ ವಿಜಯವನ್ನು ಸೂಚಿಸುತ್ತದೆ. ಸಾಮಾನ್ಯವಾಗಿ ದೀಪಾವಳಿ ಹಬ್ಬದಲ್ಲಿ ಜೇಡಿಮಣ್ಣಿನ ಹಣತೆಯನ್ನು ಬೆಳಗಿಸುತ್ತಾರೆ.

ನಿಮಗೆ ಮಾರುಕಟ್ಟೆಗೆ ಹೋಗಿ ಹಣತೆ ತರಲು ಸಮಯವಿಲ್ಲ ಎಂದರೆ ಮನೆಯಲ್ಲೇ ಅಡುಗೆಮನೆಯಲ್ಲಿ ಇರುವ ವಸ್ತುಗಳಿಂದ ಹಣತೆಯನ್ನು ತಯಾರಿಸಬಹುದು. ಇದು ಒಂಥರಾ ಸೃಜನಶೀಲ ಹಾಗೂ ಮೋಜಿನ ಚಟುವಟಿಕೆಯಾಗಿದ್ದು, ಮನೆಯವರೆಲ್ಲಾ ಸೇರಿ ಗೋಧಿಹಿಟ್ಟಿನ ದೀಪ ತಯಾರಿಸಿ ದೀಪಾವಳಿ ಹಬ್ಬವನ್ನು ಸಂಭ್ರಮವನ್ನಾಗಿಸಬಹುದು. ಇದು ಬಜೆಟ್‌ ಫ್ರೆಂಡ್ಲಿ ಕೂಡ ಹೌದು. ಈ ವರ್ಷದ ದೀಪಾವಳಿಗೆ ಗೋಧಿಹಿಟ್ಟಿನ ದೀಪ ತಯಾರಿಸಿ, ಇಲ್ಲಿದೆ ದೀಪ ತಯಾರಿಸುವ ಹಂತ ಹಂತದ ವಿಧಾನ.

ದೀಪ ತಯಾರಿಸಲು ಬೇಕಾಗುವ ವಸ್ತುಗಳು

ಗೋಧಿಹಿಟ್ಟು – 1ಕಪ್‌, ನೀರು – ಅಗತ್ಯಕ್ಕೆ ತಕ್ಕಂತೆ, ಎಣ್ಣೆ – 1 ಟೇಬಲ್ ಚಮಚ, ಕಾಟನ್ ಬಟ್ಟೆ ಅಥವಾ ಹತ್ತಿ (ಬತ್ತಿ ತಯಾರಿಸಲು), ದೀಪ ಅಲಂಕರಿಸಲು ಬೇಕಾಗುವ ವಸ್ತುಗಳು – ಪೇಂಟ್‌, ಮಣಿಗಳು, ಚಿಮಕಿ, ಹೂವಿನ ಎಸಳು, ಫುಡ್‌ ಕಲರ್‌

ಗೋಧಿಹಿಟ್ಟಿನ ದೀಪ ತಯಾರಿಸುವ ಹಂತ–ಹಂತ ವಿಧಾನ

ಹಿಟ್ಟನ್ನು ಬೆರೆಸುವ ವಿಧಾನ: ಒಂದು ಅಗಲ ಬೌಲ್‌ನಲ್ಲಿ ಗೋಧಿಹಿಟ್ಟು ಹಾಕಿ. ಇದಕ್ಕೆ ಸ್ವಲ್ಪ ನೀರು ಸೇರಿಸಿ ಹಿಟ್ಟನ್ನು ನಾದಿಕೊಳ್ಳಿ. ಹಿಟ್ಟು ಒಣಗಿದಂತಲೂ ಇರಬಾರದು, ನೀರು ಹೆಚ್ಚಾಗಿ ಕೈಗೆ ಅಂಟಿಕೊಳ್ಳುವಂತೆಯೂ ಇರಬಾರದು. ಗೋಧಿಹಿಟ್ಟಿಗೆ ಆಕಾರ ನೀಡುವಂತೆ ಇರಬೇಕು. ಕೊನೆಯಲ್ಲಿ 1 ಚಮಚ ಎಣ್ಣೆ ಸೇರಿಸಿ. ಇದರಿಂದ ದೀಪಗಳಲ್ಲಿ ಬಿರುಕು ಮೂಡುವುದನ್ನು ತಪ್ಪಿಸಬಹುದು.

