logo
ಕನ್ನಡ ಸುದ್ದಿ  /  ಜೀವನಶೈಲಿ  /  ದೋಸೆಹಿಟ್ಟು ಮಿಕ್ಕಿದೆ ಅಂತ ಚಿಂತೆ ಮಾಡ್ಬೇಡಿ, ಇದ್ರಿಂದ ಸಖತ್ ಟೇಸ್ಟಿ ಆಗಿರೋ ಬೋಂಡ ಮಾಡಬಹುದು, ಹೇಗೆ ಅಂತ ನೋಡಿ

ದೋಸೆಹಿಟ್ಟು ಮಿಕ್ಕಿದೆ ಅಂತ ಚಿಂತೆ ಮಾಡ್ಬೇಡಿ, ಇದ್ರಿಂದ ಸಖತ್ ಟೇಸ್ಟಿ ಆಗಿರೋ ಬೋಂಡ ಮಾಡಬಹುದು, ಹೇಗೆ ಅಂತ ನೋಡಿ

Reshma HT Kannada

Sep 01, 2024 11:18 AM IST

google News

ದೋಸೆಹಿಟ್ಟಿನ ಬೋಂಡಾ

    • ದೋಸೆಗೆಂದು ಮಾಡಿದ ಹಿಟ್ಟು ಉಳಿದಾಗ ಬಹುತೇಕ ಗೃಹಿಣಿಯರು ಬೇಸರಗೊಳ್ಳುತ್ತಾರೆ, ಯಾಕಂದ್ರೆ ಅದ್ರಿಂದ ಪುನಃ ದೋಸೆ ಮಾಡಿದ್ರೆ ಮನೆಯಲ್ಲಿ ಯಾರೂ ತಿನ್ನೊಲ್ಲ. ಆದರೆ ನೀವು ಮಿಕ್ಕಿದ ದೋಸೆ ಹಿಟ್ಟಿನಿಂದ ಈ ರೀತಿ ಬೋಂಡ ಮಾಡಿ. ಯಾರೂ ಕೂಡ ಬೇಡ ಅಂತ ಹೇಳೋಲ್ಲ. ಮತ್ತೂ ಬೇಕು ಅಂತ ತಿಂತಾರೆ ಟ್ರೈ ಮಾಡಿ ನೋಡಿ ಬೇಕಿದ್ರೆ. ದೋಸೆ ಹಿಟ್ಟಿನ ಬೋಂಡಾಕ್ಕೆ ಏನೆಲ್ಲಾ ಬೇಕು ನೋಡಿ.
ದೋಸೆಹಿಟ್ಟಿನ ಬೋಂಡಾ
ದೋಸೆಹಿಟ್ಟಿನ ಬೋಂಡಾ

ದೋಸೆ ಹಲವರಿಗೆ ಇಷ್ಟವಾಗುವ ಖಾದ್ಯ, ಆದರೆ ಪದೇ ಪದೇ ದೋಸೆ ಅಂದ್ರೆ ಖಂಡಿತ ಬೇಸರ ಬರುತ್ತೆ, ಅದರಲ್ಲೂ ದೋಸೆ ಹಿಟ್ಟು ಮಿಕ್ಕಿತು ಅಂತ ಪುನಃ ದೋಸೆ ಮಾಡಿದ್ರೆ ಯಾರಿಗೂ ಇಷ್ಟವಾಗೊಲ್ಲ, ದೋಸೆ ಹಿಟ್ಟಿಗೆ ಈರುಳ್ಳಿ ಕ್ಯಾರೆಟ್ ತುರಿದು ಹಾಕಿ ಈರುಳ್ಳಿ ದೋಸೆ ಅಂತ ಕೊಟ್ರು ಖಂಡಿತ ತಿನ್ನೊಲ್ಲ. ಹಾಗಾಗಿದ್ದಾಗ ನೀವು ದೋಸೆ ಹಿಟ್ಟಿನಿಂದ ಬೋಂಡಾ ತಯಾರಿಸಬಹುದು.

ಇದೇನಪ್ಪಾ ದೋಸೆ ಹಿಟ್ಟಿನ ಬೋಂಡಾನ ಇದ್ಯಾವ ರೆಸಿಪಿ, ಇದನ್ನು ತಯಾರಿಸೋದು ಹೇಗೆ, ಅಂತ ನೀವು ಯೋಚಿಸಿದ್ರೆ ಖಂಡಿತ ಅದಕ್ಕೆ ಉತ್ತರ ಸಿಗುತ್ತೆ, ದೋಸೆ ಹಿಟ್ಟಿನ ಬೋಂಡ ತಯಾರಿಸೋದು ಹೇಗೆ, ಅದಕ್ಕೆ ಏನೆಲ್ಲಾ ಸಾಮಗ್ರಿ ಬೇಕು ಇತ್ಯಾದಿ ವಿವರ ಇಲ್ಲಿದೆ ನೋಡಿ.

