ಕನ್ನಡ ಸುದ್ದಿ  /  Lifestyle  /  Food Cauliflower Bonda Recipe How To Make Cauliflower Bonda At Home Best Evening Snacks Cauliflower Health Benefits Rst

ವಾರಾಂತ್ಯಕ್ಕೆ ಸ್ಪೆಷಲ್‌ ಸ್ನ್ಯಾಕ್ಸ್‌ ಮಾಡ್ಬೇಕು ಅಂತಿದ್ರೆ ಹೂಕೋಸು ಬೋಂಡಾ ಟ್ರೈ ಮಾಡಿ, ಇದರ ರುಚಿಯೇ ಡಿಫ್ರೆಂಟ್‌

Cauliflower Bonda: ಮಕ್ಕಳು ಮನೆಯಲ್ಲಿ ಇದ್ದರೆ ಸಂಜೆ ಹೊತ್ತಿಗೆ ಏನಾದ್ರೂ ತಿನ್ನೋಕೆ ಕೇಳೋದು ಸಹಜ. ಪ್ರತಿದಿನ ಒಂದೇ ಥರ ತಿನಿಸುಗಳನ್ನು ತಿಂದು ಬೇಸರ ಆಗಿದ್ರೆ ಈ ಬಾರಿ ಡಿಫ್ರೆಂಟ್‌ ಆಗಿ ಕಾಲಿಫ್ಲವರ್‌ ಬೋಂಡಾ ಟ್ರೈ ಮಾಡಿ. ಮಕ್ಕಳು ಗೋಬಿ ತಿಂದಷ್ಟೇ ಖುಷಿ ಪಡೋದು ಪಕ್ಕಾ.

ಹೂಕೋಸು ಬೋಂಡಾ
ಹೂಕೋಸು ಬೋಂಡಾ

ವಾರಾಂತ್ಯದಲ್ಲಿ ಹೊಸತಾಗಿ ಏನಾದ್ರೂ ಅಡುಗೆ ಟ್ರೈ ಮಾಡಬೇಕು, ಮಕ್ಕಳು ಸೇರಿದಂತೆ ಎಲ್ಲರೂ ಮನೆಯಲ್ಲೇ ಇರುತ್ತಾರೆ. ಹೊರಗಡೆಯಿಂದ ತಂದು ತಿನ್ನುವುದು ಆರೋಗ್ಯಕ್ಕೆ ಹಾಳು. ಅದಕ್ಕಿಂತ ಮನೆಯಲ್ಲೇ ಏನಾದ್ರೂ ಸ್ಪೆಷಲ್‌ ಆಗಿರೋ ರೆಸಿಪಿ ಟ್ರೈ ಮಾಡೋಣ ಅಂತ ಸಾಕಷ್ಟು ಮಂದಿ ಹೆಣ್ಣುಮಕ್ಕಳು ಅಂದುಕೊಳ್ಳುತ್ತಿರುತ್ತಾರೆ. ಆದ್ರೆ ಏನ್‌ ಮಾಡೋದು ಅನ್ನೋ ಚಿಂತೆ ಕಾಡೋದು ಸಹಜ. ಅದಕ್ಕಾಗಿ ಇಲ್ಲಿಗೆ ಕಾಲಿಫ್ಲವರ್‌ ಬೋಂಡಾ.

ಸಂಜೆ ಸ್ನ್ಯಾಕ್ಸ್‌ಗೆ ಆಲೂಬೋಂಡಾ, ವಡಾ ಇಂಥದ್ದನ್ನೇ ತಿಂದು ತಿಂದು ಬೇಸರ ಆಗಿದ್ರೆ ನೀವು ಈ ಬಾರಿ ಡಿಫ್ರೆಂಟ್‌ ರುಚಿ ನೀಡೋ ಹೂಕೋಸಿನ ಬೋಂಡಾ ಟ್ರೈ ಮಾಡಬಹುದು. ಇದು ಮಕ್ಕಳಿಗೂ ಇಷ್ಟವಾಗುವುದರಲ್ಲಿ ಎರಡು ಮಾತಿಲ್ಲ.