ದೀಪಕ್ಕೆ ಆಕಾರ ನೀಡುವುದು: ಸ್ವಲ್ಪ ಹಿಟ್ಟನ್ನು ತೆಗೆದುಕೊಂಡು ಉಂಡೆ ಮಾಡಿ. ಇದನ್ನು ಕೈ ಬೆರಳಿನಿಂದ ಒತ್ತಿ. ಅದರ ಅಂಚುಗಳನ್ನು ಜೋಡಿಸಿ, ಮಧ್ಯದಲ್ಲಿ ದೀಪದ ಆಕಾರ ರೂಪಿಸಿ, ಅಂಚುಗಳಿಗೆ ಸೂಜಿ ಅಥವಾ ಬೆಂಕಿಕಡ್ಡಿ ಸಹಾಯದಿಂದ ಆಕಾರವನ್ನೂ ನೀಡಬಹುದು. ನಿಮಗೆ ಬೇಕಾದ ವಿನ್ಯಾಸವನ್ನೂ ರಚಿಸಬಹುದು. ಆದರೆ ಆಕಾರ ನೀಡುವ ಮುನ್ನ ಹಣತೆ ಒಡೆಯಬಾರದು ನೆನಪಿರಲಿ.

ದೀಪಗಳನ್ನು ಒಣಗಿಸುವುದು: ಒಮ್ಮೆ ದೀಪಕ್ಕೆ ಆಕಾರ ನೀಡಿದ ಮೇಲೆ ಅದನ್ನು 2 ದಿನಗಳ ಕಾಲ ಗಾಳಿಯಲ್ಲಿ ಒಣಗಿಸಬೇಕು. ಬಿಸಿಲಿನಲ್ಲಿ ಒಣಗಿಸಿದರೂ ನಡೆಯುತ್ತದೆ. ಆದರೆ ಅತಿಯಾಗಿ ಬಿಸಿಲಿನಲ್ಲಿ ಒಣಗಿಸಿದರೆ ದೀಪ ಒಡೆಯುವುದು ಅಥವಾ ಬಿರುಕು ಮೂಡುವ ಸಾಧ್ಯತೆ ಇದೆ, ನೆನಪಿರಲಿ.

ದೀಪಗಳಿಗೆ ಅಲಂಕರಿಸುವುದು: ದೀಪಗಳು ಒಣಗಿದ ನಂತರ ನೀವು ಫುಡ್‌ ಕಲರ್, ಮಣಿಗಳಿಂದ ಅಲಂಕಾರ ಮಾಡಬಹುದು. ನೈಸರ್ಗಿಕ ವಿಧಾನಗಳ ಮೂಲಕ ಬಣ್ಣ ಮಾಡಲು ಬಯಸುವವರು ಬೀಟ್ರೂಟ್ ರಸ ಹಾಗೂ ಅರಿಸಿನ ಕೂಡ ಬಳಸಬಹುದು. ಆದರೆ ಅವುಗಳಿಗೆ ಬೆಂಕಿ ತಾಕದಂತೆ ಸುರಕ್ಷಿತವಾಗಿ ಇರಿಸಲು ಹೊರ ಮೈಗೆ ಮಾತ್ರ ಅಲಂಕಾರ ಮಾಡಿ.

5. ಅಲಂಕಾರ ಮುಗಿದ ನಂತರ ಹತ್ತಿ ಬಟ್ಟೆ ಅಥವಾ ಹತ್ತಿ ಉಂಡೆಯ ಸಹಾಯದಿಂದ ಬತ್ತಿ ತಯಾರಿಸಿ. ಇದನ್ನು ದೀಪದಲ್ಲಿ ಇಟ್ಟು ಎಣ್ಣೆ ಹಾಕಿ, ದೀಪಾವಳಿ ಹಬ್ಬದ ದಿನ ದೀಪ ಬೆಳಗಿಸಿ.

ಈ ಗೋಧಿಹಿಟ್ಟಿನ ದೀಪವು ಸಂಪೂರ್ಣ ನೈಸರ್ಗಿಕ ವಿಧಾನವಾಗಿದ್ದು, ಮಾಡುವುದು ಬಹಳ ಸುಲಭ, ಕೇವಲ 2,3 ವಸ್ತುಗಳಿದ್ದರೆ ಈ ಸುಂದ ದೀಪವನ್ನು ತಯಾರಿಸಬಹುದು. ಮನೆಯಲ್ಲೇ ದೀಪ ತಯಾರಿಸಿ, ಹಬ್ಬದ ಸಂಭ್ರಮವನ್ನು ಹೆಚ್ಚಿಸಿ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