ದೋಸೆಹಿಟ್ಟಿನ ಬೋಂಡ ತಯಾರಿಸಲು ಬೇಕಾಗುವ ಸಾಮಗ್ರಿಗಳು

ದೋಸೆ ಹಿಟ್ಟು– 2 ಕಪ್, ಕಡಲೆಹಿಟ್ಟು – 1 ಚಮಚ, ಬೇಯಿಸಿದ ಆಲೂಗೆಡ್ಡೆ – 3, ಈರುಳ್ಳಿ – 1 (ಚಿಕ್ಕದಾಗಿ ಹೆಚ್ಚಿಕೊಳ್ಳಿ), ಸಾಸಿವೆ – 1 ಟೀ ಚಮಚ, ಉದ್ದಿನಬೇಳೆ – 1 ಚಮಚ, ಹಸಿಮೆಣಸು – 2, ಜೀರಿಗೆ – ಅರ್ಧ ಚಮಚ, ಅರಿಶಿನ– ಚಿಟಿಕೆ, ಕರಿಬೇವು – 2 ಎಸಳು, ಕೊತ್ತಂಬರಿ ಸೊಪ್ಪು – ಸ್ವಲ್ಪ, ಉಪ್ಪು – ರುಚಿಗೆ, ಎಣ್ಣೆ – ಕರಿಯಲು

ಬೋಂಡ ತಯಾರಿಸುವ ವಿಧಾನ

ಒಂದು ಚಮಚ ಎಣ್ಣೆ ಬಿಸಿ ಮಾಡಿ ಸಾಸಿವೆ ಮತ್ತು ಉದ್ದಿನಬೇಳೆ ಹಾಕಿ. ಗರಿಗರಿಯಾದಾಗ ಈರುಳ್ಳಿ ಚೂರುಗಳನ್ನು ಸೇರಿಸಿ. ಬೇಯಿಸಿದ ಆಲೂಗಡ್ಡೆ ಸ್ಮ್ಯಾಶ್‌, ಹಸಿಮೆಣಸಿನಕಾಯಿ, ಕರಿಬೇವಿನ ಸೊಪ್ಪು, ಅರಿಸಿನ, ಉಪ್ಪು ಮತ್ತು ಕೊತ್ತಂಬರಿ ಸೊಪ್ಪು ಈ ಎಲ್ಲವನ್ನೂ ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ, ಒಂದೆರಡು ನಿಮಿಷ ಫ್ರೈ ಮಾಡಿ. ಈ ಮಿಶ್ರಣವನ್ನು ಸ್ವಲ್ಪ ಹೊತ್ತು ತಣ್ಣಗಾಗಲು ಬಿಡಿ. ಈಗ ಅಗಲವಾದ ಬಟ್ಟಲಿನಲ್ಲಿ ದೋಸೆ ಹಿಟ್ಟು, ಕಡಲೆಹಿಟ್ಟು ಮತ್ತು ಉಪ್ಪನ್ನು ಹಾಕಿ ಚೆನ್ನಾಗಿ ಕಲೆಸಿ. ಒಲೆಯ ಮೇಲೆ ಕಡಾಯಿ ಇಟ್ಟು ಎಣ್ಣೆ ಸುರಿಯಿರಿ. ಅದು ಬಿಸಿಯಾಗುವ ಮೊದಲು, ತಯಾರಿಸಿದ ಆಲೂಗಡ್ಡೆ ಮಿಶ್ರಣವನ್ನು ದೋಸೆ ಹಿಟ್ಟಿನ ಮಿಶ್ರಣದಲ್ಲಿ ಅದ್ದಿ, ಅದನ್ನು ಬಿಸಿಯಾದ ಎಣ್ಣೆಯಲ್ಲಿ ಹಾಕಿ. ಒಮ್ಮೆ ಅವು ಬಣ್ಣ ಬದಲಾದ ನಂತರ ಹೊರತೆಗೆದು ಚಟ್ನಿಯೊಂದಿಗೆ ತಿನ್ನಲು ಕೊಡಿ. ಇದು ಮೈಸೂರು ಬೋಂಡದಂತೆ ಕಾಣುತ್ತದೆ. ಇದರ ರುಚಿ ಅಂತೂ ತಿಂದೇ ನೋಡಬೇಕು.

ಮಕ್ಕಳು ಸಂಜೆಗೆ ವೇಳೆಗೆ ತಿಂಡಿ ಬೇಕು ಎಂದು ಹಟ ಮಾಡಿದಾಗ ಇದನ್ನು ಮಾಡಿಕೊಡಬಹುದು. ಈ ದೋಸೆಹಿಟ್ಟಿನ ಬೋಂಡಾ ಮಕ್ಕಳಿಂದ ಹಿಡಿದು ದೊಡ್ಡವರವರೆಗೆ ಎಲ್ಲರಿಗೂ ಇಷ್ಟವಾಗುತ್ತದೆ.

ವಿಭಾಗ

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