ಹೂಕೋಸು ಬೋಂಡಾ

ಬೇಕಾಗುವ ಸಾಮಗ್ರಿಗಳು: ಹೂಕೋಸು - 1ಕಪ್‌ (ಚಿಕ್ಕದಾಗಿ ಹೆಚ್ಚಿಕೊಂಡಿದ್ದು), ಅಕ್ಕಿಹಿಟ್ಟು - 50ಗ್ರಾಂ, ಕಡಲೆಹಿಟ್ಟು - ಕಾಲು ಕೆ.ಜಿ, ಹಸಿಮೆಣಸು - 5 ರಿಂದ 6 (ಮಕ್ಕಳಿಗೆ ಖಾರದ ಇಷ್ಟವಿಲ್ಲದೇ ಇದ್ದರೆ ಕಡಿಮೆ ಹಾಕಿ), ಖಾರದ ಪುಡಿ - ಅರ್ಧ ಚಮಚ, ಉಪ್ಪು - ರುಚಿಗೆ, ಜೀರಿಗೆ - ಅರ್ಧ ಚಮಚ, ಧನಿಯಾ ಪುಡಿ - ಮೂರು ಚಮಚ, ಅಡಿಗೆ ಸೋಡಾ - ಕಾಲು ಚಮಚ, ನೀರು - ಅಗತ್ಯವಿದಷ್ಟು, ಎಣ್ಣೆ - ಕರಿಯಲು

ತಯಾರಿಸುವ ವಿಧಾನ: ಹೂಕೋಸನ್ನು ಚೆನ್ನಾಗಿ ತೊಳೆಯಿರಿ. ಬಿಸಿ ನೀರಿನಲ್ಲಿ ಕೊಂಚ ಉಪ್ಪು ಬೆರೆಸಿ ತೊಳೆಯುವುದು ಉತ್ತಮ. ನಂತರ ಇದನ್ನು ಚಿಕ್ಕದಾಗಿ ಹೆಚ್ಚಿಕೊಳ್ಳಿ. ಈಗ ಹಸಿಮೆಣಸು ಹಾಗೂ ಜೀರಿಗೆ ಸೇರಿಸಿ ಪೇಸ್ಟ್‌ ತಯಾರಿಸಿಕೊಳ್ಳಿ. ಪಾತ್ರೆಯೊಂದರಲ್ಲಿ ಹೆಚ್ಚಿಕೊಂಡ ಹೂಕೋಸು ಹಾಕಿ, ಅದಕ್ಕೆ ಸ್ವಲ್ಪ ಉಪ್ಪು ಸೇರಿಸಿ, ಕೊಂಚ ಹೊತ್ತು ಬೇಯಿಸಿಕೊಳ್ಳಿ. ನಂತರ ನೀರು ಸೋಸಿಕೊಂಡು ಪಾತ್ರೆಯೊಂದಕ್ಕೆ ಹಾಕಿ. ಆ ಪಾತ್ರೆಗೆ ಸ್ವಲ್ಪ ಉಪ್ಪು, ಖಾರದಪುಡಿ, ಹಸಿಮೆಣಸು ಜೀರಿಗೆ ಪೇಸ್ಟ್‌, ಅಕ್ಕಿಹಿಟ್ಟು, ಕೊತ್ತಂಬರಿ ಪುಡಿ, ಅಡುಗೆ ಸೋಡಾ ಎಲ್ಲವನ್ನೂ ಹಾಕಿ ಚೆನ್ನಾಗಿ ಮಿಶ್ರಣ ಮಾಡಿ. ಇದನ್ನು 10 ನಿಮಿಷಗಳ ಕಾಲ ಹಾಗೇ ಇಡಿ. ಈಗ ದಪ್ಪ ತಳದ ಪ್ಯಾನ್‌ನಲ್ಲಿ ಎಣ್ಣೆ ಹಾಕಿ, ಬಿಸಿ ಮಾಡಲು ಇಡಿ. ಇನ್ನೊಂದು ಬೌಲ್‌ನಲ್ಲಿ ಕಡಲೆಹಿಟ್ಟು, ಉಪ್ಪು ಹಾಗೂ ಚಿಟಿಕೆ ಅಡುಗೆಸೋಡಾ ಸೇರಿಸಿ ಮಿಶ್ರಣ ಮಾಡಿ. ಅದಕ್ಕೆ ಸ್ವಲ್ಪ ನೀರು ಸೇರಿಸಿ ದಪ್ಪ ಹಿಟ್ಟು ತಯಾರಿಸಿ. ಮೊದಲೇ ಮಿಶ್ರಣ ಮಾಡಿಟ್ಟುಕೊಂಡ ಹೂಕೋಸನ್ನು ಕಡಲೆಹಿಟ್ಟಿನ ಮಿಶ್ರಣದಲ್ಲಿ ಅದ್ದಿ, ಎಣ್ಣೆಗೆ ಬಿಡಿ. ಎಲ್ಲಾ ಕಡೆ ಚೆನ್ನಾಗಿ ಕಾಯುವಂತೆ ನೋಡಿಕೊಳ್ಳಿ, ನಂತರ ಟಿಶ್ಯೂ ಪೇಪರ್‌ ಮೇಲೆ ಬೋಂಡಾವನ್ನು ಹರಡಿ. ಇದನ್ನು ಪುದಿನಾ ಚಟ್ನಿ ಜೊತೆ ತಿಂದರೆ ಆಹಾ ಸ್ವರ್ಗ ಸುಖ.

ಹೂಕೋಸಿನ ಆರೋಗ್ಯ ಪ್ರಯೋಜನಗಳು

ಕೆಲವೊಂದು ಆರೋಗ್ಯ ಸಮಸ್ಯೆ ಇರುವವರಿಗೆ ಹೂಕೋಸಿನ ಸೇವನೆ ಸಲ್ಲ ಎಂದು ವೈದ್ಯರು ಸಲಹೆ ನೀಡುತ್ತಾರೆ. ಇದನ್ನು ಹೊರತು ಪಡಿಸಿಯೂ ಹೂಕೋಸಿನಲ್ಲಿ ಹಲವು ಬಗೆಯ ಪೋಷಕಾಂಶಗಳಿವೆ.

ಇದು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸುತ್ತದೆ. ಹೂಕೋಸಿನಲ್ಲಿ ಪ್ರೋಟೀನ್ ಮತ್ತು ನಾರಿನಾಂಶ ಸಮೃದ್ಧವಾಗಿದೆ. ವಿಶೇಷವಾಗಿ ಮಧುಮೇಹ ರೋಗಿಗಳು ಹೂಕೋಸು ತಿನ್ನುವ ಮೂಲಕ ರಕ್ತದಲ್ಲಿನ ಸಕ್ಕರೆಯ ಮಟ್ಟವನ್ನು ನಿಯಂತ್ರಿಸಬಹುದು. ರೋಗನಿರೋಧಕ ಶಕ್ತಿ ವೃದ್ಧಿಸಲೂ ಇದು ಸಹಕಾರಿ. ಚರ್ಮ ರೋಗಗಳನ್ನೂ ತಡೆಯುಲ್ಲದೇ, ದೇಹದಲ್ಲಿನ ಉರಿಯೂತವನ್ನೂ ಕಡಿಮೆ ಮಾಡುತ್ತದೆ. ಕೆಟ್ಟ ಕೊಲೆಸ್ಟ್ರಾಲ್ ಸಂಗ್ರಹವಾಗುವುದನ್ನು ತಡೆಯುತ್ತದೆ. ತೂಕ ನಿಯಂತ್ರಣಕ್ಕೂ ಹೂಕೋಸು ಉತ್ತಮ. ನೋಡಿದ್ರಲ್ಲ ಇಷ್ಟೆಲ್ಲಾ ಆರೋಗ್ಯ ಪ್ರಯೋಜನದ ಜೊತೆಗೆ ನಾಲಿಗೆಯ ರುಚಿಯನ್ನೂ ಹೆಚ್ಚಿಸುವ ಹೂಕೋಸಿನ ಬೋಂಡಾವನ್ನು ನೀವು ಈ ವಾರಾಂತ್ಯದಲ್ಲಿ ತಪ್ಪದೇ ಟ್ರೈ ಮಾಡಿ.

(This copy first appeared in Hindustan Times Kannada website. To read more like this please logon to kannada.hindustantimes.com)

ವಿಭಾಗ